ಮಾನವ-ಆನೆ ಸಂಘರ್ಷ ತಗ್ಗಿಸಲು ಆಧುನಿಕ ತಂತ್ರ ಬಳಸಿ

 ಈಚೆಗೆ ಸಿದ್ದಾಪುರ ಸಮೀಪ ಮನೆಯಂಗಳದಲ್ಲಿ ಕಂಡು ಬಂದ ಕಾಡಾನೆ
ಈಚೆಗೆ ಸಿದ್ದಾಪುರ ಸಮೀಪ ಮನೆಯಂಗಳದಲ್ಲಿ ಕಂಡು ಬಂದ ಕಾಡಾನೆ
Published on
ಮಡಿಕೇರಿ:
ಕೊಡಗಿನ ರೈತರು ತಲೆಮಾರುಗಳಿಂದ ಆನೆಗಳೊಂದಿಗೆ ಬದುಕುತ್ತಿದ್ದು, ಸಂರಕ್ಷಣೆಯ ಮಹತ್ವವನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ. ಆದರೆ ಪರಿಣಾಮಕಾರಿ ಸಂಘರ್ಷ ನಿರ್ವಹಣೆಗೆ ಜವಾಬ್ದಾರಿ, ವೈಜ್ಞಾನಿಕ ಯೋಜನೆ ಹಾಗೂ ಆಧುನಿಕ ತಂತ್ರಜ್ಞಾನಗಳ ಬಳಕೆ ಅಗತ್ಯವಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾ ಸಮಿತಿ ಹೇಳಿದೆ. ಈ ಸಂಬAಧ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದಿರುವ ರೈತಸಂಘದ ಪ್ರಮುಖರು, ಜಿಲ್ಲೆಯಲ್ಲಿ ಆನೆ-ಮಾನವ ಸಂಘರ್ಷಕ್ಕೆ ಪರಿಹಾರ ಕಲ್ಪಿಸಲು ಹಲವು ಸಲಹೆಗಳನ್ನು ನೀಡಿದ್ದಾರೆ.
ಮಾನವ-ಆನೆ ಸಂಘರ್ಷ ತಗ್ಗಿಸಲು ಇಲಾಖೆಯ ಪ್ರಯತ್ನಗಳು ಸ್ವಾಗತಾರ್ಹ. ಆದರೆ ಆನೆಗಳು ಕೃಷಿ ಹಾಗೂ ತೋಟ ಪ್ರದೇಶಗಳಿಗೆ ಪ್ರವೇಶಿಸುವ ಮೂಲ ಕಾರಣಗಳನ್ನು ಪರಿಹರಿಸದೆ ವರ್ಷದಿಂದ ವರ್ಷಕ್ಕೆ ಪುನರಾವರ್ತಿತವಾಗುತ್ತಿರುವ ಓಡಿಸುವ ಕಾರ್ಯಾಚರಣೆಗಳು ಶಾಶ್ವತ ಪರಿಹಾರವನ್ನು ನೀಡಿಲ್ಲ ಹಾಗೂ ಸಾರ್ವಜನಿಕ ಹಣದ ನಿರಂತರ ವೆಚ್ಚಕ್ಕೆ ಕಾರಣವಾಗಿವೆ. ಅರಣ್ಯ ಗಡಿಭಾಗದ ಅನೇಕ ಪ್ರದೇಶಗಳಲ್ಲಿ ರೈಲ್ವೆ ತಡೆಗೋಡೆಗಳು, ಆನೆ ನಿರೋಧಕ ಕಂದಕಗಳು ಹಾಗೂ ಸೌರ ಬೇಲಿಗಳಲ್ಲಿ ಒಂದು ಕಿಲೋಮೀಟರ್‌ಗೂ ಹೆಚ್ಚು ಉದ್ದದ ಅಂತರಗಳು ಇವೆ. ಈ ಕಾರಣದಿಂದ ಆನೆಗಳು ಕಾಫಿ ತೋಟಗಳು ಮತ್ತು ಕೃಷಿಭೂಮಿಗಳಿಗೆ ಸುಲಭವಾಗಿ ಪ್ರವೇಶಿಸುತ್ತಿವೆ.
