ಪಿಆರ್‌ಸಿ ತಹಸೀಲ್ದಾರ್ ಕೊಟ್ಟರೆ ತಪ್ಪೇನು ?

ಧರ್ಮಜ ಉತ್ತಪ್ಪ
ಧರ್ಮಜ ಉತ್ತಪ್ಪ
Published on
ಮಡಿಕೇರಿ:
ಕರ್ನಾಟಕ ಶಾಶ್ವತ ನಿವಾಸಿ ಪ್ರಮಾಣಪತ್ರ (ಪಿಆರ್‌ಸಿ) ತಹಸೀಲ್ದಾರ್ ಕೊಟ್ಟರೆ ತಪ್ಪೇನು ? ಎಂದು ಜಿಲ್ಲಾ ಕಾಂಗ್ರೆಸ್ ಪ್ರಶ್ನಿಸಿದೆ. ಒಬ್ಬ ಪ್ರಜೆಯೂ ಮತದಾನದ ಹಕ್ಕಿನಿಂದ ವಂಚಿತ ಆಗಬಾರದು ಎನ್ನುವುದು ಕಾಂಗ್ರೆಸ್ ಕಾಳಜಿ. ಎಸ್‌ಐಆರ್ ಪ್ರಕ್ರಿಯೆ ಸಂದರ್ಭ 2002ರ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ಅಥವಾ ಇತರ ದಾಖಲಾತಿ ಹೊಂದಿಸಿಕೊಳ್ಳಲು ಕಷ್ಟವಾದರೆ ಅಂಥವರ ಹೆಸರು ಮತದಾರರ ಪಟ್ಟಿಯಿಂದಲೇ ತೆಗೆಯುವ ಸಾಧ್ಯತೆ ಇರುತ್ತದೆ. ಇಂಥ ಸಂದರ್ಭದಲ್ಲಿ ಒದಗಿಸಬೇಕಾದ ದಾಖಲೆಗಳ ಪೈಕಿ ಶಾಶ್ವತ ನಿವಾಸಿ ಪ್ರಮಾಣಪತ್ರ ಅತ್ಯಂತ ಸುಲಭವಾಗಿ ಹೊಂದಿಕೊಳ್ಳಲು ಸಾಧ್ಯವಾಗಿರುವುದರಿಂದ ಕರ್ನಾಟಕ ಶಾಶ್ವತ ನಿವಾಸಿ ಪ್ರಮಾಣಪತ್ರವನ್ನು ತಹಸೀಲ್ದಾರ್ ಕೊಡಲು ಅನುವಾಗುವಂತೆ ಸರ್ಕಾರ ಅಧಿಸೂಚನೆ ಹೊರಡಿಸಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಧರ್ಮಜ ಉತ್ತಪ್ಪ ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಜನಸಾಮಾನ್ಯರಿಗೆ, ಬಡವರಿಗೆ ತಾಲೂಕು ಕೇಂದ್ರಕ್ಕೆ ಬಂದು ತಹಸೀಲ್ದಾರ್ ಬಳಿ ಶಾಶ್ವತ ನಿವಾಸಿ ಪ್ರಮಾಣಪತ್ರ ಪಡೆಯಲು ಸಾಧ್ಯವಾಗುವುದಿಲ್ಲ. ಹಾಗಾಗಿ ಇದನ್ನು ಗ್ರಾ.ಪಂ. ಮಟ್ಟದಲ್ಲಿ ಪಿಡಿಒ ಕೊಡುವಂತಾಗಬೇಕು. ಕರ್ನಾಟಕ ಶಾಶ್ವತ ನಿವಾಸಿ ಪ್ರಮಾಣಪತ್ರ ತಹಸೀಲ್ದಾರ್ ಕೊಡುವುದಕ್ಕೆ ಸಂಬAಧಿಸಿದAತೆ ಸರ್ಕಾರದ ಅಧಿಸೂಚನೆ ಸರಿ ಇಲ್ಲವೆಂದಾದರೆ ಚುನಾವಣಾ ಆಯೋಗ ಪ್ರಶ್ನೆ ಮಾಡಬೇಕು. ಆದರೆ ಇಲ್ಲಿ ಇದನ್ನು ಬಿಜೆಪಿ ವಿರೋಧಿಸುತ್ತಿರುವುದು