ಸೇನೆಗೆ ಸೇರುವ ಕನಸಿಗೆ ರೆಕ್ಕೆ

ಅಮೆ ಜನಾರ್ದನ ಅವರಿಂದ ತರಬೇತಿ ಪಡೆದು ಅಗ್ನಿವೀರ್‌ಗೆ ಆಯ್ಕೆ ಆದ ಯುವಕರನ್ನು ಬೀಳ್ಕೊಡಲಾಯಿತು. ಅಮೆ ಜನಾರ್ದನ, ಮಾರ್ಚಂಡ ಗಣೇಶ್ ಪೊನ್ನಪ್ಪ, ಕ್ಯಾಪ್ಟನ್ ಪಟ್ಟಡ ಕಾರ್ಯಪ್ಪ, ರಾಹುಲ್ ಇದ್ದರು.
ಅಮೆ ಜನಾರ್ದನ ಅವರಿಂದ ತರಬೇತಿ ಪಡೆದು ಅಗ್ನಿವೀರ್‌ಗೆ ಆಯ್ಕೆ ಆದ ಯುವಕರನ್ನು ಬೀಳ್ಕೊಡಲಾಯಿತು. ಅಮೆ ಜನಾರ್ದನ, ಮಾರ್ಚಂಡ ಗಣೇಶ್ ಪೊನ್ನಪ್ಪ, ಕ್ಯಾಪ್ಟನ್ ಪಟ್ಟಡ ಕಾರ್ಯಪ್ಪ, ರಾಹುಲ್ ಇದ್ದರು.
Published on
ಮಡಿಕೇರಿ:
ಸೇನೆಗೆ ಸೇರುವ ಮೂಲಕ ದೇಶ ಸೇವೆ ಮಾಡಬೇಕು ಎನ್ನುವ ಹಂಬಲ ಎಲ್ಲರಲ್ಲೂ ಇರುತ್ತದೆ. ಆದರೆ ಭಾರತೀಯ ಸೇನೆಗೆ ಸೇರ್ಪಡೆ ಆಗಲು ದೈಹಿಕ, ಮಾನಸಿಕ ಹಾಗೂ ಬೌದ್ಧಿಕವಾಗಿ ದೊಡ್ಡ ಮಟ್ಟದ ಸಾಮರ್ಥ್ಯ ಬೇಕು. ಕುಶಾಲನಗರದ ಮಾಜಿ ಸೈನಿಕ ಅಮೆ ಜನಾರ್ದನ ಕೊಡಗು ಎಜುಕೇಷನಲ್ ಮತ್ತು ಸೋಷಿಯಲ್ ಸರ್ವಿಸ್ ಟ್ರಸ್ಟ್ ಮೂಲಕ ಇಂಥ ಸಾಮರ್ಥ್ಯ ತುಂಬುವ ಕೆಲಸವನ್ನು ಉಚಿತವಾಗಿ ಮಾಡುತ್ತಿದ್ದಾರೆ. ಈ ಬಾರಿ ಇವರ ಗರಡಿಯಲ್ಲಿ ಪಳಗಿದ 7 ಮಂದಿ ಯುವಕರು ಸೇನೆಗೆ ಆಯ್ಕೆ ಆಗುವ ಮೂಲಕ ಸಾಧನೆ ಮಾಡಿದ್ದಾರೆ.
ಜಗತ್ತಿನ ಅತ್ಯುತ್ತಮ ಸೇನೆಗಳಲ್ಲಿ ಒಂದು ಎನ್ನುವ ಹೆಗ್ಗಳಿಕೆಯ ಭಾತೀಯ ಸೇನೆಗೆ ಆಯ್ಕೆ ಆಗುವುದು ಅಷ್ಟು ಸುಲಭವಲ್ಲ. ಕಠಿಣ ದೈಹಿಕ, ವೈದ್ಯಕೀಯ ಹಾಗೂ ಲಿಖಿತ ಪರೀಕ್ಷೆ ಎದುರಿಸಬೇಕಾಗುತ್ತದೆ. ಹಾಗಾಗಿ ಸೇನೆಗೆ ಸೇರಿ ದೇಶ ಸೇವೆ ಸಲ್ಲಿಸಬೇಕು ಎನ್ನುವ ಬಹುತೇಕ ಯುವಕರ ಕನಸು ಆಯ್ಕೆ ಹಂತದಲ್ಲೇ ಕಮರಿ ಹೋಗಿ ಬಿಡುತ್ತದೆ. ಆದರೆ ಸೈನ್ಯದಲ್ಲಿ ಕೆಲಸ ಮಾಡುವ ನಿರ್ದಿಷ್ಟ ಗುರಿ ಇಟ್ಟುಕೊಂಡು ನಿಯಮಿತವಾಗಿ ಅಭ್ಯಾಸ ಮಾಡಿದರೆ ಸೇನೆಗೆ ಸೇರ್ಪಡೆ ಕಷ್ಟ ಅನ್ನಿಸುವುದಿಲ್ಲ ಎನ್ನುವುದು ಈಗಾಗಲೇ ಸೇನೆಯಲ್ಲಿ ಇರುವವರ ಅನುಭವದ ಮಾತು. ಈ ಹಿನ್ನೆಲೆಯಲ್ಲಿ ಆಸಕ್ತ ಯುವಕರಿಗೆ ಕೊಡಗು ಎಜುಕೇಷನಲ್ ಮತ್ತು ಸೋಷಿಯಲ್ ಸರ್ವಿಸ್ ಟ್ರಸ್ಟ್ ಮೂಲಕ ಹವಾಲ್ದಾರ್ ಅಮೆ ಜನಾರ್ದನ(ನಿವೃತ್ತ) ಮತ್ತು ತಂಡ ಉಚಿತವಾಗಿ ಮಾರ್ಗದರ್ಶನ ನೀಡುತ್ತಾ ಬಂದಿದೆ.