ಹಲವು ವರ್ಷಗಳ ಅನುಭವದ ಪ್ರಕಾರ ಒಂದು ತೋಟದಿಂದ ಓಡಿಸುವ ಆನೆಗಳು ಅದೇ ದಿನ ಅಥವಾ ಕೆಲವೇ ಗಂಟೆಗಳಲ್ಲಿ ಪಕ್ಕದ ತೋಟಗಳಿಗೆ ಅದೇ ತೆರವು ಪ್ರದೇಶಗಳ ಮೂಲಕ ಮರುಪ್ರವೇಶಿಸುತ್ತವೆ. ಪರಿಣಾಮವಾಗಿ ರೈತರು ಬೆಳೆ ಹಾನಿ, ಆಸ್ತಿ ನಷ್ಟ ಹಾಗೂ ಜೀವಭದ್ರತಾ ಸಮಸ್ಯೆಗಳನ್ನು ನಿರಂತರವಾಗಿ ಎದುರಿಸುತ್ತಿದ್ದಾರೆ.
ಅರಣ್ಯ ಇಲಾಖೆ ನಡೆಸುವ ಆನೆ ಓಡಿಸುವ ಕಾರ್ಯಾಚರಣೆಗಳ ನಂತರ ಕನಿಷ್ಠ ನಾಲ್ಕು ತಿಂಗಳ ಕಾಲ ತೋಟ ಪ್ರದೇಶಗಳು ಆನೆಗಳ ಪ್ರವೇಶದಿಂದ ಮುಕ್ತವಾಗಿರುತ್ತವೆ ಎಂಬ ಭರವಸೆಯನ್ನು ಇಲಾಖೆ ನೀಡಬಹುದೇ ಎಂಬ ಪ್ರಶ್ನೆ ಕೇಳಿರುವ ರೈತ ಸಂಘದ ಪ್ರಮುಖರು ಪ್ರಸ್ತುತ ವಿಧಾನ ಶಾಶ್ವತ ಪರಿಹಾರ ನೀಡಿಲ್ಲ ಎಂಬುದನ್ನು ಇತಿಹಾಸ ತೋರಿಸುತ್ತದೆ.
ರಾತ್ರಿ ವೇಳೆಯಲ್ಲಿ ಆನೆಗಳ ಸಂಚಾರ ಮಾರ್ಗಗಳು, ಪ್ರವೇಶ ಸ್ಥಳಗಳು ಹಾಗೂ ಚಲನೆಯ ಮಾದರಿಗಳನ್ನು ಗುರುತಿಸಲು ಥರ್ಮಲ್ ಅಥವಾ ಇನ್ಫ್ರಾರೆಡ್ ಡ್ರೋನ್‌ಗಳನ್ನು ಬಳಸಬೇಕು. ಯಾವುದೇ ಕಾರ್ಯಾಚರಣೆಗೆ ಮುನ್ನ ಇಂತಹ ವೈಜ್ಞಾನಿಕ ನಕ್ಷೆ ಸಿದ್ಧಪಡಿಸುವುದು ಅತ್ಯಗತ್ಯ.
ಅರಣ್ಯ ಇಲಾಖೆ ಕೃತಕ ಬುದ್ಧಿಮತ್ತೆ ಆಧಾರಿತ ಕ್ಯಾಮೆರಾ ಟ್ರ‍್ಯಾಪ್‌ಗಳು ಮತ್ತು ತಕ್ಷಣದ ಎಚ್ಚರಿಕೆ ವ್ಯವಸ್ಥೆಗಳನ್ನು ಬಳಸಬೇಕು. ಸಂಘರ್ಷ ಸೃಷ್ಟಿಸುವ ಆನೆ ಹಿಂಡುಗಳಿಗೆ ರೇಡಿಯೋ ಕಾಲರ್ ಅಳವಡಿಕೆ ಮಾಡಬೇಕು. ಡ್ರೋನ್ ಆಧಾರಿತ ಮೇಲ್ವಿಚಾರಣೆ ವ್ಯವಸ್ಥೆ ರೂಪಿಸಬೇಕು. ಪ್ರಾಣಿಗಳಿಗೆ ಹಾನಿಯಾಗದ ಬೆಳಕು ಮತ್ತು ಧ್ವನಿ ಆಧಾರಿತ ಮಾರ್ಗದರ್ಶನ ವ್ಯವಸ್ಥೆ ರೂಪಿಸಬೇಕು ಎನ್ನುವ ಸಲಹೆ ನೀಡಲಾಗಿದೆ.
