ಅನಧಿಕೃತ ಹೋಂಸ್ಟೇ ಕ್ರಮ ಯಾವಾಗ ?

 ಕೊಡಗಿನಲ್ಲಿ ಇರುವ ಹೋಂಸ್ಟೇ (ಸಾಂದರ್ಭಿಕ ಚಿತ್ರ)
ಕೊಡಗಿನಲ್ಲಿ ಇರುವ ಹೋಂಸ್ಟೇ (ಸಾಂದರ್ಭಿಕ ಚಿತ್ರ)
Published on
ಮಡಿಕೇರಿ:
ಕೊಡಗಿನಲ್ಲಿ ಪ್ರವಾಸೋದ್ಯಮದ ಬೆಳವಣಿಗೆಯಲ್ಲಿ ಹೋಂಸ್ಟೇಗಳ ಪಾತ್ರ ಬಹಳ ದೊಡ್ದದು. ಉತ್ತಮ ರೀತಿಯಲ್ಲಿ ಆತಿಥ್ಯ ನೀಡುವ ಮೂಲಕ ಹೋಂಸ್ಟೇಗಳು ಪ್ರವಾಸಿಗರಿಗೆ ಹೆಚ್ಚು ಹತ್ತಿರ ಆಗುತ್ತಿವೆ. ಹಾಗಾಗಿ ಜಿಲ್ಲೆಗೆ ಆಗಮಿಸುವ ಪ್ರವಾಸಿಗರು ಆತಿಥ್ಯದ ಮನೆಗಳಲ್ಲಿ ಆಶ್ರಯ ಪಡೆಯುವುದು ಸಾಮಾನ್ಯ. ಈಗ ಇದೊಂದು ಜನಪ್ರಿಯ ಉದ್ಯಮವಾಗಿ ಬೆಳೆಯುತ್ತಿದ್ದು, ನೋಂದಣಿ ಕಡ್ಡಾಯವಾಗಿದ್ದರೂ ಶೇ. 60ಕ್ಕಿಂತಲೂ ಅಧಿಕ ಹೋಂಸ್ಟೇಗಳು ಪರವಾನಗಿ ಇಲ್ಲದೆಯೇ ಕಾರ್ಯಾಚರಿಸುತ್ತಿವೆ.
ಕೊಡಗಿನಲ್ಲಿ ಯಾವ ಊರಿಗೆ ಹೋದರೂ ಹೋಮ್‌ಸ್ಟೇಗಳು ಸಾಮಾನ್ಯ ಎಂಬAತಾಗಿದೆ. ಪ್ರವಾಸೋದ್ಯಮ ಇಲಾಖೆ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಸುಮಾರು 6 ಸಾವಿರ ಹೋಂ ಸ್ಟೇಗಳಿರಬಹುದು ಎಂದು ಅಂದಾಜಿಸಲಾಗಿದೆ. ಆದರೆ ಈ ಸಂಖ್ಯೆ ಇನ್ನೂ ಹೆಚ್ಚು ಇರುವ ಸಾಧ್ಯತೆಗಳಿವೆ. ಪ್ರವಾಸೋದ್ಯಮ ಇಲಾಖೆಯಲ್ಲಿ ಈವರೆಗೂ 2,478 ಹೋಂಸ್ಟೇಗಳು ಮಾತ್ರ ನೋಂದಣಿ ಮಾಡಿಕೊಂಡಿವೆ. ಉಳಿದವು ನೋಂದಣಿ ಮಾಡಿಕೊಂಡಿಲ್ಲ, ಪರವಾನಗಿಯನ್ನೂ ಪಡೆದುಕೊಳ್ಳದೆ ಅನಧಿಕೃತವಾಗಿ ಕಾರ್ಯಾಚರಿಸುತ್ತಿವೆ.
