ಜಿಲ್ಲೆಯಲ್ಲಿ ಭತ್ತದ ಕೃಷಿಗೆ ಶಾಪವಾದ ಭರದ ಛಾಯೆ

ಪ್ರಮಾಣ ಇನ್ನೂ ಕಡಿಮೆ ಆಗುವ ಸಾಧ್ಯತೆಗಳಿ
ಪ್ರಮಾಣ ಇನ್ನೂ ಕಡಿಮೆ ಆಗುವ ಸಾಧ್ಯತೆಗಳಿ
Published on
ಮಡಿಕೇರಿ:
ಪ್ರವಾಸಿ ಜಿಲ್ಲೆಯಾಗಿ ಕೊಡಗು ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿದೆ. ಆದರೆ ಇಲ್ಲಿಯ ಶೇ.70 ಕ್ಕಿಂತ ಹೆಚ್ಚು ಜನಸಂಖ್ಯೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕೃಷಿಯನ್ನೇ ನಂಬಿಕೊAಡಿದೆ. ಭತ್ತದ ಕಣಜ ಎಂದೇ ಮೊದಲು ಗುರುತಿಸಿಕೊಂಡಿದ್ದ ಜಿಲ್ಲೆಯಲ್ಲಿ ಸುಮಾರು 40 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿತ್ತು. ನಂತರದ ದಿನಗಳಲ್ಲಿ ಕಾಡುಪ್ರಾಣಿಗಳ ಹಾವಳಿ, ಹವಾಮಾನ ವೈಪರೀತ್ಯ, ಕೃಷಿ ಕಾರ್ಮಿಕರ ಕೊರತೆ, ಕಾಫಿ, ಅಡಿಕೆ ಹಾಗೂ ಶುಂಠಿ ಕೃಷಿಯತ್ತ ಆಕರ್ಷಣೆ ಕಾರಣದಿಂದ ವರ್ಷದಿಂದ ವರ್ಷಕ್ಕೆ ಭತ್ತದ ಬೆಳೆಯು ಪ್ರದೇಶ ಕಡಿಮೆ ಆಗುತ್ತಿದ್ದು 2025-26ನೇ ಸಾಲಿನಲ್ಲಿ ಕೃಷಿ ಇಲಾಖೆ 23 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ಇಟ್ಟುಕೊಂಡಿತ್ತು. ಆದರೆ 19 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಭತ್ತದ ಕೃಷಿ ಮಾಡಲಾಗಿತ್ತು. ಈ ವರ್ಷ ಮಳೆಯ ಕೊರತೆ ಕಾರಣದಿಂದ ಈ ಪ್ರಮಾಣ ಇನ್ನೂ ಕಡಿಮೆ ಆಗುವ ಸಾಧ್ಯತೆಗಳಿವೆ.
ಕಾಫಿ ಕೊಡಗಿನ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಮಳೆಯ ಕೊರತೆ ಕಾಫಿ ಮೇಲೂ ಪರಿಣಾಮ ಉಂಟುಮಾಡಿದೆ. ಗಿಡಗಳನ್ನು ಕಾಪಾಡಿಕೊಳ್ಳುವುದೇ ಬೆಳೆಗಾರರಿಗೆ ದೊಡ್ಡ ಸವಾಲಾಗಿದೆ. ಸರಿಯಾಗಿ ಕಾಯಿ ಕಟ್ಟದೆ ಕಾಫಿ ಹಣ್ಣುಗಳು ಸರಿಯಾಗಿ ಪಕ್ವವಾಗುವುದಿಲ್ಲ. ಕಾಫಿ ತೋಟಗಳಿಗೆ ಕೃತಕವಾಗಿ ಸ್ಪ್ರಿಂಕ್ಲರ್ ಮೂಲಕ ನೀರು ಹಾಯಿಸಲು ಹಳ್ಳ-ಕೊಳ್ಳಗಳಲ್ಲಿ ನೀರಿಲ್ಲದೆ ಬೆಳೆಗಾರರು ಪರದಾಡುವಂತಾಗಿದೆ. ಕಾಂಡಕೊರಕ ಹುಳುವಿನ ಹಾವಳಿಯೂ ಹೆಚ್ಚಾಗಿದೆ. ಸಮಯಕ್ಕೆ ಸರಿಯಾಗಿ ಗೊಬ್ಬರ ಕೊಡಲೂ ಆಗಿಲ್ಲ. ಹಾಗಾಗಿ ಈ ವರ್ಷ ಕಾಫಿ ಇಳುವರಿಯಲ್ಲಿ ಶೇ. 30 ರಿಂದ 40 ರಷ್ಟು ಭಾರಿ ಕುಸಿತ ಉಂಟಾಗುವ ಆತಂಕ ಎದುರಾಗಿದೆ.
ಕಪ್ಪು ಚಿನ್ನ ಎಂದೇ ಕರೆಯಲಾಗುವ ಕಾಳುಮೆಣಸು ಕಾಫಿ ತೋಟಗಳಲ್ಲಿ ಉಪಬೆಳೆಯಾಗಿ ಬೆಳೆಯಲಾಗುತ್ತದೆ. ತೇವಾಂಶದ ಕೊರತೆ ಕಾಳಿಮೆಣಸು ಬಳ್ಳಿಗಳ ಮೇಲೆ ಪರಿಣಾಮ ಬೀರುತ್ತಿದ್ದು. ಬುಡಸಮೇತ ಒಣಗುವುದು ಸಾಮಾನ್ಯವಾಗಿದೆ. ಬಳ್ಳಿಗಳಿಗೆ ಬೇರು ಕೊಳೆ ರೋಗ ಮತ್ತು ದ್ರುತ ಸೊರಗು ರೋಗ ತಗಲುತ್ತಿದ್ದು ಬೆಳೆಗಾರರು ಕಂಗಾಲಾಗಿದ್ದಾರೆ. ವಾಣಿಜ್ಯ ಬೆಳೆಗಳಾದ ಶುಂಠಿ ಮತ್ತು ಅಡಿಕೆಗೂ ನೀರಿನ ಅಭಾವ ತಟ್ಟಿದೆ. ಈ ಮಳೆ ಕೊರತೆ ಕೇವಲ ಈ ವರ್ಷದ ಬೆಳೆ ನಷ್ಟಕ್ಕೆ ಸೀಮಿತವಾಗಿಲ್ಲ. ಇದು ಮುಂದಿನ ವರ್ಷದ ಕೃಷಿ ಚಟುವಟಿಕೆಗಳ ಮೇಲೂ ದೀರ್ಘಕಾಲೀನ ಪ್ರಭಾವ ಬೀರಲಿದೆ ಎಂದು ಹೇಳಲಾಗುತ್ತಿದೆ.
"