ಸೇನೆಗೆ ಸೇರಬೇಕು. ದೇಶಕ್ಕೆ ಕಿಂಚಿತ್ತು ಸೇವೆ ಸಲ್ಲಿಸಬೇಕು. ಈ ಮೂಲಕ ಬದುಕಿಗೊಂದು ಭದ್ರ ಭುನಾದಿ ಹಾಕಿಕೊಳ್ಳಬೇಕು ಎನ್ನುವ ಕನಸು ಕಾಣುವ ಯುವಕರಿಗೆ ಕುಶಾಲನಗರದ ಹವಾಲ್ದಾರ್ ಅಮೆ ಜನಾರ್ದನ (ನಿವೃತ್ತ) ಮತ್ತು ತಂಡ ಕಳೆದ 25 ವರ್ಷಗಳಿಂದ ಅಗತ್ಯ ತರಬೇತಿ ನೀಡುವ ಮೂಲಕ ಸೈನ್ಯಕ್ಕೆ ಆಯ್ಕೆ ಆಗಲು ಬೆನ್ನೆಲುಬಾಗಿ ನಿಂತಿದೆ. ದೈಹಿಕ, ವೈದ್ಯಕೀಯ ಹಾಗೂ ಲಿಖಿತ ಪರೀಕ್ಷೆ ಎದುರಿಸಲು ಅಗತ್ಯ ತರಬೇತಿಯನ್ನೂ ಈ ತಂಡದ ವತಿಯಿಂದ ಕೊಡಲಾಗುತ್ತಿದೆೆ. ಈತನಕ ಸುಮಾರು 225ಕ್ಕೂ ಹೆಚ್ಚು ಯುವಕರು ಸೇನೆಗೆ ಸೇರುವಂತೆ ಮಾಡಿದ ಹೆಗ್ಗಳಿಗೆ ಅಮೆ ಜನಾರ್ದನ ಮತ್ತು ತಂಡದ್ದು.
ಸೇನೆಗೆ ಸೇರುವ ಆಕಾಂಕ್ಷಿಗಳ ಜತೆಯಲ್ಲಿ ಕುಶಾಲನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಅಮೆ ಜನಾರ್ದನ ಪ್ರತಿನಿತ್ಯವೂ ದೇಹಕ್ಕೆ ಶಕ್ತಿ ತುಂಬುವ ಹಲವು ರೀತಿಯ ವ್ಯಾಯಾಮಗಳನ್ನು ಮಾಡುತ್ತಾರೆ. ಮತ್ತು ಮುಖ್ಯ ರಸ್ತೆಗಳಲ್ಲಿ ದಿನವೂ ಬೆಳಗ್ಗೆ ಓಡುತ್ತಾರೆ. ಸೇನಾ ನೇಮಕಾತಿ ರ‍್ಯಾಲಿ ಇರುವ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟಣೆ ಹೊರಬಿದ್ದ ಕೂಡಲೇ ಹೆಚ್ಚಿನ ಪ್ರಮಾಣದಲ್ಲಿ ದೈಹಿಕ ತರಬೇತಿ ಕೊಡಲಾರಂಭಿಸುತ್ತಾರೆ. ದೇಹದಾರ್ಢ್ಯತೆ ಹೆಚ್ಚಿಸುವುದಕ್ಕೆ ಸಂಬAಧಿಸಿದAತೆ ಕುಶಾಲನಗರದ ಜಿಎಂಪಿ ಶಾಲೆ, ಕೂಡಿಗೆಯ ಕೊಡಗು ಕ್ರೀಡಾ ಶಾಲೆಯ ಮೈದಾನದಲ್ಲಿ 2 ಕಿ.ಮೀ. ಓಟ, ಲಾಂಗ್ ಜಂಪ್, ಪುಷ್‌ಅಪ್, ಪಥಸಂಚಲನ, ಯೋಗ ಹಾಗೂ ಧ್ಯಾನ ಮಾಡಿಸಲಾಗುತ್ತದೆ. ದೇಶಭಕ್ತಿ, ಶಿಸ್ತಿನ ಬಗ್ಗೆ ಪಾಠವೂ ಇರುತ್ತದೆ.
