ಹಾರಂಗಿ ಜಲಾಶಯದಿಂದ ನದಿಗೆ ನೀರು ಬಿಡುಗಡೆ

ಬಹುತೇಕ ಭರ್ತಿ ಆಗಿರುವ ಹಾರಂಗಿ ಜಲಾಶಯದಿಂದ ನದಿಗೆ 4 ಸಾವಿರ ಕ್ಯೂಸೆಕ್ ನೀರು ಬಿಡಲಾಯಿತು
ಬಹುತೇಕ ಭರ್ತಿ ಆಗಿರುವ ಹಾರಂಗಿ ಜಲಾಶಯದಿಂದ ನದಿಗೆ 4 ಸಾವಿರ ಕ್ಯೂಸೆಕ್ ನೀರು ಬಿಡಲಾಯಿತು
Published on
ಮಡಿಕೇರಿ:
ಕಾವೇರಿ ಕೊಳ್ಳದ ಪ್ರಮುಖ ಜಲಾಶಯಗಳ ಪೈಕಿ ಒಂದಾದ ಹಾರಂಗಿ ಈ ವರ್ಷ ಕೊನೆಗೂ ಬಹುತೇಕ ಭರ್ತಿ ಆಗಿದೆ. ಜಲಾಶಯಕ್ಕೆ ಒಳಹರಿವಿನ ಪ್ರಮಾಣದಲ್ಲಿ ಹೆಚ್ಚಳ ಮತ್ತು ಜಲಾನಯನ ಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ ಹಿನ್ನೆಲೆಯಲ್ಲಿ ಹೆಚ್ಚುವರಿ ನೀರನ್ನು ಶನಿವಾರದಿಂದ ನದಿಗೆ ಬಿಡಲಾಗಿದೆ. ಕಳೆದ ವರ್ಷ ಜೂನ್ ಮೊದಲ ವಾರದಲ್ಲೇ ಅಣೆಕಟ್ಟೆ ಭರ್ತಿ ಆಗಿದ್ದರೆ ಈ ವರ್ಷ ಜುಲೈ ಕೊನೆಯ ವಾರದ ತನಕ ಕಾಯಬೇಕಾಯಿತು.
2859 ಅಡಿ ಎತ್ತರದ ಹಾರಂಗಿ ಅಣೆಕಟ್ಟೆ ಭರ್ತಿ ಆಗಲು ಇನ್ನು ಕೇವಲ 1.52ಗಳಷ್ಟು ಮಾತ್ರ ಬಾಕಿ ಇದೆ. ಜಿಲ್ಲೆಯ ಮಡಿಕೇರಿ, ಕಾಲೂರು, ಹೆಬ್ಬೆಟಗೇರಿ, ಮಕ್ಕಂದೂರು, ಮುಕ್ಕೋಡ್ಲು, ಹಟ್ಟಿಹೊಳೆ, ಹರದೂರು, ಹೇರೂರು ಸೇರಿದಂತೆ ಹಾರಂಗಿಯ ಜಲಾನಯನ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರ ಮಳೆ ಆಗುತ್ತಿದ್ದು, ಅಣೆಕಟ್ಟೆಗೆ ಒಳಹರಿವಿನ ಪ್ರಮಾಣದಲ್ಲಿ ಏರಿಕೆ ಕಂಡುಬAದಿದೆ. ನಿಧಾನಕ್ಕೆ ನೀರಿನ ಮಟ್ಟ ಹೆಚ್ಚಳ ಆಗುತ್ತಿದ್ದು, ಜಲಾಶಯ ಭರ್ತಿ ಆಗುವ ಸೂಚನೆಗಳು ಸಿಕ್ಕಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಅಣೆಕಟ್ಟೆಯಿಂದ ನದಿಗೆ ಶನಿವಾರದಿಂದ 4 ಸಾವಿರ ಕ್ಯೂಸೆಕ್ ನೀರು ಹರಿಸಲಾಗುತ್ತಿದೆ.
