

ಪ್ರಮುಖ ಮುಖ್ಯಾಂಶಗಳು
ನಾವು ಜುಲೈನಲ್ಲಿ ಪ್ರತಿಭಟನೆ ನಡೆಸಿದ ಸಂದರ್ಭ ಅರಣ್ಯ ಇಲಾಖೆಯಿಂದ ಆನೆಗಳನ್ನು ಕಾಡಿಗೆ ಓಡಿಸಲಾಗಿತ್ತು. ಆದರೆ ಅವು ಈಗ ಮತ್ತೆ ತೋಟಗಳಿಗೆ ಮರಳಿವೆ. ವನ್ಯಜೀವಿ-ಮಾನವ ಸಂಘರ್ಷ ತಡೆಗಟ್ಟಲು ಯಾವುದೇ ದೀರ್ಘಾವಧಿ ಯೋಜನೆಗಳನ್ನು ರೂಪಿಸುತ್ತಿಲ್ಲ. ಅರಣ್ಯದೊಳಗೆ ನಮ್ಮನ್ನು ಹೇಗೆ ಬಿಡುವುದಿಲ್ಲವೋ ಅದೇ ರೀತಿಯಲ್ಲಿ ವನ್ಯಜೀವಿಗಳು ನಮ್ಮ ಜಮೀನಿಗೆ ಬರದಂತೆ ನೋಡಿಕೊಳ್ಳುವ ಜವಾಬ್ದಾರಿ ಅರಣ್ಯ ಇಲಾಖೆಯದ್ದು. ವನ್ಯಜೀವಿಗಳು ಜನವಸತಿ ಪ್ರದೇಶಕ್ಕೆ ಬಂದು ದಾಳಿ ಮಾಡಿದರೆ ಅದಕ್ಕೆ ಸಂಬAಧಿಸಿದ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಿದಾಗ ಮಾತ್ರ ಈ ಸಮಸ್ಯೆಗೆ ಪರಿಹಾರ ಸಿಗಬಹುದು.
ಕಳೆದ 3-4 ವರ್ಷಗಳಲ್ಲಿ ವರ್ಷದ 365 ದಿನಗಳ ಪೈಕಿ 300 ದಿವಸವೂ ಕಾಡಾನೆಗಳ ಹಾವಳಿ ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಭತ್ತ ಬೆಳೆಯುವ ರೈತನ ಗೋಳು ಕೇಳುವವರೇ ಇಲ್ಲ. ಕಾಡಾನೆಗಳ ಭಯಕ್ಕೆ ಕಾಫಿ ಕೊಯ್ಲು ಮಾಡಲು ಕಾರ್ಮಿಕರು ಕೂಡ ಮುಂದೆ ಬರುತ್ತಿಲ್ಲ. ಮೊದಲೆಲ್ಲಾ ನಮ್ಮ ಕಡೆಯಲ್ಲಿ ಯಥೇಚ್ಚವಾಗಿ ಬಾಳೆ ಬೆಳೆಯಲಾಗುತ್ತಿತ್ತು. ಆದರೆ ಈಗ ಸ್ವಂತ ಉಪಯೋಗಕ್ಕೂ ಬಾಳೆಹಣ್ಣು ಸಿಗದಂತಾಗಿದೆ. ಭತ್ತ ಬಿಟ್ಟು ಅಡಕೆ ಕೃಷಿ ಮಾಡಿದರೆ ಆನೆಗಳು ಅವನ್ನೂ ನಾಶ ಮಾಡುತ್ತಿವೆ.