ದೈಹಿಕ ತರಬೇತಿ ಮಾತ್ರವಲ್ಲದೆ ಲಿಖಿತ ಪರೀಕ್ಷೆಗೂ ತರಬೇತಿ ಕೊಡಲಾಗುತ್ತಿದೆ. ಸೇನೆಗೆ ಆಯ್ಕೆ ಸಂದರ್ಭ ದೈಹಿಕ ಮತ್ತು ವೈದ್ಯಕೀಯ ಪರೀಕ್ಷೆಯಲ್ಲಿ ಉತ್ತೀರ್ಣ ಆದವರಿಗೆ ಪ್ರತಿ ಶನಿವಾರ ಮತ್ತು ಭಾನುವಾರ ಉಚಿತ ತರಗತಿಗಳ ಮುಖಾಂತರ ಮಾರ್ಗದರ್ಶನ ನೀಡಲಾಗುತ್ತಿದೆ. ಇಂಗ್ಲೀಷ್, ಗಣಿತ, ವಿಜ್ಞಾನ ಹಾಗೂ ಸಾಮಾನ್ಯ ಜ್ಞಾನವನ್ನು ಬೋಧಿಸಲಾಗುತ್ತದೆ. ಕೊಡಗು ಮಾತ್ರವಲ್ಲದೆ ಪಕ್ಕದ ಮೈಸೂರು ಮತ್ತು ಹಾಸನ ಜಿಲ್ಲೆಗಳ ಯುವಕರೂ ಅಮೆ ಜನಾರ್ದನ ಅವರು ಕೊಡುವ ತರಬೇತಿಯ ಸದುಪಯೋಗ ಪಡೆದುಕೊಂಡಿದ್ದಾರೆ. ಈಗಲೂ ಆಸಕ್ತ ಯುವಕರಿಗೆ ಬೆಳ್ಳಂಬೆಳಗ್ಗೆ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಜನಾರ್ದನ ಬೆವರಿಳಿಸುತ್ತಿದ್ದಾರೆ. ದೂರದ ಊರಿನಿಂದ ಬರುವರಿಗೆ ತಮ್ಮ ಮನೆಯಲ್ಲೇ ಆಶ್ರಯ ಕೊಟ್ಟಿರುವುದೂ ಇದೆ.
ಅಮೆ ಜನಾರ್ದನ ಗರಡಿಯಲ್ಲಿ ತರಬೇತುಗೊಂಡು ಭಾರತೀಯ ಸೇನೆಗೆ ಅಗ್ನಿವೀರ್ ಆಗಿ ಆಯ್ಕೆ ಆದ ಏಳು ಮಂದಿ ಯುವಕರನ್ನು ಈಚೆಗೆ ಆತ್ಮೀಯವಾಗಿ ಬೀಳ್ಕೊಡಲಾಯಿತು. ದೇಶದ ವಿವಿಧ ಸೇನಾ ವಿಭಾಗಗಳಿಗೆ ಆಯ್ಕೆಯಾದ ಬಿ.ಎಲ್. ಕುಶಾಲ್, ಯು.ಎ. ಸಚಿನ್, ಸಿ.ವಿ. ಮಿಥುನ್, ಬಿ. ಎಲ್. ಮನಸ್ವಿನ್, ಎನ್. ಎಂ. ಅಜಿತ್, ಸೂರಜ್ ಹಾಗೂ ನವೀನ್ ಈ ತಿಂಗಳ 25 ಕ್ಕೆ ಭಾರತೀಯ ಸೇನೆಗೆ ಸೇರ್ಪಡೆಯಾಗಲಿದ್ದಾರೆ. ಕೊಡಗು ಎಜುಕೇಶನಲ್ ಮತ್ತು ಸೋಶಿಯಲ್ ಸರ್ವಿಸ್ ಟ್ರಸ್ಟ್ ಕಾರ್ಯದರ್ಶಿ ಮಾರ್ಚಂಡ ಗಣೇಶ್ ಪೊನ್ನಪ್ಪ, ಖಜಾಂಚಿ ಕ್ಯಾಪ್ಟನ್ ಪಟ್ಟಡ ಕಾರ್ಯಪ್ಪ ಹಾಗೂ ಅಮೆ ಜನಾರ್ದನ ಯುವಕರಿಗೆ ಈ ಸಂದರ್ಭ ಶುಭ ಹಾರೈಸಿದರು. ಈಗಾಗಲೇ ಸೇನೆಯಲ್ಲಿ ಲೆಫ್ಟಿನೆಂಟ್ ಆಗಿ ನೇಮಕಗೊಂಡಿರುವ ಕುಶಾಲನಗರದ ರಾಹುಲ್ ಕಾರ್ಯಕ್ರಮದಲ್ಲಿ ಇದ್ದರು.
