ಮಡಿಕೇರಿಯಲ್ಲಿ ನಡೆದ ವಿರಾಟ ಹಿಂದೂ ಸಂಗಮ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸಂಪೂರ್ಣ ಮಡಿಕೇರಿ ಕೇಸರಿಮಯವಾಗಿತ್ತು. ಸಭಾ ಕಾರ್ಯಕ್ರಮಕ್ಕೂ ಮೊದಲು ನಗರದ ವಿವಿಧ ವಾರ್ಡ್ಗಳನ್ನೊಳಗೊಂಡು ರಚಿಸಲಾಗಿದ್ದ ಅಭಿಮನ್ಯು, ಛತ್ರಪತಿ, ಅಶ್ವಿನಿ ಹಾಗೂ ಸಮರ್ಥ ಹೆಸರಿನ ತಂಡಗಳು ನಗರದ ನಾಲ್ಕೂ ದಿಕ್ಕುಗಳಿಂದ ಹಳೆ ಖಾಸಗಿ ಬಸ್‌ನಿಲ್ದಾಣಕ್ಕೆ ಮೆರವಣಿಗೆ ಮೂಲಕ ಆಗಮಿಸಿ ಇಲ್ಲಿ ಒಟ್ಟು ಸೇರಿ ನಂತರ ಕಾರ್ಯಕ್ರಮ ನಡೆದ ಗಾಂಧಿ ಮೈದಾನದ ತನಕ ಬೃಹತ್ ಮೆರವಣಿಗೆ ನಡೆಸಲಾಯಿತು. ಪ್ರತಿ ತಂಡದ ಮೆರವಣಿಗೆ ಆರಂಭಕ್ಕೂ ಮೊದಲು ಆಯಾಯ ತಂಡಗಳ ಮೆರವಣಿಗೆ ಹೊರಡುವ ಸ್ಥಳದಲ್ಲಿ ವಿಶೇಷ ಬೌದ್ಧಿಕ್ ಏರ್ಪಡಿಸಲಾಗಿತ್ತು. 1,500 ಮೀಟರ್ ಉದ್ದದ ಕೇಸರಿ ಬಾವುಟ ಮೆರವಣಿಗೆಯ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿತ್ತು. ಮೆರವಣಿಗೆಯ ಪ್ರತಿ ತಂಡದಲ್ಲೂ ಕೇರಳ ಚಂಡೆ ವಾದ್ಯ, ಭಜನೆ ಕುಣಿತ ಸಾಮಾನ್ಯವಾಗಿತ್ತು. ಇದನ್ನು ಹೊರತುಪಡಿಸಿ ರಾಮ, ಹನುಮಂತ ಸ್ತಬ್ಧಚಿತ್ರಗಳು, ಕಲ್ಲಡ್ಕ ಬೊಂಬೆಗಳು, ಹುಲಿ ವೇಷ ಕುಣಿತ, ದೇಶದ ವೀರಪುರುಷ, ನಾರಿಯರ ವೇಷ ಧರಿಸಿದ ಪುಟಾಣಿಗಳು ಮೆರವಣಿಗೆಯಲ್ಲಿ ಗಮನ ಸೆಳೆದರು. ಮೆರವಣಿಗೆ ಸಾಗುವ ಸಂದರ್ಭ ಮುಖ್ಯ ರಸ್ತೆ ಬದಿಯಲ್ಲಿನ ಹಿಂದೂಗಳ ಅಂಗಡಿ ಬಂದ್ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಬೆಂಬಲ ನೀಡಲಾಯಿತು.