

ಆಡಳಿತ ವರ್ಗವೇ ಆಗಲಿ, ಸಾರ್ವಜನಿಕರೇ ಆಗಲಿ ಕಸವನ್ನು ಲಾಭದಾಯಕವಾಗಿ ಪರಿಗಣಿಸುವವರೆಗೂ ಕಸದ ಸಮಸ್ಯೆಗೆ ಮುಕ್ತಿ ಸಿಗುವುದಿಲ್ಲ. ಅತ್ಯುನ್ನತ ತಂತ್ರಜ್ಞಾನಗಳು ಬಳಕೆಗೆ ಬಂದಿರುವಾಗ, ಅದನ್ನು ಉಪಯೋಗಿಸಿ ಕಸವನ್ನು ನಿರ್ವಹಿಸಬೇಕೇ ಹೊರತು ಮಡಿಕೇರಿಯ ಕಸವನ್ನು ಇನ್ನೆಲ್ಲಿಗೋ ವಿಲೇವಾರಿ ಮಾಡುವುದು ಸಮಸ್ಯೆಗೆ ಪರಿಹಾರವಲ್ಲ. ಮೇಲ್ಮಟ್ಟದಲ್ಲಿ ಸರಿಯಾದ ಯೋಜನೆ ರೂಪಿಸಿ ಸಮರ್ಪಕ ನಿರ್ವಹಣೆ ಮಾಡದೇ ಇದ್ದಲ್ಲಿ, ನಾಗರಿಕರು ಕಸದ ಸಮಸ್ಯೆಯ ಬಗ್ಗೆ ಎಷ್ಟೇ ಎಚ್ಚರ ವಹಿಸಿದರೂ ಪರಿಹಾರ ಸಾಧ್ಯವಿಲ್ಲ. ಕರ್ನಾಟಕದಲ್ಲಿ ಅದೆಷ್ಟೋ ಸಣ್ಣಪುಟ್ಟ ಪಂಚಾಯಿತಿಗಳು ಕಸದ ಸಮಸ್ಯೆಗೆ ಉತ್ತಮ ಪರಿಹಾರ ಕಂಡುಕೊAಡಿರುವಾಗ ಮಡಿಕೇರಿಯಲ್ಲಿ ಕಸ ಮತ್ತು ಸಮಸ್ಯೆ ಬೆಟ್ಟದಂತೆ ಬೆಳೆಯುತ್ತಿರುವುದು ವಿಪರ್ಯಾಸ.
ಆಧುನಿಕ ನಾಗರಿಕತೆಯ ಗಂಭೀರ ಸಮಸ್ಯೆಗಳಲ್ಲಿ ಕಸದ ಸಮಸ್ಯೆ ಒಂದು ಬಹು ದೊಡ್ಡ ಪಿಡುಗಾಗಿ ಪರಿಣಾಮಿಸಿದೆ. ಅದೆಷ್ಟೇ ಮೇಲಿಂದ ಮೇಲೆ ಜಾಗೃತಿ ಮೂಡಿಸುತ್ತಿದ್ದರೂ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲವಾಗಿರುವುದು ಮತ್ತೊಂದು ದುರಂತ. ಜನರ ಅಸಹಕಾರ ಮತ್ತು ಅಜಾಗರೂಕತೆಯಿಂದ ರಸ್ತೆ ಬದಿ ಕಸ ಎಸೆಯುವುದರಿಂದ, ಅಸಮರ್ಪಕ ಕಸ ವಿಲೇವಾರಿ, ನಿರ್ವಹಣೆಯಿಂದ ಕಸದ ಸಮಸ್ಯೆ ಬೀಗಡಾಯಿಸಿ ದಿನನಿತ್ಯ ಪರಿಸರದ ಮೇಲೆ ಅತ್ಯಾಚಾರವಾಗುತ್ತಿದೆ. ಇದು ಮನುಕುಲಕ್ಕೂ, ಜೀವಿಗಳಿಗೂ ಕಂಟಕವಾಗುವುದಲ್ಲದೆ ಸರ್ವ ನಾಶಕ್ಕೂ ಕಾರಣವಾಗುತ್ತದೆ.
ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಮಡಿಕೇರಿ ಕಸದ ರಾಶಿಗೆ ಈಗ ಒಂದು ಮುಕ್ತಿ ಸಿಗುವಂತೆ ಕಾಣುತ್ತಿದೆ. ಈಗ ನಡೆಯುತ್ತಿರುವ ವೇಗದಲ್ಲೇ ಕೆಲಸ ನಡೆಯಲಿ. ಮತ್ತೆ ಇದರಲ್ಲಿ ವಿಳಂಬ ಬೇಡ. ಇನ್ನು ಕಸ ನಿರ್ವಹಣೆಯಲ್ಲಿ ನಮ್ಮ ಜವಾಬ್ದಾರಿಯೂ ಇದ್ದು ನಾವುಗಳು ಕೂಡ ಹಸಿ ಕಸ ಮತ್ತು ಒಣ ಕಸವನ್ನು ವಿಂಗಡಿಸಿ ಬೇರೆ ಬೇರೆ ಮಾಡಿ ಕೊಡುವುದು ಉತ್ತಮ.
