ಚೆನ್ನಂಗಿ ಶಾಲೆಯಲ್ಲಿ ಕಾಡುಕೋಣ ಪ್ರತ್ಯಕ್ಷ

ಕಾಡಂಚಿನ ಚೆನ್ನಂಗಿ ಗ್ರಾಮದ ಸರ್ಕಾರಿ ಶಾಲೆಯ ಮುಂಭಾಗದ ಗೇಟ್ ಬಳಿ ಸೋಮವಾರ ಕಾಡುಕೋಣ ಕಾಣಿಸಿಕೊಂಡಿತ್ತು.
ಕಾಡಂಚಿನ ಚೆನ್ನಂಗಿ ಗ್ರಾಮದ ಸರ್ಕಾರಿ ಶಾಲೆಯ ಮುಂಭಾಗದ ಗೇಟ್ ಬಳಿ ಸೋಮವಾರ ಕಾಡುಕೋಣ ಕಾಣಿಸಿಕೊಂಡಿತ್ತು.
Published on

ಪ್ರಮುಖ ಮುಖ್ಯಾಂಶಗಳು

  • ವಿದ್ಯಾರ್ಥಿಗಳು, ಗ್ರಾಮಸ್ಥರಲ್ಲಿ ಆತಂಕ
  • ಅರಣ್ಯದತ್ತ ತೆರಳಿದ ಬಳಿಕ ನಿಟ್ಟುಸಿರು ಬಿಟ್ಟ ಮಕ್ಕಳು, ಶಿಕ್ಷಕರು
ಸಿದ್ದಾಪುರ: ವಿರಾಜಪೇಟೆ ತಾಲೂಕಿನ ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಡಂಚಿನ ಚೆನ್ನಂಗಿ ಗ್ರಾಮದ ಸರ್ಕಾರಿ ಶಾಲೆ ಮುಂಭಾಗ ಸೋಮವಾರ ಕಾಡುಕೋಣ ಪ್ರತ್ಯಕ್ಷವಾಗಿದ್ದು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರಲ್ಲಿ ಆತಂಕ ಎದುರಾಗಿತ್ತು.
ಶಾಲಾ ಆವರಣ ಸಮೀಪ ಕಾಡುಕೋಣ ಸಂಚರಿಸುತ್ತಿರುವ ದೃಶ್ಯವನ್ನು ಶಾಲೆ ಶಿಕ್ಷಕಿ ಮೊಬೈಲ್ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ. ಶಾಲೆಗೆ ಆಗಮಿಸಿದ್ದ ವಿದ್ಯಾರ್ಥಿಗಳು, ಪಾಲಕರು ಹಾಗೂ ಸಿಬ್ಬಂದಿ ಕೆಲಕಾಲ ಭಯಭೀತರಾಗಿದ್ದು, ಕಾಡುಕೋಣ ಸುರಕ್ಷಿತವಾಗಿ ಅರಣ್ಯದತ್ತ ತೆರಳಿದ ಬಳಿಕ ಪರಿಸ್ಥಿತಿ ಸಹಜಗೊಂಡಿತು.
ಈ ಪ್ರದೇಶದಲ್ಲಿ ಈಗಾಗಲೇ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಶಾಲೆ ಸುತ್ತಮುತ್ತ ಕಾಡುಪ್ರಾಣಿಗಳ ಓಡಾಟ ಸಾಮಾನ್ಯವಾಗುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಶಾಲೆ ಸಮೀಪ ನಿರಂತರವಾಗಿ ಕಾಡುಪ್ರಾಣಿಗಳು ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಪಾಲಕರು ಆತಂಕ ವ್ಯಕ್ತಪಡಿಸಿದ್ದಾರೆ.
ಶಾಲಾ ಆವರಣಕ್ಕೆ ತಡೆಗೋಡೆ ನಿರ್ಮಿಸಿ, ಕಾಡುಪ್ರಾಣಿಗಳ ನುಗ್ಗುವಿಕೆಯನ್ನು ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಅಲ್ಲದೆ, ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಶಾಲಾ ಮಕ್ಕಳ ಸುರಕ್ಷತೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕಾಡಂಚಿನ ಪ್ರದೇಶಗಳಲ್ಲಿರುವ ಶಾಲೆಗಳ ಸುರಕ್ಷತೆಗೆ ವಿಶೇಷ ಯೋಜನೆ ರೂಪಿಸುವಂತೆ ಸ್ಥಳೀಯರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net