ವೈಚಾರಿಕ, ಧಾರ್ಮಿಕ ವಿಷಯಗಳು ಸಾಹಿತ್ಯದ ಮೂಲಕ ನೀಡಿದವರು ಕುವೆಂಪು

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ದಿ. ಗಂಗಮ್ಮ ರಾಚಪ್ಪ ದತ್ತಿನಿಧಿ ಕಾರ್ಯಕ್ರಮದ ಕುವೆಂಪು ಗೀತ ಗಾಯನ ಮತ್ತು ಉಪನ್ಯಾಸ ಕಾರ್ಯಕ್ರಮವನ್ನು ಹಿರಿಯ ಪತ್ರಕರ್ತ ಜಿ. ಚಿದ್ವಿಲಾಸ್ ಉದ್ಘಾಟಿಸಿದರು. ಸ್ನೇಹ ಬಸಮ್ಮ, ಕೆ.ಪಿ. ಚಂದ್ರಕಲಾ, ಕೇಶವ ಕಾಮತ್, ಮಾಲಾದೇವಿ, ಟಿ.ಪಿ. ರಮೇಶ್, ವೆಂಕಟ್‌ನಾಯಕ್, ರೇವತಿ ರಮೇಶ್ ಇದ್ದರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ದಿ. ಗಂಗಮ್ಮ ರಾಚಪ್ಪ ದತ್ತಿನಿಧಿ ಕಾರ್ಯಕ್ರಮದ ಕುವೆಂಪು ಗೀತ ಗಾಯನ ಮತ್ತು ಉಪನ್ಯಾಸ ಕಾರ್ಯಕ್ರಮವನ್ನು ಹಿರಿಯ ಪತ್ರಕರ್ತ ಜಿ. ಚಿದ್ವಿಲಾಸ್ ಉದ್ಘಾಟಿಸಿದರು. ಸ್ನೇಹ ಬಸಮ್ಮ, ಕೆ.ಪಿ. ಚಂದ್ರಕಲಾ, ಕೇಶವ ಕಾಮತ್, ಮಾಲಾದೇವಿ, ಟಿ.ಪಿ. ರಮೇಶ್, ವೆಂಕಟ್‌ನಾಯಕ್, ರೇವತಿ ರಮೇಶ್ ಇದ್ದರು.
Published on
ಮಡಿಕೇರಿ:
ವೈಚಾರಿಕ ಮತ್ತು ಧಾರ್ಮಿಕ ವಿಚಾರಗಳನ್ನು ಸಮತೋಲನೆಯಿಂದ ಗಮನಿಸಿ ಅದನ್ನು ಸಾಹಿತ್ಯದ ಮೂಲಕ ನಮಗೆ ನೀಡಿದವರು ಕುವೆಂಪು ಎಂದು ಹಿರಿಯ ಪತ್ರಕರ್ತ ಚಿದ್ವಿಲಾಸ್ ಹೇಳಿದರು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಈಚೆಗೆ ಏರ್ಪಡಿಸಿದ್ದ ದಿ. ಗಂಗಮ್ಮ ರಾಚಪ್ಪ ದತ್ತಿನಿಧಿ ಕಾರ್ಯಕ್ರಮದ ಕುವೆಂಪು ಗೀತ ಗಾಯನ ಮತ್ತು ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕನ್ನಡ ಸಾಹಿತ್ಯದಲ್ಲಿ ಇರುವಷ್ಟು ಭಾವಗೀತೆ, ಜಾನಪದ ಗೀತೆ, ದಾಸರ ಪದ, ವಚನಗಳು ಇನ್ಯಾವುದೇ ಭಾಷೆಯಲ್ಲಿ ಇಲ್ಲ. ಇವೆಲ್ಲವನ್ನೂ ಕೂಡಿರುವ ಸುಗಮ ಸಂಗೀತ ಬದುಕಿಗೆ ಹತ್ತಿರವಾದಂಥ ಅರ್ಥವನ್ನು ಹೇಳುವ ಸಾಹಿತ್ಯದ ಮೂಲಕ ಭಾವನೆಗಳನ್ನು ಉತ್ಪತ್ತಿ ಮಾಡುವಂತಹ ಕಾರ್ಯಕ್ರಮಗಳನ್ನು ಕನ್ನಡ ಸಾಹಿತ್ಯ ಪರಿಷತ್ತು ಮಾಡುತ್ತಿದೆ. ಆದರೆ ಇಂದು ಕೆಲವು ಸಾಹಿತ್ಯಗಳು ಯುವಜನರನ್ನು ಉದ್ರೇಕಗೊಳಿಸುವಂಥ, ಕಾಮನೆಗಳನ್ನು ಉತ್ತೇಜಿಸುವಂಥ ಕೆಟ್ಟ ಸಾಹಿತ್ಯ ಇತ್ತೀಚಿನ ದಿನಗಳಲ್ಲಿ ಕಂಡು ಬರುತ್ತಿದೆ. ಅದನ್ನು ಖಂಡಿಸಬೇಕಾದದ್ದು ನಮ್ಮ ನಿಮ್ಮೆಲ್ಲರ ಕರ್ತವ್ಯ. ಪ್ರಮುಖವಾಗಿ ಮಹಿಳಾ ಸಂಘಟನೆಗಳು ಇದನ್ನು ವಿರೋಧಿಸುವ ಕೆಲಸ ಮಾಡಬೇಕಾಗಿದೆ. ಎಂದರು.
