ಕೊಡಗಿಗೆ ಶರವೇಗದ ಪ್ರವಾಸೋದ್ಯಮ ಆಪತ್ತು

ರಜಾದಿನಗಳಲ್ಲಿ ಕುಶಾಲನಗರ ಕಾವೇರಿ ನಿಸರ್ಗಧಾಮದಲ್ಲಿ ಜನಸಂದಣಿ
ರಜಾದಿನಗಳಲ್ಲಿ ಕುಶಾಲನಗರ ಕಾವೇರಿ ನಿಸರ್ಗಧಾಮದಲ್ಲಿ ಜನಸಂದಣಿ
Published on
ಮಡಿಕೇರಿ:
ಇತ್ತೀಚಿನ ಕೆಲವು ದಶಕಗಳಿಂದ ಪ್ರವಾಸಿಗರ ಪಾಲಿಗೆ ಕೊಡಗು ಅಚ್ಚುಮೆಚ್ಚಿನ ಸ್ಥಳವಾಗಿ ಪರಿವರ್ತನೆ ಆಗಿದೆ. ಮಲೆನಾಡಿನ ಈ ಪುಟ್ಟ ಜಿಲ್ಲೆ ಈಗ ಪ್ರವಾಸೋದ್ಯಮವನ್ನೇ ಉಸಿರಾಡುತ್ತಿದ್ದು, ಇದು ಈಗ ಇಲ್ಲಿಯ ಪ್ರಮುಖ ವಾಣಿಜ್ಯ ಚಟುವಟಿಕೆಯಾಗಿ ಗುರುತಿಸಿಕೊಂಡಿದೆ. ಸಾಕಷ್ಟು ಜನರ ಬದುಕನ್ನು ಕೂಡ ಬದಲಾಯಿಸಿದೆ. ಮತ್ತೊಂದು ಕಡೆ ಪ್ರವಾಸೋದ್ಯಮದ ಅನಿಯಂತ್ರಿತ ಬೆಳವಣಿಗೆ ಪ್ರಜ್ಞಾವಂತರ ಆತಂಕಕ್ಕೆ ಕಾರಣವಾಗಿದೆ. ಸುಸ್ಥಿರ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡುವಂತೆ ಒತ್ತಾಯ ಕೇಳಿಬರುತ್ತಿದೆ.
ಭಾರತದ ಸ್ಕಾಟ್‌ಲ್ಯಾಂಡ್, ದಕ್ಷಿಣದ ಕಾಶ್ಮೀರ ಎಂದೇ ಪ್ರಸಿದ್ಧವಾಗಿರುವ, ಪಶ್ಚಿಮ ಘಟ್ಟಗಳ ಮಡಿಲಲ್ಲಿರುವ ಕೊಡಗು ತನ್ನ ನೈಸರ್ಗಿಕ ಸೌಂದರ್ಯ, ಹಚ್ಚಹಸಿರಿನ ಕಾಫಿ ತೋಟಗಳು, ಮಂಜು ಮುಸುಕಿದ ವಾತಾವರಣ ಹಾಗೂ ವಿಶಿಷ್ಟ ಸಂಸ್ಕೃತಿಯಿAದಾಗಿ ಜಾಗತಿಕ ಮಟ್ಟದಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಕೊಡಗಿನಲ್ಲಿ ನಿಯಂತ್ರಣವಿಲ್ಲದೆ ಬೆಳೆಯುತ್ತಿರುವ ಪ್ರವಾಸೋದ್ಯಮ ಜಿಲ್ಲೆಯ ಪರಿಸರ ಮತ್ತು ಸ್ಥಳೀಯರ ಜೀವನದ ಮೇಲೆ ತೀವ್ರವಾದ ದುಷ್ಪರಿಣಾಮಗಳನ್ನು ಉಂಟುಮಾಡುತ್ತಿರುವ ಆರೋಪಗಳು ಕೇಳಿಬರುತ್ತಿವೆ. ಅಭಿವೃದ್ಧಿಯ ಹೆಸರಿನಲ್ಲಿ ಪ್ರಕೃತಿಯನ್ನು ನಾಶಪಡಿಸುತ್ತಿರುವುದು ಕೊಡಗಿನ ಅಸ್ತಿತ್ವಕ್ಕೆ ದೊಡ್ಡ ಅಪಾಯದ ಆತಂಕ ವ್ಯಕ್ತವಾಗುತ್ತಿದೆ.
