ಅಧಿಕಾರಿಗಳ ಚಳಿ ಬಿಡಿಸಿದ ಉಪಲೋಕಾಯುಕ್ತ

ಉಪಲೋಕಾಯುಕ್ತ ನ್ಯಾ. ಕೆ.ಎನ್. ಪಣೀಂದ್ರ ಮಡಿಕೇರಿ ಸ್ಟೋನ್‌ಹಿಲ್ ಕಸವಿಲೇವಾರಿ ಕೇಂದ್ರಕ್ಕೆ ಭೇಟಿ ನೀಡಿದ್ದರು. ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಇದ್ದರು
ಉಪಲೋಕಾಯುಕ್ತ ನ್ಯಾ. ಕೆ.ಎನ್. ಪಣೀಂದ್ರ ಮಡಿಕೇರಿ ಸ್ಟೋನ್‌ಹಿಲ್ ಕಸವಿಲೇವಾರಿ ಕೇಂದ್ರಕ್ಕೆ ಭೇಟಿ ನೀಡಿದ್ದರು. ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಇದ್ದರು
Published on
ಮಡಿಕೇರಿ:
ನಾನು ಇಡೀ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲೂ ಸುತ್ತಿದೀನಿ ಆದರೆ ಮಡಿಕೇರಿಯಲ್ಲಿ ಇರುವಷ್ಟು ಕೆಟ್ಟದಾದ ತ್ಯಾಜ್ಯ ವಿಲೇವಾರಿ ವ್ಯವಸ್ಥೆ ಎಲ್ಲೂ ನೋಡಿಲ್ಲ. ಇಲ್ಲಿನ ಸ್ಟೋನ್ ಹಿಲ್ ಕಸವಿಲೇವಾರಿ ಕೇಂದ್ರಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ ನಂತರ ಉಪಲೋಕಾಯುಕ್ತ ನ್ಯಾ. ಕೆ.ಎನ್. ಫಣೀಂದ್ರ ಮೊದಲು ವ್ಯಕ್ತಪಡಿಸಿದ ಅಭಿಪ್ರಾಯ ಇದು.
ನಾನು ಇಡೀ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲೂ ಸುತ್ತಿದೀನಿ ಆದರೆ ಮಡಿಕೇರಿಯಲ್ಲಿ ಇರುವಷ್ಟು ಕೆಟ್ಟದಾದ ತ್ಯಾಜ್ಯ ವಿಲೇವಾರಿ ವ್ಯವಸ್ಥೆ ಎಲ್ಲೂ ನೋಡಿಲ್ಲ. ಇಲ್ಲಿನ ಸ್ಟೋನ್ ಹಿಲ್ ಕಸವಿಲೇವಾರಿ ಕೇಂದ್ರಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ ನಂತರ ಉಪಲೋಕಾಯುಕ್ತ ನ್ಯಾ. ಕೆ.ಎನ್. ಫಣೀಂದ್ರ ಮೊದಲು ವ್ಯಕ್ತಪಡಿಸಿದ ಅಭಿಪ್ರಾಯ ಇದು. ಸಹಿಲಸಾಧ್ಯ ದುರ್ವಾಸನೆ ಮಧ್ಯೆ ಮುಖಕ್ಕೆ ಮಾಸ್ಕ್ ಧರಿಸಿಕೊಂಡು, ಕೊಳೆತ ಕಸದಿಂದ ಹರಿದು ಬರುತ್ತಿದ್ದ ಕೊಳಚೆ ನೀರಿನ ಮೇಲೆ ಕಸವಿಲೇವಾರಿ ಕೇಂದ್ರಲ್ಲಿ ಸುತ್ತಾಡಿದ ಅವರು ಅಧಿಕಾರಿಗಳು ಇಲ್ಲಿ ಮೂರು ಕಾಸಿನ ಕೆಲಸ ಮಾಡುತ್ತಿಲ್ಲ ಎಂದು ಹರಿಹಾಯ್ದರು. ಇರುವ ಎಲ್ಲಾ ಕಾನೂನುಗಳನ್ನು ಇಲ್ಲಿ ಉಲ್ಲಂಘಿಸಲಾಗಿದೆ. ಇಂಥ ಅಧಿಕಾರಿಗಳನ್ನು ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಸಿದರು.
ಕಸ ವಿಲೇವಾರಿ ಜಾಗವನ್ನು ಸ್ವಚ್ಛವಾಗಿ ಇಟ್ಟುಕೊಂಡಿಲ್ಲ. ಇಲ್ಲಿ ಕೆಲಸ ಮಾಡುವವರ ಸ್ಥಿತಿ ಹೇಗಿರಬೇಡ ? ಈ ವ್ಯಾಪ್ತಿಯ ಮನೆಗಳವರು ವಾಸ ಮಾಡುವುದಾದರೂ ಹೇಗೆ ? ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಇಲ್ಲಿ ಸಮರ್ಪಕವಾಗಿ ಕಸ ವಿಲೇವಾರಿ ಆಗಬೇಕು. ಒಣಕಸವನ್ನು ವಿದ್ಯುತ್ ಉತ್ಪಾದನೆ, ಸಿಮೆಂಟ್ ತಯಾರಿಕೆಗೆ ಬಳಸಬೇಕು. ಹಸಿಕಸವನ್ನು ಗೊಬ್ಬರ ತಯಾರಿಕೆಗೆ ಬಳಸುವಂತಾಗಬೇಕು ಎಂದು ಸಲಹೆ ನೀಡಿದರು.
