ಜೀವನದಿ ಒಡಲಿಗೆ ತ್ಯಾಜ್ಯದ ವಿಷ

ಕುಶಾಲನಗರದಲ್ಲಿ ಕಾವೇರಿ ನದಿ ದಂಡೆಯಲ್ಲಿ ತ್ಯಾಜ್ಯ ಎಸೆದಿರುವುದು
ಕುಶಾಲನಗರದಲ್ಲಿ ಕಾವೇರಿ ನದಿ ದಂಡೆಯಲ್ಲಿ ತ್ಯಾಜ್ಯ ಎಸೆದಿರುವುದು
Published on
ಮಡಿಕೇರಿ:
ಕನ್ನಡ ನಾಡಿನ ಜೀವನದಿ ಎಂದು ಕರೆಯಿಸಿಕೊಳ್ಳವ ಕಾವೇರಿ ಮೂಲದಲ್ಲೇ ಮಲೀನ ಆಗುತ್ತಿದೆ. ನದಿಯ ಉಗಮ ಸ್ಥಾನ ತಲಕಾವೇರಿಯಿಂದ ಕೇವಲ 8 ಕಿಮೀ ದೂರದ ಭಾಗಮಂಡಲದಲ್ಲೇ ಮನೆಗಳ ಶೌಚಗೃಹದ ನೀರು ನೇರವಾಗಿ ಕಾವೇರಿಗೆ ಬರುತ್ತಿದೆ. ತಲಕಾವೇರಿಯಿಂದ ಕೊಡಗಿನ ಗಡಿಭಾಗ ಶಿರಂಗಾಲದ ತನಕ ಒಟ್ಟು 23 ಗ್ರಾಮ ಪಂಚಾಯಿತಿಗಳು ಮತ್ತು ಒಂದು ಪುರಸಭೆ ಕಾವೇರಿ ನದಿ ದಂಡೆಯಲ್ಲಿದೆ. ನಾಪೋಕ್ಲು, ಸಿದ್ದಾಪುರ, ಕುಶಾಲನಗರ, ಕೂಡಿಗೆ ಸೇರಿದಂತೆ ದೊಡ್ಡ ದೊಡ್ಡ ಊರುಗಳು ಕಾವೇರಿ ಮತ್ತು ಅದರ ಉಪನದಿಗಳ ದಡದಲ್ಲಿದ್ದು, ನದಿ ಮಾಲೀನ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿವೆ.
ಕುಶಾಲನಗರದಲ್ಲಿರುವ ಕೈಗಾರಿಕಾ ಪ್ರದೇಶದಲ್ಲಿನ ವಿವಿಧ ಕೈಗಾರಿಕೆಗಳ ರಾಸಾಯನಿಕಯುಕ್ತ ವಿಷಕಾರಿ ತ್ಯಾಜ್ಯವೂ ಯಾವುದೇ ಶುದ್ಧೀಕರಣ ಮಾಡದೆ ನದಿಗೆ ಹರಿಸಲಾಗುತ್ತಿದೆ. ನದಿ ಪಾತ್ರದ ಕೃಷಿ ಭೂಮಿ ಹಾಗೂ ತೋಟಗಳಲ್ಲಿ ಬೆಳೆಗಳಿಗೆ ಅತಿಯಾಗಿ ಬಳಸುವ ರಾಸಾಯನಿಕ ಗೊಬ್ಬರಗಳು ಮತ್ತು ಕೀಟನಾಶಕಗಳು ಕೂಡ ನದಿಗಳ ಪಾಲಿಗೆ ಕಂಟಕವಾಗಿವೆ.
