ಕೃಷಿಕರನ್ನು ಕಾಡುತ್ತಲೇ ಇವೆ ಕಾಡುಪ್ರಾಣಿಗಳು

ಸೋಮವಾರಪೇಟೆ ಸಮೀಪದ ಕಾಜೂರು ಗ್ರಾಮದ ಕಾಫಿ ತೋಟದಲ್ಲಿ ಕಾಡಾನೆ ಕಾಣಿಸಿಕೊಂಡಿರುವುದು.
ಸೋಮವಾರಪೇಟೆ ಸಮೀಪದ ಕಾಜೂರು ಗ್ರಾಮದ ಕಾಫಿ ತೋಟದಲ್ಲಿ ಕಾಡಾನೆ ಕಾಣಿಸಿಕೊಂಡಿರುವುದು.
Published on
ಸೋಮವಾರಪೇಟೆ : ತಾಲೂಕಿನ ಗ್ರಾಮೀಣ ಭಾಗದಲ್ಲಿ ಕಾಡುಪ್ರಾಣಿಗಳು ಕೃಷಿಕರನ್ನು ಕಾಡಲಾರಂಭಿಸಿವೆ.
ಕಾಫಿ ತೋಟ ಸೇರಿದಂತೆ ಕೃಷಿ ಭೂಮಿಯಲ್ಲಿ ಹಾಡಹಗಲೇ ಕಾಣಿಸಿಕೊಳ್ಳುವ ಕಾಡಾನೆಗಳು, ಕಾಡುಕೋಣ, ಕಾಡುಹಂದಿ, ನವಿಲು, ಮಂಗಗಳು ಕೈಗೆ ಬಂದಿರುವ ಫಸಲನ್ನು ಹಾನಿಗೊಳಿಸುತ್ತಿವೆ.
ಕಳೆದ ಮೇ ತಿಂಗಳಿನಿಂದ ನವೆಂಬರ್ ತನಕ ಸುರಿದ ಮಳೆಯಿಂದ ಕಾಫಿ, ಕಾಳುಮೆಣಸು ಫಸಲು ಹಾನಿಯಾಗಿದೆ. ಈಗಾಗಲೆ ಭತ್ತ ಫಸಲಿಗೆ ಬರುತ್ತಿದ್ದು, ಕಾಡುಪ್ರಾಣಿಗಳು ಭತ್ತದ ತೆನೆಗಳನ್ನೇ ತಿನ್ನುತ್ತಿವೆ.
ಮಾಲಂಬಿ, ನಿಡ್ತ, ಜೇನುಕಲ್ಲುಬೆಟ್ಟ ಮೀಸಲು ಅರಣ್ಯದಿಂದ ಬರುವ ಕಾಡಾನೆಗಳು ರೈತರನ್ನು ಕಾಡುತ್ತಿವೆ. ಆನೆ ಕಂದಕಗಳು ನಿರ್ವಹಣೆಯಿಲ್ಲದೆ ಮುಚ್ಚಿದ್ದು ಕಾಡಾನೆ ಕಂದಗಳನ್ನು ದಾಟಿ ಗ್ರಾಮಗಳನ್ನು ಸೇರುತ್ತಿವೆ. ಕೆಲವು ಕಡೆ ಕಾಡಾನೆಗಳು ಕಂದಕಗಳಿಗೆ ತಾವೇ ಮಣ್ಣು ಹಾಕಿ ದಾಟಿ ಬರುತ್ತಿವೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಸಿದ್ದಲಿಂಗಪುರ ಸುತ್ತಮುತ್ತಲ ಗ್ರಾಮಗಳಲ್ಲಿ ಕಾಡಾನೆಗಳಿಗೆ ರೈತರು ಭಯ ಬಿದ್ದಿದ್ದಾರೆ. ಕಂದಕಗಳನ್ನು ಸರಿಪಡಿಸಿ, ರಸ್ತೆ ಬದಿಯಲ್ಲಿ ಕಾಡು ಕಡಿದು ಸರಿಪಡಿಸಿ ಎಂದು ಸೋಮವಾರಪೇಟೆ ಎಸಿಎಫ್ ಗೋಪಾಲ್ ಅವರಿಗೆ ರೈತರು ಮನವಿ ಪತ್ರ ಸಲ್ಲಿಸಿದ್ದಾರೆ.
ಯಡವನಾಡು ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ನಿಯಂತ್ರಿಸಲು ಅರಣ್ಯ ಇಲಾಖೆ ಇದೀಗ 5.6ಕೋಟಿ ರೂ. ವೆಚ್ಚದಲ್ಲಿ 4.5 ಕಿ.ಮೀ ಅರಣ್ಯ ಪ್ರದೇಶದಲ್ಲಿ ರೈಲ್ವೆ ಬ್ಯಾರಿಕೇಡ್ ಅಳವಡಿಸಿದೆ.
