ಅರಣ್ಯ ನಾಶದಿಂದ ಊರಿಗೆ ಬರುತ್ತಿರುವ ಕಾಡು ಪ್ರಾಣಿಗಳು

15ಎಂಡಿಕೆ05: ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಲ್ಲಿ ನಡೆದ ಅರಣ್ಯ ಭೂಮಿಯ ಭೌಗೋಳಿಕ ಮರು ವಿನ್ಯಾಸ, ಅದರ ಸಂರಕ್ಷಣೆಯಲ್ಲಿನ ಸವಾಲು, ಕಾರ್ಯನಿರ್ವಹಣೆ ಹಾಗೂ ಯಶೋಗಾಥೆ ಕುರಿತ ಅಂತಾರಾಷ್ಟಿçÃಯ ವಿಚಾರ ಸಂಕಿರಣದ ಉದ್ಘಾಟನಾ ಕಾರ್ಯಕ್ರಮದಲ್ಲಿ ಆರ್.ಸಿ. ಜಗದೀಶ, ಪ್ರೊ. ದೇವಗಿರಿ, ಪ್ರೊ. ಸಿ.ಜಿ. ಕುಶಾಲಪ್ಪ ಮತ್ತಿತರರು ಇದ್ದರು.
15ಎಂಡಿಕೆ05: ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಲ್ಲಿ ನಡೆದ ಅರಣ್ಯ ಭೂಮಿಯ ಭೌಗೋಳಿಕ ಮರು ವಿನ್ಯಾಸ, ಅದರ ಸಂರಕ್ಷಣೆಯಲ್ಲಿನ ಸವಾಲು, ಕಾರ್ಯನಿರ್ವಹಣೆ ಹಾಗೂ ಯಶೋಗಾಥೆ ಕುರಿತ ಅಂತಾರಾಷ್ಟಿçÃಯ ವಿಚಾರ ಸಂಕಿರಣದ ಉದ್ಘಾಟನಾ ಕಾರ್ಯಕ್ರಮದಲ್ಲಿ ಆರ್.ಸಿ. ಜಗದೀಶ, ಪ್ರೊ. ದೇವಗಿರಿ, ಪ್ರೊ. ಸಿ.ಜಿ. ಕುಶಾಲಪ್ಪ ಮತ್ತಿತರರು ಇದ್ದರು.
Published on
ಗೋಣಿಕೊಪ್ಪಲು:
ಅರಣ್ಯ ನಾಶದಿಂದ ಇಂದು ಪ್ರಾಣಿಗಳನ್ನು ಕಾಡಿನಲ್ಲಿ ಕಾಣುವ ಬದಲು ಊರಿನಲ್ಲಿ ಕಾಣುವಂತಾಗಿದೆ ಎಂದು ಶಿವಮೊಗ್ಗ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನ ವಿಷಯಗಳ ವಿಶ್ವವಿದ್ಯಾನಿಲಯದ ಕುಲಪತಿ ಆರ್.ಸಿ. ಜಗದೀಶ ಹೇಳಿದರು. ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಲ್ಲಿ ಶುಕ್ರವಾರ ನಡೆದ ಅರಣ್ಯ ಭೂಮಿಯ ಭೌಗೋಳಿಕ ಮರು ವಿನ್ಯಾಸ, ಅದರ ಸಂರಕ್ಷಣೆಯಲ್ಲಿನ ಸವಾಲು, ಕಾರ್ಯನಿರ್ವಹಣೆ ಹಾಗೂ ಯಶೋಗಾಥೆ ಕುರಿತ ಅಂತಾರಾಷ್ಟಿçÃಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ವನ್ಯಜೀವಿಗಳು ಕಾಡಿನಿಂದ ಹೊರಬರದಂತೆ ತಡೆಯುವ ಏಕೈಕ ಮಾರ್ಗ ಎಂದರೆ ಅರಣ್ಯ ಸಂರಕ್ಷಣೆ. ಅರಣ್ಯ ಸಂರಕ್ಷಣೆಯ ಹೊಣೆ ಕೇವಲ ಸರ್ಕಾರದ್ದು ಮಾತ್ರವಲ್ಲ. ಅದು ಸಮಾಜದ ಹೊಣೆಗಾರಿಕೆಯೂ ಆಗಿದೆ. ಭೂಮಿಯ ಜೀವ ಉಳಿಯಬೇಕಾದರೆ ಅರಣ್ಯ ಪ್ರದೇಶವನ್ನು ಸಂರಕ್ಷಿಸಬೇಕು. ಸ್ವಾತಂತ್ರ‍್ಯಪೂರ್ವದಲ್ಲಿ ಶೇ.35ರಷ್ಟು ಇದ್ದ ಅರಣ್ಯ ಪ್ರದೇಶ ಈಗ ಶೇ.25ಕ್ಕೆ ಇಳಿದಿದೆ. ಆದರೆ ಶ್ರೀಲಂಕಾ ಇಂದಿಗೂ ಶೇ. 35ರಷ್ಟು ಅರಣ್ಯ ಪ್ರದೇಶವನ್ನು ಕಾಪಾಡಿಕೊಂಡು ಬಂದಿದೆ.