2,859 ಅಡಿ ಎತ್ತರದ ಹಾರಂಗಿ ಅಣೆಕಟ್ಟೆಯಲ್ಲಿ ಶನಿವಾರದ ಮಾಹಿತಿ ಪ್ರಕಾರ 2,857.48 ಅಡಿಗಳಷ್ಟು ನೀರಿದೆ. ಕಳೆದ ವರ್ಷ ಇದೇ ದಿನ 2,855.98 ಅಡಿಗಳಷ್ಟು ನೀರಿತ್ತು. ಪ್ರಸ್ತುತ ಜಲಾಶಯಕ್ಕೆ 4,914 ಕ್ಯೂಸೆಕ್ ನೀರಿನ ಒಳಹರಿವು ಇದೆ. ಕಳೆದ ವರ್ಷ ಇದೇ ದಿ£ 8,496À ಕ್ಯೂಸೆಕ್‌ನಷ್ಟು ನೀರಿನ ಒಳಹರಿವು ಇತ್ತು. ನದಿಗೆ 10,158 ಕ್ಯೂಸೆಕ್ ನೀರು ಬಿಡಲಾಗುತ್ತಿತ್ತು. 8.5 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಪ್ರಸ್ತುತ 7.235 ಟಿಎಂಸಿ ನೀರಿದೆ. ಕಳೆದ ವರ್ಷ ಈ ಅವಧಿಯಲ್ಲಿ 6.727 ಟಿಎಂಸಿ ಮಾತ್ರ ಬಳಕೆಗೆ ಯೋಗ್ಯ ನೀರಿತ್ತು.
ಕೊಡಗಿನ ಏಕೈಕ ದೊಡ್ಡ ಅಣೆಕಟ್ಟೆ ಹೆಗ್ಗಳಿಕೆಯ ಹಾರಂಗಿಯಲ್ಲಿ ಸಾಮಾನ್ಯಕ್ಕಿಂತಲೂ ಅಧಿಕ ನೀರಿನ್ನು ಈ ಬಾರಿಯೂ ಸಂಗ್ರಹಿಸಿ ಇಟ್ಟುಕೊಳ್ಳಲಾಗಿತ್ತು. ಜೀವನದಿ ಕಾವೇರಿ ವಾಲ್ನೂರು ಬಳಿಯಿಂದ ತನ್ನ ಹರಿವು ಕ್ಷೀಣಿಸಿದ್ದರೂ ಕಾವೇರಿಯ ಉಪನದಿ ಹಾರಂಗಿ ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹ ಮಟ್ಟ ಉತ್ತಮವಾಗಿಯೇ ಇತ್ತು. ಆದರೆ ಬೇಸಿಗೆ ಮಳೆ, ಮುಂಗಾರು ಪೂರ್ವ ಮಳೆ ಹಾಗೂ ಜೂನ್‌ನಲ್ಲಿ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಜಲಾಶಯ ಭರ್ತಿ ಆಗಲು ಸುಮಾರು 1 ತಿಂಗಳು ಕಾಲ ತಡವಾಯಿತು.
ಒಂದು ವೇಳೆ ಜಲಾನಯನ ಪ್ರದೇಶದಲ್ಲಿ ಮಳೆಯ ಪ್ರಮಾಣ ಹೆಚ್ಚಾದರೆ ಅಣೆಕಟ್ಟೆಯ ಕೆಳಪಾತ್ರದಲ್ಲಿ ಪ್ರವಾಹ ಪರಿಸ್ಥಿತಿ ನಿಭಾಯಿಸಲು ಜಲಾಶಯದಲ್ಲಿ ನೀರಿನ ಮಟ್ಟವನ್ನು 2019ರಿಂದ ಈಚೆಗೆ 2,854 ಅಡಿಗೆ ಸೀಮಿತಗೊಳಿಸಿಕೊಂಡು ಬರಲಾಗುತ್ತಿತ್ತು. ಆದರೆ ಈ ವರ್ಷ ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ 2857 ಅಡಿಗೆ ನೀರು ಬರುವ ತನಕವೂ ಕಾದುನೋಡಿ ಈಗ ನದಿಗೆ ನೀರು ಹರಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಜಲಾಶಯದಲ್ಲಿ ನೀರಿನ ಮಟ್ಟ 2,850 ಅಡಿ ತಲುಪುವ ತನಕ ಅಣೆಕಟ್ಟೆಯಲ್ಲಿ ನೀರಿನ ಏರಿಕೆ ಪ್ರಮಾಣ ನಿಧಾನಗತಿಯಲ್ಲಿ ಇರುತ್ತದೆ. ನಂತರ ಇದು ವೇಗ ಪಡೆಯುತ್ತದೆ ಎನ್ನುತ್ತಾರೆ ಅಣೆಕಟ್ಟೆಯ ಅನುಭವಿ ಸಿಬ್ಬಂದಿ ವರ್ಗ. ಹಾಗಾಗಿ ಹೆಚ್ಚಿನ ಮಳೆ ಇದ್ದ ಸಂದರ್ಭದಲ್ಲಿ ನೀರಿನ ಮಟ್ಟ 2,850 ಅಡಿ ತಲುಪುತ್ತಿದ್ದಂತೆಯೇ ನದಿಗೆ ಹರಿಸುವುದು ಇಲ್ಲಿ ಸಾಮಾನ್ಯವಾಗಿತ್ತು. ಆದರೆ ಈ ವರ್ಷ ಒಳಹರಿವು ಕಡಿಮೆ ಇದ್ದ ಕಾರಣ ನದಿಗೆ ನೀರು ಬಿಡುವುದಕ್ಕೆ ನಿಧಾನಿಸಲಾಗಿದೆ.