ಈ ವರ್ಷ ಮಳೆಗಾಲದ ಆರಂಭಿಕ ಹಂತದಲ್ಲಿಯೇ ಮಳೆಯ ಕೊರತೆ ಕಾಡುತಿದೆ. ಇದರಿಂದಾಗಿ ಭತ್ತದ ಕೃಷಿ ಚಟುವಟಿಕೆ ಇನ್ನು ಆರಂಭವಾಗಿಲ್ಲ. ಭತ್ತ ಬೆಳೆಯುವ ಪ್ರಮಾಣ ಕಡಿಮೆ ಇರುವ ಕಾಲಘಟ್ಟದಲ್ಲಿ ಮಳೆಯ ಅಭಾವದಿಂದ ಭತ್ತದ ಉತ್ಪಾದನೆ ಕುಸಿತದ ಸಾಧ್ಯತೆ ಹೆಚ್ಚು. ಕಾಪಿ üಗಿಡಗಳಿಗೆ ಕೆಲವು ಕಡೆ ಇನ್ನೂ ಗೊಬ್ಬರ ನೀಡಿಲ್ಲ. ಇದರಿಂದಾಗಿ ಮುಂದಿನ ಬಾರಿ ಕಾಫಿ ಮತ್ತು ಕರಿಮೆಣಸಿನ ಫಸಲಿನ ಮೇಲೆ ಭಾರಿ ಹೊಡೆತ ನೀಡುವ ಸಾಧ್ಯತೆ ಇದೆ. ರೈತರಿಗೆ ಇದರಿಂದ ಆರ್ಥಿಕ ಸಂಕಷ್ಟ ಎದುರಾಗಬಹುದು.

