ಜಲಾನಯನ ಪ್ರದೇಶದಲ್ಲಿ ನಿರೀಕ್ಷಿತ ಮಳೆಯಾಗದ ಕಾರಣ ಕಾವೇರಿ ಕಣಿವೆಯ ಪ್ರಮುಖ ಜಲಾಶಯಗಳಲ್ಲಿ ಒಂದಾದ ಹಾರಂಗಿಯಲ್ಲಿ ನೀರಿನ ಮಟ್ಟ ನಿಧಾನಕ್ಕೆ ಏರಿಕೆ ಕಂಡು ಬರುತ್ತಿದೆ. ಜಿಲ್ಲೆಯ ಪೊನ್ನಂಪೇಟೆ ತಾಲೂಕು ವ್ಯಾಪ್ತಿಯಲ್ಲಿ ಹೆಚ್ಚಿನ ಮಳೆ ಆಗುತ್ತಿದ್ದರೂ ಹಾರಂಗಿ ಜಲಾನಯನ ಪ್ರದೇಶದಲ್ಲಿ ಈ ಪ್ರಮಾಣದ ಮಳೆ ಕಂಡು ಬಂದಿಲ್ಲ. ಹಾಗಾಗಿ ಕಳೆದ ನಾಲ್ಕು ದಿನಗಳಲ್ಲಿ ನೀರಿನ ಮಟ್ಟ ಸುಮಾರು 4 ಅಡಿಗಳಷ್ಟು ಮಾತ್ರ ಜಾಸ್ತಿ ಆಗಿದೆ. 2,859 ಅಡಿ ಗರಿಷ್ಠ ಎತ್ತರದ ಜಲಾಶಯದಲ್ಲಿ ಭಾನುವಾರ (ಜು.5) 2834.98 ಅಡಿಗಳಷ್ಟು ನೀರಿತ್ತು. ಬುಧವಾರದ ಮಾಹಿತಿ ಪ್ರಕಾರ 2,838.68 ಅಡಿ ನೀರಿದೆ. ಆದರೆ ಕಳೆದ ವರ್ಷ ಇದೇ ದಿನ 2852.31 ಅಡಿ ನೀರಿತ್ತು. ಭಾನುವಾರ ನೀರಿನ ಒಳಹರಿವು 2,149 ಕ್ಯೂಸೆಕ್‌ಗಳಷ್ಟು ಇತ್ತು. ಸೋಮವಾರ ಈ ಪ್ರಮಾಣ 1,344 ಕ್ಯೂಸೆಕ್‌ಗೆ ಇಳಿಯಿತು. ಮಂಗಳವಾರ 1,657 ಕ್ಯೂಸೆಕ್‌ಗೆ ಅಲ್ಪಪ್ರಮಾಣದಲ್ಲಿ ಏರಿಕೆ ಕಂಡಿತ್ತು. ಬುಧವಾರ ಮತ್ತೆ 2,090 ಕ್ಯೂಸೆಕ್‌ಗೆ ಏರಿಕೆ ಆಗಿದೆ. ಕಳೆದ ವರ್ಷ ಇದೇ ದಿನ 4,686 ಕ್ಯೂಸೆಕ್ ಒಳಹರಿವು ಇತ್ತು.