ಎಡಮಕ್ಕಿ ಶ್ರೀಅಯ್ಯಪ್ಪಸ್ವಾಮಿ ದೇವಸ್ಥಾನದ ಬ್ರಹ್ಮ ಕಲಶಾಭಿಷೇಕ ಹಾಗೂ ವಾರ್ಷಿಕ ಮಹೋತ್ಸವದ ಪ್ರಯುಕ್ತ ವಿಶೇಷ ಪೂಜೆ.
Published on:
Copied
Follow Us
ವಿರಾಜಪೇಟೆ :ಸಮೀಪದ ಹೆಗ್ಗಳ ಗ್ರಾಮದಲ್ಲಿರುವ ಎಡಮಕ್ಕಿ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಬ್ರಹ್ಮ ಕಲಶಾಭಿಷೇಕ ಹಾಗೂ ವಾರ್ಷಿಕ ಮಹೋತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು. ಜನವರಿ 27, 28 ಹಾಗೂ 29ರಂದು ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಜರುಗಿದ ಮಹೋತ್ಸವ ತೆರೆ ಕಂಡಿತು.
ಮೊದಲ ದಿವಸ ಮಹಾಪೂಜೆ, ಪ್ರಸಾದ ಶುದ್ಧಿ ಕ್ರಿಯೆಗಳು, ಆಚಾರ್ಯವರಣಂ ಸೇವೆಗಳು ನಡೆದವು. ಎರಡನೆಯ ದಿನದಂದು ಮುಂಜಾನೆಯಿಂದಲೇ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡವು. ಬೆಳಗ್ಗೆ ಮಹಾ ಗಣಪತಿ ಹೋಮ, ಉಷಾ ಪೂಜೆ, ಕಲಶಾಭಿಷೇಕ, ಬ್ರಹ್ಮ ಕಳಸ ಪೂಜೆ, ಪರಿಕಳಸ ಸೇವೆಗಳನ್ನು ನೆರವೇರಿಸಿ ಧ್ವಜಾರೋಹಣವನ್ನು ಮಾಡಲಾಯಿತು.
ಮಧ್ಯಾಹ್ನ ಮಹಾಪೂಜೆ ಜರುಗಿತು. ಸಂಜೆ ಆದಿವಾಸ ಹೋಮ, ದೀಪಾರಾಧನೆ, ಕಲಶಾದಿವಸಂ ಸೇವೆಯು ನಡೆಯಿತು. ರಾಮನಗರದ ಪುದುಪಾಡಿ ಶ್ರೀಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಸಂಪ್ರದಾಯದಂತೆ ಆಡಳಿತ ಮಂಡಳಿಯವರು ತೆರಳಿ ಮಹಾಗಣಪತಿಗೆ ವಿಶೇಷ ಪೂಜೆ ಸಲ್ಲಿಸಿದರು. ತದನಂತರ ಎಡಮಕ್ಕಿ ಸಾರ್ವಜನಿಕ ಮೈದಾನದಿಂದ ತಾಲಿಪೊಲಿ ಮೆರವಣಿಗೆಯು ನಡೆಯಿತು.
ಭಕ್ತರು ಹೂವುಗಳನ್ನು ತಟ್ಟೆಗಳಲ್ಲಿ ಹಿಡಿದು ದೀಪಗಳನ್ನು ಬೆಳಗಿಸಿ ಮೆರವಣಿಗೆಯಲ್ಲಿ ಸಾಗಿದರು. ಸಂಜೆ ಮಹಾಪೂಜೆ, ತಾಯಂಭಗಂ ಸೇವೆಯು ಜರುಗಿತು. ತದನಂತರ ಸಭಾ ಕಾರ್ಯಕ್ರಮ ಹಾಗೂ ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಮಹೇಶ್, ಮಹೀ ಕೂರ್ಗ್ ಅವರಿಂದ ಆಕರ್ಷಕ ಸಿಡಿಮದ್ದಿನ ಪ್ರದರ್ಶನ ಏರ್ಪಡಿಸಲಾಗಿತ್ತು.
ಮೂರನೆಯ ದಿನ ಬೆಳಗ್ಗೆ ಮಹಾಗಣಪತಿ ಹೋಮ, ಉಷಾ ಪೂಜೆ ನಡೆಯಿತು. ತದನಂತರ ಶಾಸ್ತ್ರೋಕ್ತವಾಗಿ ಬ್ರಹ್ಮ ಕಲಶಾಭಿಷೇಕ ಸೇವೆಯನ್ನು ನೆರವೇರಿಸಲಾಯಿತು.
ಮಧ್ಯಾಹ್ನ ಮಹಾ ಪೂಜೆ ಜರುಗಿತು. ಸಂಜೆ ದೀಪಾರಾಧನೆ, ಮಹಾಪೂಜೆ ತದನಂತರ ಮನರಂಜನಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಈ ಸಂದರ್ಭದಲ್ಲಿ ಸಹಾಯಾರ್ಥ ದೇಣಿಗೆಯ ಫಲಿತಾಂಶವನ್ನು ಪ್ರಕಟಿಸಲಾಯಿತು. ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ಕ್ಷೇತ್ರದ ಪ್ರಧಾನ ತಂತ್ರಿಗಳಾದ ಬ್ರಹ್ಮಶ್ರೀ ಮುಲ್ಲಪಳ್ಳಿ ಕೃಷ್ಣನ್ ನಂಬೂದಿರಿ ಹಾಗೂ ದೇವಸ್ಥಾನದ ಪ್ರಧಾನ ಅರ್ಚಕ ವೇಣುಗೋಪಾಲ್ ಭಟ್ ನೆರವೇರಿಸಿದರು. ಕೇರಳ ರಾಜ್ಯದ ಚಂಡೆ ಬಳಗದವರಿಂದ ಚಂಡೆ ಸೇವೆ ನಡೆಯಿತು. ಈ ಮೂರು ದಿವಸಗಳ ಕಾಲ ಜರುಗಿದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮಧ್ಯಾಹ್ನ ಹಾಗೂ ಸಂಜೆ ಸಾರ್ವಜನಿಕರಿಗೆ ಅನ್ನಸಂತರ್ಪಣ ಸೇವೆಯನ್ನು ನಡೆಸಲಾಯಿತು.