— ಬಿ.ಎನ್. ಸ್ವಾತಿ, ಕೃಷಿಕ ಮಹಿಳೆ, ಬೇಟೋಳಿ, ವಿರಾಜಪೇಟೆ

"

ಇಷ್ಟು ವರ್ಷ ಹೆಚ್ಚಿನ ಮಳೆ ಬಂದು ಕೃಷಿ ನಷ್ಟ ಅನುಭವಿಸುವುದು ಸಾಮಾನ್ಯವಾಗಿತ್ತು. ಆದರೆ ಈ ಬಾರಿ ಮಳೆ ಬಾರದೆ ರೈತರನ್ನು ಸಂಕಷ್ಟಕ್ಕೆ ಈಡು ಮಾಡಿದ್ದು ಕೆಲವು ಕಡೆ ಕೆರೆಯನ್ನು ನಂಬಿ ಬಿತ್ತನೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಮಳೆ ಬಾರದೆ ಹೋದರೆ ಬಾರಿ ಸಂಕಷ್ಟ ಎದುರಾಗ ಬಹುದು. ಕಾಫಿ ಗಿಡ ಹಾಗೂ ಮೆಣಸಿನ ಬಳ್ಳಿಗಳು ಇನ್ನೂ ಚಿಗುರಿಲ್ಲ. ಮೆಣಸಿನ ಬಳ್ಳಿಗಳಲ್ಲಿ ಹೊಸ ಕೊತ್ತುಗಳು ಕಾಣಸಿಗುತ್ತಿಲ್ಲ. ಒಟ್ಟಿನಲ್ಲಿ ಭತ್ತ ಹಾಗೂ ವಾಣಿಜ್ಯ ಬೆಳೆ ಎರಡರಲ್ಲೂ ಈ ಬಾರಿ ಬಹಳ ಸಮಸ್ಯೆ ಅನಭವಿಸುವ ಲಕ್ಷಣ ಕಾಣುತ್ತಿದೆ.

— ಬಸವರಾಜು, ರೈತ, ಕಿರುಮಕ್ಕಿ, ವಿರಾಜಪೇಟೆ

"

ಮಳೆಯನ್ನು ಅವಲಂಭಿಸಿ ಕೃಷಿ ಚಟುವಟಿಕೆ ನಿರ್ವಹಿಸುತ್ತಿರುವ ನಮಗೆ ಕಳೆದ ಬಾರಿ ಈ ಅವಧಿಗೆ 20 ಇಂಚಿಗೂ ಅಧಿಕ ಮಳೆಯಾಗಿತ್ತು. ಈ ಬಾರಿ ಕೇವಲ 4 ಇಂಚು ಮಳೆ ಇಲ್ಲಿಯವರೆಗೆ ಬಿದ್ದಿದೆ. ಹಾಗಾಗಿ ನಾವುಗಳು 90 ದಿನಗಳ ಅವಧಿಯ ಬಿತ್ತನೆ ಬೀಜ ಬಳಕೆ ಮಾಡಲು ಸಾಧ್ಯವಿಲ್ಲ. ಅದನ್ನು ಬಳಸಿಕೊಂಡಲ್ಲಿ ನಾವು ನಿರೀಕ್ಷಿಸಿದ ಇಳುವರಿ ದೊರೆಯುವುದಿಲ್ಲ. ಅಲ್ಲದೆ ಚಳಿ, ಮಂಜು ಆರಂಭಗೊAಡರೆ ಭತ್ತ ಜೊಳ್ಳಾಗುತ್ತದೆ. ಇಂತಹ ಸಂಕಷ್ಟಗಳನ್ನು ರೈತರು ಎದುರಿಸಬೇಕಾಗಿದೆ. ಕಡಿಮೆ ಅವಧಿಯ ಭತ್ತದ ಬೀಜಗಳನ್ನು ಖರೀದಿಸಿ ಬಿತ್ತನೆ ಮಾಡಬೇಕಿದೆ.