ನದಿ ತೀರದ ಪ್ರವಾಸಿ ತಾಣಗಳು, ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವ ಪ್ರವಾಸಿಗರು ಪ್ಲಾಸ್ಟಿಕ್ ಬಾಟಲಿಗಳು, ಕಸ ಹಾಗೂ ಹಳೇ ಬಟ್ಟೆಗಳನ್ನು ನದಿಗೆ ಎಸೆಯುವುದು, ನದಿಯ ಪಾತ್ರದಲ್ಲಿ ಅವಿಶ್ರಾಂತವಾಗಿ ನಡೆಯುವ ಮರಳುಗಾರಿಕೆಯಿಂದಾಗಿ ನದಿಯ ಸ್ವಾಭಾವಿಕ ಶುದ್ಧೀಕರಣ ಸಾಮರ್ಥ್ಯ ಕಡಿಮೆಯಾಗುತ್ತಿದ್ದು, ನೀರಿನ ಹರಿವಿನ ಹಾದಿಯೂ ತಪ್ಪುತ್ತಿದೆ.
ನದಿ ತೀರದ ಎಲ್ಲಾ ಪ್ರಮುಖ ನಗರ ಮತ್ತು ಪಟ್ಟಣಗಳಲ್ಲಿ ಕಡ್ಡಾಯವಾಗಿ ಕೊಳಚೆ ನೀರು ಸಂಸ್ಕರಣಾ ಘಟಕಗಳನ್ನು ಸ್ಥಾಪಿಸುವುದು, ಮನೆ ಹಾಗೂ ವಾಣಿಜ್ಯ ಸಂಕೀರ್ಣಗಳ ನೀರನ್ನು ಶುದ್ಧೀಕರಿಸಿದ ನಂತರವಷ್ಟೇ ನದಿಗೆ ಬಿಡುವುದು, ಕೈಗಾರಿಕೆಗಳು ತಮ್ಮ ರಾಸಾಯನಿಕ ತ್ಯಾಜ್ಯವನ್ನು ನದಿಗೆ ಹರಿಸದಂತೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕಠಿಣ ಕ್ರಮ ಜರುಗಿಸುವುದು, ಸಾವಯವ ಕೃಷಿಗೆ ಆದ್ಯತೆ, ಪ್ರವಾಸಿ ತಾಣಗಳಲ್ಲಿ ಕಟ್ಟುನಿಟ್ಟಿನ ನಿಯಮ, ನದಿ ತೀರದಲ್ಲಿ ಅರಣ್ಯೀಕರಣ ಮತ್ತಿತರ ಕ್ರಮಗಳಿಂದ ನದಿ ಮಾಲಿನ್ಯವನ್ನು ನಿಯಂತ್ರಿಸಬಹುದಾಗಿದೆ.
"

