ಈ ಮಾರ್ಗದಲ್ಲಿ ಸಂಚಾರ ಅಸಾಧ್ಯ!

ಕಾನ್‌ಬೈಲ್ ವೃತ್ತದಿಂದ ಮಳ್ಳೂರು, ಕಲ್ಲೂರು, ಬಸವನಹಳ್ಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಅಧೋಗತಿ ತಲುಪಿರುವುದು.
ಕಾನ್‌ಬೈಲ್ ವೃತ್ತದಿಂದ ಮಳ್ಳೂರು, ಕಲ್ಲೂರು, ಬಸವನಹಳ್ಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಅಧೋಗತಿ ತಲುಪಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಕಳೆದ ಒಂದು ದಶಕ
  • ಈ ರಸ್ತೆ ಡಾಂಬರು ಕಂಡಿಲ್ಲ
  • ವಾಹನ ಸವಾರರು ಬಿದ್ದು ಗಾಯ
ಸುಂಟಿಕೊಪ್ಪ: ಕಳೆದ ಒಂದು ದಶಕದಿಂದಲೂ ಈ ರಸ್ತೆ ಡಾಂಬರು ಕಂಡಿಲ್ಲ.... ಇದು ಆಶ್ಚರ್ಯ ಎನಿಸಿದರೂ ನಂಬಲೇಬೇಕಾದ ವಿಷಯ.
ಈ ರಸ್ತೆಯು ಸಂಪೂರ್ಣ ಕಿತ್ತುಹೋಗಿ ಗುಂಡಿಗಳಿಂದ ಕೂಡಿದ್ದು, ಈ ರಸ್ತೆಯಲ್ಲಿ ಸಂಚರಿಸುವ ಸಂದರ್ಭ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡಿರುವ ಸಾಕಷ್ಟು ಉದಾಹರಣೆಗಳು ಇವೆ. ಇನ್ನು ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಗಮನಕ್ಕೆ ತರಲಾಗಿದ್ದರೂ ಸಮಸ್ಯೆ ನಿವಾರಣೆಗೆ ಮುಂದಾಗಿಲ್ಲ ಎಂಬುದು ಈ ಭಾಗದ ಗ್ರಾಮಸ್ಥರು ಅಳಲು.
ಹೋಬಳಿ ವ್ಯಾಪ್ತಿಯ ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿಗೆ ಸೇರಿದ ಕಾನ್‌ಬೈಲ್ ರಸ್ತೆಯ ಸ್ಥಿತಿಯಿದು. ಈ ಮಾರ್ಗವಾಗಿ ಶಿರಂಗಾಲ, ಮಳ್ಳೂರು ಸೇರಿದಂತೆ ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲೂರು, ಹೆರೂರು, ಹಾದ್ರೆ ಹೆರೂರು ಮೂಲಕ ಬಸವನಹಳ್ಳಿಯಿಂದ ಕುಶಾಲನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದೆ.
ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಂದಾಜು 5,000 ಜನಸಂಖ್ಯೆ ಇದೆ. ಇನ್ನು ಬೆಳಗ್ಗೆ 8 ಗಂಟೆಗೆ ಮಡಿಕೇರಿಯಿಂದ ಸುಂಟಿಕೊಪ್ಪ, ಕೊಡಗರಹಳ್ಳಿ, ಅಂದಗೋವೆ, ಕಾನ್‌ಬೈಲ್, ಮಳ್ಳೂರು, ಕಲ್ಲೂರು, ಹೆರೂರು ಮಾರ್ಗವಾಗಿ ಬಸವನಹಳ್ಳಿ ಮೂಲಕ ಸಾರಿಗೆ ಸಂಸ್ಥೆಯ 1 ಬಸ್ ಕುಶಾಲನಗರ ತಲುಪಲಿದೆ. ಅಂತೆಯೇ ಅದೇ ಮಾರ್ಗವಾಗಿ ಸಂಜೆ ವೇಳೆಗೆ ಹಿಂದಿರುಗುತ್ತದೆ. ಈ ಬಸ್‌ನಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಜನರು ತಮ್ಮ ನಿತ್ಯ ಕೆಲಸಗಳಿಗೆ ತೆರಳುತ್ತಾರೆ. ಇನ್ನು ಈ ಗ್ರಾಮಕ್ಕೆ ಶಿಕ್ಷಣ ಸಂಸ್ಥೆಗಳ ಶಾಲಾ ವಾಹನಗಳು ಬರಲಿದ್ದು, ಗುಂಡಿ ಬಿದ್ದ ರಸ್ತೆಯಲ್ಲಿ ನಿತ್ಯ ಸಂಚರಿಸುವುದರಿಂದ ವಾಹನಗಳು ಆಗಿಂದಾಗ್ಗೆ ದುರಸ್ತಿಗೊಳ ಪಡುತ್ತಿವೆ.
ಈ ಗ್ರಾಮದಲ್ಲಿನ ನೂರಾರು ಜನರು ಕೃಷಿ, ಹೈನುಗಾರಿಕೆಯನ್ನು ಅವಲಂಬಿಸಿದ್ದಾರೆ. ಕೃಷಿ ಚಟುವಟಿಕೆಗೆ ಪೂರಕ ವಸ್ತುಗಳನ್ನು ಖರೀದಿಸಬೇಕಾದರೆ ಸುಂಟಿಕೊಪ್ಪ ಹೋಬಳಿ ಕೇಂದ್ರವನ್ನೇ ಅವಲಂಬಿಸಿದ್ದಾರೆ. ಆರೋಗ್ಯ ಸಮಸ್ಯೆ ಎದುರಾದಾಗ ತುರ್ತು ಚಿಕಿತ್ಸೆಗೂ ಸುಂಟಿಕೊಪ್ಪಕ್ಕೆ ಆಗಮಿಸಬೇಕಾಗಿದೆ. ಇಂತಹ ಸಂದರ್ಭದಲ್ಲಿ ವಾಹನಗಳಿಗೆ ದುಪ್ಪಟ್ಟು ಹಣ ನೀಡಿ ಬಡಕೂಲಿ ಕಾರ್ಮಿಕರು ಹಾಗೂ ಮಧ್ಯಮ ವರ್ಗದವರು ಬರುವುದು ಕಷ್ಟಸಾಧ್ಯ. ಅಲ್ಲದೆ ಸ್ವಂತ ವಾಹನಗಳನ್ನು ಹೊಂದಿರುವವರು ಗುಂಡಿ ಬಿದ್ದ ರಸ್ತೆಯಲ್ಲಿ ಸಂಚರಿಸಬೇಕಿರುವುದುರಿಂದ ವಾಹನಗಳು ಆಗಿಂದಾಗ್ಗೆ ದುರಸ್ತಿಗೊಳಪಡುತ್ತಿವೆ ಎಂಬುದು ಕೃಷಿಕರ ಅಳಲು.
ಗ್ರಾಮದಲ್ಲಿ ಪರಿಶಿಷ್ಟ ಜನಾಂಗದವರು ನೆಲೆಸಿದ್ದು, ಅವರ ಕಾಲನಿಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯು ಇದಾಗಿದೆ. ಈ ಭಾಗದ ನಿವಾಸಿಗಳಲ್ಲಿ ಆರೋಗ್ಯ ಸಮಸ್ಯೆ ಉಂಟಾದಲ್ಲಿ ಬಾಡಿಗೆ ವಾಹನಗಳಲ್ಲಿ ತೆರಳಲು ದುಪಟ್ಟು ಹಣ ನೀಡಬೇಕಾಗಿದೆ. ರಸ್ತೆ ದುರಸ್ತಿ ಸಂಬಂಧ ಗ್ರಾಮ ಪಂಚಾಯಿತಿಯ ಈ ಹಿಂದಿನ ಆಡಳಿತ ಮಂಡಳಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಲೋಕೋಪಯೋಗಿ ಇಲಾಖೆಗೆ ಪತ್ರ ಬರೆಯಲಾಯಿತಾದರೂ ಪ್ರಯೋಜನವಾಗಿಲ್ಲ ಎಂಬುದು ಗ್ರಾಮಸ್ಥರ ದೂರಾಗಿದೆ.