ಕೊಡಗಿನಲ್ಲಿ ಪ್ರವಾಸೋದ್ಯಮ ಸ್ಥಳೀಯ ಆರ್ಥಿಕತೆಗೆ ಕೊಡುಗೆ ನೀಡುತ್ತಿರುವುದು ನಿಜವಾದರೂ, ಯೋಜಿತವಲ್ಲದ ಮತ್ತು ಮಿತಿಮೀರಿದ ವಾಣಿಜ್ಯೀಕರಣ ಹಲವಾರು ಗಂಭೀರ ಸಮಸ್ಯೆಗಳನ್ನು ಸೃಷ್ಟಿಸಿದೆ. ರೆಸಾರ್ಟ್ಗಳು, ಹೋಂಸ್ಟೇಗಳು ಮತ್ತು ರಸ್ತೆಗಳ ಅಗಲೀಕರಣಕ್ಕಾಗಿ ಕೊಡಗಿನ ಸೂಕ್ಷ್ಮ ಬೆಟ್ಟ-ಗುಡ್ಡಗಳನ್ನು ಅವೈಜ್ಞಾನಿಕವಾಗಿ ಕತ್ತರಿಸಲಾಗುತ್ತಿದೆ. ಜೆಸಿಬಿ ಯಂತ್ರಗಳ ಮಿತಿಮೀರಿದ ಬಳಕೆಯಿಂದ ಮಣ್ಣಿನ ಹಿಡಿತ ಸಡಿಲಗೊಂಡು, ಭೀಕರ ಭೂಕುಸಿತಗಳು ಹಾಗೂ ಪ್ರವಾಹಗಳಿಗೆ ಕೊಡಗು ಸಾಕ್ಷಿಯಾಗುವಂತಾಗಿದೆ.
ಪ್ರವಾಸಿಗರು ತರುವ ಪ್ಲಾಸ್ಟಿಕ್ ಬಾಟಲಿಗಳು, ಕಸ ಮತ್ತು ಹೋಟೆಲ್‌ಗಳ ಘನತ್ಯಾಜ್ಯವನ್ನು ಹಳ್ಳ-ಕೊಳ್ಳಗಳಿಗೆ, ಕಾಡುಗಳಿಗೆ ಎಸೆಯಲಾಗುತ್ತಿದೆ. ಇದು ಕಾವೇರಿ ಸೇರಿದಂತೆ ಹಲವು ನದಿಗಳ ಮೂಲ ಸ್ಥಾನವಾದ ಕೊಡಗಿನ ಜಲಮೂಲಗಳನ್ನು ಕಲುಷಿತಗೊಳಿಸುತ್ತಿದೆ. ಪ್ರವಾಸಿ ತಾಣಗಳ ಅಭಿವೃದ್ಧಿಗಾಗಿ ಅರಣ್ಯ ಅತಿಕ್ರಮಣ ಮತ್ತು ರೆಸಾರ್ಟ್ಗಳ ಅಬ್ಬರದಿಂದ ವನ್ಯಜೀವಿಗಳ ನೈಸರ್ಗಿಕ ಆವಾಸಸ್ಥಾನಗಳು ಧ್ವಂಸಗೊಳ್ಳುತ್ತಿವೆ. ಪರಿಣಾಮವಾಗಿ, ಆನೆಗಳು ಮತ್ತು ಹುಲಿಗಳು ನಾಡಿಗೆ ಲಗ್ಗೆ ಇಡುತ್ತಿದ್ದು ಮಾನವ-ವನ್ಯಜೀವಿ ಸಂಘರ್ಷ ತಾರಕಕ್ಕೇರಲು ಇದೂ ಒಂದು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.