ನಮ್ಮಲ್ಲಿ ಇತ್ತೀಚಿನ ವರ್ಷಗಳ ತನಕವೂ ಕಾಡಾನೆ ಹಾವಳಿ ಇರಲಿಲ್ಲ. ನಾವೆಲ್ಲಾ ಲಾಭದಾಯಕವಾಗಿ ಭತ್ತ ಕೃಷಿ ಮಾಡುತ್ತಿದ್ದೆವು. ಕೃಷಿಯಲ್ಲಿ ಯಂತ್ರಗಳ ಬಳಕೆ ಮೂಲಕ ಯಶಸ್ಸು ಕಂಡುಕೊAಡಿದ್ದೆವು. 10 ಎಕರೆಯಲ್ಲಿ ಭತ್ತ ಬೆಳೆದು 3.5 ಲಕ್ಷ ರೂ. ಲಾಭ ಪಡೆದುಕೊಂಡಿದ್ದೆ. ಕೃಷಿ ಇಲಾಖೆ ಅದನ್ನು ಗುರುತಿಸಿ ಮಾದರಿ ರೈತ ಪ್ರಶಸ್ತಿಯನ್ನೂ ಕೊಟ್ಟಿದೆ. ಆದರೆ ಈಗ ಕಾಡಾನೆ ಹಾವಳಿಯಿಂದ ಒಂದು ಗದ್ದೆಯಲ್ಲೂ ಭತ್ತ ಬೆಳೆಯಲಾಗುತ್ತಿಲ್ಲ. ಕಾರ್ಮಿಕರ ಕೊರತೆಯಿಂದ ಭತ್ತದ ಕೃಷಿ ಕ್ಷೀಣಿಸುತ್ತಿದೆ ಎಂದು ಇಲಾಖೆಗಳು ಬಿಂಬಿಸುತ್ತಿವೆ. ಆದರೆ ಕೊಡಗಿನಲ್ಲಿ ಕಾಡಾನೆ ಹಾವಳಿಯಿಂದಾಗಿಯೇ ರೈತರು ಭತ್ತದ ಕೃಷಿಯಿಂದ ವಿಮುಖರಾಗುತ್ತಿದ್ದಾರೆ.
ಕೃಷಿಕರ ದೂರಿನ ಹಿನ್ನೆಲೆಯಲ್ಲಿ ಈಗಾಗಲೇ ಆನೆಗಳನ್ನು ಕಾಡಿಗೆ ಓಡಿಸುವ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈಗ ಕಾಫಿ ಕೊಯ್ಲು ಆಗುತ್ತಿರುವುದರಿಂದ ಹಗಲಿನಲ್ಲಿ ಕಾಡಾನೆ ಓಡಿಸುವ ಕಾರ್ಯಾಚರಣೆ ಕಷ್ಟ. ಹಾಗಾಗಿ ರಾತ್ರಿ ವೇಳೆ ಕಾರ್ಯಾಚರಣೆ ನಡೆಸಲಾಗುತ್ತಿದೆ. ಬೇಗೂರು-ಚೀನಿವಾಡ ಹೊರತುಪಡಿಸಿ ಉಳಿದ ಕಡೆಗಳಲ್ಲಿ ಅಷ್ಟಾಗಿ ಕಾಡಾನೆಗಳ ಹಾವಳಿ ಇಲ್ಲ. ಈ ಭಾಗದಲ್ಲಿ ರೈಲ್ವೆ ಬ್ಯಾರಿಕೇಡ್ ನಿರ್ಮಾಣದ ನಂತರ ಆನೆ ಹಾವಳಿ ಕಡಿಮೆ ಆಗಲಿದೆ. ಇದು ಹುಲಿಗಳ ಸಂತಾನಭಿವೃದ್ಧಿ ಸಮಯ ಆಗಿರುವುದರಿಂದ ಅವುಗಳ ಸಂಚಾರ ಈ ಅವಧಿಯಲ್ಲಿ ಸ್ವಲ್ಪ ಹೆಚ್ಚು ಇರುತ್ತದೆ. ಹಾಗಾಗಿ ಈ ಬಗ್ಗೆಯೂ ಇಲಾಖೆಯಿಂದ ಗಮನಹರಿಸಲಾಗಿದೆ.