ವಿರಾಜಪೇಟೆ: ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗದೆ ಆರೋಗ್ಯವಂತ ಸಮಾಜವನ್ನು ನಿರ್ಮಿಸಬೇಕು. ಅದಕ್ಕಾಗಿ ಮಾದಕ ದ್ರವ್ಯಗಳ ವಿರುದ್ಧ ಯುದ್ಧ ಸಾರಬೇಕಿದೆ ಎಂದು ವಿರಾಜಪೇಟೆ ಉಪವಿಭಾಗದ ಡಿವೈಎಸ್ಪಿ ಮಹೇಶ್‌ಕುಮಾರ್ ಹೇಳಿದರು.
ಕೊಡಗು ಜಿಲ್ಲಾ ಪೋಲಿಸ್ ಇಲಾಖೆ, ವಿರಾಜಪೇಟೆ ಪೋಲಿಸ್ ಠಾಣೆ ಹಾಗೂ ಸಂತ ಅನ್ನಮ್ಮ ಪದವಿ ಪೂರ್ವ ಕಾಲೇಜಿನ ಸಹಯೋಗದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಗುರುವಾರ ಆಯೋಜಿಸಲಾಗಿದ್ದ ಮಾದಕ ವಸ್ತುಗಳ ಸೇವನೆಯ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಲು ವಿದ್ಯಾರ್ಥಿಗಳು ಉತ್ತಮ ಸ್ನೇಹಿತರ ಗೆಳೆತನವನ್ನು ಮಾಡಬೇಕು. ಭವ್ಯ ಭಾರತದಲ್ಲಿ ಯುವ ಜನತೆಯ ಮೇಲೆ ಅಪಾರ ನಿರೀಕ್ಷೆಯಿದ್ದು ಡ್ರಗ್ ನಿರ್ಮೂಲನೆಯನ್ನು ಮಾಡಿ ಎಂದು ಹೇಳಿದರು.
ಪ್ರಪಂಚದಲ್ಲಿ ಡ್ರಗ್ಸ್ ಅತಿ ದೊಡ್ಡ ಸಾಮಾಜಿಕ ಪಿಡುಗಾಗಿದ್ದು ಅದರ ನಿರ್ಮೂಲನೆ ಮಾಡುವುದು ಎಲ್ಲರ ಜವಾಬ್ದಾರಿಯಾಗಿದೆ. ಪೊಲೀಸ್ ಇಲಾಖೆಯ ವತಿಯಿಂದ ಸನ್ಮಿತ್ರ ಕಾರ್ಯಯೋಜನೆಯನ್ನು ಹಮ್ಮಿಕೊಂಡಿದ್ದು ಡ್ರಗ್ಸ್ ನಿರ್ಮೂಲನೆಗೆ ಸಹಕಾರಿಯಾಗಿದೆ ಎಂದರು.
ಮಾದಕ ವಸ್ತುಗಳು ಸೇವನೆಯ ದಾಸರಾಗದೆ ನಿಮ್ಮ ಕನಸು, ತಂದೆ ತಾಯಿಗಳ ತ್ಯಾಗ, ಶಿಕ್ಷಕರ ಸೇವೆಯನ್ನು ಗೌರವಿಸಿ ಭವ್ಯ ರಾಷ್ಟ್ರದ ಪ್ರಜೆಗಳಾಗಿ ಬಾಳಿ ಎಂದು ಕರೆಕೊಟ್ಟರು.
ಜಿಲ್ಲಾ ಪೋಲಿಸ್ ಇಲಾಖೆಯ ಕ್ರೈಂ ವಿಭಾಗದ ಅಧಿಕಾರಿ ಸಚಿನ್ ಮಾತನಾಡಿ, ಡ್ರಗ್ಸ್ ಸೇವನೆಯು ಒಂದು ಪಿಡುಗಾಗಿದ್ದು ಅದನ್ನು ನಿಯಂತ್ರಣ ಮಾಡದಿದ್ದರೆ ಸಮಾಜ ಹಾಗೂ ರಾಷ್ಟ್ರಕ್ಕೆ ಆಪತ್ತು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಂತ ಅನ್ನಮ್ಮ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರೆ.ಫಾ.ಮದಲೈ ಮುತ್ತು ಮಾತನಾಡಿ, ಯುವ ಜನರು ಮಾದಕ ವಸ್ತುಗಳ ಸೇವನೆಗೆ ಬಲಿಯಾಗದೆ ಸ್ವಾಸ್ತ್ಯ ಸಮಾಜವನ್ನು ನಿರ್ಮಾಣ ಮಾಡಬೇಕು. ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜತೆಗೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢರಾಗಿ ಎಂದು ಕಿವಿಮಾತು ಹೇಳಿದರು.
ಡ್ರಗ್ಸ್ ಜಾಗೃತಿಯ ಘೋಷಣಾ ಫಲಕಗಳನ್ನು ಹಿಡಿದು ವಿದ್ಯಾರ್ಥಿಗಳು ಡ್ರಗ್ಸ್‌ಮುಕ್ತ ಸಮಾಜ ನಿರ್ಮಿಸುವುದಾಗಿ ಘೋಷಣೆ ಮಾಡಿದರು.
ವಿರಾಜಪೇಟೆ ಪೋಲಿಸ್ ವೃತ್ತ ನಿರೀಕ್ಷಕ ಪಿ.ಅನೂಪ್ ಮಾದಪ್ಪ, ನಗರ ಪೊಲೀಸ್ ಠಾಣಾಧಿಕಾರಿ ಪ್ರಮೋದ್, ಅಪರಾಧ ವಿಭಾಗದ ಠಾಣಾಧಿಕಾರಿ ಕಾವೇರಪ್ಪ, ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಲತಾ ಉಪಸ್ಥಿತರಿದ್ದರು.