ಕೊಡಗಿನ ವಿಶಿಷ್ಟ ಸಂಸ್ಕೃತಿ ಮತ್ತು ಇಲ್ಲಿನ ಪ್ರಶಾಂತ ವಾತಾವರಣಕ್ಕೆ ಪ್ರವಾಸಿಗರ ಅತಿರೇಕದ ವರ್ತನೆಗಳು, ತಡರಾತ್ರಿಯ ಪಾರ್ಟಿಗಳು ಮತ್ತು ವಾಹನಗಳ ಕರ್ಕಶ ಶಬ್ದಗಳು, ವಾರಾಂತ್ಯದಲ್ಲಿ ಸ್ಥಳಿಯರಿಗೆ ನಡೆದಾಡಲೂ ಸಾಧ್ಯವಾಗದ ರೀತಿಯಲ್ಲಿ ಹೆಚ್ಚಾಗುವ ವಾಹನ ದಟ್ಟಣೆ ಇಲ್ಲಿನವರಲ್ಲಿ ಅಸಹನೆ ಹೆಚ್ಚಲು ಕಾರಣವಾಗಿದೆ.
ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಕೊಡಗನ್ನು ಉಳಿಸಿಕೊಳ್ಳಬೇಕಾದರೆ ಇಲ್ಲಿಗೆ ಬೇಕಿರುವುದು ಅತಿರೇಕದ ಪ್ರವಾಸೋದ್ಯಮವಲ್ಲ, ಬದಲಿಗೆ ಸುಸ್ಥಿರ ಪ್ರವಾಸೋದ್ಯಮ. ಪ್ರಕೃತಿಯನ್ನು ನಾಶಮಾಡದೆ ಮುಂದಿನ ಪೀಳಿಗೆಗೂ ಉಳಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯಬೇಕಿದೆ. ಪ್ರಕೃತಿ ನಮ್ಮ ಅಗತ್ಯಗಳನ್ನು ಪೂರೈಸಬಲ್ಲದೇ ಹೊರತು ನಮ್ಮ ದುರಾಶೆಯನ್ನಲ್ಲ ಎನ್ನುವುದನ್ನು ಮೊದಲು ಮನಗಾಣಬೇಕಿದೆ ಎನ್ನುವುದು ಇಲ್ಲಿಯ ಪರಿಸರ ಪ್ರೇಮಿಗಳ ಕಳಕಳಿಯಾಗಿದೆ.
ಕೊಡಗಿನ ಪ್ರತಿಯೊಂದು ಪ್ರವಾಸಿ ತಾಣಕ್ಕೂ ದಿನವೊಂದಕ್ಕೆ ಇಷ್ಟೇ ಪ್ರವಾಸಿಗರು ಬರಬೇಕು ಎಂಬ ಮಿತಿಯನ್ನು ವಿಧಿಸಬೇಕು. ಆನ್‌ಲೈನ್ ಬುಕ್ಕಿಂಗ್ ಮೂಲಕ ಪ್ರವಾಸಿಗರ ಸಂಖ್ಯೆಯನ್ನು ನಿಯಂತ್ರಿಸುವುದು ಇಂದಿನ ತುರ್ತು ಅಗತ್ಯವಾಗಿದೆ. ಪರಿಸರಕ್ಕೆ ಹಾನಿ ಮಾಡುವ ಬೃಹತ್ ಕಾಂಕ್ರೀಟ್ ಕಟ್ಟಡಗಳಿಗೆ ಇನ್ನು ಮುಂದೆ ಅನುಮತಿ ನೀಡಬಾರದು. ಸಾಂಪ್ರದಾಯಿಕ ಮತ್ತು ಪರಿಸರಸ್ನೇಹಿ ಶೈಲಿಯ ಕಟ್ಟಡ ನಿರ್ಮಾಣಕ್ಕೆ ಮಾತ್ರ ಆದ್ಯತೆ ನೀಡಬೇಕು ಎನ್ನುವ ಒತ್ತಾಯಗಳು ಕೇಳಿಬರುತ್ತಿದೆ.
