ವಿದ್ಯುತ್ ಮಾರ್ಗದ ಸುತ್ತ ಗಿಡ ಕಟಾವು

ಮೂರ್ನಾಡುವಿನಿಂದ ಬಲಮುರಿ ಪೈಸಾರಿ ಕಡೆಗೆ ಸಾಗುವ ವಿದ್ಯುತ್ ಮಾರ್ಗದ ಸುತ್ತಮುತ್ತ ಬೆಳೆದಿದ್ದ ಬಿದಿರು, ಮರ-ಗಿಡ ಹಾಗೂ ಬಳ್ಳಿಗಳನ್ನು ತೆರವುಗೊಳಿಸುವ ಕೆಲಸ ಮಾಡಲಾಯಿತು.
ಮೂರ್ನಾಡುವಿನಿಂದ ಬಲಮುರಿ ಪೈಸಾರಿ ಕಡೆಗೆ ಸಾಗುವ ವಿದ್ಯುತ್ ಮಾರ್ಗದ ಸುತ್ತಮುತ್ತ ಬೆಳೆದಿದ್ದ ಬಿದಿರು, ಮರ-ಗಿಡ ಹಾಗೂ ಬಳ್ಳಿಗಳನ್ನು ತೆರವುಗೊಳಿಸುವ ಕೆಲಸ ಮಾಡಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • power lines
ಪೊನ್ನಂಪೇಟೆ: ಚಾಮುಂಡೇಶ್ವರಿ ವಿದ್ಯುತ್ ಪ್ರಸರಣಾ ಘಟಕದ ಮೂರ್ನಾಡುವಿನಿಂದ ಬಲಮುರಿ ಪೈಸಾರಿ ಕಡೆಗೆ ಸಾಗುವ ವಿದ್ಯುತ್ ಮಾರ್ಗದ ಸುತ್ತಮುತ್ತ ಬೆಳೆದಿದ್ದ ಬಿದಿರು, ಮರ-ಗಿಡ ಹಾಗೂ ಬಳ್ಳಿಗಳನ್ನು ತೆರವುಗೊಳಿಸುವ ಕಾರ್ಯವನ್ನು ಗುರುವಾರ ಕೈಗೊಳ್ಳಲಾಯಿತು.
ಕಾವೇರಿ ನದಿ ತಟ ಹಾಗೂ ರಸ್ತೆ ಬದಿಯಲ್ಲಿ ಹಾದುಹೋಗಿರುವ ವಿದ್ಯುತ್ ಮಾರ್ಗದ ಮೇಲೆ ಗಿಡಗಂಟಿಗಳು ವ್ಯಾಪಕವಾಗಿ ಬೆಳೆದು ವಿದ್ಯುತ್ ಸರಬರಾಜಿಗೆ ಅಪಾಯ ಉಂಟುಮಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಲೈನ್‌ಮ್ಯಾನ್‌ಗಳಾದ ಕಿಶೋರ್ ಹಾಗೂ ಜೀವನ್ ನೇತೃತ್ವದಲ್ಲಿ ಗ್ರಾಮಸ್ಥರ ಸಹಕಾರದೊಂದಿಗೆ ಕಾಡು ತೆರವುಗೊಳಿಸಿ ವಿದ್ಯುತ್ ಮಾರ್ಗವನ್ನು ಸುರಕ್ಷಿತಗೊಳಿಸಲಾಯಿತು.
ಕಾರ್ಯಾಚರಣೆ ವೇಳೆ ಕೊಣಜಗೇರಿ-ಪಾರಾಣೆ ಗ್ರಾಮ ಪಂಚಾಯಿತಿಯ ನೂತನ ಪಿಡಿಒ ಎನ್.ಎನ್. ಬಿದ್ದಪ್ಪ, ಸಿಬ್ಬಂದಿ ಎನ್.ಎಂ. ಹೈದರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಬಲಮುರಿಯಿಂದ ನಾಪೋಕ್ಲು-ಪಾರಾಣೆ ಸಂಪರ್ಕ ರಸ್ತೆಯ ಇಕ್ಕೆಲಗಳಲ್ಲಿ ಕಾಡು ವ್ಯಾಪಕವಾಗಿ ಬೆಳೆದಿರುವುದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಆದ್ದರಿಂದ ರಸ್ತೆ ಬದಿಯ ಕಾಡನ್ನೂ ಶೀಘ್ರ ತೆರವುಗೊಳಿಸಿ ಸುರಕ್ಷಿತ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದರು.
ರಸ್ತೆಯ ಬದಿಯಲ್ಲಿ ಪ್ಲಾಸ್ಟಿಕ್, ಗಾಜು ಹಾಗೂ ಇತರ ತ್ಯಾಜ್ಯಗಳನ್ನು ಎಸೆಯುತ್ತಿರುವುದರಿಂದ ಕಾವೇರಿ ನದಿ ಮಲಿನ ಗೊಳ್ಳುವುದರ ಜತೆಗೆ ಗ್ರಾಮದ ಸೌಂದರ್ಯಕ್ಕೂ ಧಕ್ಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಸ್ತೆ ಉದ್ದಕ್ಕೂ ಎಚ್ಚರಿಕೆ ಫಲಕಗಳನ್ನು ಅಳವಡಿಸಿ, ತ್ಯಾಜ್ಯ ಎಸೆಯುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು. ಮನವಿಗೆ ಸ್ಪಂದಿಸಿದ ಪಂಚಾಯಿತಿ ಅಧಿಕಾರಿಗಳು, ಶೀಘ್ರವೇ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net