ಕುಶಾಲನಗರ ಸಮೀಪದ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಪರಿಸರಕ್ಕಾಗಿ ನಾವು- ಮಕ್ಕಳ ಪರಿಸರ ಸಂಭ್ರಮ ಕಾರ್ಯಕ್ರಮದಲ್ಲಿ ಶಾಸಕ ಡಾ. ಮಂತರ್ ಗೌಡ ಗಿಡ ನೆಟ್ಟರು. ಟಿ.ಜಿ. ಪ್ರೇಮಕುಮಾರ್, ಕೆ.ಪಿ.ಚಂದ್ರಕಲಾ, ವಿ.ಪಿ.ಶಶಿಧರ್, ಟಿ.ಪಿ. ರಮೇಶ್, ಕೆ.ಟಿ. ಬೇಬಿಮಾಥ್ಯೂ, ಕೆ.ಕೆ. ಮಂಜುನಾಥ್ ಕುಮಾರ್, ಜೆ. ಸೋಮಣ್ಣ ಮತ್ತಿತರರು ಇದ್ದರು.
ನಾಳೆಯ ಉತ್ತಮ ಭವಿಷ್ಯಕ್ಕಾಗಿ ನಾವು ಸ್ವಚ್ಛ, ಸುಂದರ ಮತ್ತು ಹಸಿರು ಪರಿಸರ ನಿರ್ಮಾಣಕ್ಕೆ ಶ್ರಮಿಸಬೇಕು ಎಂದು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಹೇಳಿದರು. ಕುಶಾಲನಗರ ತಾಲೂಕು ಕೂಡುಮಂಗ ಳೂರು(ಕೂಡ್ಲೂರು) ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ನಡೆದ
ಮಕ್ಕಳ ಪರಿಸರ ಸಂಭ್ರಮ:2026 ಕಾರ್ಯಕ್ರಮದಲ್ಲಿ ಪರಿಸರ ಜಾಗೃತಿ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದರು
ನಾವು ಪರಿಸರ ಸ್ನೇಹಿ ಜೀವನಶೈಲಿ ಅಳವಡಿಸಿಕೊಳ್ಳುವ ಮೂಲಕ ಪರಿಸರ ಸಂರಕ್ಷಣೆಗೆ ಸಂಕಲ್ಪ ಮಾಡಬೇಕು. ಇಂದು ನಾವು ಪ್ರಕೃತಿಯನ್ನು ಕಾಪಾಡಿದರೆ, ನಾಳೆ ಪ್ರಕೃತಿ ನಮ್ಮನ್ನು ಕಾಪಾಡುತ್ತದೆ. ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ ಆಗಿದೆ. ಮುಂದಿನ ಪೀಳಿಗೆಗೆ ಹಾಗೂ ನಾಳೆಯ ಉತ್ತಮ ಭವಿಷ್ಯಕ್ಕಾಗಿ ಹಸಿರು ಪರಿಸರ ನಿರ್ಮಾಣ ಮಾಡಲು ಎಲ್ಲರೂ ಸಂಕಲ್ಪ ಮಾಡಬೇಕು. ಪ್ರಕೃತಿಯನ್ನು ಕಾಪಾಡುವುದು ನಮ್ಮ ಕರ್ತವ್ಯ, ಮುಂದಿನ ಪೀಳಿಗೆಗೆ ಹಸಿರು ಭವಿಷ್ಯ ನೀಡುವುದು ನಮ್ಮ ಜವಾಬ್ದಾರಿ. ಹಸಿರು ಭೂಮಿಗಾಗಿ, ಸ್ವಚ್ಛ ಪರಿಸರಕ್ಕಾಗಿ ಹಾಗೂ ಸುಸ್ಥಿರ ಪರಿಸರಕ್ಕಾಗಿ ಪರಿಸರ ದಿನವನ್ನು ಪ್ರತಿನಿತ್ಯವೂ ಆಚರಿಸಬೇಕು. ಜೀವನದುದ್ದಕ್ಕೂ ಹಸಿರನ್ನೇ ಉಸಿರಾಗಿಸಿಕೊಂಡು ಸದಾ ಪರಿಸರ ಸಂರಕ್ಷಣೆಯಲ್ಲಿ ತೊಡಗಿರುವ ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಟಿ.ಜಿ. ಪ್ರೇಮಕುಮಾರ್ ಅವರಲ್ಲಿರುವ ಪರಿಸರ ಪ್ರೇಮವನ್ನು ವಿದ್ಯಾರ್ಥಿಗಳು ಬೆಳೆಸಿಕೊಂಡು ತಮ್ಮನ್ನು ಪರಿಸರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು
ಎಂದು ಹೇಳಿದರು.