ಕೊಡಗಿನ ಸೂಕ್ಷö್ಮ ಪರಿಸರ ಕಾಪಾಡಿಕೊಳ್ಳುವಲ್ಲಿ ಪ್ರವಾಸಿಗರ ಪಾಲು ಕೂಡ ದೊಡ್ಡದಿದೆ. ಪ್ರವಾಸಿಗರು ಕೇವಲ ಮೋಜು-ಮಸ್ತಿಗಾಗಿ ಬರದೇ, ಕೊಡಗಿನ ಪ್ರಕೃತಿಯನ್ನು ಅರಿತು, ಗೌರವಿಸುವಂತಿರಬೇಕು. ಇಲ್ಲಿನ ಸಂಸ್ಕೃತಿ, ಆಚಾರ-ವಿಚಾರಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುವಂತೆ ಇರಬೇಕು. ಈ ನಿಟ್ಟಿನಲ್ಲಿ ಪರಿಸರ ಜಾಗೃತಿ ಮೂಡಿಸುವ ಪ್ರವಾಸೋದ್ಯಮಕ್ಕೆ ಸರ್ಕಾರ ಮತ್ತು ಸಂಘಟನೆಗಳು ಒತ್ತು ನೀಡಬೇಕು ಎನ್ನುವುದು ಪ್ರಜ್ಞಾವಂತರ ಕಳಕಳಿ ಆಗಿದೆ.
ಕೊಡಗಿನ ಪರಿಸರ ಕಾಪಾಡಿಕೊಳ್ಳುವಲ್ಲಿ ಪ್ರವಾಸಿಗರು ಮಾತ್ರವಲ್ಲದೆ ಪ್ರವಾಸೋದ್ಯಮಿಗಳೂ ಜವಾಬ್ದಾರಿ ತೆಗೆದುಕೊಳ್ಳಬೇಕಿದೆ. ಕೊಡಗಿನ ಅಳಿವು-ಉಳಿವು ಕೇವಲ ಸರ್ಕಾರದ ಕೈಯಲ್ಲಿ ಇರುವುದಿಲ್ಲ. ಇಲ್ಲಿಗೆ ಬರುವ ಪ್ರವಾಸಿಗರು ಮತ್ತು ಇಲ್ಲಿ ವ್ಯವಹಾರ ನಡೆಸುವ ಪ್ರವಾಸೋದ್ಯಮಿಗಳು ಜವಾಬ್ದಾರಿಯಿಂದ ವರ್ತಿಸಬೇಕಿದೆ. ಪ್ರತಿಯೊಂದು ಹೋಂಸ್ಟೇ ಮತ್ತು ರೆಸಾರ್ಟ್ಗಳು ತಮ್ಮ ಆವರಣದಲ್ಲೇ ಒಣ ಹಾಗೂ ಹಸಿ ಕಸದ ವೈಜ್ಞಾನಿಕ ವಿಲೇವಾರಿ ಘಟಕಗಳನ್ನು ಹೊಂದಿರಬೇಕು. ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎನ್ನುವುದು ಪರಿಸರವಾದಿಗಳ ಪ್ರಮುಖ ಬೇಡಿಕೆ ಆಗಿದೆ.
ಸ್ಥಳೀಯ ಯುವಕರಿಗೆ ಉದ್ಯೋಗ ನೀಡುವುದರ ಜತೆಗೆ ಪ್ರವಾಸಿಗರಿಗೆ ಕೊಡಗಿನ ಸಂಸ್ಕೃತಿ, ಆಚಾರ-ವಿಚಾರಗಳ ಬಗ್ಗೆ ಮಾಹಿತಿ ನೀಡಿ, ಅವರು ಸ್ಥಳೀಯ ನಿಯಮಗಳನ್ನು ಗೌರವಿಸುವಂತೆ ನೋಡಿಕೊಳ್ಳಬೇಕು. ಹೋಂಸ್ಟೇಗಳಲ್ಲಿ ತಡರಾತ್ರಿಯವರೆಗೆ ಡಿಜೆ ಹಾಡುಗಳು, ಜೋರಾದ ಸಂಗೀತವನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಇದು ಸುತ್ತಲಿನ ವನ್ಯಜೀವಿಗಳಿಗೆ ಮತ್ತು ಸ್ಥಳೀಯ ಜನರಿಗೆ ತೊಂದರೆ ಉಂಟುಮಾಡುತ್ತದೆ ಎನ್ನುವ ಕಳಕಳಿ ಇರಬೇಕಾಗುತ್ತದೆ.