2018ರಲ್ಲಿ ಕುಶಾಲನಗರ ಮತ್ತು ಸುತ್ತಲಿನ ವ್ಯಾಪ್ತಿಯಲ್ಲಿ ಸಂಭವಿಸಿದ ಪ್ರವಾಹಕ್ಕೆ ಹಾರಂಗಿ ಅಣೆಕಟ್ಟೆಯಲ್ಲಿನ ಅವೈಜ್ಞಾನಿಕ ನೀರಿನ ನಿರ್ವಹಣೆಯೇ ಕಾರಣ ಎನ್ನುವ ಆರೋಪ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ನಂತರದ ದಿನಗಳಲ್ಲಿ ಅಣೆಕಟ್ಟೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು ನೀರಿನ ನಿರ್ವಹಣೆಗೆ ಆದ್ಯತೆ ಕೊಡುತ್ತಿದ್ದಾರೆ. ಇದರಿಂದಾಗಿ ಹೆಚ್ಚು ರಿಸ್ಕ್ ತೆಗೆದುಕೊಳ್ಳಲು ಹೋಗದ ಅಧಿಕಾರಿಗಳು ಕಳೆದ ವರ್ಷದ ತನಕವೂ ಮಳೆಗಾಲದ ಅವಧಿಯಲ್ಲಿ ಅಣೆಕಟ್ಟೆ ಭರ್ತಿ ಆಗಲು ಇನ್ನು 10 ಅಡಿಗಳಷ್ಟು ಬಾಕಿ ಇರುವಂತೆಯೇ ನದಿಗೆ ನೀರು ಹರಿಸುವುದು ರೂಢಿಸಿಕೊಂಡಿದ್ದರು. ಆದರೆ ಈ ವರ್ಷ ಮಳೆ ಕಡಿಮೆ ಇರುವುದರಿಂದ ಸ್ವಲ್ಪ ನಿರಾತಂಕವಾಗಿ ಇದ್ದಾರೆ.