ಯಾಕೆ ? ಎಂದು ಪ್ರಶ್ನಿಸಿದ ಅವರು ಕರ್ನಾಟಕ ಶಾಶ್ವತ ನಿವಾಸಿ ಪ್ರಮಾಣಪತ್ರದಿಂದ ಯಾವುದೇ ದುರುಪಯೋಗ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಎಸ್‌ಐಆರ್ ವಿಷಯದಲ್ಲಿ ಕಾಂಗ್ರೆಸ್ ಜವಾಬ್ದಾರಿಯುತವಾಗಿ ಕೆಲಸ ಮಾಡುತ್ತಿದೆ. ಪಕ್ಷಬೇಧ ಮರೆತು ಎಲ್ಲಾ ಮತದಾರರಿಗೂ ಸಹಾಯ ಮಾಡಲಾಗುತ್ತಿದೆ. ಎಲ್ಲರಿಗೂ ಎಸ್‌ಐಆರ್ ಅರ್ಜಿ ತುಂಬಲು ಆಗುವುದಿಲ್ಲ. ಇಂಥವರಿಗೆ ಉಪಯೋಗ ಆಗಲಿ ಎಂದು ಕೇಂದ್ರಗಳನ್ನು ತೆರೆದು ಅಲ್ಲಿ ಅರ್ಜಿಗಳನ್ನು ತುಂಬಿಸಲಾಗುತ್ತಿದೆ. ಆದರೆ ಇದನ್ನೂ ಬಿಜೆಪಿ ಪ್ರಶ್ನೆ ಮಾಡುತ್ತಿದೆ. ಚುನಾವಣಾ ಆಯೋಗ ತೆಗೆದುಕೊಳ್ಳುವ ಕೆಲವೊಂದು ತೀರ್ಮಾನಗಳು ಗೊಂದಲದಿAದ ಕೂಡಿದೆ. ಇಂಥ ಎಲ್ಲಾ ಗೊಂದಲಗಳನ್ನು ಪರಿಹರಿಸಬೇಕು. ದೇಶದ ಪ್ರಜೆ ಆಗಿದ್ದೂ ಎಸ್‌ಐಆರ್ ಪ್ರಕ್ರಿಯೆ ವೇಳೆ ಮತದಾನ ಹಕ್ಕು ವಂಚಿತರಾದವರ ಬಗ್ಗೆ ಆಯೋಗದ ನಿಲುವು ಏನು ಎಂಬುದನ್ನು ಚುನಾವಣಾ ಆಯೋಗ ಸ್ಪಷ್ಪಡಿಸಬೇಕು ಎಂದರು.
ಡಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ ಎಲ್ಲಾ ಕಡೆಗಳಲ್ಲೂ ಬಿಎಲ್‌ಒಗಳು ಗಣತಿ ಅರ್ಜಿ ನಮೂನೆಯನ್ನು ಕೊಡುತ್ತಾ ಬಂದಿದ್ದಾರೆ. ಆದರೆ ಇದು ತುಂಬುವುದು ಹೇಗೆ ಎನ್ನುವುದು ಬಹುತೇಕರಿಗೆ ಗೊತ್ತಾಗುತ್ತಿಲ್ಲ. ಈ ಬಗ್ಗೆ ಮಾಹಿತಿ ಕೊಡುವಂತಾಗಬೇಕು. ಯಾರು ಕೂಡ ಮತದಾನದ ಹಕ್ಕಿನಿಂದ ವಂಚಿತರಾಗದ ರೀತಿಯಲ್ಲಿ ನೋಡಿಕೊಳ್ಳಬೇಕು. ಕೆಲವು ಕಡೆ ಬಿಎಲ್‌ಒಗಳಿಗೆ ಸರಿಯಾಗಿ ತರಬೇತಿ ಆಗದಿರುವ ಬಗ್ಗೆ ಮಾಹಿತಿ ಇದೆ. ತಾಂತ್ರಿಕ ಗೊಂದಲಗಳೂ ಸರಿಯಾಗಬೇಕು. ದೇಶದ ಪ್ರತಿ ಪ್ರಜೆಗೂ ಮತದ ಹಕ್ಕು ನೀಡಲು ಶಾಶ್ವತ ನಿವಾಸಿ ಪತ್ರ ಕೊಡುವುದರಲ್ಲಿ ತಪ್ಪೇನು ? ಎಂದು ಪ್ರಶ್ನಿಸಿದರು.
