ಪರಿಸರ ವ್ಯವಸ್ಥೆ ಸಂರಕ್ಷಿಸುವುದು ಅಗತ್ಯ

ವನ ಮಹೋತ್ಸವದ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮಕ್ಕೆ ಡಾ.ಜಿ.ಎಂ.ದೇವಗಿರಿ ಅವರು ಸಸಿ ನೆಟ್ಟು ಚಾಲನೆ ನೀಡಿದರು. ನಿವೇದಿತಾ, ವಿಜಯ್ ಕುಮಾರ್ ಇತರರಿದ್ದರು.
ವನ ಮಹೋತ್ಸವದ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮಕ್ಕೆ ಡಾ.ಜಿ.ಎಂ.ದೇವಗಿರಿ ಅವರು ಸಸಿ ನೆಟ್ಟು ಚಾಲನೆ ನೀಡಿದರು. ನಿವೇದಿತಾ, ವಿಜಯ್ ಕುಮಾರ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪರಿಸರ ವ್ಯವಸ್ಥೆ ಸಂರಕ್ಷಿಸುವುದು ಅಗತ್ಯ
ಗೋಣಿಕೊಪ್ಪ: ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಲ್ಲಿ ಜೀವ ವೈವಿಧ್ಯ ಸಂರಕ್ಷಣೆ ಮತ್ತು ಸುಸ್ಥಿರ ಪರಿಸರ ನಿರ್ವಹಣೆಯನ್ನು ಉತ್ತೇಜಿಸುವ ಉದ್ದೇಶದಿಂದ ಮಹಾವಿದ್ಯಾಲಯದ ನರ್ಸರಿ ಜೌಗು ಪ್ರದೇಶದಲ್ಲಿ ವನ ಮಹೋತ್ಸವದ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಪೊನ್ನಂಪೇಟೆಯ ಕೃಷಿ ವಿಶ್ವವಿದ್ಯಾಲಯ(ಯುಎಎಸ್), ಮಂಡ್ಯ ವ್ಯಾಪ್ತಿಯ ಅರಣ್ಯ ಮಹಾವಿದ್ಯಾಲಯ ಹಾಗೂ ಕರ್ನಾಟಕ ಅರಣ್ಯ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಪರಿಸರ ಪುನರುಜ್ಜೀವನ ಕಾರ್ಯಕ್ರಮವನ್ನು ಅರಣ್ಯ ಮಹಾವಿದ್ಯಾಲಯ ನಡೆಸಿತು. ಅರಣ್ಯ ಮಹಾವಿದ್ಯಾಲಯದ ಡೀನ್ ಡಾ.ಜಿ.ಎಂ.ದೇವಗಿರಿ ಅವರು ಸಸಿ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿದ ಡಾ.ದೇವಗಿರಿ, ಜೌಗು ಪ್ರದೇಶಗಳ ಪರಿಸರ ವ್ಯವಸ್ಥೆಯನ್ನು ಸಂರಕ್ಷಿಸುವುದು ಹಾಗೂ ಪುನರುಜ್ಜೀವನಗೊಳಿಸುವುದು ಇಂದಿನ ಅಗತ್ಯವಾಗಿದೆ. ಸ್ಥಳೀಯ ಪರಿಸ್ಥಿತಿಗೆ ಹೊಂದುವ ಸ್ವದೇಶಿ ಮರ ಜಾತಿಗಳನ್ನು ವೈಜ್ಞಾನಿಕವಾಗಿ ಆಯ್ಕೆ ಮಾಡಿ ನೆಡುವುದರಿಂದ ಪರಿಸರ ಸಮತೋಲನವನ್ನು ಕಾಪಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ನೆಟ್ಟಿರುವ ಪ್ರತಿಯೊಂದು ಸಸಿಯನ್ನು ತಮ್ಮ ಪದವಿ ಪೂರ್ಣಗೊಳ್ಳುವವರೆಗೆ ವೈಯಕ್ತಿಕ ಜವಾಬ್ದಾರಿಯಿಂದ ಪೋಷಿಸಿ ಸಂರಕ್ಷಿಸುವಂತೆ ಕರೆ ನೀಡಿದರು. ಈ ಮೂಲಕ ಮಹಾವಿದ್ಯಾಲಯದಲ್ಲಿ ಶಾಶ್ವತ ಹಸಿರು ಪರಂಪರೆಯನ್ನು ನಿರ್ಮಿಸಲು ವಿದ್ಯಾರ್ಥಿಗಳು ಮುಂದಾಗಬೇಕು ಎಂದು ಹೇಳಿದರು.
ಕೇಂದ್ರ ಸರ್ಕಾರದ ಏಕ್ ಪೇಡ್ ಮಾಂ ಕೆ ನಾಮ್ ಅಭಿಯಾನದ ಅಂಗವಾಗಿ ದ್ವಿತೀಯ ಹಾಗೂ ತೃತೀಯ ವರ್ಷದ ಬಿ.ಎಸ್ಸಿ. ಅರಣ್ಯ ವಿದ್ಯಾರ್ಥಿಗಳು ತಮ್ಮ ತಾಯಿಯ ಹೆಸರಿನಲ್ಲಿ ತಲಾ ಒಂದು ಸಸಿ ನೆಟ್ಟು ವನ ಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಿದರು.
ಾರ್ಯಕ್ರಮದಲ್ಲಿ ವಿರಾಜಪೇಟೆಯ ವಲಯ ಅರಣ್ಯಾಧಿಕಾರಿ ನಿವೇದಿತಾ, ಅರಣ್ಯ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿ ವಿಜಯ್ ಕುಮಾರ್, ಅರಣ್ಯ ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಕರ್ನಾಟಕ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಪದವಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net