ಹೋಂಸ್ಟೇಗಳನ್ನು ಶಿಸ್ತುಬದ್ಧ ವ್ಯವಸ್ಥೆ ಅಡಿಯಲ್ಲಿ ಕಾರ್ಯಾಚರಿಸುವಂತೆ ಮಾಡಲು ಜಿಲ್ಲಾಡಳಿತ ಮೊದಲಿನಿಂದಲೂ ಸಾಕಷ್ಟು ಪ್ರಯತ್ನ ಮಾಡುತ್ತಿದೆ. ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿ ಮಾಡಿಕೊಂಡ ನಂತರವಷ್ಟೇ ಪ್ರವಾಸಿಗರ ಆತಿಥ್ಯಕ್ಕೆ ಮುಂದಾಗಬೇಕು. ಇಲ್ಲದಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹಲವು ಬಾರಿ ಎಚ್ಚರಿಕೆ ನೀಡಲಾಗಿದೆ. ಆದರೂ ಯಾವುದೇ ಪ್ರಯೋಜನ ಆಗಿಲ್ಲ. ನೋಂದಣಿ ವ್ಯವಸ್ಥೆ ಸರಳವಾಗಿದ್ದರೂ ಅನಧಿಕೃತ ಹೋಮ್‌ಸ್ಟೇಗಳ ನೋಂದಣಿಗೆ ಹೆಚ್ಚು ಆಸಕ್ತಿ ಕಂಡು ಬರುತ್ತಿಲ್ಲ.
ಹೋಂಸ್ಟೇಗಳನ್ನು ಪ್ರವಾಸೋದ್ಯಮ ಇಲಾಖೆಯಲ್ಲಿ ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಂಡು ಪರವಾನಗಿ ಪಡೆದುಕೊಳ್ಳಬೇಕು. ಹೋಂ ಸ್ಟೇ ಮಾಲೀಕರು ಅಥವಾ ಅವರ ಕುಟುಂಬ ಸದಸ್ಯರು ಅತಿಥಿಗಳೊಂದಿಗೆ ಅದೇ ಆವರಣದಲ್ಲಿ ವಾಸಿಸುತ್ತಿರಬೇಕು ಎನ್ನುವುದು ನೋಂದಣಿಯ ಪ್ರಮುಖ ನಿಯಮ. ಅನಧಿಕೃತ ಹೋಂಸ್ಟೇಗಳ ಪೈಕಿ ಬಹುತೇಕ ಕಡೆಗಳಲ್ಲಿ ಮಾಲೀಕರು ಸ್ಥಳದಲ್ಲಿ ಇರುವುದೇ ಇಲ್ಲ. ಬಾಡಿಗೆ ಅಥವಾ ಗುತ್ತಿಗೆ ಆಧಾರದಲ್ಲಿ ಮೂರನೇ ವ್ಯಕ್ತಿಗೆ ಮನೆಯನ್ನು ಕೊಟ್ಟು ಇವರು ದೂರದಲ್ಲೆಲ್ಲೋ ಇರುತ್ತಾರೆ. ನೋಂದಣಿಗೆ ಇದೇ ಪ್ರಮುಖ ಅಡ್ಡಿಯಾಗಿದೆ.
ಹೋಂ ಸ್ಟೇಗಳಲ್ಲಿ ಕನಿಷ್ಠ 1 ಮತ್ತು ಗರಿಷ್ಠ 6 ಕೊಠಡಿಗಳಿಗೆ ಮಾತ್ರ ಅವಕಾಶವಿರುತ್ತದೆ. ಆದರೆ ಅನಧಿಕೃತ ಹೋಂಸ್ಟೇಗಳು ಲಾಡ್ಜ್ಗಳಿಗೆ ಪೈಪೋಟಿ ಕೊಡುವ ರೀತಿಯಲ್ಲಿ ಕಾರ್ಯಾಚರಿಸುತ್ತಿರುತ್ತವೆ. ಹೋಂಸ್ಟೇ ಗೃಹ ಚಟುವಟಿಕೆ ವ್ಯಾಪ್ತಿಗೆ ಬರುತ್ತದೆ. ಆದರೆ ಲಾಡ್ಜ್ಗಳು ವಾಣಿಜ್ಯ ಚಟುವಟಿಕೆ ಆಗಿದೆ. ಹಾಗಾಗಿ ವಾಣಿಜ್ಯ ಚಟುವಟಿಕೆಯ ಮೇಲೆ ವಿಧಿಸುವ ತೆರಿಗೆ, ಕಂದಾಯಗಳಿAದ ತಪ್ಪಿಸಿಕೊಳ್ಳಲು ಹೋಂಸ್ಟೇ ಮುಖವಾಡ ಧರಿಸಿಕೊಳ್ಳಲಾಗುತ್ತದೆ. ನೋಂದಣಿ ಮಾಡಿಕೊಂಡರೆ ಈ ರೀತಿ ಮಾಡಲಾಗುವುದಿಲ್ಲ.