ಪ್ರವಾಸಿಗರು ತಾವು ಬಳಸಿದ ಪ್ಲಾಸ್ಟಿಕ್ ಬಾಟಲಿಗಳು, ತಿಂಡಿಯ ಪ್ಯಾಕೆಟ್‌ಗಳನ್ನು ಎಲ್ಲೆಂದರಲ್ಲಿ ಎಸೆಯದೆ, ನಿರ್ದಿಷ್ಟ ಕಸದ ತೊಟ್ಟಿಗಳಿಗೆ ಹಾಕಬೇಕು. ಸಾಧ್ಯವಾದಷ್ಟು ಪರಿಸರಸ್ನೇಹಿ ವಸ್ತುಗಳನ್ನು ಬಳಸಬೇಕು. ಕೊಡಗಿನ ತೀರ್ಥ ಕ್ಷೇತ್ರಗಳಾದ ತಲಕಾವೇರಿ, ಭಾಗಮಂಡಲ ಮುಂತಾದೆಡೆ ಭೇಟಿ ನೀಡುವಾಗ ಸೂಕ್ತ ಉಡುಪು ಧರಿಸುವುದು ಮತ್ತು ಅಲ್ಲಿನ ಪಾವಿತ್ರ‍್ಯತೆಯನ್ನು ಕಾಯ್ದುಕೊಳ್ಳುವುದು ಪ್ರತಿಯೊಬ್ಬ ಪ್ರವಾಸಿಯ ಕರ್ತವ್ಯ ಆಗಿರುತ್ತದೆ. ಕಾಡಿನ ಹಾದಿಗಳಲ್ಲಿ ಸಂಚರಿಸುವಾಗ ಅತಿಯಾದ ಹಾರ್ನ್ ಮಾಡುವುದು, ಪ್ಲಾಸ್ಟಿಕ್ ಎಸೆಯುವುದು ಮತ್ತು ವನ್ಯಜೀವಿಗಳನ್ನು ಚುಡಾಯಿಸುವುದು, ಅವುಗಳಿಗೆ ಆಹಾರ ಕೊಡುವುದು ಮತ್ತಿತರ ವರ್ತನೆಗಳನ್ನು ತೋರಿಸಬಾರದು.
ಕೊಡಗು ಕೇವಲ ಒಂದು ಪ್ರವಾಸಿ ತಾಣವಲ್ಲ. ಇದು ದಕ್ಷಿಣ ಭಾರತದ ಜೀವನಾಡಿ ಕಾವೇರಿ ನದಿಯ ಜನ್ಮಭೂಮಿ. ಕೊಡಗು ನಾಶವಾದರೆ ಕಾವೇರಿಯನ್ನು ನಂಬಿರುವ ಕೋಟ್ಯಂತರ ಜನರ ಬದುಕು ದುಸ್ತರವಾಗುತ್ತದೆ. ಪ್ರವಾಸೋದ್ಯಮ ಆರ್ಥಿಕ ಪ್ರಗತಿಯನ್ನು ತರಬಹುದು, ಆದರೆ ಅದು ಪರಿಸರದ ಬಲಿಗೊಟ್ಟು ಪಡೆಯುವ ಪ್ರಗತಿಯಾಗಬಾರದು. ಇನ್ನಾದರೂ ಸರ್ಕಾರ, ಸ್ಥಳೀಯ ಉದ್ಯಮಿಗಳು ಮತ್ತು ಪ್ರವಾಸಿಗರು ಎಚ್ಚೆತ್ತುಕೊಂಡು, ಕೊಡಗಿನ ಪರಿಸರವನ್ನು ಕಾಪಾಡುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕಿದೆ. ನಾಳಿನ ಸುಂದರ ಕೊಡಗಿಗಾಗಿ ಇಂದೇ ಸುಸ್ಥಿರ ಪ್ರವಾಸೋದ್ಯಮ ಅಳವಡಿಸಿಕೊಳ್ಳಬೇಕಿದೆ ಎನ್ನುವುದು ಪರಿಸರಪ್ರಿಯರ ಅಭಿಪ್ರಾಯ.
