ಗುರುವಾರ (ಮಾ.19) ಚಂದ್ರಮಾನ ಯುಗಾದಿಯಂದು ಹೊಸ ವರುಷದ ಪ್ರಯುಕ್ತ ಆಚರಿಸುವ ಜನಪದ ಸಂಸ್ಕೃತಿಯ ಪ್ರತೀಕವಾದ ಹೊನ್ನಾರು ಉತ್ಸವು ರೈತರ ಪಾಲಿಗೆ ಸಡಗರ ಸಂಭ್ರಮದ ದಿನವಾಗಿದೆ. ಉತ್ತರ ಕೊಡಗಿನ ಕುಶಾಲನಗ ತಾಲೂಕಿನ ಹಾಸನ ಮತ್ತು ಮೈಸೂರು ಜಿಲ್ಲೆಗಳ ಗಡಿಪ್ರದೇಶದ ಬಯಲುಸೀಮೆ ಪ್ರದೇಶಗಳಾದ ಹಾರಂಗಿ ಅಚ್ಚುಕಟ್ಟು ವ್ಯಾಪ್ತಿಯ ಹೆಬ್ಬಾಲೆ, ಶಿರಂಗಾಲ, ತೊರೆನೂರು, ಹುಲುಸೆ, ಕೂಡಿಗೆ, ಭುವನಗಿರಿ, ಸೀಗೆಹೊಸೂರು, ನಲ್ಲೂರು, ಮಣಜೂರು ಮತ್ತಿತರ ಹಳ್ಳಿಗಳಲ್ಲಿ ರೈತರು ತಮ್ಮ ಪೂರ್ವಿಕರ ಕಾಲದಿಂದಲೂ ಯುಗಾದಿ ಹಬ್ಬದಂದು ಹೊನ್ನಾರು ಉಳುಮೆ ಆಚರಿಸಿಕೊಂಡು ಬರುತ್ತಿದ್ದಾರೆ. ಕೊಡಗಿನ ಉಳಿದ ಭಾಗಗಳಲ್ಲಿ ಈ ಆಚರಣೆ ಇಲ್ಲ.