ಪಶ್ಚಿಮಘಟ್ಟ ಪ್ರದೇಶ ಜೀವ ವೈವಿಧ್ಯತೆಯ ತಾಣವಾಗಿದೆ. ಇಂತಹ ಸಂಪದ್ಭರಿತ ತಾಣ, ಸೇತುವೆ, ರಸ್ತೆ, ಕಟ್ಟಡ ನಿರ್ಮಾಣ ಮೊದಲಾದ ಅಭಿವೃದ್ಧಿ ಮತ್ತು ಕೃಷಿ ಚಟುವಟಿಕೆಗಳಿಗೆ ಸಿಲುಕಿ ನಾಶವಾಗುತ್ತಿದೆ. ಉತ್ತರಕನ್ನಡ ಜಿಲ್ಲೆಯಲ್ಲಿ ಇಂಥ ವಿನಾಶಕಾರಿ ಬೆಳವಣಿಗೆ ಹೆಚ್ಚಾಗಿ ನಡೆಯದಿದ್ದರೂ ಪಶ್ಚಿಮ ಘಟ್ಟದ ಪ್ರಮುಖ ತಾಣವಾದ ಶಿವಮೊಗ್ಗ ಜಿಲ್ಲೆಯಲ್ಲಿ ಇದರ ಪ್ರಮಾಣ ಅತಿಯಾಗಿದೆ. ಶೇ 80ರಷ್ಟು ಔಷಧಿ ಸಸ್ಯಗಳು ಪಶ್ಚಿಮಘಟ್ಟ ಪ್ರದೇಶದಲ್ಲಿ ಸಿಗುತ್ತವೆ. ಬ್ರೆಜಿಲ್‌ನ ಅಮೆಜಾನ್ ಕಾಡುಗಳನ್ನು ಬಿಟ್ಟರೆ ನಮ್ಮಲ್ಲಿನ ಪಶ್ಚಿಮಘಟ್ಟ ಪ್ರದೇಶವೇ ಅತ್ಯಂತ ಶ್ರೀಮಂತವಾದ ಅರಣ್ಯ ಪ್ರದೇಶವಾಗಿದೆ. ರಾಜ್ಯದಲ್ಲಿ 10 ಅರಣ್ಯ ವಲಯಗಳನ್ನು ಗುರುತಿಸಿದ್ದು, ಪೊನ್ನಂಪೇಟೆ ಅರಣ್ಯ ಕಾಲೇಜು ಒಂದು ಅರಣ್ಯ ವಲಯವನ್ನು ತೆಗೆದುಕೊಂಡು ಅದರ ಸಂಶೋಧನೆ ಮತ್ತು ಸಂರಕ್ಷಣೆ ಬಗ್ಗೆ ವಿಶೇಷ ಅಧ್ಯಯನ ನಡೆಸಬೇಕು ಎಂದು ಸಲಹೆ ನೀಡಿದರು.
