ಕೊಡಗು ಅಭಿವೃದ್ಧಿ ಹೆಸರಿನಲ್ಲಿ ಅವಾಂತರ

2018ರ ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಸಂಭವಿಸಿದ್ದ ಭೂಕುಸಿತದ ದೃಶ್ಯ
2018ರ ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಸಂಭವಿಸಿದ್ದ ಭೂಕುಸಿತದ ದೃಶ್ಯ
Published on
ಮಡಿಕೇರಿ:
ದಕ್ಷಿಣ ಭಾರತದ ಜೀವನದಿ ಕಾವೇರಿಯ ಉಗಮ ಸ್ಥಾನ ಕೊಡಗು ತನ್ನ ನೈಸರ್ಗಿಕ ಸೌಂದರ್ಯ ಮತ್ತು ಪರಿಸರ ಸಮತೋಲನವನ್ನು ಕಳೆದುಕೊಳ್ಳುವ ಆತಂಕದಲ್ಲಿದೆ. ಅಭಿವೃದ್ಧಿ ಹೆಸರಿನಲ್ಲಿ ನಡೆಯುತ್ತಿರುವ ಅವಾಂತರಗಳು ಈ ಸೂಕ್ಷ್ಮ ಪರಿಸರ ವಲಯವನ್ನು ವಿನಾಶದ ಅಂಚಿಗೆ ತಳ್ಳುತ್ತಿವೆ. ಕೊಡಗು ಕೇವಲ ಒಂದು ಪ್ರವಾಸಿ ತಾಣವಲ್ಲ. ಇದು ದಕ್ಷಿಣ ಭಾರತದ ಕೋಟ್ಯಂತರ ಜನರ ದಾಹ ನೀಗಿಸುವ ಕಾವೇರಿ ನದಿಯ ತಾಯಿ ಬೇರು. ಆದರೆ ಇತ್ತೀಚಿನ ವರ್ಷಗಳಲ್ಲಿ ಕೊಡಗಿನಲ್ಲಿ ಹೆಚ್ಚುತ್ತಿರುವ ಅಕ್ರಮ ಭೂ ಪರಿವರ್ತನೆ, ಸೂಕ್ಷ್ಮ ಪರಿಸರ ವಲಯದ ಮೇಲಿನ ನಿರಂತರ ದಾಳಿ ಮತ್ತು ನದಿಮೂಲಗಳ ನಾಶ ಇಡೀ ಜಿಲ್ಲೆಯ ಅಸ್ತಿತ್ವಕ್ಕೆ ಕಂಟಕವಾಗಿ ಪರಿಣಮಿಸಿದೆ.
ಕೊಡಗಿನ ಹಸಿರು ಹಾಸಿಗೆಯಾಗಿದ್ದ ಕಾಫಿ ತೋಟಗಳು, ಭತ್ತದ ಗದ್ದೆಗಳು, ಕಾಂಕ್ರೀಟ್ ಕಾಡುಗಳಾಗಿ ಮಾರ್ಪಾಡಾಗುತ್ತಿವೆ. ಪ್ರವಾಸೋದ್ಯಮದ ಅತಿಯಾದ ವಾಣಿಜ್ಯೀಕರಣದಿಂದಾಗಿ ಕೃಷಿ ಭೂಮಿಯನ್ನು ವಾಣಿಜ್ಯ ಬಳಕೆಗೆ ಮುಕ್ತವಾಗಿ ಪರಿವರ್ತಿಸಲಾಗುತ್ತಿದೆ. ಕಟ್ಟುನಿಟ್ಟಾದ ಕಂದಾಯ ನಿಯಮಗಳಿದ್ದರೂ, ಅಧಿಕಾರಿಗಳು ಮತ್ತು ಭೂ ಮಾಫಿಯಾ ಶಾಮೀಲಾಗಿ ಅಕ್ರಮವಾಗಿ ಕೃಷಿ ಭೂಮಿಯನ್ನು ಕೃಷಿಯೇತರ ಭೂಮಿಯನ್ನಾಗಿ ಪರಿವರ್ತಿಸಲಾಗುತ್ತಿರುವ ಆರೋಪಗಳಿವೆ. ಕೊಡಗು ಪಶ್ಚಿಮ ಘಟ್ಟಗಳ ಪ್ರಮುಖ ಭಾಗವಾಗಿದ್ದು, ಯುನೆಸ್ಕೋ ಗುರುತಿಸಿರುವ ವಿಶ್ವ ಪರಂಪರೆಯ ತಾಣಗಳ ಸಾಲಿನಲ್ಲಿದೆ. ಆದರೆ ಇಲ್ಲಿನ ಪರಿಸರ ಇಂದು ತೀವ್ರವಾಗಿ ಹಾನಿಗೊಳಗಾಗಿದೆ.
2018, 2019 ಹಾಗೂ 2020ರಲ್ಲಿ ಕೊಡಗಿನಲ್ಲಿ ಸಂಭವಿಸಿದ ಭೀಕರ ಪ್ರವಾಹ ಮತ್ತು ಭೂಕುಸಿತಗಳು ಪ್ರಕೃತಿ ನೀಡಿದ ದೊಡ್ಡ ಎಚ್ಚರಿಕೆಯಾಗಿದ್ದವು. ಆದರೂ ಸಂಬAಧಿಸಿದವರು ಎಚ್ಚೆತ್ತುಕೊಳ್ಳದಿರುವುದು ದುರಂತವಾಗಿದೆ.
"