ಮಡಿಕೇರಿ ಹೈಟೆಕ್ ಮಾರುಕಟ್ಟೆಗೂ ಉಪಲೋಕಾಯುಕ್ತರು ಭೇಟಿ ಕೊಟ್ಟಿದ್ದರು. ಮಾಂಸ ಮಾರುಕಟ್ಟೆಗೆ ಆಗಮಿಸುತ್ತಿದ್ದಂತೆಯೇ ಸ್ಥಳೀಯ ವ್ಯಾಪಾರಿಗಳು ನಗರ ಸಭೆ ವಿರುದ್ಧ ದೂರುಗಳ ದೊಡ್ಡ ಪಟ್ಟಿಯನ್ನೇ ಇಟ್ಟರು. ಮಾರುಕಟ್ಟೆ ಅವ್ಯವಸ್ಥೆ ನೋಡಿದ ಉಪಲೋಕಾಯುಕ್ತರು ಇದನ್ನು ಹೈಟೆಕ್ ಮಾರುಕಟ್ಟೆ ಎಂದರೆ ಜನ ನಗಾಡುತ್ತಾರೆ. ನಗರಸಭೆ ಅಧಿಕಾರಿಗಳು ಅದು ಮಾಡುತ್ತೇವೆ, ಇದು ಮಾಡುತ್ತೇವೆ ಎನ್ನುವ ಮೂಲಕ ಪೇಪರ್ ಟೈಗರ್ಸ್ ಆಗಿದ್ದಾರೆ. ನಗರಸಭೆ ಏನೂ ಪ್ರಯೋಜನ ಇಲ್ಲ. ಇಲ್ಲಿಯ ಅವ್ಯವಸ್ಥೆ ಬಗ್ಗೆ ನಿಮಗೆ ಅಸಹ್ಯ ಅನ್ನಿಸೋದಿಲ್ವಾ? ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.
ವಾಹನ ಪಾರ್ಕಿಂಗ್ ಸ್ಥಳದಲ್ಲಿ ವ್ಯಾಪಾರಕ್ಕೆ ಅವಕಾಶ ಕೊಟ್ಟಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಸಂಪೂರ್ಣ ಮಾರುಕಟ್ಟೆಯನ್ನು ಟೆಂಡರ್ ಕರೆದು ಒಬ್ಬ ವ್ಯಕ್ತಿಗೆ ವಹಿಸುವ ಬದಲು ನೇರವಾಗಿ ವ್ಯಾಪಾರಿಗಳಿಗೆ ಕೊಟ್ಟು ಬಾಡಿಗೆ ವಸೂಲಿ ಮಾಡಿ ಎಂದು ಸಲಹೆ ನೀಡಿದರು. ಚರಂಡಿಗಳನ್ನು ಸ್ವಚ್ಚ ಮಾಡಬೇಕು. ಬೆಳಕಿನ ವ್ಯವಸ್ಥೆ ಕಲ್ಪಿಸಬೇಕು. ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಗಾಳಿ, ಬೆಳಕು ಚೆನ್ನಾಗಿ ಇರುವಂತೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ನಂತರ ಸರ್ಕಾರಿ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲಿಯ ವ್ಯವಸ್ಥೆಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು. ಸ್ಥಳದಲ್ಲಿ ಇದ್ದ ಪ್ರಯಾಣಿಕರ ಬಳಿಯೂ ಅಭಿಪ್ರಾಯ ಸಂಗ್ರಹಿಸಿದರು. ಶಾಲಾ ಅವಧಿಯಲ್ಲಿ ಹೆಚ್ಚಿನ ಬಸ್‌ಗಳು ಬೇಕು ಎಂದು ಪ್ರಯಾಣಿಕರು ಬೇಡಿಕೆ ಇಟ್ಟರು. ಇಲ್ಲಿ, ಎಲ್ಲಾ ಪರವಾಗಿಲ್ಲ ಅನ್ನಿಸ್ತಿದೆ. ನಾನು ಬಂದಿದ್ದೀನಿ ಅಂತ ಕ್ಲೀನ್ ಮಾಡಿದ್ದಾರೋ, ದಿನ ಹಿಂಗಿರುತ್ತೋ ಅಂತ ನನಗೆ ಇದಿಲ್ಲ. 15-20 ದಿನಕ್ಕೆ ಒಮ್ಮೆ ದಿಢೀರ್ ಭೇಟಿ ನೀಡಿ ಪರಿಶೀಲಿಸಲು ನಮ್ಮ ಅಧಿಕಾರಿಗಳಿಗೆ ಹೇಳುತ್ತೇನೆ. ಬಸ್ ನಿಲ್ದಾಣದಲ್ಲಿ ಇರುವ ನೀರಿನ ಘಟಕ ಸಾಕಾಗುವುದಿಲ್ಲ ಹಾಗಾಗಿ ಇನ್ನೊಂದು ಘಟಕ ಹಾಕಬೇಕು ಎಂದು ಸೂಚಿಸಿದರು. ಗಡಿಯಾರಗಳ ಅಳವಡಿಕೆ, ಸಿಸಿ ಕ್ಯಾಮೆರಾಗಳ ಅಳವಡಿಕೆಗೂ ನಿರ್ದೇಶನ ನೀಡಿದರು.
ಡಿಸಿ ಎಸ್.ಜೆ. ಸೋಮಶೇಖರ್, ಎಸ್‌ಪಿ ಆರ್.ಎನ್. ಬಿಂದುಮಣಿ, ಕೊಡಗು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಡಾ. ಮಹೇಶ್ವರಿ ಕುಮಾರ್ ಸಿಂಗ್, ನಗರಸಭೆ ಪೌರಾಯುಕ್ತ ಹೆಚ್. ಆರ್. ರಮೇಶ್, ನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ. ಶುಭಾ, ಲೋಕಾಯುಕ್ತ ಅಧಿಕಾರಿಗಳು ಮತ್ತಿತರರು ಈ ಸಂದರ್ಭ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net