ಡಿಸಿಸಿ ಪ್ರಧಾನ ಕಾರ್ಯದರ್ಶಿ ಕೊಲ್ಯದ ಗಿರೀಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಂಸ, ವಕ್ತಾರ ತೆನ್ನೀರ ಮೈನಾ, ಸಾಮಾಜಿಕ ಜಾಲತಾಣ ವಿಭಾಗದ ಅಧ್ಯಕ್ಷ ಸೂರಜ್ ಹೊಸೂರು ಸುದ್ದಿಗೋಷ್ಠಿಯಲ್ಲಿ ಇದ್ದರು.
ಅಕಾಡೆಮಿಗಳು ಸೇರಿದಂತೆ ಕೊಡಗಿನಲ್ಲಿ ಸರ್ಕಾರದ ಹಾಲಿ ಎಲ್ಲಾ ಸಮಿತಿ ಪದಾಧಿಕಾರಿಗಳು, ನಾಮನಿರ್ದೇಶಿತ ಸ್ಥಾನಗಳನ್ನು ಬದಲಿಸಿ ಬೇರೆಯವರಿಗೆ ಕೊಡಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷÀ ಧರ್ಮಜ ಉತ್ತಪ್ಪ ತಿಳಿಸಿದ್ದಾರೆ. ಪಕ್ಷಕ್ಕಾಗಿ ದುಡಿದ ಎಲ್ಲರಿಗೂ ಅಧಿಕಾರ ಕೊಡಬೇಕು ಎನ್ನುವುದು ಜಿಲ್ಲಾ ಕಾಂಗ್ರೆಸ್ ನಿಲುವಾಗಿದೆ. ಹಾಗಾಗಿ ರಾಜ್ಯದಲ್ಲಿ ಮಾದರಿಯಾಗಿ ಈ ತೀರ್ಮಾನ ತೆಗೆದುಕೊಳ್ಳಲಾಗುತ್ತಿದೆ. ಈಗಾಗಲೇ ಅಧಿಆಧಿಕಾರದಲ್ಲಿ ಇರುವವರು 2 ವರ್ಷಗಳ ಕಾಲ ಅಧಿಕಾರ ಅನುಭವಿಸಿದ್ದಾರೆ. ಮುಂದಿನ 2 ವರ್ಷಗಳ ಅಧಿಕಾರವನ್ನು ಬೇರೆಯವರಿಗೆ ಬಿಟ್ಟು ಕೊಡಲಾಗುತ್ತದೆ. ಈ ಸಂಬAಧ ಹೊಸ ಹೆಸರುಗಳನ್ನು ಆಯ್ಕೆ ಮಾಡಿ ಸರ್ಕಾರಕ್ಕೆ ಕಳುಹಿಸುವ ಪ್ರಕ್ರಿಯೆ ನಡೆಯುತ್ತಿದೆ. ಹೊಸಬರ ನೇಮಕ ಆದಾಗ ಹಾಲಿ ಇರುವವರು ಸಹಕರಿಸಬೇಕು ಎಂದು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net