ಹಿಂದೂ ಜಾಗರಣ ವೇದಿಕೆಯಿಂದ ಪಂಜಿನ ಮೆರವಣಿಗೆ

ಸ್ವಾತಂತ್ರ‍್ಯೋತ್ಸವದ ಹಿನ್ನೆಲೆಯಲ್ಲಿ ಹಿಂದೂ ಜಾಗರಣ ವೇದಿಕೆ ವತಿಯಿಂದ ಮಡಿಕೇರಿಯಲ್ಲಿ ಪಂಜಿನ ಮೆರವಣಿಗೆ ನಡೆಯಿತು.
ಸ್ವಾತಂತ್ರ‍್ಯೋತ್ಸವದ ಹಿನ್ನೆಲೆಯಲ್ಲಿ ಹಿಂದೂ ಜಾಗರಣ ವೇದಿಕೆ ವತಿಯಿಂದ ಮಡಿಕೇರಿಯಲ್ಲಿ ಪಂಜಿನ ಮೆರವಣಿಗೆ ನಡೆಯಿತು.
Published on
ಮಡಿಕೇರಿ:
ಸ್ವಾತಂತ್ರ‍್ಯೋತ್ಸವದ ಹಿನ್ನೆಲೆಯಲ್ಲಿ ಹಿಂದೂ ಜಾಗರಣ ವೇದಿಕೆ ವತಿಯಿಂದ ಶುಕ್ರವಾರ ಸಂಜೆ ಸುರಿವ ಮಳೆಯ ಮಧ್ಯೆಯೇ ಪಂಜಿನ ಮೆರವಣಿಗೆ ನಡೆಸಲಾಯಿತು. ಅಖಂಡ ಭಾರತ ಸಂಕಲ್ಪ ದಿನದ ಪ್ರತಿಜ್ಞೆ ಮಾಡಿ ಜಿಲ್ಲೆಯ 6 ಕಡೆಗಳಲ್ಲಿ ನಡೆಯಲಿರುವ ಪಂಜಿನ ಮೆರವಣಿಗೆಗೆ ಇದೇ ಸಂದರ್ಭದಲ್ಲಿ ಚಾಲನೆ ನೀಡಲಾಯಿತು. ಇಲ್ಲಿನ ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸುವುದರ ಮೂಲಕ ಅರಂಭವಾದ ಪಂಜಿನ ಮೆರವಣಿಗೆಯಲ್ಲಿ ಮಡಿಕೇರಿ ಮಾತ್ರವಲ್ಲದೆ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ ದೇವಾಲಯದ ಬಳಿಯಿಂದ ಆರಂಭವಾದ ಪಂಜಿನ ಮೆರವಣಿಗೆ ರಾಜಾಸೀಟ್ ಮಾರ್ಗವಾಗಿ ಜ. ತಿಮ್ಮಯ್ಯ ವೃತ್ತ, ಅಂಚೆ ಕಚೇರಿ, ಕಾಲೇಜು ರಸ್ತೆಗಾಗಿ ಸಾಗಿ ಕಾವೇರಿ ಹಾಲ್ ತಲುಪಿತು. ಸುಮಾರು 2 ಕಿ.ಮೀ. ದೂರ ನಡೆದ ಮೆರವಣಿಗೆಯಲ್ಲಿ 400ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು.
ನಂತರ ಕಾವೇರಿ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್‌ನ ಪ್ರಚಾರ ಪ್ರಮುಖ್ ಅರುಣ್‌ಕುಮಾರ್, ವೇದಿಕೆಯ ಪ್ರಾಂತ ಕಾರ್ಯಕಾರಿಣಿ ಸದಸ್ಯ ಅಜಿತ್ ಕುಕ್ಕೇರ, ಸಹ ಸಂಯೋಜಕ ಶರತ್, ವೇದಿಕೆಯ ಸಂಚಾಲಕ ಭೋಜೇಗೌಡ, ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಕೊಡಗು ಜಿಲ್ಲಾಧ್ಯಕ್ಷ ಸೋಮಣ್ಣ ಭಾಗವಹಿಸಿದ್ದರು.
ಶನಿವಾರ ಮಾದಾಪುರದಲ್ಲಿ ಅಖಂಡ ಭಾರತ ಸಂಕಲ್ಪ ದಿನದ ಪಂಜಿನ ಮೆರವಣಿಗೆ ಏರ್ಪಡಿಸಲಾಗಿತ್ತು. ಇಗ್ಗೋಡ್ಲು ಚಾಮುಂಡೇಶ್ವರಿ ದೇವಾಲಯದಿಂದ ಆರಂಭವಾದ ಪಂಜಿನ ಮೆರವಣಿಗೆ ಎಫ್‌ಎಂಸಿ ರಸ್ತೆಯ ಮೂಲಕ ಮಾದಾಪುರ ಪಟ್ಟಣಕ್ಕೆ ತೆರಳಿ ಸಂಜೆ ಗಣಪತಿ ದೇವಾಲಯದಲ್ಲಿ ಸಭಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಭಾನುವಾರ (ಆ.9) ಕೊಡ್ಲಿಪೇಟೆ, ಸೋಮವಾರ (ಆ.10) ಗೋಣಿಕೊಪ್ಪಲು, ಪೊನ್ನಂಪೇಟೆ, ಬುಧವಾರ (ಆ.12) ವಿರಾಜಪೇಟೆ ಹಾಗೂ ಆ.14ರಂದು ಕುಶಾಲನಗರದಲ್ಲಿ ಅಖಂಡ ಭಾರತ ಸಂಕಲ್ಪ ದಿನ ಕಾರ್ಯಕ್ರಮ ಏರ್ಪಡಿಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net