ಕುವೆಂಪು ರಚಿತ ಸಾಹಿತ್ಯದಲ್ಲಿ ಸಮಾಜಕ್ಕೆ ನೀಡಿರುವ ಸಂದೇಶಗಳು ಕುರಿತು ಮಾತನಾಡಿದ ಕುಶಾಲನಗರದ ಸಾಹಿತಿ ಉಪನ್ಯಾಸಕಿ ಶ್ರೀಮತಿ ಎನ್.ಕೆ. ಮಾಲದೇವಿ ಮಾತನಾಡಿ ಕುವೆಂಪು ರಚಿಸಿದ ಲೇಖನಗಳಿರಬಹುದು, ಕಥೆಗಳಿರಬಹುದು, ಕವನಗಳಿರಬಹುದು, ಕಾದಂಬರಿಗಳಿರಬಹುದು, ಮಹಾಕಾವ್ಯವಿರಬಹುದು ಅವೆಲ್ಲದರಲ್ಲೂ ಕೂಡ ಸಮಾಜಕ್ಕೆ ಉತ್ತಮವಾದ ಸಂದೇಶವನ್ನ ನೀಡಿದ್ದಾರೆ. ಅವರ ಸಾಹಿತ್ಯವನ್ನು ಮನನ ಮಾಡಿದರೆ ಮಾತ್ರ ಆ ಸಂದೇಶ ನಮ್ಮ ಮನಸ್ಸಿಗೆ ನಿಲುಕಲು ಸಾಧ್ಯ. ಅವರು 1930ರಲ್ಲಿ ಪ್ರಕಟಿಸಿದ ಕೊಳಲು ಕವನ ಸಂಕಲನದಲ್ಲಿ 70 ಕವನಗಳಿದ್ದು ನಾಡಗೀತೆ ಜಯ ಭಾರತ ಜನನಿಯ ತನುಜಾತೆ, ರೈತ ಗೀತೆಗಳು ಈ ಕವನ ಸಂಕಲನದಲ್ಲಿ ಒಳಗೊಂಡಿದೆ. ಪ್ರಕೃತಿ ಪ್ರೇಮವನ್ನು, ರಾಷ್ಟ್ರ ಪ್ರೇಮವನ್ನು, ನಾಡಪ್ರೇಮವನ್ನು ಆಧ್ಯಾತ್ಮಿಕ ಚಿಂತನೆಯನ್ನು ಒಳಗೊಂಡಿರುವAತಹ ಕವನ ಸಂಕಲನ ಇದಾಗಿದೆ. ಪಾಂಚಜನ್ಯ ಅನ್ನುವ ಇನ್ನೊಂದು ಕವನ ಸಂಕಲನದಲ್ಲಿ ದೇಶಭಕ್ತಿ, ಕ್ರಾಂತಿ, ಸ್ವಾತಂತ್ರ‍್ಯ ಹೋರಾಟ ಜಾಗೃತಿಯ ಕಾಂತಿಯನ್ನು ನೀಡಿದ್ದಾರೆ. ಓದುಗರಲ್ಲಿ ಆತ್ಮವಿಶ್ವಾಸವನ್ನು, ಧೈರ್ಯವನ್ನು, ಹೋರಾಟದ ಮನೋಭಾವವನ್ನು ಮೂಡಿಸುವ ಸಂದೇಶವಾಗಿ ಈ ಕವನ ಸಂಕಲನ ಮೂಡಿಬಂದಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಆಡುಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಕುವೆಂಪು ಮುಟ್ಟದ ಸಾಹಿತ್ಯ ಪ್ರಕಾರಗಳಿಲ್ಲ ಎನ್ನಬಹುದು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ ಮಾತನಾಡಿ ಕುವೆಂಪುರವರು ಆದರ್ಶವನ್ನು ಕತೆ, ಕಾದಂಬರಿ, ಲೇಖನದಲ್ಲಿ ಮಾತ್ರ ಇಟ್ಟುಕೊಂಡಿರಲಿಲ್ಲ. ಅವರು ಅದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದರು. ಅವರು ಮರಣ ಹೊಂದಿದಾಗ ಅವರಿಗೆ ತಿಥಿಕರ್ಮಾಂತರವನ್ನು ಮಾಡಬಾರದು ಎನ್ನುವ ಅವರ ಸೂಚನೆಯಂತೆ ಅವರ ತಿಥಿಕರ್ಮಾಂತರವನ್ನು ಮಾಡಿರಲಿಲ್ಲ. ಅವರಿಗೆ ಮಂತ್ರ ಮಾಂಗಲ್ಯ ಎನ್ನುವ ಸೂತ್ರದ ಸರಳ ಮದುವೆಯ ಬಗ್ಗೆ ತುಂಬಾ ಆಸಕ್ತಿ ಇತ್ತು. ನನ್ನ ಮದುವೆ ಕೂಡ ಅದೇ ರೀತಿ ನಡೆದಿತ್ತು ಎಂದು ನೆನಪಿಸಿಕೊಂಡರು.
ದತ್ತಿದಾನಿಗಳು, ಶಿಕ್ಷಕರು ಆದ ಸ್ನೇಹ ಬಸಮ್ಮ ಮಾತನಾಡಿ ದತ್ತಿ ಇಟ್ಟ ಉದ್ದೇಶ ಯುವಜನರಲ್ಲಿ ಕುವೆಂಪು ಸಾಹಿತ್ಯದ ಕುರಿತು ಚರ್ಚೆ ಪ್ರಬಂಧಗಳು, ಸ್ಪರ್ಧೆಗಳು ನಡೆಯಬೇಕು ಎನ್ನುವುದಾಗಿತ್ತು. ಆದರೆ ಯುವಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸದಿರುವುದು ತುಂಬಾ ಬೇಸರ ತಂದಿದೆ ಎಂದರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕ ಮ.ನ ವೆಂಕಟ್ ನಾಯಕ್ ಮಾತನಾಡಿ ಕುವೆಂಪು ವಿಚಾರಧಾರೆಗಳು, ಅವರ ಆದರ್ಶಗಳು, ಅವರ ಲೇಖನಗಳು, ಅವರ ಸಾಹಿತ್ಯ ಎಲ್ಲವನ್ನು ಗಮನಿಸಿದರೆ ಕುವೆಂಪು ಕರ್ನಾಟಕದಲ್ಲಿ ಹುಟ್ಟದಿದ್ದರೆ ಕನ್ನಡ ಸಾಹಿತ್ಯ ಇಷ್ಟು ಸಮೃಧವಾಗಿ ಬೆಳೆಯುತ್ತಿರಲಿಲ್ಲ. ಸಾಮಾಜಿಕರಣವೂ ಆಗುತ್ತಿರಲಿಲ್ಲ. ಆಂಗ್ಲವನ್ನು ಕಲಿತವರು, ಸಂಸ್ಕೃತವನ್ನು ಕಲಿತವರು ಕುವೆಂಪು ಆದರೆ ಕನ್ನಡವನ್ನು ಕಟ್ಟಿದವರು ಕುವೆಂಪು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ ಕೇಶವ ಕಾಮತ್ ಮಾತನಾಡಿ ಯುವ ಜನಾಂಗಕ್ಕೆ ಕುವೆಂಪು ಸಂದೇಶ ತಲುಪಬೇಕು ಎನ್ನುವ ನಿಟ್ಟಿನಲ್ಲಿ ಈ ದತ್ತಿ ಸ್ಥಾಪಿಸಿದ್ದು ಪರೀಕ್ಷೆಗಳು ನಡೆಯುತ್ತಿರುವ ಸಂದರ್ಭ ಆದ್ದರಿಂದ ಯುವಕರ ಕೊರತೆ ಇಂದಿನ ಕಾರ್ಯಕ್ರಮದಲ್ಲಿ ಕಂಡು ಬರುತ್ತಿವೆ ಎಂದು ಹೇಳಿದರು.