ಕೊಡಗಿನ ಸೂಕ್ಷ್ಮ ಪರಿಸರ ವಲಯದಲ್ಲಿ ಅತಿಯಾದ ಭೂ ಪರಿವರ್ತನೆ ನಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆ. ಕಾಫಿ ತೋಟಗಳು, ಅರಣ್ಯ ಪ್ರದೇಶಗಳು ಮತ್ತು ನದಿ ಮೂಲ ಪ್ರದೇಶಗಳು ಹಾನಿಗೊಳಗಾದರೆ ಪ್ರಕೃತಿ ಸಮತೋಲನ ಕದಡುವ ಸಾಧ್ಯತೆ ಇದೆ. ಅಭಿವೃದ್ಧಿ ಅಗತ್ಯವಾದರೂ ಪರಿಸರ ಸಂರಕ್ಷಣೆಗೆ ಮೊದಲ ಆದ್ಯತೆ ನೀಡಬೇಕು. ಇಲ್ಲವಾದರೆ ಮುಂದಿನ ಪೀಳಿಗೆಗೆ ಹಸಿರು ಕೊಡಗು ಕೇವಲ ನೆನಪಾಗಿ ಉಳಿಯಬಹುದು.

— ಸಿ.ಎಸ್. ಧರ್ಮಪ್ಪ, ಕೃಷಿಕ, ಚಿಕ್ಕತೋಳೂರು ಗ್ರಾಮ.

"

ಕೊಡಗಿನಲ್ಲಿ ಅಭಿವೃದ್ಧಿ ಯೋಜನೆಗಳು ಅಗತ್ಯವೇ ಸರಿ. ಆದರೆ ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಭೂ ಪರಿವರ್ತನೆಗೆ ಕಟ್ಟುನಿಟ್ಟಿನ ನಿಯಮ ಜಾರಿಯಾಗಬೇಕು. ಕಾವೇರಿ ನದಿ ಮೂಲ ಪ್ರದೇಶಗಳನ್ನು ರಕ್ಷಿಸುವುದು ಸರ್ಕಾರ ಮತ್ತು ಸಾರ್ವಜನಿಕರ ಜವಾಬ್ದಾರಿ. ಪರಿಸರ ಉಳಿದರೆ ಮಾತ್ರ ಕೊಡಗಿನ ಜೀವ ವೈವಿಧ್ಯ, ಪ್ರವಾಸೋದ್ಯಮ ಮತ್ತು ಕೃಷಿ ಭವಿಷ್ಯ ಸುರಕ್ಷಿತವಾಗಿರುತ್ತದೆ.