ಗ್ರಾಮವು ಹಾರಂಗಿ ಹಿನ್ನೀರಿನ ತಾಣವಾಗಿದ್ದು, ಪ್ರೇಕ್ಷಣೀಯ ಸ್ಥಳವಾಗಿದೆ. ಹೀಗಾಗಿ ಈ ಪ್ರದೇಶ ಪ್ರವಾಸಿಗರನ್ನು ಮನತಣಿಸಲಿದೆ. ಆದರೆ ಇದಕ್ಕೆ ಪೂರಕವಾದ ಮೂಲ ಸೌಲಭ್ಯಗಳನ್ನು ಸರ್ಕಾರ ಹಾಗೂ ಜಿಲ್ಲಾಡಳಿತ ಒದಗಿಸದ ಕಾರಣ ಪ್ರವಾಸಿಗರು ಇಲ್ಲಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗುತ್ತಿದೆ. ಈ ಬಗ್ಗೆ ಕ್ರಮ ವಹಿಸಿದಲ್ಲಿ ಗ್ರಾಮವು ಅಭಿವೃದ್ಧಿಗೊಳ್ಳಲಿದೆ ಎಂಬುದು ಇಲ್ಲಿನ ನಿವಾಸಿಗಳ ಅನಿಸಿಕೆ.
ರಸ್ತೆಯನ್ನು ಅಭಿವೃದ್ಧಿ ಪಡಿಸುವಂತೆ ಕೋರಿ ಗ್ರಾಮ ಪಂಚಾಯಿತಿಯ ಈ ಹಿಂದಿನ ಆಡಳಿತ ಮಂಡಳಿ ಹಾಗೂ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಆಡಳಿತ ಮಂಡಳಿ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಸಿದ ಬಳಿಕ ಸಂಬಂಧಿಸಿದ ಇಲಾಖೆಗಳೊಂದಿಗೆ ಹತ್ತಾರು ಪತ್ರ ವ್ಯವಹಾರ ನಡೆಸಲಾಯಿತು. ಆದರೆ ಆನೆಯ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎನ್ನುವಂತೆ ಅನುದಾನ ಮೀಸಲಿರಿಸಿದ್ದು, ಇದರಿಂದ ಕಾಮಗಾರಿ ನಿರ್ವಹಿಸುವುದು ಕಷ್ಟಸಾಧ್ಯ. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ರಸ್ತೆ ದುರಸ್ತಿ ಕಾರ್ಯಕ್ಕೆ ಹೆಚ್ಚಿನ ಅನುದಾನವನ್ನು ಮೀಸಲಿಡುವ ಮೂಲಕ ಪೂರ್ಣ ಪ್ರಮಾಣದಲ್ಲಿ ಕಾಮಗಾರಿ ನಿರ್ವಹಿಸಬೇಕು. ಇದರಿಂದ ಜನರಿಗೆ ಅನುಕೂಲವಾಗಲಿದೆ.
