ಬಿಸಿಲಿನ ಹೊಡೆತಕ್ಕೆ ಬಾಡಿದೆ ಮೆಣಸು

ಬಳ್ಳಿಗಳನ್ನು ರಕ್ಷಿಸಿಕೊಳ್ಳಲು ಮತ್ತು ಇಳುವರಿ ಹೆಚ್ಚಿಸಲು ಕಾಳು ಮೆಣಸು ಬಳ್ಳಿಗೆ ಔಷಧಿ ಸಿಂಪಡಿಸಿರುವುದು
ಬಳ್ಳಿಗಳನ್ನು ರಕ್ಷಿಸಿಕೊಳ್ಳಲು ಮತ್ತು ಇಳುವರಿ ಹೆಚ್ಚಿಸಲು ಕಾಳು ಮೆಣಸು ಬಳ್ಳಿಗೆ ಔಷಧಿ ಸಿಂಪಡಿಸಿರುವುದು
Published on
ಮಡಿಕೇರಿ:
ಕೊಡಗಿನಲ್ಲಿ ಸಾಮಾನ್ಯವಾಗಿ ಕಾಫಿ ಜತೆಯಲ್ಲಿ ಮಿಶ್ರಬೆಳೆಯಾಗಿ ಬೆಳೆಯುವ ಕಾಳು ಮೆಣಸಿನ ಬಳ್ಳಿಗಳು ಬಿಸಿಲಿನ ಹೊಡೆತಕ್ಕೆ ನಲುಗುತ್ತಿವೆ. ಈ ಹಂತದಲ್ಲಿ ಬಳ್ಳಿಗಳನ್ನು ಸರಿಯಾಗಿ ರಕ್ಷಣೆ ಮಾಡದಿದ್ದರೆ ಮುಂದಿನ ಅವಧಿಗೆ ಇಳುವರಿ ಕುಸಿತದ ಜತೆಗೆ ಬಳ್ಳಿಗಳನ್ನು ಕಳೆದುಕೊಳ್ಳುವ ಆತಂಕವೂ ಇದೆ. ಹಾಗಾಗಿ ಗೋಣಿಕೊಪ್ಪಲುವಿನಲ್ಲಿ ಇರುವ ಐ.ಸಿ.ಎ.ಆರ್-ಕೃಷಿ ವಿಜ್ಞಾನ ಕೇಂದ್ರದ ತಜ್ಞರು ಬೇಸಿಗೆಯಲ್ಲಿ ಕರಿಮೆಣಸು ಬಳ್ಳಿ ರಕ್ಷಣೆಯ ಬಗ್ಗೆ ಮಹತ್ವದ ಸಲಹೆಗಳನ್ನು ಕೊಟ್ಟಿದ್ದಾರೆ.
ಕೊಡಗಿನಲ್ಲಿ ಸುಮಾರು 40-50 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಾಳುಮೆಣಸು ಬೆಳೆಯಲಾಗುತ್ತಿದೆ. ವಾರ್ಷಿಕವಾಗಿ 3,300 ಮೆಟ್ರಿಕ್ ಟನ್ ಕಾಳು ಮೆಣಸು ಉತ್ಪಾದನೆ ಆಗುತ್ತಿದ್ದು, ರಾಜ್ಯದಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಕಾಳುಮೆಣಸು ಬೆಳೆಯುವ ಜಿಲ್ಲೆ ಎನ್ನುವ ಹೆಗ್ಗಳಿಕೆಗೆ ಕೊಡಗು ಪಾತ್ರವಾಗಿದೆ. ಸರಿಯಾಗಿ ಒಣಗಿಸಿದ ಕಾಳು ಮೆಣಸು ಎಷ್ಟು ಸಮಯ ಬೇಕಾದರೂ ಸಂಗ್ರಹಿಸಿ ಇಟ್ಟುಕೊಳ್ಳಬಹುದಾಗಿದ್ದು ಬೆಳೆಗಾರನ ಆಪತ್ಕಾಲದ ಅಗತ್ಯತೆಗೆ ತಕ್ಕಂತೆ ಬಳಸಿಕೊಳ್ಳಬಹುದಾಗಿದೆ.