ಸೇನೆಗೆ ಸೇರಲು ಬಯಸುವವರಿಗೆ ಅಮೆ ಜನಾರ್ದನ ನೇತೃತ್ವದಲ್ಲಿ ನೀಡುವ ತರಬೇತಿ ಸಂಪೂರ್ಣ ಉಚಿತ ಆಗಿರುತ್ತದೆ. ಸೇನೆಯಲ್ಲಿ ಉದ್ಯೋಗ ನೀಡುತ್ತೇವೆ ಎಂದು ಹೇಳಿ ಅಭ್ಯರ್ಥಿಗಳಿಂದ ಮಹತ್ವದ ದಾಖಲೆ ಪಡೆದುಕೊಂಡು ಹಣಕ್ಕಾಗಿ ವಂಚಿಸುವವರ ವಿರುದ್ಧವೂ ಇವರು ಜಾಗೃತಿ ಮೂಡಿಸುತ್ತಾರೆ. ಸೇನಾ ನೇಮಕಾತಿ ರ‍್ಯಾಲಿಗಳಲ್ಲಿ ಭಾಗವಹಿಸಿದ್ದ ಯುವಕರಿಗೆ ಕೆಲಸ ಕೊಡಿಸುವುದಾಗಿ ಕರೆ ಮಾಡುವ ಅನಾಮಿಕರು ಹಣದ ಬೇಡಿಕೆ ಇಡುವುದು ಸಾಮಾನ್ಯ. ಹೀಗೆ ಹಲವರು ಹಣ ಕಳೆದುಕೊಂಡಿದ್ದಾರೆ. ಜನಾರ್ದನ ಮತ್ತು ಸಂಗಡಿಗರು ಇಂಥ ಜಾಲದ ವಿರುದ್ಧವೂ ಆಗಾಗ್ಗೆ ಎಚ್ಚರಿಕೆ ಕೊಡುತ್ತಿರುತ್ತಾರೆ.
"

ಸೇನೆಗೆ ಸೇರಬೇಕು ಎನ್ನುವ ಹಂಬಲ ಎಲ್ಲಾ ಯುವಕರಿಗೆ ಇರುತ್ತದೆ. ಸೂಕ್ತ ಮಾರ್ಗದರ್ಶನ, ತರಬೇತಿ ಇದ್ದರೆ ಸೇನಾ ಸೇರ್ಪಡೆ ಕಷ್ಟವೇನಲ್ಲ. ಬಹುತೇಕರು ನೇಮಕಾತಿ ರ‍್ಯಾಲಿ ಸಂದಭÀð ನೇರವಾಗಿ ಹೋಗಿ ಅಲ್ಲಿ ನಡೆಸುವ ಪರೀಕ್ಷೆಗಳಲ್ಲಿ ವಿಫಲರಾಗುತ್ತಾರೆ. ಸೂಕ್ತ ಸಿದ್ಧತೆಗಳ ಜೊತೆಯಲ್ಲಿ ಹೋದರೆ ಸೇನೆಗೆ ಸೇರುವುದು ಸುಲಭ. ಈ ಬಗ್ಗೆ ನಾವು ಆಸಕ್ತ ಯುವಕರಿಗೆ ಮಾಹಿತಿ ನೀಡುತ್ತೇವೆ. ನಮ್ಮಿಂದ ಮಾರ್ಗದರ್ಶನ, ತರಬೇತಿ ಪಡೆದ 225ಕ್ಕೂ ಹೆಚ್ಚು ಯುವಕರು ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

— ಹವಾಲ್ದಾರ್ ಅಮೆ ಜನಾರ್ದನ್ (ನಿವೃತ್ತ), ಕುಶಾಲನಗರ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net