— ಜಲಾ ಕಾಳಪ್ಪ, ಸಾಹಿತಿ, ಸೋಮವಾರಪೇಟೆ

"

ಕೊಡಗು ತನ್ನಲ್ಲಿನ ಶ್ರೀಮಂತ, ಸಮೃದ್ಧ ಪ್ರಕೃತಿಯಿಂದ ಪ್ರವಾಸಿಗರನ್ನು ಆಕರ್ಷಿಸಿದ ಪಲವಾಗಿ ತನ್ನ ಎಲ್ಲಾ ಸೌಂದರ್ಯ ಹಾಗೂ ಪ್ರಸಿದ್ದಿಯನ್ನು ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಬಹುಮುಖ್ಯವಾಗಿ ರೆಸಾರ್ಟ್, ಹೋಂಸ್ಟೇಗಳ ನಿರ್ಮಾಣಕ್ಕಾಗಿ ಕೃಷಿ ಭೂಮಿಯನ್ನು ವಾಣಿಜ್ಯ ಉದ್ದೇಶಕ್ಕೆ ಪರಿವರ್ತಿಸುವುದು ನೇರವಾಗಿ ಪರಿಸರಕ್ಕೆ ಹಾನಿಕರ. ಭಾರೀ ರಸ್ತೆಗಳು, ರೈಲ್ವೇ ಯೋಜನೆಗಳು ಕೂಡ ಮಾರಕ. ಸ್ಥಳೀಯ ಪರಿಸರಕ್ಕೆ ಹಾನಿಯಾಗದಂತೆ ಪ್ರವಾಸಿಗರ ಸಂಖ್ಯೆ ನಿಯಂತ್ರಿಸಬೇಕಿದೆ. ಸರ್ಕಾರದ ಕಡೆಯಿಂದ ಪರಿಸರ ಸೂಕ್ಷ್ಮ ವಲಯದ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು ಸದ್ಯದ ಪರಿಸ್ಥಿತಿಯಲ್ಲಿ ಅತೀ ಅವಶ್ಯ. ಇಲ್ಲವಾದಲ್ಲಿ ಕೊಡಗು ತನ್ನ ಮೂಲ ಸ್ವರೂಪ ಕಳೆದುಕೊಳ್ಳುವ ದಿನ ದೂರವಿಲ್ಲ.

— ಸುದೀಪ್ ಪೂಳಕಂಡ (ಕುಟ್ಟನ), ಪರಿಸರಪ್ರೇಮಿ ಮರಗೋಡು

"

ಕೊಡಗಿನಲ್ಲಿ ಇತ್ತೀಚಿನ ದಿನಗಳಲ್ಲಿ ಭೂ ಪರಿವರ್ತನೆ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದೆ. ಹೊರ ಜಿಲ್ಲೆ, ಹೊರ ರಾಜ್ಯದವರು ಮಾತ್ರವಲ್ಲ ಇಲ್ಲಿನ ಮೂಲ ನಿವಾಸಿಗಳು ಕೂಡ ಭೂ ಪರಿವರ್ತನೆ ಕೆಲಸದಲ್ಲಿ ತೊಡಗಿದ್ದಾರೆ. ಮಾರಾಟವಾದಂತಹ ಭೂಮಿ ಕೃಷಿ ಭೂಮಿ ಅಥವಾ ವಾಣಿಜ್ಯ ಬಳಕೆಯ ಭೂಮಿಯಾಗಿ ಉಳಿಯದೆ ರೆಸಾರ್ಟ್, ಲೇಔಟ್ ತಲೆ ಎತ್ತುತ್ತಿದೆ. ಇದರಿಂದ ಈ ಸೂಕ್ಷ್ಮ ಪ್ರದೇಶಗಳು ಹಾಗೂ ನದಿ ಮೂಲಗಳು ಮಾಲಿನ್ಯವಾಗುವುದರೊಂದಿಗೆ ಕಾಂಕ್ರೀಟ್ ಕಾಡು ನಿರ್ಮಾಣವಾಗಿ ಪ್ರಕೃತಿಯಲ್ಲಿ ಅಸಮತೋಲನದೊಂದಿಗೆ ಋತುಮಾನಗಳ ವೈಪರಿತ್ಯ ಅನುಭವಿಸುವ ಸ್ಥಿತಿ ಎದುರಾಗಿದೆ. ಆದರಿಂದ ಕೃಷಿ ಭೂಮಿ ಕೃಷಿ ಭೂಮಿಯಾಗಿ ಉಳಿಯಲು ಹೊಸ ಕಾನೂನು ಜಾರಿಗೊಳಿಸಿದರೆ ಒಳಿತು.