ಕೊಡಗಿನಲ್ಲಿ 10 ವರ್ಷಗಳ ಹಿಂದಿನ ಪರಿಸರ ಈಗಿಲ್ಲ. ಅಂದು ಯಾರೂ ಹವಾನಿಯಂತ್ರಕಗಳನ್ನು ಬಳಸುತ್ತಿರಲಿಲ್ಲ. ಇಡೀ ಪರಿಸರವೇ ಹವಾನಿಯಂತ್ರಣ ಹಾಕಿದಂತಿತ್ತು. ಈಗ ಹವಾನಿಯಂತ್ರಕಗಳು ಇಲ್ಲದೆ ಮಲಗಲೂ ಆಗುತ್ತಿಲ್ಲ. 34 ಡಿಗ್ರಿ ಉಷ್ಣಾಂಶ ಏರಿರುವುದರ ಹಿಂದೆ ಇಲ್ಲಿನ ಅರಣ್ಯ ನಾಶ ಎದ್ದು ಕಾಣುತ್ತಿದೆ. ಇರುವಷ್ಟು ಅರಣ್ಯ ಪ್ರದೇಶದಲ್ಲಿ ದೇಸಿಗಿಡಗಳ ಬೆಳವಣಿಗೆಗೆ ಮಾರಕವಾಗಿರುವ ಲಂಟಾನ ಮತ್ತಿತರ ಸಸ್ಯಗಳನ್ನು ತೆಗೆದು ಆದಷ್ಟು ಹೆಚ್ಚಿನ ಪ್ರಮಾಣದಲ್ಲಿ ದೇಸಿ ತಳಿಗಳನ್ನು ಬೆಳೆಸಬೇಕಾಗಿದೆ. ಪರಿಸರಕ್ಕೆ ಪೂರಕವಾದ ಗಿಡಮರಗಳ ಬಗ್ಗೆ ಸಂಶೋಧಿಸಿ ಅವುಗಳ ಸಂರಕ್ಷಣೆಗೆ ಅರಣ್ಯ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಪರಿಸರ ಪ್ರೇಮಿಗಳು ಮುಂದಾಗಬೇಕು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ರಾಜ್ಯ ಪ್ರಧಾನ ಅರಣ್ಯ ಸಂರಕ್ಷಣಾ ಕಾರ್ಯದರ್ಶಿ ಬಿ.ಪಿ. ರವಿ ಮಾತನಾಡಿ ಕೊಲ್ಲಿ ರಾಷ್ಟ್ರಗಳ ಯುದ್ಧದಿಂದ ಎಲ್‌ಪಿಜಿ ಅಡುಗೆ ಅನಿಲ ಕೊರತೆಯಾದರೆ 3-4 ತಿಂಗಳಲ್ಲಿ ಉರುವಲಿಗಾಗಿ ಅಪಾರ ಪ್ರಮಾಣದ ಮರಗಿಡಗಳು ನಾಶವಾಗಲಿವೆ. ಈಗಾಗಲೇ ಬೆಂಗಳೂರಿನಲ್ಲಿ ಇಂಥ ಘಟನೆಗಳನ್ನು ನೋಡುತ್ತಿದ್ದೇವೆ. ಅಲ್ಲಿ ಕಟ್ಟಿಗೆ ಡಿಪೊಗಳ ಮುಂದೆ ಜನ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಜನರ ನಿರಂತರ ಹಸ್ತಕ್ಷೇಪ ಮತ್ತು ಒತ್ತಡದಿಂದ ಅರಣ್ಯ ಪ್ರದೇಶ ಕ್ಷೀಣಿಸುತ್ತಿದೆ. ವಾಹನಗಳ ಓಡಾಟ, ಗಣಿಗಾರಿಕೆ ಮತ್ತು ಜನರ ಪ್ರವೇಶವೂ ಅರಣ್ಯ ನಾಶಕ್ಕೆ ಕಾರಣ. ಆರ್ಥಿಕ ಲಾಭದ ಉದ್ದೇಶದಿಂದ ಬೆಳೆಸಿದ್ದ 1,060 ಎಕರೆ ಅರಣ್ಯ ಪ್ರದೇಶದ ತೇಗದ ಮರಗಳನ್ನು ಕಡಿಯಲಾಗಿದೆ. ಲಂಟಾನ ಹೆಚ್ಚಿ ಇತರ ಗಿಡಗಳ ಬೆಳವಣಿಗೆಗೆ ಅಡ್ಡಿಯಾಗಿದೆ. ಪರಿಸರದಲ್ಲಿ ಪ್ಲಾಸ್ಟಿಕ್ ಎಸೆಯುವುದನ್ನು ತಡೆಗಟ್ಟಿ ಸ್ವಾಭಾವಿಕ ಅರಣ್ಯ ಬೆಳೆಯುವಂತೆ ನೋಡಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.