ಈ ರೀತಿ ಅನಧಿಕೃವಾಗಿ ನಡೆಸಲಾಗುತ್ತಿರುವ ಹೋಂಸ್ಟೇಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ನೋಂದಾಯಿತ ಹೋಂಸ್ಟೇಗಳ ಮಾಲೀಕರು, ಕೊಡಗು ಜಿಲ್ಲಾ ಹೋಂಸ್ಟೇ ಅಸೋಸಿಯೇಷನ್ ಮೂಲಕ ಸಂಬAಧಿಸಿದವರ ಗಮನ ಸೆಳೆಯಲಾಗುತ್ತಿದೆ. ಆದರೆ ಯಾವುದೇ ಪ್ರಯೋಜನ ಆಗುತ್ತಿಲ್ಲ. ಈ ವಿಷಯದಲ್ಲಿ ಸರ್ಕಾರದಿಂದ ಸ್ಪಷ್ಟ ನಿಯಮಾವಳಿಗಳು ಇಲ್ಲದ ಕಾರಣ ಪೊಲೀಸರೂ ಅಸಹಾಯಕರಾಗಿದ್ದರೆ ಎನ್ನಲಾಗುತ್ತಿದೆ. ಹೋಂಸ್ಟೇಗಳ ನೋಂದಣಿಗೆ ಜಿಲ್ಲಾಡಳಿತ ಗಡುವು ಕೊಟ್ಟರೂ ಅನಧಿಕೃತ ಹೋಂಸ್ಟೇಗಳು ಮಾತ್ರ ತಲೆಯೇ ಕೆಡಿಸಿಕೊಳ್ಳುತ್ತಿಲ್ಲ.
ಪೊನ್ನಂಪೇಟೆ ತಾಲೂಕು ಕುಟ್ಟ ಗ್ರಾಮದಲ್ಲಿ ವಿದೇಶಿ ಮಹಿಳೆ ಮೇಲೆ ನಡೆದಿದೆ ಎನ್ನಲಾದ ಅತ್ಯಾಚಾರ ಪ್ರಕರಣದ ನಂತರ ಹೋಂ ಸ್ಟೇಗಳಲ್ಲಿ ಪ್ರವಾಸಿಗರ ಸುರಕ್ಷತೆಯ ಬಗ್ಗೆ ಚರ್ಚೆಗಳು ಶುರುವಾಗಿದೆ. ಈ ಹಿಂದೆಯೂ ಇಂಥ ಘಟನೆಗಳು ನಡೆದಿವೆ. ಕಾನೂನುಬಾಹಿರ ಚಟುವಟಿಕೆಗಳಿಗೂ ಹೋಂ ಸ್ಟೇಗಳು ಆಶ್ರಯ ನೀಡಿದ ಪ್ರಕರಣಗಳು ನಡೆದಿದ್ದವು. ವೇಶ್ಯಾವಾಟಿಕೆ, ರೇವ್‌ಪಾರ್ಟಿ, ಜೂಜಾಟ, ಬೆಟ್ಟಿಂಗ್... ಹೀಗೆ ಕಾನೂನು ಬಾಹಿರ ಘಟನೆಗಳು ಆಗಾಗ್ಗೆ ವರದಿ ಆಗುತ್ತಲೇ ಇರುತ್ತದೆ.
