ಕಾಡುಪ್ರಾಣಿಯ ಮಾಂಸ ಸಾಗಣೆ ವಾಹನ ವಶ

ಕಾಡುಪ್ರಾಣಿಯ ಮಾಂಸ ಸಾಗಣೆಮಾಡುತ್ತಿದ್ದ ವಾಹನವನ್ನು ಅರಣ್ಯಾಧಿಕಾರಿಗಳು ವಶ ಪಡಿಸಿಕೊಂಡಿರುವುದು.
ಕಾಡುಪ್ರಾಣಿಯ ಮಾಂಸ ಸಾಗಣೆಮಾಡುತ್ತಿದ್ದ ವಾಹನವನ್ನು ಅರಣ್ಯಾಧಿಕಾರಿಗಳು ವಶ ಪಡಿಸಿಕೊಂಡಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಆರೋಪಿಗಳು ಪರಾರಿ
ಸಿದ್ದಾಪುರ: ಕಾಡುಪ್ರಾಣಿಯ ಮಾಂಸ ಸಾಗಣೆ ಮಾಡುತ್ತಿದ್ದರೆಂಬ ಖಚಿತ ಮಾಹಿತಿ ಮೇರೆಗೆ ಅರಣ್ಯಾಧಿಕಾರಿಗಳು ನಡೆಸಿದ ದಾಳಿ ವೇಳೆ ಆರೋಪಿಗಳು ವಾಹನವನ್ನು ಬಿಟ್ಟು ಪರಾರಿಯಾಗಿದ್ದಾರೆ.
ಮಾಹಿತಿ ಸಿಕ್ಕ ತಕ್ಷಣವೇ ಕರ್ನಾಟಕ ಅರಣ್ಯ ಇಲಾಖೆ ಅಧಿಕಾರಿಗಳು ಗುರುವಾರ ಬೆಳಗ್ಗೆ ತಿತಿಮತಿ ವ್ಯಾಪ್ತಿಯಲ್ಲಿ ಕಾರ್ಯಾಚರಣೆಗೆ ಇಳಿದರು. ಶಂಕಿತ ಕಾರನ್ನು ಹಿಂಬಾಲಿಸಿದ ಅಧಿಕಾರಿಗಳು ಆನೆ ಚೌಕೂರು ವನ್ಯಜೀವಿ ವಲಯ ಬಫರ್ ಝೋನ್ ವ್ಯಾಪ್ತಿಯ, ದೇವಮಚ್ಚಿ ಗ್ರಾಮದ ಅಕ್ಕಮಾಳ ಅಂಗನವಾಡಿ ಮುಂಭಾಗದಲ್ಲಿ ವಾಹನವನ್ನು ಅಡ್ಡಗಟ್ಟಿದರು. ಈ ವೇಳೆ ಆರೋಪಿಗಳು ಕಾರನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.
ವಾಹನ ತಪಾಸಣೆ ನಡೆಸಿದ ವೇಳೆ ಸುಮಾರು 6 ಕೆಜಿ ಮಾಂಸ ಪತ್ತೆಯಾಗಿದ್ದು, ಅದು ಜಿಂಕೆಯ ಮಾಂಸವಾಗಿರಬಹುದೆಂದು ಶಂಕಿಸಲಾಗಿದೆ. ಜತೆಗೆ ಪ್ಲಾಸ್ಟಿಕ್ ಕವರ್‌ಗಳು, ಮರದ ಹಿಡಿಕೆ ಇರುವ ಕತ್ತಿ, ವಿವಿಧ ಬಣ್ಣದ 9 ಜೀವಂತ ಕಾಡತೋಪುಗಳು, ಲೆದರ್ ಬ್ಯಾಗ್, ಟಾರ್ಚ್ ಹಾಗೂ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ.
ಉಪ ಅರಣ್ಯ ಸಂರಕ್ಷಣಾಧಿಕಾರಿ ಸೀಮಾ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಲಕ್ಷ್ಮೀಕಾಂತ್ ಮಾರ್ಗದರ್ಶನದಲ್ಲಿ ವನ್ಯಜೀವಿ ವಲಯ ಅರಣ್ಯಾಧಿಕಾರಿ ದೇವರಾಜು ಅವರ ನೇತೃತ್ವದಲ್ಲಿ ಉಪವಲಯ ಅರಣ್ಯಾಧಿಕಾರಿ ಚನವೀರೇಶ ಗಾಣಗೇರ, ದೇವಮಚ್ಚಿ ಶಾಖೆ ಮೋಜಣಿದಾರ ಸಿದ್ದಾಪ್ಪಾಜಿ, ಗಸ್ತು ಅರಣ್ಯ ಪಾಲಕರಾದ ಭೀಮನಾರೆ, ಹನುಮಂತಪ್ಪ, ತಿತಿಮತಿ ಎಸ್.ಟಿ.ಪಿ.ಎಫ್ ಪ್ಲಾಟೂನ್ ಮತ್ತು ಕಾರ್ತಿಕ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಈ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಅರಣ್ಯಾಧಿಕಾರಿಗಳು ಶೋಧ ಕಾರ್ಯ ಮುಂದುವರಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net