— ಪಟ್ಟೆಮನೆ ಉದಯಕುಮಾರ್, ಸಮಗ್ರ ಕೃಷಿಕ, ಗದ್ದೆಹಳ್ಳ, ಸುಂಟಿಕೊಪ್ಪ

"

ಕೊಡಗು ಜಿಲ್ಲೆಗೆ ಮಳೆಯ ಜಿಲ್ಲೆ ಎನ್ನುವ ಹೆಸರಿದ್ದರೂ ಈ ಬಾರಿ ಮಳೆ ಕೊರತೆ ಚಿಂತೆಗೆ ಕಾರಣವಾಗಿದೆ. ಭತ್ತದ ನಾಟಿ ತಡವಾಗಿದ್ದು ಕೃಷಿ ಚಟುವಟಿಕೆಗೆ ಹಿನ್ನಡೆಯಾಗಿದೆ. ಕಾಫಿ ತೋಟಗಳಲ್ಲೂ ತೇವಾಂಶ ಕೊರತೆಯಿಂದ ಉತ್ಪಾದನೆ ಕುಸಿಯುವ ಭೀತಿ ಇದೆ. ಮಳೆ ಅವಲಂಬಿತ ಕೃಷಿಗೆ ಪರ್ಯಾಯ ಯೋಜನೆಗಳು ಹಾಗೂ ನೀರು ಸಂರಕ್ಷಣೆಗೆ ಒತ್ತು ನೀಡಬೇಕಾಗಿದೆ.

— ಡಿ.ಎಂ. ಗೋಪಾಲಕೃಷ್ಣ, ಕೃಷಿಕ, ದೊಡ್ಡಮಳ್ತೆ ಗ್ರಾಮ

"

ಜೂನ್ ಅಂತ್ಯ ಅಥವಾ ಜುಲೈ ಮೊದಲ ವಾರದ ತನಕ ವಾಡಿಕೆಯ ಮಳೆ ಬಾರದಿದ್ದರೆ ರೈತರು ದೀರ್ಘಾವಧಿ ಭತ್ತದ ತಳಿ ಬಿಟ್ಟು ಮಧ್ಯಮಾವಧಿ ಅಥವಾ ಅಲ್ಪಾವಧಿ ತಳಿಯ ಭತ್ತದ ಬಿತ್ತನೆ ಮಾಡುವುದು ಉತ್ತಮ. ರೈತರಿಗೆ ಅಗತ್ಯವಿರುವ ಮಧ್ಯಮಾವಧಿ ಮತ್ತು ಅಲ್ಪಾವಧಿ ತಳಿಯ ಭತ್ತದ ಬೀಜಗಳು ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಲಭ್ಯವಿದೆ. ರೈತರಿಗೆ ಯಾವುದೇ ರೀತಿಯ ಸಲಹೆ, ಸಹಕಾರ ಬೇಕಿದ್ದರೆ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಬಹುದು.

— ಬಿ.ಎಸ್. ಚಂದ್ರಶೇಖರ್, ಜಂಟಿ ನಿರ್ದೇಶಕ, ಕೃಷಿ ಇಲಾಖೆ. ಕೊಡಗು


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net