ಕೊಡಗು ಮಾದರಿ ಅರಣ್ಯ ಟ್ರಸ್ಟ್ ಅಧ್ಯಕ್ಷ ಪ್ರೊ. ಸಿ.ಜಿ. ಕುಶಾಲಪ್ಪ ಮಾತನಾಡಿ ಕೊಡಗಿನಲ್ಲಿರುವ ದೇವರ ಕಾಡುಗಳ ಸಂರಕ್ಷಣೆಗಾಗಿಯೇ ಕೊಡಗು ಮಾಡೆಲ್ ಫಾರೆಸ್ಟ್ ಟ್ರಸ್ಟ್ ಅನ್ನು 2005ರಲ್ಲಿ ಸ್ಥಾಪಿಸಲಾಯಿತು. ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಟ್ರಸ್ಟ್ ಸಹಾಯ ಪಡೆದುಕೊಂಡು ಅಧ್ಯಯನ ನಡೆಸುವಂತಾಗಬೇಕು ಎಂದು ಹೇಳಿದರು.
ಅರಣ್ಯ ಮಹಾವಿದ್ಯಾಲಯದ ಡೀನ್ ಪ್ರೊ. ದೇವಗಿರಿ ಮಾತನಾಡಿ ಅರಣ್ಯ ಸಂರಕ್ಷಣೆ ಮೂಲಕ ವನ್ಯಜೀವಿಗಳ ಹಾವಳಿಯನ್ನು ತಡೆಗಟ್ಟಬೇಕು. ನಿತ್ಯವೂ ನಾಶವಾಗುತ್ತಿರುವ ಅರಣ್ಯ ಮತ್ತು ಭೂಮಿಯ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದರು.
ಕಾರ್ಯಕ್ರಮದ ಸಂಘಟನಾ ಕಾರ್ಯದರ್ಶಿ ಸತೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿರಸಿ ಅರಣ್ಯ ಕಾಲೇಜಿನ ಪ್ರಾಧ್ಯಾಪಕ ರಮೇಶ್ ರಾಥೋಡ್, ಪ್ರೊ. ರನೀಶ್, ಪೊನ್ನಂಪೇಟೆ ಅರಣ್ಯ ಕಾಲೇಜಿನ ಪ್ರಾಧ್ಯಾಪಕರಾದ ಶಿವಕುಮಾರ್, ಕೆಂಚರೆಡ್ಡಿ, ಟಾಟಾ ಕಾಫಿ ಸಂಸ್ಥೆ ವ್ಯವಸ್ಥಾಪಕ ಪಿ.ಜಿ. ಪೊನ್ನಪ್ಪ, ಕೊಡಗು ಮಾಡೆಲ್ ಫಾರೆಸ್ಟ್ನ ಕಾರ್ಯದರ್ಶಿ ಶರೀನ್ ಸುಬ್ಬಯ, ನಾಗರಹೊಳೆ ಅರಣ್ಯ ಪ್ರದೇಶದ ಅರಣ್ಯಾಧಿಕಾರಿ ಅನನ್ಯಕುಮಾರ್ ಇದ್ದರು.
ಸಭಾ ಕಾರ್ಯಕ್ರಮದ ನಂತರ ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕ ವಿವಿಧ ವಿಷಯಗಳ ಬಗ್ಗೆ ತಜ್ಞರಿಂದ ಪ್ರಬಂಧ ಮಂಡನೆ ಮತ್ತು ಸಂವಾದ ನಡೆಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net