ಕೂಡಿಗೆಯಲ್ಲಿರುವ ಜಿಲ್ಲಾ ಕೃಷಿ ತರಬೇತಿ ಕೇಂದ್ರ ವತಿಯಿಂದ ಜಿಲ್ಲಾ ಮಟ್ಟದ ರೈತರಿಗೆ ಭತ್ತದ ಕೃಷಿಯಲ್ಲಿ ಸುಧಾರಿತ ಬೇಸಾಯ ಕ್ರಮಗಳು ತರಬೇತಿ ಹಾಗೂ ಪ್ರಾತ್ಯಕ್ಷಿತೆ ಕಾರ್ಯಗಾರ ತರಬೇತಿ ಕೇಂದ್ರದ ಸಭಾಂಗಣದಲ್ಲಿ ಬುಧವಾರ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಡಿಕೇರಿ ಜಿಲ್ಲಾ ಸಹಾಯಕ ಕೃಷಿ ನಿರ್ದೇಶಕ ಸೋಮಶೇಖರ್ ವಹಿಸಿದ್ದರು. ಸಭೆಯಲ್ಲಿ ಭತ್ತದ ಕೃಷಿಯಲ್ಲಿ ಸುಧಾರಿತ ಬೇಸಾಯ ಕ್ರಮಗಳು ಕುರಿತು ವಿಷಯ ಮಂಡನೆಯನ್ನು ಮಂಡ್ಯದ ವಿ.ಸಿ. ಫಾರಂ ವಲಯ ಸಂಶೋಧನಾ ಕೇಂದ್ರದ ಸಹ ಪ್ರಾಧ್ಯಾಪಕ ಡಾ. ಬಸವಲಿಂಗಯ್ಯ ಪ್ರಸ್ತುತಪಡಿಸಿದರು. ಭತ್ತದ ಕೃಷಿಯಲ್ಲಿ ತೊಡಗುವ ಮುನ್ನ ಅನುಸರಿಸಬೇಕಾದ ಕ್ರಮಗಳು ಮತ್ತು ಅಧಿಕ ಬೆಳೆಯನ್ನು ತೆಗೆಯುವ ವಿಧಾನ ಸೇರಿದಂತೆ ಕೃಷಿ ಇಲಾಖೆಯ ಬಗ್ಗೆ ಸವಿಸ್ತಾರವಾದ ಮಾಹಿತಿ ನೀಡಿದರು.