ಮಂದೋಡಿ ಜಗನ್ನಾಥ್ ಅಧ್ಯಕ್ಷ,
ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ
ಕಾನ್‌ಬೈಲ್ ವೃತ್ತದಿಂದ 300 ಮೀ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾರ್ಯ ಬಿಟ್ಟರೆ ರಸ್ತೆಯು ಸಂಪೂರ್ಣ ಕಿತ್ತು ಹೋಗಿದೆ. ಈ ರಸ್ತೆಯಲ್ಲಿ ಭಾರಿ ವಾಹನಗಳು ಸಂಚರಿಸುವುದರಿಂದ ರಸ್ತೆಯು ಸಂಪೂರ್ಣ ಗುಂಡಿಗಳಿಂದ ಕೂಡಿದೆ. ವಾಹನ ಸವಾರರು ಈ ರಸ್ತೆಯಲ್ಲಿ ವಾಹನಗಳನ್ನು ಚಲಾಯಿಸಬೇಕೆಂದರೆ ಹರಸಾಹಸ ಪಡಬೇಕಾಗಿದೆ. 2013ರಲ್ಲಿ ರಸ್ತೆಯನ್ನು ಡಾಂಬರೀಕರಣಗೊಳಿಸಲಾಗಿತ್ತು. ನಂತರದ ದಿನಗಳಲ್ಲಿ ರಸ್ತೆ ಡಾಂಬರೀಕರಣಗೊಂಡಿಲ್ಲ. ಅಂದಾಜು 3 ಕಿ.ಮೀ. ರಸ್ತೆ ಸಂಪೂರ್ಣ ಕಿತ್ತು ಹೋಗಿದ್ದು, ಸಮಸ್ಯೆಯ ಗಂಭೀರತೆಯನ್ನು ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತರಲಾಯಿತಾದರೂ ಅದನ್ನು ದುರಸ್ತಿಗೊಳಿಸುವ ಕಾರ್ಯಕ್ಕೆ ಮುಂದಾಗದಿರುವುದು ವಿಷಾದನೀಯ. ಮಳೆಗಾಲ ಆರಂಭಕ್ಕೂ ಮುನ್ನ ಕಾಮಗಾರಿಯನ್ನು ನಿರ್ವಹಿಸುವ ಮೂಲಕ ಅನಾಹುತಗಳನ್ನು ತಡೆಗಟ್ಟಬೇಕು.
ಪಿ.ಎಂ.ಬಿಜು ಮಳ್ಳೂರು ಗ್ರಾಮಸ್ಥ
ಈ ಗ್ರಾಮದಲ್ಲಿ ಹೆಚ್ಚು ಜನರು ಕೃಷಿಯನ್ನೇ ಅವಲಂಬಿಸಿದ್ದಾರೆ. ಈ ಭಾಗದಲ್ಲಿ ಕಾಫಿ, ಕರಿಮೆಣಸು, ಭತ್ತ, ಶುಂಠಿ, ಕೆಸ, ಕೆನ್ನೆ, ಆಲೂಗೆಡ್ಡೆ, ಗೆಣಸು ಸೇರಿದಂತೆ ಇತರ ಕೃಷಿಯನ್ನು ನಿರ್ವಹಿಸಲಾಗುತ್ತಿದೆ. ಈ ಭಾಗದ ಕೃಷಿ ಚಟುವಟಿಕೆಗಳಿಗೆ ಬೇಕಾದ ಕೃಷಿ ಸಾಮಗ್ರಿಗಳನ್ನು ಖರೀದಿಸಲು ಸುಂಟಿಕೊಪ್ಪ ಹೋಬಳಿ ಕೇಂದ್ರಕ್ಕೆ ತೆರಳಬೇಕಿದೆ. ಹದಗೆಟ್ಟ ರಸ್ತೆಯಲ್ಲಿ ಸಂಚರಿಸಲು ಕಷ್ಟಸಾಧ್ಯ. ಶೀಘ್ರ ಈ ರಸ್ತೆಯನ್ನು ದುರಸ್ತಿಪಡಿಸುವ ಸಂಬಂಧ ಇಲಾಖೆಯವರು ಕ್ರಮ ವಹಿಸಲಿ.
ನಂಜೇಗೌಡ ಕೃಷಿಕ, ಹೆರೂರು ಗ್ರಾಮ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net