ಆನೆಗಳ ಪ್ರವೇಶ ಮಾರ್ಗಗಳು ಮತ್ತು ಚಲನೆಯ ದಿಕ್ಕುಗಳನ್ನು ವೈಜ್ಞಾನಿಕವಾಗಿ ಗುರುತಿಸಿದ ನಂತರ ಅಗತ್ಯವಿದ್ದರೆ ಸೀಮಿತ ಪ್ರಮಾಣದಲ್ಲಿ ಶಬ್ದ ಆಧಾರಿತ ನಿರೋಧಕಗಳನ್ನು ಬಳಸಬಹುದು. ಇದರಿಂದ ಆನೆಗಳನ್ನು ಸುರಕ್ಷಿತವಾಗಿ ಅರಣ್ಯದತ್ತ ಮರಳಿಸಬಹುದು ಹಾಗೂ ರೈತರು ಮತ್ತು ಸಿಬ್ಬಂದಿಗೆ ಉಂಟಾಗುವ ಅಪಾಯವನ್ನು ಕಡಿಮೆ ಮಾಡಬಹುದು. ಯಾವುದೇ ಕಾರ್ಯಾಚರಣೆ ಸಂದರ್ಭದಲ್ಲಿ ಖಾಸಗಿ ತೋಟ ಅಥವಾ ಜಮೀನಿಗೆ ಪ್ರವೇಶಿಸುವ ಮೊದಲು ಸಂಬAಧಿಸಿದ ಮಾಲೀಕರಿಗೆ ಮಾಹಿತಿ ನೀಡಿ ಅವರ ಸಹಕಾರ ಪಡೆಯಬೇಕು. ರೈತರು ಮತ್ತು ಇಲಾಖೆಯ ನಡುವಿನ ವಿಶ್ವಾಸ ನಿರ್ಮಾಣಕ್ಕೆ ಇದು ಅತ್ಯಗತ್ಯ. ಪ್ರತಿ ವರ್ಷ ಆನೆ ಓಡಿಸುವ ಕಾರ್ಯಾಚರಣೆಗಳಿಗೆ ಖರ್ಚಾಗುವ ನಿಧಿಯನ್ನು ಸೌರ ಬೇಲಿ, ರೈಲ್ವೆ ತಡೆಗೋಡೆ ಹಾಗೂ ಆನೆ ನಿರೋಧಕ ಕಂದಕಗಳ ದುರಸ್ತಿ ಮತ್ತು ಬಲಪಡಿಸುವ ಕಾರ್ಯಗಳಿಗೆ ಬಳಸಬೇಕು. ತಾತ್ಕಾಲಿಕ ಓಡಿಸುವ ಕ್ರಮಗಳಿಗಿಂತ ಶಾಶ್ವತ ತಡೆ ವ್ಯವಸ್ಥೆಗಳು ಹೆಚ್ಚು ಪರಿಣಾಮಕಾರಿ.
