ನಮ್ಮೂರಿಗೆ ಡಕೋಟ ಬಸ್‌ಗಳು ಬೇಡ

ಇತ್ತೀಚೆಗೆ ಮಡಿಕೇರಿ-ಸಂಪಾಜೆ ನಡುವಿನ ಹೆದ್ದಾರಿಯಲ್ಲಿ ಮಾರ್ಗ ನಿಂತಿದ್ದ ಕೆಎಸ್‌ಆರ್‌ಟಿಸಿ ಬಸ್
ಇತ್ತೀಚೆಗೆ ಮಡಿಕೇರಿ-ಸಂಪಾಜೆ ನಡುವಿನ ಹೆದ್ದಾರಿಯಲ್ಲಿ ಮಾರ್ಗ ನಿಂತಿದ್ದ ಕೆಎಸ್‌ಆರ್‌ಟಿಸಿ ಬಸ್
Published on
ಮಡಿಕೇರಿ
ಗ್ರಾಮೀಣ ಮತ್ತು ಪಟ್ಟಣಗಳ ಸಂಪರ್ಕ ಸಾಧನಗಳಾಗಿ ಗುರುತಿಸಿಕೊಂಡಿರುವ ಕೆಎಸ್‌ಆರ್‌ಟಿಸಿ ಬಸ್‌ಗಳ ನಿರ್ವಹಣೆ ಕೊರತೆಯಿಂದ ಆಗಾಗ್ಗೆ ಅಲ್ಲಲ್ಲಿ ಕೆಟ್ಟು ನಿಲ್ಲುವುದು ಸಾಮಾನ್ಯ ಎಂಬAತಾಗಿದೆ. ಇದರಿಂದಾಗಿ ಪ್ರಯಾಣಿಕರು ದೈನಂದಿನ ಪ್ರಯಾಣದಲ್ಲಿ ಭಾರಿ ಪರದಾಟ ಅನುಭವಿಸುವ ಸ್ಥಿತಿ ಬಂದಿದೆ. ದೂರದೂರುಗಳಿಗೆ ತೆರಳುವ ಬಸ್‌ಗಳು ರಸ್ತೆ ಮಧ್ಯದಲ್ಲೇ ಕೆಟ್ಟು ನಿಲ್ಲುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಇಂಜಿನ್ ಬಿಸಿಯಾಗುವುದು, ಟೈರ್ ಪಂಚರ್, ಬ್ರೇಕ್ ವೈಫಲ್ಯ ಹಾಗೂ ಬ್ಯಾಟರಿ ಸಮಸ್ಯೆ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಪ್ರತಿದಿನ ಬಸ್‌ಗಳು ಅಲ್ಲಲ್ಲಿ ಕೆಟ್ಟುನಿಲ್ಲುವುದು ಕಂಡು ಬರುತ್ತಿದೆ. ನಿಯಮಗಳ ಪ್ರಕಾರ ನಿಗದಿತ ಕಿಲೋಮೀಟರ್ ಚಲಿಸಿದ ನಂತರ ಬಸ್‌ಗಳನ್ನು ಗುಜರಿಗೆ ಹಾಕಬೇಕಾದರೂ, ಹೊಸ ಬಸ್‌ಗಳ ಕೊರತೆಯಿಂದ ಹಳೆಯ ವಾಹನಗಳನ್ನೇ ಮರುಪರಿಷ್ಕರಿಸಿ ಬಳಸಿಕೊಳ್ಳಲಾಗುತ್ತಿದೆ. ಹಾಗಾಗಿ ಬಸ್‌ಗಳು ಕೆಟ್ಟು ನಿಲ್ಲುವುದರಿಂದ ಉದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ತುರ್ತು ಕೆಲಸಗಳಿಗಾಗಿ ಪ್ರಯಾಣಿಸುವವರು ಗಂಟೆಗಟ್ಟಲೆ ರಸ್ತೆಯಲ್ಲೇ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಬಸ್‌ಗಳ ನಿರ್ವಹಣೆಗೆ ಬಿಡಿಭಾಗಗಳ ಪೂರೈಕೆಯೇ ಆಗುತ್ತಿಲ್ಲ ಎಂದು ಕೆಲವು ಕೆಎಸ್‌ಆರ್‌ಟಿಸಿ ಚಾಲಕರು ಹೇಳಿಕೊಳ್ಳುತ್ತಾರೆ. ಹೊಸ ಟೈರ್‌ಗಳು ಕೂಡ ಬರುತ್ತಿಲ್ಲ ಎನ್ನುವ ಆರೋಪಗಳಿವೆ. ಇರುವ ಹಳೆ ಬಿಡಿಭಾಗಗಳನ್ನೇ ಬಳಸಿಕೊಂಡು ಬಸ್‌ಗಳ ದುರಸ್ಥಿ ಕಾರ್ಯ ಮಾಡಲಾಗುತ್ತಿದೆ. ಸುಸ್ಥಿತಿಯಲ್ಲಿ ಇಲ್ಲದ ಬಸ್‌ಗಳನ್ನು ಮಾರ್ಗಗಳಿಗೆ ಕೊಡುವುದರಿಂದ ಚಾಲಕರು ಒತ್ತಡದಲ್ಲೇ ಕೆಲಸ ಮಾಡಬೇಕಾದ ಸ್ಥಿತಿ ಇದೆ. ಬಸ್‌ಗಳ ಒಳಗಡೆಯೂ ಸ್ವಚ್ಛತೆಯ ಕೊರತೆ ಕಾಣುತ್ತಿದೆ.
"

