ಸಮಾನತೆ ದೊರೆತರೆ ಮಹಿಳೆಯರು ಉನ್ನತ ಮಟ್ಟಕ್ಕೇರಲು ಸಾಧ್ಯ

ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಡಾ.ಗ್ರೀಷ್ಮ ಬೋಜಮ್ಮ ಮಾತನಾಡಿದರು.  ಪ್ರಾಂಶುಪಾಲರಾದ ಬೆನೆಡಿಕ್ಟ್ ಆರ್.ಸಲ್ಡಾನ, ಎಂ.ಕೆ.ಪದ್ಮಾ, ಉಪನ್ಯಾಸಕರಾದ ಡಾ.ಕೆ.ಜಿ.ವೀಣಾ, ಲೆ.ಬಿ.ಬಿ.ಬೋಜಮ್ಮ ಇದ್ದರು.
ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಡಾ.ಗ್ರೀಷ್ಮ ಬೋಜಮ್ಮ ಮಾತನಾಡಿದರು. ಪ್ರಾಂಶುಪಾಲರಾದ ಬೆನೆಡಿಕ್ಟ್ ಆರ್.ಸಲ್ಡಾನ, ಎಂ.ಕೆ.ಪದ್ಮಾ, ಉಪನ್ಯಾಸಕರಾದ ಡಾ.ಕೆ.ಜಿ.ವೀಣಾ, ಲೆ.ಬಿ.ಬಿ.ಬೋಜಮ್ಮ ಇದ್ದರು.
Published on
ವಿರಾಜಪೇಟೆ: ಸಮಾಜದಲ್ಲಿ ಹೆಣ್ಣನ್ನು ಸಮಾನತೆಯಿಂದ ನೋಡಿ ಗೌರವ ಆದರಗಳೊಂದಿಗೆ ನಡೆಸಿಕೊಳ್ಳುವುದರಿಂದ ಉತ್ತಮ ಸಮಾಜ ನಿರ್ಮಾಣವಾಗುವುದರೊಂದಿಗೆ ಸ್ತ್ರೀಯರು ಇನ್ನಷ್ಟು ಮುನ್ನೆಲೆಗೆ ಬರಲು ಸಹಕಾರಿಯಾಗುತ್ತದೆ ಎಂದು ಗೋಣಿಕೊಪ್ಪಲು ಸಮುದಾಯ ಆರೋಗ್ಯ ಕೇಂದ್ರದ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞೆ ಡಾ.ಗ್ರೀಷ್ಮ ಬೋಜಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ವಿರಾಜಪೇಟೆ ಕಾವೇರಿ ಕಾಲೇಜು, ಐಕ್ಯೂಎಸಿ ಮತ್ತು ಮಹಿಳಾ ಕೋಶದ ವತಿಯಿಂದ ಬುಧವಾರ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಹೆಣ್ಣು ಮಕ್ಕಳು ಮುನ್ನೆಲೆಗೆ ಬರುವಲ್ಲಿ ಸಮಾಜದ ಪಾತ್ರ ಬಹಳ ಮುಖ್ಯವಾಗಿದ್ದು. ಸಮಾಜದಲ್ಲಿ ಹೆಣ್ಣಿಗೆ ಶಿಕ್ಷಣ , ಸಮಾನತೆ ಹಾಗೂ ಅವಕಾಶ ದೊರೆತಾಗ ಎಲ್ಲ ಕ್ಷೇತ್ರದಲ್ಲಿಯೂ ಅವಳು ಸಕ್ರಿಯಳಾಗಲು ಸಾಧ್ಯ. ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಎಲ್ಲ ಕ್ಷೇತ್ರದಲ್ಲಿಯೂ ತಮ್ಮ ಛಾಪು ಮೂಡಿಸಿದ್ದು. ಗೃಹಿಣಿಯಾಗಿ ಮನೆ ನಡೆಸುವಲ್ಲಿಂದ ರಾಷ್ಟ್ರದ ಅಧ್ಯಕ್ಷರಾಗಿ ದೇಶವನ್ನು ಯಶಸ್ವಿಯಾಗಿ ಮುನ್ನಡೆಸುತಿದ್ದಾರೆ ಎಂದರು.