ಸದ್ಯಕ್ಕೆ ಕಾಡಾನೆ ಹಾವಳಿಯಿಂದ ರೈತರು ಬಚಾವಾಗಿದ್ದಾರೆ ಎನ್ನಬಹುದು. ಕೆಲ ಕಡೆ ಕಾಡಾನೆಗಳು ಕೃಷಿ ಭೂಮಿಗೆ ಲಗ್ಗೆ ಹಾಕಿದರೂ, ದೊಡ್ಡಮಟ್ಟದಲ್ಲಿ ಫಸಲು ಹಾನಿಯಾಗುತ್ತಿಲ್ಲ ಎಂದು ಕಾಫಿ ಬೆಳೆಗಾರ ಲಿಂಗೇರಿ ರಾಜೇಶ್ ಹೇಳಿದರು.
ಈ ವ್ಯಾಪ್ತಿಯಲ್ಲಿ ಮುಳ್ಳುಹಂದಿಗಳ ಹಾವಳಿ ಜಾಸ್ತಿಯಾಗಿದೆ. ಕಾಳುಮೆಣಸಿನ ಬುಡವನ್ನು ಕಚ್ಚಿ ತಿನ್ನುತ್ತಿವೆ. ಫಸಲು ಕೊಡುವ ಬಳ್ಳಿಗಳು ಒಣಗುತ್ತಿದ್ದು, ರೈತರಿಗೆ ದೊಡ್ಡಮಟ್ಟದ ಹಾನಿಯಾಗುತ್ತಿದೆ. ಈ ತರಹದ ಬೆಳೆಹಾನಿಯಿಂದ ಯಾವುದೇ ಪರಿಹಾರ ಸಿಗುತ್ತಿಲ್ಲ. ಕಾಡುಹಂದಿಗಳು ಭತ್ತ ಫಸಲನ್ನು ಹಾಳು ಮಾಡುತ್ತಿವೆ ಎಂದು ರೈತರು ತಮ್ಮ ನೋವು ಹಂಚಿಕೊಂಡಿದ್ದಾರೆ.
ಪರಿಹಾರವೂ ದೊರಕುತ್ತಿಲ್ಲ:
ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುಷ್ಪಗಿರಿ ತಪ್ಪಲಿನ ಗ್ರಾಮಗಳಲ್ಲಿ ಕಾಡುಪ್ರಾಣಿಗಳು ಕೃಷಿ ಫಸಲನ್ನು ಹಾನಿ ಮಾಡುತ್ತಿವೆ. ಆ ವ್ಯಾಪ್ತಿಯ ರೈತರಿಗೆ ಸಿ ಆ್ಯಂಡ್ ಡಿ ಭೂಮಿ ಸಮಸ್ಯೆಯಿಂದ ಆಸ್ತಿ ಹಕ್ಕು ಸಿಗದೆ ಸರ್ಕಾರದ ಬೆಳೆಹಾನಿ ಪರಿಹಾರದ ಸೌಲಭ್ಯಗಳಿಂದಲೂ ವಂಚಿತರಾಗಿದ್ದಾರೆ. ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕಾಡುಹಂದಿಗಳು ಭತ್ತ ಗದ್ದೆಗಳಿಗೆ ದಾಳಿ ಮಾಡಿ ಹಾನಿ ಪಡಿಸುತ್ತಿವೆ. ಕಾಡುಕೋಣ, ನವಿಲುಗಳ ಆತಂಕ ಗ್ರಾಮಸ್ಥರಿಗಿದೆ.
ಭಯದಲ್ಲೇ ಬದುಕಬೇಕಿದೆ:
ಚಿಕ್ಕಾರ, ಕೂಗೂರು, ಹಿರಿಕರ, ದೊಡ್ಡಮಳ್ತೆ, ಹಿತ್ಲುಗದ್ದೆ, ಗಣಗೂರು, ಕಣಗಾಲು, ಮಾಲಂಬಿ, ಆಲೂರು, ನಿಡ್ತ, ನಂದಿಗುಂದ, ಎಳೆನೀರು ಗುಂಡಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡಾನೆ, ಕಾಡುಕೋಣಗಳ ಆತಂಕದ ನಡುವೆ ಕೃಷಿ ಚಟುವಟಿಕೆ ಮಾಡಬೇಕಾಗಿದೆ. ಕೂಲಿ ಕಾರ್ಮಿಕರು ಕೃಷಿ ಭೂಮಿಯಲ್ಲಿ ಕೆಲಸ ಮಾಡಲು ಭಯಪಡುತ್ತಿದ್ದಾರೆ. ಗರ್ವಾಲೆ, ಕುಂಬಾರಗಡಿಗೆ, ಮಂಕ್ಯಾ, ಕಿಕ್ಕರಳ್ಳಿ, ಸೂರ್ಲಬ್ಬಿ, ಗ್ರಾಮಗಳಲ್ಲಿ ಕಾಡುಪ್ರಾಣಿಗಳು ತಿಂದು ಉಳಿಸಿದ ಫಸಲನ್ನು ತೆಗೆದುಕೊಳ್ಳಬೇಕು. ಒಂಟಿಯಾಗಿ ಕೃಷಿ ಭೂಮಿಗೆ ತೆರಳುವ ಧೈರ್ಯ ಮಾಡುವುದು ಕಷ್ಟ ಎನ್ನುವಂತಾಗಿದೆ.