ಪರಿಸರ ಸಂರಕ್ಷಣೆಯ ಜಾಗೃತಿ ಆಂದೋಲನ ಕುರಿತ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಮಾಜಿ ಸಚಿವ ಎಂ.ಪಿ. ಅಪ್ಪಚ್ಚುರಂಜನ್ ಮುಂದಿನ ಪೀಳಿಗೆಗೆ ಉತ್ತಮ ಜೀವನವನ್ನು ಒದಗಿಸಲು ಹಾಗೂ ಜಾಗತಿಕ ತಾಪಮಾನವನ್ನು ನಿಯಂತ್ರಿಸಲು ಪರಿಸರವನ್ನು ರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಟಿ.ಜಿ. ಪ್ರೇಮಕುಮಾರ್ ತಮ್ಮ ವೃತ್ತಿ ಬದುಕಿನೊಂದಿಗೆ ವಿದ್ಯಾರ್ಥಿಗಳು ಮತ್ತು ಸಮುದಾಯದಲ್ಲಿ ವಿಜ್ಞಾನ ಜನಪ್ರಿಯಗೊಳಿಸುವುದರೊಂದಿಗೆ ಸದಾ ಕ್ರಿಯಾಶೀಲ ಚಟುವಟಿಕೆಗಳ ಮೂಲಕ ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡು ಜಿಲ್ಲೆಯಲ್ಲಿ ಪರಿಸರ ಜಾಗೃತಿ ಮೂಡಿಸುತ್ತಿರುವುದು ಮೆಚ್ಚುಗೆಯ ಸಂಗತಿ. ಮುಂದಿನ ದಿನಗಳಲ್ಲಿ ಸಾಲುಮರದ ತಿಮ್ಮಕ್ಕ ಅವರಂತೆ ಜನರಲ್ಲಿ ಹೆಚ್ಚೆಚ್ಚು ಗಿಡ- ಮರಗಳನ್ನು ನೆಟ್ಟು ಬೆಳೆಸವ ಕಾರ್ಯದಲ್ಲಿ ತೊಡಗಿಸಿಕೊಂಡು ಪರಿಸರ ಜಾಗೃತಿ ಮೂಡಿಸಲಿ ಎಂದರು.