ಕೊಡಗಿಗೆ ಪ್ರವಾಸಿಗರು ಇಲ್ಲಿಯ ಪ್ರಾಕೃತಿಕ ಸೌಂದರ್ಯ ಸವಿಯುವುದಕ್ಕೆ ಮಾತ್ರ ಬರುವುದಿಲ್ಲ. ಜಿಲ್ಲೆಯ ಪ್ರವಾಸೋದ್ಯಮವನ್ನು ದುರುಪಯೋಗಪಡಿಸಿಕೊಂಡು ತಮ್ಮ ದುಶ್ಚಟಗಳನ್ನು ಪೂರೈಸಿಕೊಳ್ಳುವುದಕ್ಕಾಗಿ ಆಗಮಿಸುವವರೂ ಇದ್ದಾರೆ. ಸ್ಥಳೀಯರು ಕೂಡ ಇಂಥದ್ದಕ್ಕೆ ಪ್ರೋತ್ಸಾಹಕೊಡುತ್ತಿದ್ದು, ಜಿಲ್ಲೆಯ ಪ್ರವಾಸೋದ್ಯಮಕ್ಕೆ ಕಳಂಕ ತರುವ ಪ್ರಯತ್ನ ನಡೆಯುತ್ತಲೇ ಇರುತ್ತದೆ. ಒಮ್ಮೆಲೇ ಹಣ ಮಾಡಬೇನ್ನುವ ದುರಾಸೆಯವರು ಪ್ರವಾಸೋದ್ಯಮದ ಹೆಸರಿನಲ್ಲಿ ಅಕ್ರಮ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡುತ್ತಿರುತ್ತಾರೆ. ಇಂಥವರಿAದ ನ್ಯಾಯಬದ್ಧವಾಗಿ ನಡೆಯುತ್ತಿರುವ ಹೋಂಸ್ಟೇಗಳನ್ನೂ ಅನುಮಾನದಿಂದ ನೋಡುವಂಥ ಪರಿಸ್ಥಿತಿ ನಿರ್ಮಾಣ ಆಗಿದೆ.
ಹೋಮ್ ಸ್ಟೇಗಳನ್ನು ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿ ಮಾಡುವ ಮೂಲಕ ಒಂದು ನಿಯಂತ್ರಿತ ವ್ಯವಸ್ಥೆ ಅಡಿಯಲ್ಲಿ ಕಾರ್ಯಾಚರಿಸುವಂತೆ ಮಾಡಿದರೆ ಹೊಮ್‌ಸ್ಟೇಗಳಲ್ಲಿ ನಡೆಯುವ ಕಾನೂನು ಬಾಹಿರ ಕೃತ್ಯಗಳಿಗೆ ಕಡಿವಾಣ ಹಾಕಬಹುದು ಎನ್ನುವುದು ಪ್ರವಾಸೋದ್ಯಮಿಗÀಳ ಅಭಿಪ್ರಾಯ. ಜಾಗತಿಕ ಮಟ್ಟದಲ್ಲಿ ಉತ್ತಮ ಹೆಸರು ಮಾಡುತ್ತಿರುವ ಕೊಡಗಿನ ಪ್ರವಾಸೋದ್ಯಮದ ಮೇಲೆ ಕಪ್ಪು ಚುಕ್ಕೆ ಬಾರದಂತೆ ನೋಡಿಕೊಳ್ಳಲು ಕೆಲವು ಕಠಿಣ ಕ್ರಮಗಳ ಅಗತ್ಯವೂ ಇದೆ. ಈ ನಿಟ್ಟಿನಲ್ಲಿ ಸಾರ್ವಜನಿಕರೂ ಜಿಲ್ಲಾಡಳಿತದೊಂದಿಗೆ ಕೈ ಜೋಡಿಸಬಹುದಾಗಿದ್ದು, ಮಾಹಿತಿ ಇಲ್ಲದೆ ಅನಧಿಕೃತವಾಗಿ ನಡೆಸುತ್ತಿರುವಂಥ ಹೋಂ-ಸ್ಟೇಗಳ ಬಗ್ಗೆ ಪ್ರವಾಸೋದ್ಯಮ ಇಲಾಖೆಗೆ ಪತ್ರ ಮುಖಾಂತರ ಅಥವಾ ಫೋನ್ ಮೂಲಕ ಮಾಹಿತಿ ನೀಡಲು ಕೂಡ ಅವಕಾಶ ಮಾಡಿಕೊಡಲಾಗಿದೆ.