ಗ್ರಾಮವಾಸ್ತವ್ಯ ಮಾಡುತ್ತವೆ :
ಸೋಮವಾರಪೇಟೆ ವಲಯಕ್ಕೆ ಸೇರಿದಂತೆ ನಿಡ್ತ, ಜೇನುಕಲ್ಲುಬೆಟ್ಟ, ಯಡವನಾಡು ಮೀಸಲು ಅರಣ್ಯ 5300 ಹೆಕ್ಟೇರ್ ಇದ್ದು, ಈ ಭಾಗದಲ್ಲಿ 24 ಕಾಡಾನೆಗಳಿವೆ. ಕಾಡಾನೆಗಳಿಗೆ ಸಿಹಿಗೆಣಸು, ಜೋಳ, ಭತ್ತ ಎಂದರೆ ಬಲು ಇಷ್ಟ. ಈ ಕಾರಣದಿಂದ ಹೆಬ್ಬಾಲೆ, ಚಿನ್ನೆನಹಳ್ಳಿ, ಮದಲಾಪುರ, ಹೊಸಳ್ಳಿ, ಬಾಣವಾರ, ಸಿದ್ದಲಿಂಗಪುರ ಈ ವ್ಯಾಪ್ತಿಯಲ್ಲಿ ಕಾಡಾನೆಗಳು ಗ್ರಾಮವಾಸ್ತವ್ಯ ಮಾಡುತ್ತವೆ. ಇದರಿಂದ ಇನ್ನಷ್ಟು ಆತಂಕವಾಗಿದೆ.
ಆಲೂರು, ಕಣಗಾಲು, ಗೋಣಿಮರೂರು. ಯಲಕನೂರು, ಹೊಸಳ್ಳಿ, ಅರೆಯೂರು, ಅಬ್ಬೂರು ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ಮುಂದುವರಿದಿದೆ. ಕೃಷಿ ಫಸಲಿನ ಪ್ರದೇಶ, ಬಾಳೆ ತೋಟಗಳು, ಕುಡಿಯಲು ನೀರು ಸಿಗುವ ಕೆರೆಗಳು ಹಾಗೂ ಮಾರ್ಗದ ಮಾಹಿತಿಯಿರುವ ಕಾಡಾನೆಗಳಿಗೆ ಯಾವುದೇ ಆತಂಕವಿಲ್ಲದೆ ದಾಳಿ ಮಾಡುತ್ತವೆ. ಕೃಷಿಕರು ತಾವು ಬೆಳೆದ ಭತ್ತ, ಕ್ಯಾನೆಗೆಡ್ಡೆ, ರಾಗಿ, ಗೆಣಸು ಎಲ್ಲ ಬೆಳೆಗಳನ್ನು ರಕ್ಷಿಸಿಕೊಳ್ಳಲು ಕೃಷಿಕರು ಹರಸಾಹಸ ಪಡಬೇಕಾಗಿದೆ. ಕೆಲವು ಕಡೆ ಕಾಡಾನೆಗಳು ಹಾಗು ಕಾಡು ಪ್ರಾಣಿಗಳು ತಿಂದು, ನಂತರ ಉಳಿಸಿದ ಫಸಲನ್ನು ತೆಗೆದುಕೊಳ್ಳುವಂತಹ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ.
*
ಶಾಶ್ವತ ಪರಿಹಾರ ಕಂಡು ಹಿಡಿಯಬೇಕಿದೆ:
ಕಾಡು ಪ್ರಾಣಿಗಳ ನಿರಂತರ ಹಾವಳಿಯನ್ನು ತಡೆಗಟ್ಟಲು ಸರ್ಕಾರ ಶಾಶ್ವತ ಪರಿಹಾರ ಕಂಡು ಹಿಡಿಯಬೇಕೆಂದು ರೈತಾಪಿ ವರ್ಗ ಹಲವು ದಶಕಗಳಿಂದಲೇ ಒತ್ತಾಯಿಸುತ್ತಿದೆ. ಸರ್ಕಾರ ಕಾಡಾನೆ ನಿಯಂತ್ರಣಕ್ಕೆ ಪ್ರತಿವರ್ಷ ಕೋಟಿ ಲೆಕ್ಕದಲ್ಲಿ ಅನುದಾನ ನೀಡುತ್ತಿದೆ. ಆದರೆ ಅನುದಾನ ಕಾಡುಪಾಲಾಗುತ್ತಿರುವುದರಿಂದ ರೈತರು ಫಸಲು ಕಳೆದುಕೊಂಡು ಸಂಕಷ್ಟ ಅನುಭವಿಸುವಂತಾಗಿದೆ ಎಂದು ರೈತರು ದೂರುತ್ತಾರೆ. ಫಸಲು ಹಾನಿಯ ಪರಿಹಾರ ಮಾತ್ರ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಕೊಡುವಂತಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net