ಶ್ರಾವಣ ಮಾಸದ ಪೂಜಾ ಮಹೋತ್ಸವ ಸಂಪನ್ನ

ಮಗ್ಗುಲ ಶ್ರೀ ಶನೈಶ್ಚರ ದೇವಾಲಯದಲ್ಲಿ ಶ್ರಾವಣ ಶನಿವಾರದ ಪೂಜಾ ಮಹೋತ್ಸವ ಧಾರ್ಮಿಕ ಶ್ರದ್ಧಾಭಕ್ತಿಯಿಂದ ಸಂಪನ್ನಗೊಂಡಿತು.
ಮಗ್ಗುಲ ಶ್ರೀ ಶನೈಶ್ಚರ ದೇವಾಲಯದಲ್ಲಿ ಶ್ರಾವಣ ಶನಿವಾರದ ಪೂಜಾ ಮಹೋತ್ಸವ ಧಾರ್ಮಿಕ ಶ್ರದ್ಧಾಭಕ್ತಿಯಿಂದ ಸಂಪನ್ನಗೊಂಡಿತು.
Published on

ಪ್ರಮುಖ ಮುಖ್ಯಾಂಶಗಳು

  • ನಾಲ್ಕು ಶನಿವಾರ ವಿವಿಧ ಧಾರ್ಮಿಕ ಕಾರ್ಯಕ್ರಮ
  • ಶನೈಶ್ಚರನ ದರ್ಶನ ಪಡೆದ ಸಾವಿರಾರು ಭಕ್ತರು
ವಿರಾಜಪೇಟೆ: ತಾಲೂಕಿನ ಮಗ್ಗುಲ ಗ್ರಾಮದಲ್ಲಿರುವ ಶ್ರೀ ಶನೈಶ್ಚರ ಮತ್ತು ನವಗ್ರಹ ದೇವಾಲಯದಲ್ಲಿ ಶನಿವಾರ ಶ್ರಾವಣ ಮಾಸದ ಪೂಜಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು.
ಆ.15ರ ಮೊದಲ ಶನಿವಾರ ಬೆಳಗ್ಗೆ ಗಣಪತಿ ಹೋಮದೊಂದಿಗೆ ಆರಂಭವಾದ ಶ್ರಾವಣ ಪೂಜಾ ಮಹೋತ್ಸವ, ಆ.22, ಆ.29 ಹಾಗೂ ಸೆ.5ರ ಶನಿವಾರದವರೆಗೆ ಒಟ್ಟು ನಾಲ್ಕು ಶನಿವಾರ ವಿವಿಧ ಪೂಜೆ ಪುನಸ್ಕಾರಗಳು ನೆರವೇರಿತು. ಶ್ರಾವಣ ಶನಿವಾರ ದಿನಗಳಲ್ಲಿ ದೇವಾಲಯದಲ್ಲಿ ನವಗ್ರಹ ಪೂಜೆ, ಶನಿ ಶಾಂತಿ ಪೂಜೆ ಹಾಗೂ ಶನಿ ಜಪ ಸೇರಿದಂತೆ ವಿವಿಧ ವಿಶೇಷ ಪೂಜೆ ಕೈಂಕರ್ಯಗಳು ಜರುಗಿದವು. ಶನಿ ದೇವರಿಗೆ ವಿಶೇಷ ಅಭಿಷೇಕ, ಮಹಾಪೂಜೆ ಮತ್ತು ಮಹಾಮಂಗಳಾರತಿ ನೆರವೇರಿತು.
ಶನಿ ದೋಷ ನಿವಾರಣೆ, ಮನಃಶಾಂತಿ ಹಾಗೂ ಕಷ್ಟ-ಕಾರ್ಪಣ್ಯಗಳು ದೂರವಾಗಿ ಸಮೃದ್ಧಿ ಲಭಿಸಲಿ ಎಂದು ಪ್ರಾರ್ಥಿಸಿ ತಾಲೂಕು ಸೇರಿದಂತೆ ವಿವಿಧೆಡೆಗಳಿಂದ ಆಗಮಿಸಿದ್ದ ಅಪಾರ ಸಂಖ್ಯೆಯ ಭಕ್ತರು ದೇವಾಲಯದಲ್ಲಿ ಎಳ್ಳು ದೀಪ ಬೆಳಗಿಸಿ, ವಿಶೇಷ ಪೂಜೆ ಸಲ್ಲಿಸಿದರು.
ಪ್ರತಿ ಶನಿವಾರ ಮಧ್ಯಾಹ್ನ ನಾಡಿನ ಕ್ಷೇಮಕ್ಕಾಗಿ ಮಹಾಪೂಜೆ ನೆರವೇರಿಸಿ, ನಂತರ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಚೋಕಂಡ ರಮೇಶ್, ದೇವಾಲಯದ ಪ್ರಧಾನ ಅರ್ಚಕರು ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net