"

ಅಭಿವೃದ್ಧಿ ಹೆಸರಿನಲ್ಲಿ ನಡೆಯುತ್ತಿರುವ ಪರಿಸರ ಲೂಟಿಯಿಂದಾಗಿ ಪವಿತ್ರವಾದ ಕೊಡವ ಭೂಮಿ ಹಾಗೂ ಆದಿಮಸಂಜಾತ ಕೊಡವರು ಸಂಪೂರ್ಣವಾಗಿ ಕ್ಷೀಣಿಸಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೊಡಗಿನಲ್ಲಿ ಹೊರಗಿನವರ ಒಡೆತನದ ಎಲ್ಲಾ ಮೆಗಾ-ರೆಸಾರ್ಟ್ಗಳು ಮತ್ತು ಟೌನ್‌ಶಿಪ್‌ಗಳನ್ನು ಧ್ವಂಸಗೊಳಿಸಬೇಕು. ಹಿಮಾಚಲ ಪ್ರದೇಶ ಸರ್ಕಾರ ಅಳವಡಿಸಿಕೊಂಡಿರುವ ಕಟ್ಟುನಿಟ್ಟಾದ ಕ್ರಮಗಳ ಮಾದರಿಯಲ್ಲಿ ಆದಿಮಸಂಜಾತ ಕೊಡವರು ಮತ್ತು ಸ್ಥಳೀಯ ನಿವಾಸಿಗಳು ಮಾತ್ರ ಹೋಂ-ಸ್ಟೇಗಳನ್ನು ನಡೆಸಲು ಅನುಮತಿಸುವಂತೆ ಕಾನೂನು ರೂಪಿಸಬೇಕು. ಹೋಂ-ಸ್ಟೇ ಪರಿಕಲ್ಪನೆಯ ಮೂಲ ತತ್ವಗಳಿಗೆ ವಿರುದ್ಧವಾಗಿ ಮನೆಗಳನ್ನು ಬಾಡಿಗೆಗೆ ನೀಡುವ ಹೊರಗಿನವರು ನಡೆಸುವ ಹೋಂ-ಸ್ಟೇಗಳ ನೋಂದಣಿಯನ್ನು ರದ್ದುಗೊಳಿಸಬೇಕು.

— ಎನ್.ಯು. ನಾಚಪ್ಪ, ಅಧ್ಯಕ್ಷ, ಕೊಡವ ನ್ಯಾಷನಲ್ ಕೌನ್ಸಿಲ್
"

ಕೊಡಗಿನ ಸಂಸ್ಕೃತಿ, ಪರಿಸರ, ಜೀವ ವೈವಿಧ್ಯತೆ ಕಾಪಾಡಿಕೊಳ್ಳಲು ಸುಸ್ಥಿರ ಪ್ರವಾಸೋದ್ಯಮ ಇಂದಿನ ಅಗತ್ಯವಾಗಿದೆ. ಜಿಲ್ಲೆಗೆ ಪ್ರವಾಸೋದ್ಯಮ ಬೇಡ ಎನ್ನಲು ಆಗುವುದಿಲ್ಲ. ಆದರೆ ಈಗಿನ ಪ್ರವಾಸೋದ್ಯಮ ಆತಂಕ ಹುಟ್ಟಿಸುವಂತಿದೆ. ಇದು ಬದಲಾಗಬೇಕು. ಪ್ರವಾಸಿಗರ ಬಗ್ಗೆ ಸ್ಥಳೀಯರಿಗೆ ಅಸಹನೆ ಬದಲು ಪ್ರೀತಿ ಹುಟ್ಟುವಂಥ ವಾತಾವರಣ ನಿರ್ಮಾಣ ಆಗಬೇಕು.

— ಟಿ.ಜಿ. ಪ್ರೇಮಕುಮಾರ್, ರಾಜ್ಯ ಪರಿಸರ ಪ್ರಶಸ್ತಿ ಪುರತಸ್ಕೃತ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net