ಕಾಳುಮೆಣಸು ಕಳ್ಳತನ ಮಾಡಿದ್ದ ಮೂವರ ಬಂಧನ

ಕಾಳುಮೆಣಸು ಕಳ್ಳತನ ಪ್ರಕರಣದ ಬಂಧಿತ ಮೂವರು ಆರೋಪಿಗಳೊಂದಿಗೆ  ವಿರಾಜಪೇಟೆ ಗ್ರಾಮಾಂತರ ಪೊಲೀಸರು. ಠಾಣಾಧಿಕಾರಿ ಎನ್.ಜೆ.ಲತಾ,  ವಾಣಿಶ್ರೀ, ನವೀನ್, ಮಜೀದ್, ಅನೀಫ್, ಬಸವರಾಜು, ಶಿವರಾಜು ಇದ್ದರು
ಕಾಳುಮೆಣಸು ಕಳ್ಳತನ ಪ್ರಕರಣದ ಬಂಧಿತ ಮೂವರು ಆರೋಪಿಗಳೊಂದಿಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು. ಠಾಣಾಧಿಕಾರಿ ಎನ್.ಜೆ.ಲತಾ, ವಾಣಿಶ್ರೀ, ನವೀನ್, ಮಜೀದ್, ಅನೀಫ್, ಬಸವರಾಜು, ಶಿವರಾಜು ಇದ್ದರು
Published on

ಪ್ರಮುಖ ಮುಖ್ಯಾಂಶಗಳು

  • ಕಣ್ಣಂಗಾಲ ಕಾಫಿ ತೋಟದಲ್ಲಿ 300 ಕೆ.ಜಿ. ಕಳವು ಪ್ರಕರಣ
ಸಿದ್ದಾಪುರ: ಕಾಳುಮೆಣಸು ಕಳ್ಳತನ ಮಾಡಿದ್ದ ಮೂವರು ಆರೋಪಿಗಳನ್ನು ಮಂಗಳವಾರ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ತಿತಿಮತಿ ನೋಕ್ಯ ಗ್ರಾಮದ, ಪ್ರಸ್ತುತ ಪೆರುಂಬಾಡಿ ಆರ್ಜಿ ಗ್ರಾಮದ ನಿವಾಸಿ ಕೆ.ಬಿ.ಶಫೀಕ್(28), ಪೆರುಂಬಾಡಿ ಆರ್ಜಿ ಗ್ರಾಮದ ದರ್ಶನ್ ನಾಯಕ್(25) ಹಾಗೂ ಮೈಸೂರು ಮೂಲದ ಪ್ರಸ್ತುತ ಕೇರಳ ಮಾನಂದವಾಡಿ ಎಡಪ್ಪಾಡಿಯ ನಿವಾಸಿ ಮೊಹಮ್ಮದ್ ಶಾಕೀರ್(31) ಬಂಧಿತರು.
ಅಮ್ಮತ್ತಿ ಸಮೀಪದ ಕಣ್ಣಂಗಾಲ ಗ್ರಾಮದ ನಿವಾಸಿ ಲೆಹರ್ ಗಣಪತಿ ಅವರ ಕಾಫಿ ತೋಟದಲ್ಲಿ 300 ಕೆ.ಜಿ. ಕಾಳುಮೆಣಸು ದಾಸ್ತಾನು ಇಡಲಾಗಿತ್ತು. ಮಾ.9ರಂದು ತೋಟದಲ್ಲಿದ್ದ ಕರಿಮೆಣಸು ಚೀಲ ಕಣ್ಮರೆಯಾಗಿದ್ದು, ಕಾರ್ಮಿಕರನ್ನು ವಿಚಾರಿಸಿದರೂ ಸುಳಿವು ಸಿಕ್ಕಿರಲಿಲ್ಲ. ಮಾಲೀಕರು ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಹುಣಸೂರು ತಾಲೂಕಿನ ಪಂಚವಳ್ಳಿಯಲ್ಲಿ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದರು. ತನಿಖೆ ವೇಳೆ ಆರೋಪಿಗಳು ಕಳ್ಳತನ ಮಾಡಿದ ಕಾಳುಮೆಣಸನ್ನು ಕೇರಳ ರಾಜ್ಯದಲ್ಲಿ 215 ಕೆ.ಜಿ. ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.
ಕಳ್ಳತನಕ್ಕೆ ಬಳಸಿದ್ದ ಎರಡು ಕಾರುಗಳು, ಒಂದು ಬೈಕನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ತನಿಖೆಯಲ್ಲಿ ಆರೋಪಿಗಳ ವಿರುದ್ಧ ಹುಣಸೂರು ನಗರ ಠಾಣೆಯಲ್ಲಿ ಬೈಕ್ ಕಳ್ಳತನ, ಸುಂಟಿಕೊಪ್ಪ ಠಾಣೆಯಲ್ಲಿ 75 ಕೆ.ಜಿ. ಕಾಳುಮೆಣಸು ಕಳ್ಳತನ ಹಾಗೂ ಕಾರು ಕಳ್ಳತನ ಪ್ರಕರಣಗಳು ದಾಖಲಾಗಿರುವುದು ಬೆಳಕಿಗೆ ಬಂದಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಮಾರ್ಗದರ್ಶನದಲ್ಲಿ ವಿರಾಜಪೇಟೆ ಡಿವೈಎಸ್ಪಿ ಮಹೇಶ್ ಕುಮಾರ್, ವೃತ್ತ ನಿರೀಕ್ಷಕ ಪಿ. ಅನೂಪ್ ಮಾದಪ್ಪ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ವಿರಾಜಪೇಟೆ ಗ್ರಾಮಾಂತರ ಠಾಣಾಧಿಕಾರಿ ಎನ್.ಜೆ.ಲತಾ, ಅಪರಾಧ ವಿಭಾಗದ ಪಿಎಸ್‌ಐ. ವಾಣಿಶ್ರೀ, ಕಾನ್‌ಸ್ಟೆಬಲ್ ನವೀನ್, ಮಜೀದ್, ಅನೀಫ್, ಬಸವರಾಜು, ಶಿವರಾಜು, ಎಸ್.ಮಹೇಶ್ , ರಾಜೇಶ್, ರಾಘವೇಂದ್ರ, ಪ್ರಸಾದ್ ಶಶಿಧರ, ಮಹೇಶ್ ಸಾರವಾಡ, ಗಿರೀಶ್ ಭಾಗವಹಿಸಿದ್ದರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net