ಶೈಕ್ಷಣಿಕ ಕ್ಷೇತ್ರದಲ್ಲೂ ಗ್ರಾಮ ಮುಂಚೂಣಿ

ಕೂಗೇಕೋಡಿ ಗ್ರಾಮದ ಸೇತುವೆ ಶಿಥೀಲಾವಸ್ಥೆ ತಲುಪಿರುವುದು,
ಕೂಗೇಕೋಡಿ ಗ್ರಾಮದ ಸೇತುವೆ ಶಿಥೀಲಾವಸ್ಥೆ ತಲುಪಿರುವುದು,
Published on

ಪ್ರಮುಖ ಮುಖ್ಯಾಂಶಗಳು

  • ಪ್ರಗತಿಪರ ಕೃಷಿಕರೇ ಹೆಚ್ಚು
  • ಸರ್ಕಾರ ಹುದ್ದೆಯಲ್ಲಿರುವವರ ಸಂಖ್ಯೆ ಅಧಿಕ
ಸೋಮವಾರಪೇಟೆ: ಪ್ರಗತಿಪರ ಕೃಷಿಕರೇ ಹೆಚ್ಚಿರುವ ಕೂಗೇಕೋಡಿ ಗ್ರಾಮ ಶೈಕ್ಷಣಿಕ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿದೆ.
ಗ್ರಾಮದಲ್ಲಿ 80 ಕುಟುಂಬಗಳಿವೆ. 350 ಜನಸಂಖ್ಯೆಯಿದೆ. ಶೇ.95 ಕಾಫಿ ಬೆಳೆಗಾರರಿದ್ದಾರೆ. ಬೆರಳೆಣಿಕೆಯಷ್ಟು ಕಾರ್ಮಿಕ ಕುಟುಂಬಗಳು. 20ರಷ್ಟು ಪರಿಶಿಷ್ಟ ಜಾತಿ ಕುಟುಂಬಗಳು ವಾಸಿಸುತ್ತಿವೆ.
ರೈತ ಕುಟುಂಬದ ಡಾ.ಶೇಖರ್, ಮಿಲನ್ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಜಿ.ಎಚ್.ಅಮೃತ್ ಅವರು ರಾಜ್ಯ ಸರ್ಕಾರದ ಅಭಿಯೋಜನ ನಿರ್ದೇಶಕರಾಗಿ ನಿವೃತ್ತಿ ಹೊಂದಿದ್ದಾರೆ. ವಿದ್ಯಾಧರ್ ಪಿಎಚ್.ಡಿ ಮುಗಿಸಿ ವಿದೇಶದಲ್ಲಿ ಹೆಚ್ಚಿನ ವ್ಯಾಸಂಗ ಮಾಡುತ್ತಿದ್ದಾರೆ. ಡಾ.ಲೋಹಿತ್ ವೀರಪ್ಪ ಉನ್ನತ ಶಿಕ್ಷಣ ಮುಂದುವರಿಸಿದ್ದಾರೆ. ಈ ಗ್ರಾಮದಲ್ಲಿ ಅನೇಕ ಸರ್ಕಾರಿ ಹುದ್ದೆಯನ್ನು ನಿರ್ವಹಿಸುತ್ತಿದ್ದಾರೆ.
ಗ್ರಾಮಾಭಿವೃದ್ಧಿ ಮಂಡಳಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಗ್ರಾಮದವರೆ ವಂತಿಕೆ ಹಾಕಿ ಶ್ರೀಕನ್ನಂಬಾಡಿಯಮ್ಮ ದೇವಾಲಯವನ್ನು ನಿರ್ಮಿಸಿಕೊಂಡು ಧಾರ್ಮಿಕ ಆಚರಣೆಗೂ ಹೆಚ್ಚಿನ ಆದ್ಯತೆ ನೀಡಿದ್ದಾರೆ.
ಮರಣ ನಿಧಿ ಸಂಗ್ರಹ ಮಾಡಿಕೊಂಡು, ಯಾರಾದರೂ ತೀರಿಕೊಂಡಾಗ ಅಂತ್ಯಸಂಸ್ಕಾರಕ್ಕೆ ಹಣವನ್ನು ನೀಡಲಾಗುತ್ತದೆ. ವರ್ಷದಲ್ಲಿ ಮೂರು ಬಾರಿ ಬಸವೇಶ್ವರ ಯುವಕ ಸಂಘದ ವತಿಯಿಂದ ಶ್ರಮದಾನದ ಮೂಲಕ ರಸ್ತೆ, ಚರಂಡಿಗಳನ್ನು ದುರಸ್ತಿಪಡಿಸಿಕೊಳ್ಳುತ್ತಾರೆ. ಗ್ರಾಮದ ಹೆಸರಿನಲ್ಲಿ 3 ಎಕರೆ ಕಾಪಿ ಕಾಳುಮೆಣಸು ತೋಟವಿದ್ದು, ಅದರಲ್ಲಿ ಬಂದ ಆದಾಯವನ್ನು ಗ್ರಾಮದ ಅಭಿವೃದ್ಧಿಗೆ ಬಳಸಿಕೊಳ್ಳುತ್ತಾರೆ. ಒಗ್ಗಟ್ಟಿನಲ್ಲಿ ಬಲವಿದೆ ಎಂಬಂತೆ, ಸರ್ಕಾರದ ಯೋಜನೆಗಳನ್ನು ನಂಬಿಕೊಳ್ಳದೆ ಒಂದಷ್ಟು ಕೆಲಸವನ್ನು ಗ್ರಾಮದವರೆ ಮಾಡಿಕೊಂಡು ಮಾದರಿಯಾಗಿದ್ದಾರೆ.
ಗುಂಡಿಬಿದ್ದ ರಸ್ತೆಯಲ್ಲೇ ಜೀವನ:
ಗ್ರಾಮದ ಬಹುತೇಕ ಕೃಷಿಕರು ಕೃಷಿಯಲ್ಲಿ ಆದಾಯವನ್ನು ಗಳಿಸುತ್ತಿದ್ದಾರೆ. ಆದರೆ ರಸ್ತೆಗೆ ಸರ್ಕಾರ ಅನುದಾನ ಕಲ್ಪಿಸದ ಹಿನ್ನೆಲೆಯಲ್ಲಿ ಒಂದಷ್ಟು ಸಮಸ್ಯೆ ಎದುರಿಸುವಂತಾಗಿದೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದರು.
30 ವರ್ಷಗಳ ಹಿಂದೆ ರಸ್ತೆ ಡಾಂಬರೀಕರಣವಾಗಿದ್ದು, ಇಲ್ಲಿಯ ತನಕ ಪೂರ್ಣ ಪ್ರಮಾಣದಲ್ಲಿ ರಸ್ತೆ ಅಭಿವೃದ್ಧಿ ಆಗಿಲ್ಲ ಎಂದು ಗ್ರಾಮಸ್ಥರು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ದೊಡ್ಡಮಳ್ತೆ ಗ್ರಾಮ ಪಂಚಾಯಿತಿಯ ಉದ್ಯೋಗ ಖಾತ್ರಿ ಯೋಜನೆ ಹಾಗೂ ಶಾಸಕರ ನಿಧಿಯಿಂದ ಕೆಲವು ಕಡೆ ಚಿಕ್ಕಪುಟ್ಟ ರಸ್ತೆ ಕಾಮಗಾರಿ ನಡೆದಿರುವುದು ಬಿಟ್ಟರೆ, ರಸ್ತೆ ಪಾಳುಬಿದ್ದಿದೆ.
ಅನುದಾನ ಕೊರತೆ ಕಳೆದ 20 ವರ್ಷಗಳಿಂದ ರಸ್ತೆಗಾಗಿ ಬೇಡಿಕೆಯಿಟ್ಟಿದ್ದರೂ ರಸ್ತೆ ಕಾಮಗಾರಿಗೆ ಅನುದಾನ ಸಿಕ್ಕಿಲ್ಲ. ರೈತರು ತಾವು ಬೆಳೆದ ಕೃಷಿ ಫಸಲನ್ನು ವಾಹನಗಳಲ್ಲಿ ಸಾಗಿಸಲು ಪರದಾಡಬೇಕಾಗಿದೆ. ಮಳೆಗಾಲದಲ್ಲಂತೂ ರಸ್ತೆಯ ಗುಂಡಿಯೊಳಗೆ ನೀರು ಸಂಗ್ರಹವಾಗಿರುವುದರಿಂದ ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ. ಕಾಫಿ, ಕಾಳುಮೆಣಸು ಪ್ರಮುಖ ಬೆಳೆಯಾಗಿದ್ದು, ಕೂಯ್ಲಿನ ಸಂದರ್ಭ ಲಘು ವಾಹನಗಳ ಸಂಚಾರ ಹೆಚ್ಚಾಗಿರುತ್ತದೆ. ಗುಂಡಿ ಬಿದ್ದ ರಸ್ತೆಯಲ್ಲಿ ವಾಹನ ಸವಾರರು ಹರಸಾಹಸ ಪಡಬೇಕು. ದ್ವಿಚಕ್ರ ಚಾಲಕರು ಅನೇಕ ಬಾರಿ ಬಿದ್ದು ಗಾಯಗೊಂಡಿರುವ ನಿದರ್ಶನಗಳಿವೆ ಎಂದು ಗ್ರಾಮಸ್ಥರು ಹೇಳಿದರು. ಗುಂಡಿಬಿದ್ದ ರಸ್ತೆಯಲ್ಲಿ ವಾಹನ ಓಡಿಸುತ್ತಿರುವುದರಿಂದ, ರಿಪೇರಿಗೆ ಹೆಚ್ಚಿನ ಹಣವನ್ನು ವ್ಯಯಿಸಬೇಕಾಗಿದೆ ಎಂದು ತಮ್ಮ ಅಳಲು ತೋಡಿಕೊಂಡರು. ಶಾಲಾ ವಾಹನಗಳು ಗ್ರಾಮದೊಳಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಹಾಳಾದ ರಸ್ತೆಯಲ್ಲಿ ವಾಹನ ಚಾಲಿಸಲು ಸಾಧ್ಯವಿಲ್ಲ ಎನ್ನುತ್ತಾರೆ ಚಾಲಕರು. ಗ್ರಾಮದೊಳಗಿನ ಸೇತುವೆ ಶಿಥಿಲಾವಸ್ಥೆ ತಲುಪಿದೆ. ಶಾಲಾ ವಾಹನದ ಚಾಲಕರು ಭಯಪಡುವಂತಾಗಿದೆ.
ಅತಿ ಹೆಚ್ಚು ತೆರಿಗೆ ಕಟ್ಟುತ್ತಿದ್ದೇವೆ. ಆದರೆ ಗ್ರಾಮೀಣ ರಸ್ತೆಗೆ ಸೂಕ್ತ ಅನುದಾನ ಕೊಡದೆ ಸರ್ಕಾರ ರೈತರನ್ನು ವಂಚಿಸುತ್ತಿದೆ ಎಂದು ಆರೋಪಿಸಿದ್ದಾರೆ. ಕೂಡಲೆ ಸೂಕ್ತ ಅನುದಾನ ಕಲ್ಪಿಸಿ ರಸ್ತೆ ಡಾಂಬರೀಕರಣ ಮಾಡಬೇಕೆಂದು ಆಗ್ರಹಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net