ಕೆಎಸ್‌ಆರ್‌ಟಿಸಿ ಬಸ್‌ಗಳ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಕಂಡುಬರುತ್ತಿದೆ. ಗ್ರಾಮೀಣ ಭಾಗಗಳಲ್ಲಿ ಸಂಚರಿಸುವ ಹಲವು ಬಸ್‌ಗಳು ಆಗಾಗ್ಗೆ ಮಾರ್ಗಮಧ್ಯೆಯೇ ಕೆಟ್ಟು ನಿಲ್ಲುತ್ತಿದ್ದು, ಪ್ರಯಾಣಿಕರು ಗಂಟೆಗಟ್ಟಲೆ ಪರದಾಡುವಂತಾಗಿದೆ. ಸಮಯಕ್ಕೆ ಸರಿಯಾಗಿ ಗಮ್ಯಸ್ಥಾನ ತಲುಪಲಾಗದೆ ವಿದ್ಯಾರ್ಥಿಗಳು, ಕಾರ್ಮಿಕರು ಹಾಗೂ ಉದ್ಯೋಗಿಗಳಿಗೆ ತೊಂದರೆಯಾಗುತ್ತಿದೆ. ಬಸ್‌ಗಳ ನಿಯಮಿತ ತಪಾಸಣೆ ಹಾಗೂ ಗುಣಮಟ್ಟದ ನಿರ್ವಹಣೆಗೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಹೆಚ್ಚಿನ ಆದ್ಯತೆ ನೀಡಬೇಕು.

— ದುಷ್ಯಂತ ಕುಮಾರ್, ಕೃಷಿಕ, ಗಣಗೂರು ಗ್ರಾಮ

"

ಸಾಕಷ್ಟು ಬಸ್‌ಗಳು ನಿರ್ವಹಣೆಯಿಲ್ಲದೆ ಇರುವುದರಿಂದ ಬಸ್ ನಿಗದಿತ ಸಮಯಕ್ಕೆ ತಲುಪುವಲ್ಲಿ ಸಾಧ್ಯವಾಗುತ್ತಿಲ್ಲ. ಮಕ್ಕಳು ಶಾಲಾ ಕಾಲೇಜುಗಳಿಗೆ ತೆರಳುವುದು ಕಷ್ಟ ಸಾಧ್ಯವಾಗುತ್ತಿದೆ. ಕೆಲವೊಮ್ಮೆ ರಜೆ ಹಾಕಿಕೊಳ್ಳುವುದರಿಂದ ಪಾಠ ಪ್ರವಚನಗಳಿಂದ ಹೊರಗಳಿಯಬೇಕಾಗುತ್ತಿದೆ. ಇದು ಮಕ್ಕಳ ಭವಿಷ್ಯದ ಮೇಲೆ ಕರಿನೆರಳು ಮೂಡುವಂತಾಗುತ್ತಿದೆ.