— ಬೇಪಡಿಯಂಡ ಯು. ಮಾಚಯ್ಯ, ವಿರಾಜಪೇಟೆ ನಿವಾಸಿ

"

ಭೂ ಪರಿವರ್ತನೆಯಿಂದ ಕೊಡಗಿನ ಹಸಿರು, ವನ್ಯ ಸಂಪತ್ತುಗಳು ಕಡಿಮೆಯಾಗಿ ಕಾವೇರಿ ನೀರಿನ ಹರಿವಿನ ಪ್ರಮಾಣ ಕುಸಿಯುತ್ತಿದೆ. ಈ ರೀತಿ ಭೂ ಪರಿವರ್ತನೆಯಾಗುತ್ತಿದ್ದರೆ ಕೆಲವೇ ವರ್ಷದಲ್ಲಿ ಗೋಣಿಕೊಪ್ಪಲು, ವಿರಾಜಪೇಟೆ ನಿಶ್ಚಿತವಾಗಿ ಮೈಸೂರಿನಂಥ ಮಹಾನಗರವಾಗಲಿದೆ. ಸೋಮವಾರಪೇಟೆ, ಮಡಿಕೇರಿ, ಕುಶಾಲನಗರ ಸಹ ಇದೇ ರೀತಿ ಮಹಾ ನಗರವಾಗುತ್ತಾ ಹೋಗುತ್ತದೆ. ಕೊನೆಗೆ ಕಾವೇರಿ ನೀರು ಕೊಡಗಿನ ಜನರ ಆಂತರಿಕ ಬಳಕೆಗೆ ಸೀಮೀತವಾಗಿ ಇದನ್ನು ಅವಲಂಬಿತ ಜಿಲ್ಲೆಗಳು ಹಾಗೂ ಬೆಂಗಳೂರಿಗೆ ನೀರು ಮರಿಚಿಕೆಯಾಗುತ್ತದೆ. ಹಣದಾಸೆಯಿಂದ ಅನೇಕರು ವಾಣಿಜ್ಯ ಪರಿವರ್ತನೆಗಳಲ್ಲಿ ತೊಡಗಿರುವುದು ವಿಷಾದನಿಯ.

— ಕರ್ನಲ್ ಸಿ.ಪಿ. ಮುತ್ತಣ್ಣ, ಗೌರವ ಕಾರ್ಯದರ್ಶಿ, ಕೊಡಗು ಮತ್ತು ಕಾವೇರಿ ಉಳಿಸಿ ಅಭಿಯಾನ

"

ಕೊಡಗಿನ ಪರಿಸರ ಹೀಗೆಯೇ ಉಳಿಯಬೇಕು, ಮುಂದಿನ ತಲೆಮಾರಿಗೆ ಇದೇ ರೂಪದಲ್ಲಿ ಹಸ್ತಾಂತರ ಆಗಬೇಕು ಎನ್ನುವುದು ಎಲ್ಲರ ಕಾಳಜಿ ಆಗಿದೆ. ಈ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ಆಗಬೇಕಾಗಿರುವುದರ ಸಂಬAಧ ಗಮನ ಸೆಳೆಯಲಾಗುವುದು. ಇಲ್ಲಿಯ ಪರಿಸರ ಉಳಿಯಬೇಕಾದರೆ ಪರಿಸರಕ್ಕೆ ಪೂರಕ ಚಟುವಟಿಕೆಗಳು ಮಾತ್ರ ನಡೆಯಬೇಕಾಗುತ್ತದೆ. ಸುಸ್ಥಿರ ಪ್ರವಾಸೋದ್ಯಮದ ಕಡೆಗೂ ಗಮನಹರಿಸಬೇಕಾಗುತ್ತದೆ.

— ಡಾ. ಮಂತರ್ ಗೌಡ, ಮಡಿಕೇರಿ ಶಾಸಕ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net