ನಂತರ ಕಾಲೇಜಿನ ವಿದ್ಯಾರ್ಥಿನಿಯರೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಹದಿಹರೆಯದ ಹೆಣ್ಣು ಮಕ್ಕಳ ಆರೋಗ್ಯ ಸಮಸ್ಯೆಗಳು ಎಂಬ ವಿಷಯದ ಕುರಿತು ವಿದ್ಯಾರ್ಥಿನಿಯರೊಂದಿಗೆ ಮುಕ್ತವಾಗಿ ಗರ್ಭಕೋಶದ ಕ್ಯಾನ್ಸರ್ ಗೆ ಸಂಬಂಧಪಟ್ಟ ಲಸಿಕೆಯ ಉಪಯೋಗ, ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ಸರ್ಕಾರದ ವತಿಯಿಂದ ನೀಡಲಾಗುತ್ತಿರುವ ಔಷಧ, ಪೋಕ್ಸೋ ಕಾಯ್ದೆ, ಋತುಚಕ್ರ ಸಂದರ್ಭದಲ್ಲಿ ವಹಿಸಬೇಕಾದ ಎಚ್ಚರಿಕೆ ಮತ್ತು ನೈರ್ಮಲ್ಯದ ಕುರಿತು ಚರ್ಚಿಸಿದರು.
ವಿರಾಜಪೇಟೆ ಕಾವೇರಿ ಕಾಲೇಜಿನ ಪ್ರಾಂಶುಪಾಲ ಬೆನೆಡಿಕ್ಟ್ ಆರ್ ಸಲ್ಡಾನ ಮಾತನಾಡಿ, ಹೆಣ್ಣನ್ನು ಗೌರವದಿಂದ ಕಾಣಬೇಕು. ಮಹಿಳೆಯರ ಯಶಸ್ವಿಗೆ ಸರಿಯಾದ ಮಾರ್ಗ ಹಾಗೂ ಸಹಕಾರವನ್ನು ನೀಡಿದರೆ ಅವರು ತಾವು ಬೆಳೆಯುವುದರೊಂದಿಗೆ ತಮ್ಮೊಂದಿಗೆ ಇತರರನ್ನು ಬೆಳೆಸುತ್ತಾರೆ. ಇಂದು ಹೆಣ್ಣು ಎಲ್ಲ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದಾಳೆ. ಆದ್ದರಿಂದ ಹೆಣ್ಣು ಎಂದು ನಿರ್ಲಕ್ಷೃ ತೋರದೆ ಆಕೆಯ ಬೆಳವಣಿಗೆಗೆ ಎಲ್ಲ ರೀತಿಯ ಸಹಕಾರ, ಬೆಂಬಲ ನೀಡುವುದು ಸಮಾಜ ಹಾಗೂ ಕುಟುಂಬದ ಕರ್ತವ್ಯ ಎಂದರು.
ಕಾವೇರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಎಂ.ಕೆ.ಪದ್ಮಾ ಮಾತನಾಡಿ, ಹೆಣ್ಣು ಅಬಲೆಯಲ್ಲ ಸಬಲೆ. ಹೆಣ್ಣು ಇಂದು ಎಲ್ಲ ಕ್ಷೇತ್ರದಲ್ಲಿಯೂ ಪುರುಷರಿಗೆ ಸಮಾನಳಾಗಿ ಹೆಜ್ಜೆ ಹಾಕುತಿದ್ದಾಳೆ. ಹೆಣ್ಣು ಸಶಕ್ತಗೊಳ್ಳಬೇಕು ಏಕೆಂದರೆ ಪುರುಷರ ಪತನಕ್ಕಾಗಿ ಅಲ್ಲ ಬದಲಾಗಿ ಉತ್ತಮ ಕುಟುಂಬ ಹಾಗೂ ಸಮ ಸಮಾಜದ ನಿರ್ಮಾಣಕ್ಕೆ ಎಂದರು.
ವಿದ್ಯಾರ್ಥಿನಿಯರಿಗೆ ಹಾಗೂ ಮಹಿಳಾ ಸಿಬ್ಬಂದಿಗಳಿಗೆ ಆಯೋಜಿಸಲಾಗಿದ್ದ ವಿವಿಧ ಸ್ಪರ್ದೆಯ ವಿಜೇತರಿಗೆ ಗಣ್ಯರಿಂದ ಬಹುಮಾನವನ್ನು ವಿತರಿಸಲಾಯಿತು. ವೇದಿಕೆಯ ಮೇಲೆ ಕಾಲೇಜಿನ ವಿದ್ಯಾರ್ಥಿ ಕ್ಷೇಮ ಪಾಲನ ಸಮಿತಿ ಮುಖ್ಯಸ್ಥೆ ಡಾ. ಕೆ.ಜಿ. ವೀಣಾ , ಮಹಿಳಾ ಕೋಶದ ಸಂಚಾಲಕಿ ಲೆ. ಬಿ.ಬಿ.ಬೋಜಮ್ಮ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಹಿಳಾ ಕೋಶದ ಸದಸ್ಯರಾದ ವನಿತಾ , ಮಾಣಿಕ್ಯ , ಉಪನ್ಯಾಸಕಿಯರು, ಆಡಳಿತಾತ್ಮಕ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net