ಕೊಡಗು ವನ್ಯಜೀವಿ ಸಂರಕ್ಷಣೆ ಹಾಗೂ ರೈತರು ಮತ್ತು ವನ್ಯಜೀವಿಗಳ ನಡುವೆ ಶಾಂತಿಯುತ ಸಹಬಾಳ್ವೆಯನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ಕೊಡಗಿನ ರೈತರು ತಲೆಮಾರುಗಳಿಂದ ಆನೆಗಳೊಂದಿಗೆ ಬದುಕುತ್ತಿದ್ದಾರೆ. ಸಂರಕ್ಷಣೆಯ ಮಹತ್ವವನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ. ಆದರೆ ಪರಿಣಾಮಕಾರಿ ಸಂಘರ್ಷ ನಿರ್ವಹಣೆಗೆ ಜವಾಬ್ದಾರಿ, ವೈಜ್ಞಾನಿಕ ಯೋಜನೆ ಹಾಗೂ ಆಧುನಿಕ ತಂತ್ರಜ್ಞಾನಗಳ ಬಳಕೆ ಅಗತ್ಯವಾಗಿದೆ. ಪ್ರಸ್ತಾವಿತ ಆನೆ ಓಡಿಸುವ ಕಾರ್ಯಾಚರಣೆಗಳನ್ನು ಮರುಪರಿಶೀಲಿಸಿ ಕೊಡಗು ಜಿಲ್ಲೆಗೆ ಸಂಬAಧಿಸಿದ ಥರ್ಮಲ್ ಡ್ರೋನ್ ಮೇಲ್ವಿಚಾರಣೆ ಮತ್ತು ಅರಣ್ಯ ಗಡಿ ಅಂತರಗಳ ದುರಸ್ತಿ ಕಾರ್ಯಯೋಜನೆಯನ್ನು 15 ದಿನಗಳೊಳಗೆ ಸಿದ್ಧಪಡಿಸಬೇಕು. ಈ ಕಾರ್ಯದಲ್ಲಿ ಸಂಪೂರ್ಣ ಸಹಕಾರ ನೀಡಲು ಹಾಗೂ ತೋಟ ಮಟ್ಟದ ಮಾಹಿತಿಯನ್ನು ಹಂಚಿಕೊಳ್ಳಲು ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾ ಸಮಿತಿ ಸಿದ್ಧವಾಗಿದೆ ಎನ್ನುವ ಭರವಸೆ ನೀಡಲಾಗಿದೆ.
"

ವರ್ಷ ವರ್ಷವೂ ನಡೆಯುವ ಆನೆ ಓಡಿಸುವ ಕಾರ್ಯಾಚರಣೆಗಳು ಶಾಶ್ವತ ಪರಿಹಾರ ನೀಡಿಲ್ಲ. ಇದು ಸಾರ್ವಜನಿಕ ಹಣದ ನಿರಂತರ ವೆಚ್ಚಕ್ಕೆ ಕಾರಣವಾಗಿವೆ. ಮಾನವ-ಆನೆ ಸಂಘರ್ಷ ತಡೆಯಲು ಆಧುನಿಕ ತಂತ್ರಜ್ಞಾನಗಳನ್ನು ಬಳಸಬೇಕು. ರಾತ್ರಿ ವೇಳೆಯಲ್ಲಿ ಆನೆಗಳ ಸಂಚಾರ ಮಾರ್ಗಗಳು, ಪ್ರವೇಶ ಸ್ಥಳಗಳು ಹಾಗೂ ಚಲನೆಯ ಮಾದರಿಗಳನ್ನು ಗುರುತಿಸಲು ಥರ್ಮಲ್ ಅಥವಾ ಇನ್ಫ್ರಾರೆಡ್ ಡ್ರೋನ್‌ಗಳನ್ನು ಬಳಸಬೇಕು. ಕೃತಕ ಬುದ್ಧಿಮತ್ತೆ ಆಧಾರಿತ ಕ್ಯಾಮೆರಾ ಟ್ರ‍್ಯಾಪ್‌ಗಳು ಮತ್ತು ತಕ್ಷಣದ ಎಚ್ಚರಿಕೆ ವ್ಯವಸ್ಥೆಗಳನ್ನು ಬಳಸಬೇಕು ಎನ್ನುವ ಸಲಹೆಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳಿಗೆ ನೀಡಲಾಗಿದೆ.

— ಮನು ಸೋಮಯ್ಯ, ಅಧ್ಯಕ್ಷ ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾ ಸಮಿತಿ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net