ಗರಿಕ ಸಮಾಜ ಅನಾಗರಿಕತೆಯತ್ತ ಸಾಗುತ್ತಿರುವುದು ಖೇದಕರ. ದೇಶಪ್ರೇಮ, ಭೂಮಿ ಪ್ರೇಮ ಕಡಿಮೆಯಾಗುತ್ತಿದೆ ಎಂಬುದರ ಅರಿವು ಎದ್ದು ಕಾಣುತ್ತಿದೆ. ಭಯ, ಶಿಕ್ಷೆ, ದಂಡ ಇವುಗಳು ಇಲ್ಲದೇ ಹೋದರೆ ಮಡಿಕೇರಿ ಕಸ ಸಮಸ್ಯೆ ಇನ್ನಷ್ಟು ಬಿಗಡಾಯಿಸುವುದಂತೂ ಸತ್ಯ. ಅವರವರು ಮಾಡುವ ತ್ಯಾಜ್ಯಕ್ಕೆ ಅವರವರೇ ಹೊಣೆಗಾರರು. ಕಸದ ನಿರ್ವಹಣೆ ಬಗ್ಗೆ ಅರಿಯಲೇಬೇಕು.
ಮೂಲದಿಂದಲೇ ಹಸಿಕಸ, ಒಣ ಕಸ ವಿಂಗಡಿಸಿ ಕೊಡುವುದರ ಕಡೆಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಗರಸಭೆ ಕಾರ್ಯೋನ್ಮುಖವಾಗಿದೆ. ಮನೆಗಳಿಂದಲೇ ಕಡ್ಡಾಯವಾಗಿ ಹಸಿ ಮತ್ತು ಒಣ ಕಸ ವಿಂಗಡಣೆ ಆಗಿಯೇ ಬರಬೇಕು. ಈ ಸಂಬAಧ ಮನೆ ಮನೆಗೆ ತೆರಳಿ ಅರಿವು ಮೂಡಿಸಲು ಐವರನ್ನು ನೇಮಕ ಮಾಡಲಾಗಿದೆ. ಕಸ ಸಂಗ್ರಹಿಸುವ ವಾಹಗಳಲ್ಲೂ ಈ ಬಗ್ಗೆ ಪ್ರಚಾರ ನಡೆಸಲಾಗುತ್ತಿದೆ. ಮನೆಗಳಲ್ಲಿ ಹಸಿ ಮತ್ತು ಒಣ ಕಸ ಸಂಗ್ರಹಿಸಿ ಇಡಲು ಎಲ್ಲಾ ಮನೆಗಳಿಗೂ ಡಬ್ಬಿಗಳನ್ನು ಕೂಡ ಕೊಡಲಾಗಿದೆ. ಮುಂದೆ ಹಸಿ ಕಸದಿಂದ ಗೊಬ್ಬರ ಉತ್ಪಾದಿಸುವ ಘಟಕವೂ ಬರಲಿದೆ.
ಮಡಿಕೇರಿ ನಗರ ಸೇರಿದಂತೆ ಸಂಪೂರ್ಣ ಕೊಡಗನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವಲ್ಲಿ ನಮ್ಮೆಲ್ಲರ ಜವಾಬ್ದಾರಿ ದೊಡ್ಡದಿದೆ. ಸ್ವಚ್ಛ ಕೊಡಗು, ಸುಂದರ ಕೊಡಗು ನಮ್ಮೆಲ್ಲರ ಧ್ಯೇಯ ಆಗಬೇಕು. 2 ಲೀಟರ್‌ಗಿಂತ ಕಡಿಮೆ ಗಾತ್ರದ ಪ್ಲಾಸ್ಟಿಕ್ ಬಾಟಲ್‌ನಲ್ಲಿ ನೀರು ಮಾರಾಟ ನಿಷೇಧಿಸಲಾಗಿದ್ದು, ಇದನ್ನು ಸಾರ್ವಜನಿಕರು ಪಾಲಿಸಬೇಕು. ಮಡಿಕೇರಿ ಸೋನ್‌ಹಿಲ್ ಕಸವನ್ನು ತೆರವು ಮಾಡುವ ಕೆಲಸ ನಡೆಯುತ್ತಿದ್ದು, ಈ ಕಾರ್ಯ ಆದಷ್ಟು ಬೇಗ ಪೂರ್ಣಗೊಳ್ಳಲಿದೆ.
ಮಡಿಕೇರಿ ಸ್ಟೋನ್ ಹಿಲ್‌ನಲ್ಲಿ ಸಂಗ್ರಹವಾಗಿರುವ ಪಾರಂಪರಿಕ ಕಸದ ತೆರವು ಕಾರ್ಯ ಆರಂಭವಾಗಿದೆ. ಇದು ಒಟ್ಟು 76,636 ಮೆಟ್ರಿಕ್ ಟನ್ ಕಸ ತೆರವು ಮಾಡಲು 5.44 ಕೊಟಿಯ ಟೆಂಡರ್ ಕೊಡಲಾಗಿದೆ. ಈ ಕೆಲಸ ಈಗ ನಡೆಯುತ್ತಿದೆ. ಆದಷ್ಟು ಬೇಗ ಅಲ್ಲಿ ಕಸ ಖಾಲಿ ಆಗುತ್ತದೆ. ಕಸ ವಿಲೇವಾರಿಗೆ 3 ಎಕರೆ ಹೊಸ ಜಾಗವನ್ನೂ ಗುರುತಿಸಲಾಗಿದೆ. ಅಲ್ಲಿ ಅರಣ್ಯ ಇಲಾಖೆಯ ಅನುಮತಿ ಸಿಗಬೇಕಿದ್ದು, ಅನುಮತಿ ಸಿಕ್ಕ ನಂತರ ಹೊಸ ಕಸವನ್ನು ಅಲ್ಲಿಗೆ ಕಳುಹಿಸಲಾಗುವುದು.