1989ರಲ್ಲಿ ದಕ್ಷಿಣ ಕನ್ನಡದ ಅರಂಬೂರು ಎಂಬಲ್ಲಿ ಯಶಸ್ವಿಯಾಗಿ ತಮ್ಮ ಮೊದಲ ತೂಗು ಸೇತುವೆ ನಿರ್ಮಿಸಿದ ಗಿರೀಶ್ ಭಾರದ್ವಾಜ್, ಯಾವುದೇ ಅತ್ಯಾಧುನಿಕ ಯಂತ್ರೋಪಕರಣಗಳಿಲ್ಲದೆ, ಕಡಿಮೆ ವೆಚ್ಚದಲ್ಲಿ ಮತ್ತು ಸ್ಥಳೀಯ ವಸ್ತುಗಳನ್ನು ಬಳಸಿ ತೂಗು ಸೇತುವೆಗಳನ್ನು ನಿರ್ಮಿಸುವ ತಂತ್ರಜ್ಞಾನವನ್ನು ಬೆಳೆಸಿಕೊಂಡರು. ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಆಂಧ್ರಪ್ರದೇಶ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ 140ಕ್ಕೂ ಹೆಚ್ಚು ತೂಗು ಸೇತುವೆಗಳನ್ನು ನಿರ್ಮಿಸಿದರು. ಅವರೇ ಹೇಳಿಕೊಂಡAತೆ ನಾನು ನಿರ್ಮಿಸುವ ಸೇತುವೆಗಳು ಕೇವಲ ಸಿಮೆಂಟ್-ಕಬ್ಬಿಣದ ಸೇತುವೆಗಳಲ್ಲ; ಅವು ಎರಡು ದಂಡೆಯ ಜನರ ಭಾವನೆಗಳನ್ನು ಬೆಸೆಯುವ ಸಂಪರ್ಕ ಸೇತುವೆಗಳಾಗಿವೆ. ಕುಶಾಲನಗರದ ಕಾವೇರಿ ನಿಸರ್ಗಧಾಮ ಇಂದು ಈ ಮಟ್ಟದಲ್ಲಿ ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಗಿರೀಶ್ ಅವರ ತೂಗುಸೇತುವೆಯ ಕೊಡುಗೆಯೂ ಇದೆ ಎಂದರು.