ಪ್ರಸಿದ್ಧ ಪ್ರವಾಸಿತಾಣ ದುಬಾರೆ ಸಾಕಾನೆ ಶಿಬಿರದಲ್ಲಿ ಸೋಮವಾರ 2 ಆನೆಗಳ ನಡುವೆ ನಡೆದ ಕಾದಾಟದ ಸಂದರ್ಭ ತಮಿಳುನಾಡಿನ ಪ್ರವಾಸಿ ಮಹಿಳೆಯೊಬ್ಬರು ದುರ್ಮರಣಕ್ಕೆ ಈಡಾಗಿದ್ದಾರೆ. ತಿರುಚಿನಾಪಳ್ಳಿ ಮೂಲದ ಚೆನ್ನೆöÊನಲ್ಲಿ ಉದ್ಯೋಗದಲ್ಲಿದ್ದ ಎಸ್. ಜುನಿಶಿ (33) ಮೃತ ಮಹಿಳೆ. ಘಟನೆಯಲ್ಲಿ ಇವರ ಪತಿ ಜೋಯಲ್ ಅವರಿಗೂ ಗಾಯಗಳಾಗಿವೆ. ಪುತ್ರಿ ಜತೆಯಲ್ಲಿ ಪ್ರವಾಸ ಬಂದಿದ್ದ ದಂಪತಿ ಬೆಳಗ್ಗೆ ಕುಶಾಲನಗರ ತಾಲೂಕು ದುಬಾರೆ ಸಾಕಾನೆ ಶಿಬಿರಕ್ಕೆ ತೆರಳಿದ್ದರು. ಈ ಸಂದರ್ಭ ಆನೆಗಳನ್ನು ಸ್ನಾನ ಮಾಡಿಸುವ ಚಟುವಟಿಕೆಗೆ ತಲಾ 300 ರೂ. ಟಿಕೆಟ್ ಖರೀದಿಸಿ ಆನೆಗಳನ್ನು ಸ್ನಾನ ಮಾಡಿಸುವ ಅನುಭವ ತಮ್ಮದಾಗಿಸಿಕೊಳ್ಳಲು ಕಾವೇರಿ ನದಿಗೆ ಇಳಿದು ಫೋಟೋಗಳನ್ನು ತೆಗೆಯುತ್ತಾ ನಿಂತಿದ್ದಾರೆ. ಈ ವೇಳೆ ನದಿಗೆ ಸ್ನಾನಕ್ಕೆಂದು ಕರೆತಂದಿದ್ದ ಸಾಕಾನೆಗಳಾದ ಕಂಜನ್ ಮತ್ತು ಮಾರ್ತಾಂಡ ಆನೆಗಳು ಪರಸ್ಪರ ಕಾದಾಟ ನಡೆಸಿವೆ. ಆನೆಗಳು ಕಾದಾಟ ನಡೆಸುವಾಗ ಮಾರ್ತಾಂಡ ಆನೆ ಆಯತಪ್ಪಿ ಕೆಳಕ್ಕೆ ಬಿದ್ದಿದೆ. ಅಲ್ಲಿಯೇ ಇದ್ದ ಜುನಿಶಿ ಮಾರ್ತಾಂಡ ಆನೆ ಕೆಳಕ್ಕೆ ಸಿಲುಕಿದ್ದಾರೆ. ಕೂಡಲೇ ಮಾರ್ತಾಂಡ ಆನೆಯನ್ನು ಎಬ್ಬಿಸಿ ಜುನಿಶಿ ಅವರನ್ನು ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ರ‍್ಯಾಫ್ಟಿಂಗ್ ಸಿಬ್ಬಂದಿ ಸಹಾಯದಿಂದ ಕುಶಾಲನಗರದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ತಲೆ ಮತ್ತು ಎದೆಯ ಭಾಗಕ್ಕೆ ತೀವ್ರ ಗಾಯಗಳಾಗಿದ್ದ ಅವರು ಮೃತಪಟ್ಟಿದ್ದಾರೆ. ಪತಿ ಜೋಯಲ್‌ಗೂ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಪುತ್ರಿ ಸ್ವಲ್ಪದರಲ್ಲೇ ಪಾರಾಗಿದ್ದು ಸುರಕ್ಷಿತವಾಗಿದ್ದಾಳೆ. ಘಟನೆ ಸಂಬAಧ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.ಈ ಮಧ್ಯೆ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಆಸ್ಪತ್ರೆಗೆ ಭೇಟಿ ನೀಡಿ ಜೋಯಲ್ ಮತ್ತು ಪುತ್ರಿಗೆ ಸಾಂತ್ವನ ಹೇಳಿದರು. ಮುಂದಿನ ಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಭವಿಷ್ಯದಲ್ಲಿ ಇಂಥ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸುವಂತೆ ಸ್ಥಳದಲ್ಲಿ ಇದ್ದ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಮಡಿಕೇರಿ ವಿಭಾಗದ ಉಪ ಅರಣ್ಯಸಂರಕ್ಷಣಾಧಿಕಾರಿ ಅಭಿಷೇಕ್, ಕುಶಾಲನಗರ ಆರ್‌ಎಫ್‌ಒ ರಕ್ಷಿತ್ ಮತ್ತಿತರರು ಇದ್ದರು.