"

ಕೊಡಗಿನಲ್ಲಿ 2,478 ಹೋಂಸ್ಟೇಗಳು ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿ ಆಗಿ ಪರವಾನಗಿ ಪಡೆದುಕೊಂಡು ವ್ಯವಹಾರ ನಡೆಸುತ್ತಿವೆ. ಆದರೆ 2-3 ಸಾವಿರದಷ್ಟು ಹೋಂ ಸ್ಟೇಗಳು ನೋಂದಣಿ ಆಗದೆ ಕಾರ್ಯನಿರ್ವಹಿಸುತ್ತಿವೆ. ಪ್ರವಾಸೋದ್ಯಮ ಇಲಾಖೆಯಲ್ಲಿ ಹೋಂಸ್ಟೇಗಳ ನೋಂದಣಿಗೆ ಬಳಸುವ ಆ್ಯಪ್‌ನಲ್ಲಿ ಸಮಸ್ಯೆ ಇರುವ ಕಾರಣ ನೋಂದಣಿ ನಿಧಾನ ಆಗುತ್ತಿದೆ. ಆದರೂ ನ್ಯಾಯಬದ್ಧವಾಗಿ ವ್ಯವಹಾರ ನಡೆಸುವ ಉದ್ದೇಶದಿಂದ ಎಲ್ಲಾ ಹೋಂಸ್ಟೇಗಳೂ ನೋಂದಣಿ ಮಾಡಿಕೊಳ್ಳಬೇಕಾಗಿದೆ. ನೋಂದಣಿಗೆ ನಿಯಮಾವಳಿಗಳು ಇರುವುದರಿಂದ ಹೋಂಸ್ಟೇಗಳಲ್ಲಿ ನಡೆಯುವ ಕಾನೂನು ವಿರೋಧಿ ಚಟುವಟಿಕೆಗಳು ನಿಯಂತ್ರಣಕ್ಕೆ ಬರುತ್ತದೆ.

— ಅಂಬೇಕಲ್ ನವೀನ್ ಕುಶಾಲಪ್ಪ, ಉಪಾಧ್ಯಕ್ಷ, ಕೂರ್ಗ್ ಹೋಂಸ್ಟೇ ಅಸೋಸಿಯೇಷನ್


"

ಜಿಲ್ಲೆಯ ಎಲ್ಲಾ ಹೋಂಸ್ಟೇಗಳ ಕುರಿತು ಪರಿಶೀಲನಾ ಕಾರ್ಯ ನಡೆಸಲಾಗುವುದು. ಒಂದು ವೇಳೆ ಅಕ್ರಮ, ಅನಧಿಕೃತ, ನಿಯಮ ಉಲ್ಲಂಘನೆಗಳು ಕಂಡು ಬಂದರೆ ಕ್ರಮ ನಿಶ್ಚಿತ. ಹೋಂಸ್ಟೇಗಳ ಸಿಸಿಟಿವಿಗಳು ಚಾಲನೆಯಲ್ಲಿರಬೇಕು, ಯಾವುದೇ ಕಾರಣಕ್ಕೂ ಅವು ಕೆಟ್ಟಿರಬಾರದು. ತಮ್ಮಲ್ಲಿ ಕೆಲಸ ಮಾಡುವ ಕಾರ್ಮಿಕರ ಗುಣ, ನಡತೆಗಳ ಮೇಲೆ ನಿಗಾ ಇರಿಸಬೇಕು, ಕೆಟ್ಟ ಗುಣ, ಕೆಟ್ಟ ನಡತೆ ಇರುವವರ ಕುರಿತು ಪೊಲೀಸರಿಗೆ ಮಾಹಿತಿ ನೀಡಬೇಕು, ಅಂತಹವರನ್ನು ಕೆಲಸದಲ್ಲಿ ಇರಿಸಿಕೊಳ್ಳಬಾರದು.

— ಆರ್.ಎನ್. ಬಿಂದುಮಣಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಕೊಡಗು


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net