— ಮಮತಾ, ಜನತಾ ಕಾಲೋನಿ, ಸುಂಟಿಕೊಪ್ಪ

"

ಕೆಎಸ್‌ಆರ್‌ಟಿಸಿ ಬಸ್‌ಗಳು ಎಲ್ಲೆಂದರಲ್ಲಿ ನಿಲ್ಲಲು ಕಾರಣ ಅಸಮರ್ಪಕ ನಿರ್ವಹಣೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಚಾಲನ ಸಮಯದಲ್ಲಿಯೇ ವಾಹನದ ಭಾಗಗಳು ಮತ್ತು ಚಕ್ರಗಳು ಕಳಚಿ ಬೀಳುತ್ತಿರುವುದು ಆಪಾಯಕಾರಿ ಬೆಳವಣಿಗೆಯಾಗಿದೆ. ಉಚಿತ ಭಾಗ್ಯಗಳನ್ನು ಕೊಡುವಲ್ಲಿನ ಕಾಳಜಿ ಬಸ್‌ಗಳ ನಿರ್ವಹಣೆ ಮಾಡುವಲ್ಲಿ ಇಲ್ಲದಿರುವುದು ಖಂಡನೀಯ. ಅದರಲ್ಲಿಯೂ ಕೊಡಗಿನಂತಹ ಗ್ರಾಮೀಣ ಭಾಗಗಳಲ್ಲಿ ರಸ್ತೆ ದುಸ್ಥಿತಿ ಜತೆಗೆ ಬಸ್‌ಗಳು ಆಗಾಗ್ಗೆ ಕೆಟ್ಟು ನಿಲ್ಲುತ್ತಿರುವುದು ಜನರಲ್ಲಿ ಬೇಸರ ತರಿಸಿದೆ.

— ಸೂರಜ್ ಶಿಭಿನ್ ಅರಮಣಮಾಡ, ಬೆಸಗೂರು ಗ್ರಾಮ

"

ಕೆ.ಎಸ್.ಆರ್.ಟಿ.ಸಿ. ಬಸ್‌ಗಳು ಪ್ರಮುಖ ಸಂಪರ್ಕ ಕೊಂಡಿಗಳಾಗಿವೆ. ಇವನ್ನೇ ನಂಬಿ ಹಲವರು ಸಂಚಾರ ಬೆಳೆಸುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವು ಹಳೆಯ ಬಸ್‌ಗಳು, ಇವಿ ಬಸ್‌ಗಳು ರಸ್ತೆಯ ಮದ್ಯೆ ಎಲ್ಲೆಂದರಲ್ಲಿ ಕೆಟ್ಟು ನಿಲ್ಲುತ್ತಿವೆ. ಹಳೆಯ ಬಸ್‌ಗಳ ಗುಣಮಟ್ಟ ಪರಿಶೀಲನೆ ನಡೆಸಿ ಸಂಚಾರಕ್ಕೆ ಬಿಡಬೇಕು. ಕಾಡು ಪ್ರಾಣಿಗಳ ಹಾವಳಿ ಇರುವ ಕಡೆ ಈ ರೀತಿ ಸಮಸ್ಯೆಯಾದರೆ ಯಾರು ಹೊಣೆ ?

— ಜಿ. ಪವಿತ್ರ, ವಿರಾಜಪೇಟೆ

"

ಬಸ್‌ಗಳ ನಿರ್ವಹಣೆಗೆ ಹೆಚ್ಚಿನ ಒತ್ತು ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನಮ್ಮ ಜಿಲ್ಲೆಯಲ್ಲಿ ಕೆಎಸ್‌ಆರ್‌ಟಿಸಿ ವ್ಯವಸ್ಥೆ ಉತ್ತಮ ಪಡಿಸುವ ಸಂಬAಧ ಸಾರಿಗೆ ಸಚಿವ ಜತೆ ನಿರಂತರ ಸಂಪರ್ಕದಲ್ಲಿ ಇದ್ದೇನೆ. ಹೊಸ ಬಸ್‌ಗಳನ್ನು ಕೊಡಗಿಗೆ ತರುವ ಪ್ರಯತ್ನ ಮಾಡಲಾಗುತ್ತಿದೆ. ಈಗಾಗಲೇ 3 ಬಸ್‌ಗಳು ಬಂದಿವೆ. ಇನ್ನೂ ಹೆಚ್ಚಿನ ಬಸ್‌ಗಳು ಬರಲಿವೆ. ಕುಶಾಲನಗರ ಡಿಪೋ ಆದ ನಂತರ ಬಹುತೇಕ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ.

— ಡಾ. ಮಂತರ್ ಗೌಡ, ಮಡಿಕೇರಿ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net