ಮನೆಗಳ ಶೌಚಗೃಹದ ಮಲೀನ ನೀರನ್ನು ಯಾವುದೇ ಸಂಸ್ಕರಣೆಯಿಲ್ಲದೆ ನೇರವಾಗಿ ಚರಂಡಿಗೆ ಬಿಡುವುದು ಗಂಭೀರ ಪರಿಸರ ಸಮಸ್ಯೆಯಾಗಿದೆ. ಈ ನೀರು ಕಾವೇರಿ ನದಿಗೆ ಸೇರುವುದರಿಂದ ಜಲಮಾಲಿನ್ಯ ಹೆಚ್ಚುತ್ತಿದ್ದು, ಜೀವವೈವಿಧ್ಯ ಹಾಗೂ ಸಾರ್ವಜನಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಸ್ಥಳೀಯ ಸಂಸ್ಥೆಗಳು ತಕ್ಷಣವೇ ಒಳಚರಂಡಿ ಸಂಸ್ಕರಣಾ ವ್ಯವಸ್ಥೆ ಕಲ್ಪಿಸಬೇಕು.

— ಸಿ.ಎಸ್. ಧರ್ಮಪ್ಪ, ಕೃಷಿಕ, ಚಿಕ್ಕತೋಳೂರು ಗ್ರಾಮ

"

ಕಾವೇರಿ ನಮ್ಮ ಜೀವನದಿ ಮತ್ತು ಹೆಮ್ಮೆಯ ಸಂಕೇತ. ಅದರ ತವರಿನಲ್ಲೇ ಮಲೀನ ನೀರು ಸೇರುತ್ತಿರುವುದು ವಿಷಾದನೀಯ. ಸರ್ಕಾರ ಮತ್ತು ಸ್ಥಳೀಯ ಆಡಳಿತ ಶಾಶ್ವತ ಪರಿಹಾರಕ್ಕೆ ಮುಂದಾಗಬೇಕು. ಸಾರ್ವಜನಿಕರೂ ಮಲೀನ ನೀರನ್ನು ಸರಿಯಾಗಿ ವಿಲೇವಾರಿ ಮಾಡುವ ಜವಾಬ್ದಾರಿ ಅರಿತು ನದಿಯನ್ನು ಸಂರಕ್ಷಿಸಲು ಕೈಜೋಡಿಸಬೇಕು.

— ಶೀಲಾ ಡಿಸೋಜ, ಮಾಜಿ ಉಪಾಧ್ಯಕ್ಷೆ, ಪಟ್ಟಣ ಪಂಚಾಯಿತಿ, ಸೋಮವಾರಪೇಟೆ

"

ಶೌಚಗೃಹದ ನೀರು ಹಾಗೂ ಗ್ರಾಮದ ಕೊಳಚೆ ನೀರು ತೋಡುಗಳ ಚರಂಡಿ ಮೂಲಕ ತೋಡುಗಳಲ್ಲಿ ಹರಿದು ಕೃಷಿಭೂಮಿಗಳಿಗೂ ಬರುತ್ತಿದೆ. ಇದರಿಂದಾಗಿ ಕೃಷಿ ಚಟುವಟಿP ಸಂದರ್ಭದಲ್ಲಿ ತುರಿಕೆ ಕೆಸರು ರೋಗಗಳು ಬಾಧಿಸುತ್ತಿವೆ. ಹಾಗಾಗಿ ಕೃಷಿ ಕಾರ್ಮಿಕರು ಕೃಷಿ ಚಟುವಟಿಕೆಗಳನ್ನು ನಿರ್ವಹಿಸಲು ಹಿಂದೇಟು ಹಾಕುತ್ತಿದ್ದಾರೆ. ನಮ್ಮ ದೇಹಗಳಿಗೆ ವಿವಿಧ ರೋಗ ಹರಡುವ ಭೀತಿ ಇದೆ. ನದಿಮೂಲಗಳಿಗೂ ಇದರಿಂದ ಅಪಾಯ ತಪ್ಪಿದ್ದಲ್ಲ.

— ಪಟ್ಟೆಮನೆ ಪಿ. ಉದಯಕುಮಾರ್, ಕೃಷಿಕ, ಸುಂಟಿಕೊಪ್ಪ

"

ಸ್ವಚ್ಛ ಭಾರತ ನಿರ್ಮಾಣ ಆಗಬೇಕಾದರೆ ನಮ್ಮ ನಮ್ಮ ಮನೆಗಳಿಂದ ಆಗಬೇಕು. ಮನೆಯ ಸುತ್ತಮುತ್ತ ಸ್ವಚ್ಛವಾಗಿರಬೇಕು. ಸ್ನಾನದ ಮನೆಯ ನೀರು, ಚರಂಡಿ ಮೂಲಕ ನದಿಗೆ ಸೇರುತ್ತಿರುವುದು ವಿಷಾಧಕರ. ಇದು ಮಾನವನ ನಿರ್ಲಕ್ಷ್ಯಕ್ಕೆ ಸಾಕ್ಷಿ. ಇಂಗು ಗುಂಡಿಗಳ ನಿರ್ಮಾಣ, ಶೌಚಗೃಹದ ನೀರು ಹೋಗಲು ಪಿಟ್‌ಗಳನ್ನು ಮಾಡಬೇಕಾಗುತ್ತದೆ. ಸರಿಯಾಗಿ ನಿರ್ವಹಣೆ ಕೂಡ ಮಾಡುವುದು ನಾಗರಿಕನ ಕರ್ತವ್ಯ. ನದಿಗಳು ಸಾಕಷ್ಟು ಜಲಚರಗಳಿಗೆ ಆಸರೆ. ಮನುಷ್ಯನ ಬೇಜವಾಬ್ದಾರಿತನದಿಂದ ಅವುಗಳ ಜೀವಕ್ಕೆ ಕುತ್ತು ಬರುತ್ತದೆ. ನಾವು ಕುಡಿಯುವ ನೀರಿಗೆ ಮಲದ ಸೇರ್ಪಡೆ, ಮತ್ತೆ ಅದೇ ನೀರು ಬಳಸುವ ನಾವೇ ಯೋಚಿಸಿ ನಿರ್ಧರಿಸಬೇಕು.