ಮಕ್ಕಳ ಪರಿಸರ ಸಂಭ್ರಮ: 2026 ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್,
ನಮ್ಮ ಜೀವನದ ಅವಿಭಾಜ್ಯ ಅಂಶವಾಗಿರುವ ಪರಿಸರವನ್ನು ಉತ್ತಮ ಭವಿಷ್ಯಕ್ಕಾಗಿ ಸಂರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಜಿಲ್ಲೆಯಲ್ಲಿ ಕುಟ್ಟದಿಂದ ಹಿಡಿದು ಕೊಡ್ಲಿಪೇಟೆ ವರೆಗೆ ಅರಣ್ಯ ಗಿಡಗಳನ್ನು ನೆಟ್ಟು ಬೆಳೆಸುವಲ್ಲಿ ಜನತೆಯಲ್ಲಿ ಪರಿಸರ ಪ್ರೇಮ ಮೂಡಿಸಿದ ಕೀರ್ತಿ ಪ್ರೇಮ ಕುಮಾರ್ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ಪರಿಸರ ಪ್ರತಿಜ್ಞಾ ವಿಧಿ ಬೋಧಿಸಿದ ಶಾಲಾ ಮುಖ್ಯೋಪಾಧ್ಯಾಯ ಟಿ.ಜಿ. ಪ್ರೇಮಕುಮಾರ್ ಮಾತನಾಡಿ, ಪರಿಸರವೇ ಜೀವ, ಪರಿಸರವೇ ನಮ್ಮ ಉಸಿರು. ಪ್ರಕೃತಿಯನ್ನು ಕಾಪಾಡುವುದು ನಮ್ಮ ಕರ್ತವ್ಯ. ಮುಂದಿನ ಉತ್ತಮ ಭವಿಷ್ಯಕ್ಕಾಗಿ ಹಾಗೂ ಪೀಳಿಗೆಗೆ ಹಸಿರು ಭವಿಷ್ಯ ನೀಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ವಿದ್ಯಾರ್ಥಿಗಳು ಪರಿಸರ ಚಟುವಟಿಕೆಗಳಲ್ಲಿ ತೊಡಗಿ ಭವಿಷ್ಯದಲ್ಲಿ ಪರಿಸರ ರಾಯಭಾರಿಗಳಾಗಿ ರೂಪುಗೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ಸ್ಕೌಟ್ಸ್, ಗೈಡ್ಸ್ ಸಂಸ್ಥೆಯ ಪ್ರಧಾನ ಆಯುಕ್ತ ಕೆ.ಟಿ. ಬೇಬಿಮಾಥ್ಯೂ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್,
ಕೂಡಿಗೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ(ಡಯಟ್) ಪ್ರಾಂಶುಪಾಲ ರಾಮಚಂದ್ರ ರಾಜೇ ಅರಸ್, ಸಾಹಿತಿ ಡಾ. ಜೆ. ಸೋಮಣ್ಣ ಮಾತನಾಡಿದರು.
ಎಸ್‌ಡಿಎಂಸಿ ಸದಸ್ಯೆ ಹೇಮಾವತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಂಗಭೂಮಿ ಕಲಾವಿದ ಭರಮಣ್ಣ ಬಿ. ಬೆಟಗೇರಿ ಮತ್ತು ವಿದ್ಯಾರ್ಥಿಗಳು ಪರಿಸರ ಗೀತೆ ಹಾಡಿದರು.
ಕುಶಾಲನಗರ ಕೈಗಾರಿಕೋದ್ಯ ಮಿಗಳ ಸಹಕಾರ ಸಂಘದ ಅಧ್ಯಕ್ಷ ಟಿ.ಆರ್. ಶರವಣಕುಮಾರ್, ಕುಶಾಲನಗರ ಲಯನ್ಸ್ ಕ್ಲಬ್ ಅಧ್ಯಕ್ಷ ಕೆ.ಎನ್. ಪವನ್ ಕುಮಾರ್, ಸ್ಕೌಟ್ಸ್, ಗೈಡ್ಸ್ ಸಂಸ್ಥೆಯ ಕುಶಾಲನಗರ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಡಾ. ಪ್ರವೀಣ್ ದೇವರಗುಂಡ ಸೋಮಪ್ಪ, ಕೂಡಿಗೆ ಸರ್ಕಾರಿ ಪಿಯೂ ಕಾಲೇಜಿನ ಪ್ರಾಂಶುಪಾಲ ಎಚ್.ಜೆ. ನಾಗರಾಜ್, ಜಿಲ್ಲಾ ಪಿಯೂ ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷ ನಾಗಪ್ಪ ಯಾಲಕ್ಕಿಕಟ್ಟೆ ಮತ್ತಿತರರು ಇದ್ದರು