ಹಿರಿಯ ಗಾಯಕ ಕುಶಾಲನಗರದ ಬಿ.ಎಸ್. ಪರಮೇಶ್ ರೈತ ಗೀತೆ ಹಾಡಿದರು. ಅಧ್ಯಾಪಕಿ ಜಯಲಕ್ಷ್ಮಿ ಮತ್ತು ತಂಡದವರು ನಾಡಗೀತೆ, ಜಯ ಭಾರತ ಜನನಿಯ ತನುಜಾತೆ, ದೋಣಿ ಸಾಗಲಿ ಮುಂದೆ ಹೋಗಲಿ, ಸದ್ದಿರದ ಹೆಸರುಡೆಯ ಹಾಡುಗಳನ್ನು ಹಾಡಿದರು. ಕೊಡಗು ವಿದ್ಯಾಲಯದ ಕೆ.ವಿ ರವಿ ಅವರು ಎಲ್ಲಾದರೂ ಇರು ಎಂತಾದರು ಇರು ಹಾಡನ್ನು ಪ್ರಸ್ತುತಪಡಿಸಿದ್ದರು. ಅಮೃತ್ ರಾಜ್ ಮತ್ತು ಅನಿತಾ ರಾಜ್ ಸಹೋದರರು ನೂರು ದೇವರನ್ನೆಲ್ಲ ನೂಕಾಚೆ ದೂರ ಎನ್ನುವ ವೈಚಾರಿಕ ಗೀತೆಯನ್ನು ಹಾಡಿದರು
ಗಾಯಕಿ ರಶ್ಮಿ ಅವರು ದೋಣಿ ಸಾಗಲಿ ಮುಂದೆ ಹೋಗಲಿ ಹಾಡನ್ನು, ಗಾಯಕಿ ಹೇಮಾ ಅಜಿತ್ ರವರು ದೂರಾ ಬಹುದೂರ ಹೋಗುವ ಬಾರ ಎನ್ನುವ ಗೀತೆಯನ್ನು ಗಾಯಕ, ಸಬ್ ಇನಸ್ಪೆಕ್ಟರ್ ಧನಂಜಯ್ ರವರು ಬಾ ಇಲ್ಲಿ ಸಂಭವಿಸು ಮತ್ತು ಇಳಿದು ಬಾ ತಾಯಿ ಗಾಯನವನ್ನು ಪ್ರಸ್ತುತಪಡಿಸಿದರು
ಕುಶಾಲನಗರ ತಾಲೂಕು ಕಸಾಪ ಕೋಶಾಧಿಕಾರಿ ಕೆ.ವಿ ಉಮೇಶ್ ರವರು ನೂರು ದೇವರನ್ನೆಲ್ಲ ನೂಕಾಚೆ ದೂರ ಹಾಡನ್ನು ಪ್ರಸ್ತುತಪಡಿಸಿದ್ದರು. ಉದ್ಘಾಟಕರಾಗಿದ್ದ ಚಿದ್ವಿಲಾಸ್ ರವರು ಕೊನೆಯಲ್ಲಿ ತನುವು ನಿನ್ನದು ಮನವು ನಿನ್ನದು ಹಾಡನ್ನು ಪ್ರಸ್ತುತಪಡಿಸಿದ್ದರು.
ಇತ್ತೀಚೆಗೆ ನಿಧನರಾದ ಜಿಲ್ಲೆಯ ಹಿರಿಯ ಗಾಯಕ ಲಿಯಾಕತ್ ಆಲಿಯವರಿಗೆ ಸಭೆ ಶ್ರದ್ಧಾಂಜಲಿ ಸಲ್ಲಿಸಲಿಸಿತು. ಅಧ್ಯಾಪಕಿ ಕೆ. ಜಯಲಕ್ಷಿö್ಮÃ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ರೇವತಿ ರಮೇಶ್, ನಿರ್ದೇಶಕ ಸುಲೇಮಾನ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net