— ಪ್ರಶಾಂತ್ ಮುತ್ತಣ್ಣ ಕೋಳಿಮಾಡು, ಪ್ರಶಾಂತವನ, ಬಲಮುರಿ

"

ಕಾವೇರಿ ನದಿ ಮೂಲದಲ್ಲೇ ಮಲೀನ ಆಗುತ್ತಿರುವುದು ಆತಂಕದ ವಿಷಯ. ಇದನ್ನು ತಪ್ಪಿಸಲು ಎಲ್ಲರ ಸಾಮೂಹಿಕ ಜವಾಬ್ದಾರಿಯೂ ಇದೆ. ತ್ಯಾಜ್ಯಗಳನ್ನು ನದಿ ಮೂಲಗಳಿಗೆ ಸೇರದಂತೆ ತಡೆಯಲು ಆದಷ್ಟು ಮುನ್ನೆಚ್ಚರಿಕೆ ವಹಿಸಬೇಕು. ತ್ಯಾಜ್ಯ ನೀರು ನದಿಗಳಿಗೆ ಸೇರುವುದಕ್ಕೆ ಮೊದಲು ಸ್ಥಳೀಯ ಆಡಳಿತಗಳು ಆ ನೀರಿನ ಸಂಸ್ಕರಣೆ ಮಾಡಬೇಕು. ನದಿಗಳು ಪ್ರಕೃತಿಯ ಅಮೂಲ್ಯ ಸಂಪತ್ತು. ಇದನ್ನು ಶುದ್ಧ ರೂಪದಲ್ಲೇ ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕಿದೆ.

— ಎ.ಪಿ. ಡಾಟಿ, ಮಾಜಿ ಸದಸ್ಯೆ, ಗ್ರಾ.ಪಂ. ಗುಡ್ಡೆಹೊಸೂರು

"

ಕಾವೇರಿ ಸೇರಿದಂತೆ ನದಿಗಳ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ ಆಗಿದೆ. ನದಿಗಳಲ್ಲಿ ಉಂಟಾಗುತ್ತಿರುವ ಸಮಸ್ಯೆ ನಮ್ಮ ಗಮನಕ್ಕೆ ಬಂದಿದೆ. ಮಾಲಿನ್ಯ ತಡೆಗಟ್ಟಲು ಅಗತ್ಯವಿರುವ ಎಲ್ಲಾ ಕೆಲಸಗಳನ್ನು ಮಾಡಲಾಗುತ್ತಿದೆ. ಕುಶಾಲನಗರದಲ್ಲಿ ಒಳಚರಂಡಿ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಸದ್ಯದಲ್ಲೇ ಕಾರ್ಯಾರಂಭವಾಗಲಿದೆ. ಇದರಿಂದ ಈ ಭಾಗದಲ್ಲಿ ಉಂಟಾಗುತ್ತಿದ್ದ ನದಿ ಮಾಲಿನ್ಯಕ್ಕೆ ದೊಡ್ಡ ಮಟ್ಟದ ಕಡಿವಾಣ ಬೀಳಲಿದೆ.

— ಡಾ. ಮಂತರ್ ಗೌಡ, ಮಡಿಕೇರಿ ಶಾಸಕ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net