ಕೊಡಗು, ಮೈಸೂರು ಹಾಗೂ ಹಾಸನ ಜಿಲ್ಲೆಗಳ ಒಟ್ಟು 1,34,895 ಎಕರೆ ಅಚ್ಚುಕಟ್ಟು ಪ್ರದೇಶದಲ್ಲಿನ ರೈತರು ಹಾರಂಗಿ ಅಣೆಕಟ್ಟೆಯ ನೀರಿನ ಪ್ರಯೋಜನ ಪಡೆದುಕೊಳ್ಳುತ್ತಾರೆ. ಇಷ್ಟು ಜಾಗದಲ್ಲಿ ಸಮದ್ಧವಾಗಿ ಬೆಳೆ ತೆಗೆಯಬೇಕು ಅಂದರೆ 15 ಟಿಎಂಸಿ ನೀರಿನ ಅಗತ್ಯ ಇದೆ. 8.5 ಟಿಎಂಸಿ ನೀರಿನ ಸಮಗ್ರಹ ಸಾಮರ್ಥ್ಯದ ಹಾರಂಗಿ ಜಲಾಶಯ 2 ಬಾರಿ ಗರಿಷ್ಠ ಪ್ರಮಾಣದಲ್ಲಿ ತುಂಬಿದರೆ ಮಾತ್ರ ಇದು ಸಾಧ್ಯವಾಗುತ್ತದೆ. ಹಾಗಾಗಿ ಹಾರಂಗಿ ಭರ್ತಿ ಆಯಿತೆಂದರೆ ಈ ಮೂರು ಜಿಲ್ಲೆಗಳ ರೈತರು ಸಂಭ್ರಮಿಸುತ್ತಿದ್ದರು. ಆದರೆ ಈ ವರ್ಷ ಆ ವಾತಾವರಣ ಇಲ್ಲ. ಜಲಾಶಯ ತುಂಬಿದರೂ ಕೃಷಿ ಉದ್ದೇಶಕ್ಕೆ ನೀರು ಕೊಡಲಾಗುವುದಿಲ್ಲ ಎಂದು ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ. ಈ ಸಂಬAಧ ಪ್ರಕಟಣೆ ನೀಡಿರುವ ಹಾರಂಗಿ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರ ಸತೀಶ್ ಪ್ರಸ್ತುತ ಸಾಲಿನಲ್ಲಿ ಮುಂಗಾರು ಮಳೆಯ ಕೊರತೆಯಿಂದಾಗಿ ಹಾರಂಗಿ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಕಡಿಮೆಯಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಜಲಾಶಯದ ನೀರನ್ನು ಕುಡಿಯುವ ನೀರಿನ ಉದ್ದೇಶಕ್ಕಾಗಿ ಮಾತ್ರ ಬಳಸಲಾಗುತ್ತದೆ ಎಂದಿದ್ದಾರೆ. ರಾಜ್ಯಾದ್ಯಂತ ಬಹುತೇಕ ಜಲಾಶಯಗಳ ಒಳಹರಿವು ಶೂನ್ಯಕ್ಕೆ ಇಳಿದಿದೆ. ಜತೆಗೆ ಎಲ್ ನಿನೊ ಪರಿಣಾಮದಿಂದ ಉಂಟಾಗಿರುವ ಬರದ ಪರಿಸ್ಥಿತಿ ಹಾಗೂ ಪರಿಣಾಮಗಳ ಬಗ್ಗೆ ಜು.2 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಜಲಾಶಯ ನಂಬಿಕೊAಡು ಯಾವ ರೈತರೂ ಬೆಳೆ ಹಾಕಬೇಡಿ ಎಂದು ಮುಖ್ಯ ಮಂತ್ರಿಗಳು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಹಾಗಾಗಿ ಸಿಎಂ ನಿರ್ದೇಶನದಂತೆ, ಹಾಲಿ ಪರಿಸ್ಥಿತಿ ಅವಲೋಕಿಸಿದಾಗ ಜಲಾಶಯದಲ್ಲಿ ಲಭ್ಯವಿರುವ ನೀರನ್ನು ಯಾವುದೇ ಕೃಷಿ ಚಟುವಟಿಕೆಗಳಿಗೆ ಉಪಯೋಗಿಸಲು ಸಾಧ್ಯವಿಲ್ಲದೇ ಇದ್ದು, ಈ ಸಾಲಿನಲ್ಲಿ ಜಲಾಶಯದಲ್ಲಿ ಲಭ್ಯವಿರುವ ನೀರನ್ನು ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಉದ್ದೇಶಕ್ಕಾಗಿ ಮಾತ್ರ ಸದ್ಬಳಕೆ ಮಾಡಬೇಕಾಗಿರುತ್ತದೆ. ಈ ನಿಟ್ಟಿನಲ್ಲಿ ಹಾರಂಗಿ ಜಲಾಶಯ ವ್ಯಾಪ್ತಿಯ ಅಚ್ಚುಕಟ್ಟುದಾರರು, ರೈತರು ಹಾರಂಗಿ ಜಲಾಶಯದ ನೀರನ್ನು ಅವಲಂಬಿತರಾಗಿ ಯಾವುದೇ ಬೆಳೆಗಳನ್ನು ಬೆಳೆಯದಂತೆ ಸತೀಶ್ ಮನವಿ ಮಾಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net