ಕಾಫಿ ದರ ಕುಸಿತದಂಥ ಸಂದರ್ಭಗಳಲ್ಲಿ ಬೆಳೆಗಾರರನ್ನು ಕಾಪಾಡಿಕೊಂಡು ಬಂದಿದ್ದೇ ಕಾಳು ಮೆಣಸು. ಕಾಫಿ ತೋಟ ನಿರ್ವಹಣೆ, ಕುಟುಂಬದ ನಿರ್ವಹಣೆಗೆ ಕಾಳು ಮೆಣಸಿನಿಂದ ಬಂದ ಆದಾಯ ಕೃಷಿಕರ ಕೈ ಹಿಡಿಯುತ್ತಾ ಬಂದಿದೆ. ಹಾಗಾಗಿಯೇ ಕಾಫಿ ತೋಟದಲ್ಲಿ ಉಪ Àಬೆಳೆಯಾಗಿ ಕಾಳು ಮೆಣಸು ಬೆಳೆಯುತ್ತಿದ್ದರೂ ಬೆಳೆಗಾರ ಇದನ್ನು ನಿರ್ಲಕ್ಷö್ಯ ಮಾಡುವಂತಿಲ್ಲ. ಕಾಫಿಯಂತೇ ಕಾಳುಮೆಣಸಿನಲ್ಲೂ ವೈಜ್ಞಾನಿಕ ಕೃಷಿ ಪದ್ಧತಿ, ಪೋಷಕಾಂಶಗಳ ಉತ್ತಮ ನಿರ್ವಹಣೆ, ರೋಗ ನಿರ್ವಹಣೆ ಹಾಗೂ ಸರಿಯಾದ ರೀತಿಯಲ್ಲಿ ನೆರಳು ಮತ್ತು ನೀರಿನ ನಿರ್ವಹಣೆ ಮಾಡಿಕೊಂಡು ಬಂದರೆ ಮಾತ್ರ ಉತ್ತಮ ಇಳುವರಿ ಪಡೆದುಕೊಳ್ಳಬಹುದು.
ಜಿಲ್ಲೆಯಲ್ಲಿ ಬಿಸಿಲಿನ ಬೇಗೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದ್ದು ಕೆಲವೊಂದು ಪ್ರದೇಶಗಳಲ್ಲಿ ಮಾತ್ರ ಮಳೆ ಆಗಿದೆ. ಹಾಗಾಗಿ ಕಾಫಿ ಗಿಡಗಳು ಮಾತ್ರವಲ್ಲದೆ ಕಾಳು ಮೆಣಸಿನ ಬಳ್ಳಿಗಳೂ ಅಪಾಯದಲ್ಲಿವೆ. ಈ ಸಂದರ್ಭದಲ್ಲಿ ಸೂಕ್ತ ರೀತಿಯಲ್ಲಿ ಆರೈಕೆ ಮಾಡದಿದ್ದರೆ ಬಳ್ಳಿಗಳು ಕೈಕೊಡುವುದರ ಜತೆಗೆ ಕಾಳು ಮೆಣಸು ಇಳುವರಿಯೂ ತೀವ್ರವಾಗಿ ಇಳಿಕೆ ಕಾಣಲಿದೆ. ಹಾಗಾಗಿ ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರದ ತಜ್ಞರು ಕಾಳು ಮೆಣಸು ಬೆಳೆ ರಕ್ಷಣೆಗೆ ಬೇಸಿಗೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳಿಸಿದ್ದಾರೆ.
ಕಾಳು ಮೆಣಸು ಬಳ್ಳಿಗೆ ಬೇಸಿಗೆಯ ಮೇ ತಿಂಗಳ ಕೊನೆಯ ವಾರದವರೆಗೂ ಪ್ರತಿ ವಾರಕ್ಕೊಮ್ಮೆ ಪ್ರತೀ ಬಳ್ಳಿಗೆ 40 ರಿಂದ 50 ಲೀಟರ್‌ನಷ್ಟು ನೀರನ್ನು ಬಳ್ಳಿಯ ಬುಡಕ್ಕೆ ಕೊಡಬೇಕು. ಇದರಿಂದ ಕಾಳು ಮೆಣಸಿನ ಇಳುವರಿಯನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ. ಕಾಳುಮೆಣಸಿನ ಬಳ್ಳಿಯಲ್ಲಿ ಮೇ ತಿಂಗಳ ಕೊನೆಯ ವಾರ ಅಥವಾ ಜೂನ್ ತಿಂಗಳಿನಲ್ಲಿ ಹೂ ಬಿಡುವುದರಿಂದ ಗಂಡು ಮತ್ತು ಹೆಣ್ಣು ಹೂಗಳು ಸಮ ಪ್ರಮಾಣದಲ್ಲಿ ಇರಲು ಸಹಕಾರಿ ಆಗುತ್ತದೆ. ಇದರಿಂದ ಸರಿಯಾಗಿ ಪರಾಗಸ್ವರ್ಶವಾಗಿ ಹೆಚ್ಚಿನ ಇಳುವರಿ ನಿರೀಕ್ಷೆ ಮಾಡಬಹುದು.
ಬೇಸಿಗೆಯಲ್ಲಿ ಕಾಳುಮೆಣಸು ಬಳ್ಳಿಯ ಬುಡಕ್ಕೆ ನೀರು ಕೊಡದೆ ಈ ಸಂದರ್ಭ ಸಾಕಷ್ಟು ಮಳೆಯೂ ಬಾರದೇ ಜೂನ್ ತಿಂಗಳಲ್ಲಿ ಬಂದರೆ ಕಾಳುಮೆಣಸು ಬಳ್ಳಿ ಜುಲೈ ಅಥವಾ ಆಗಸ್ಟ್ ತಿಂಗಳಿನಲ್ಲಿ ಹೂ ಬಿಡುತ್ತದೆ. ಜುಲೈ ತಿಂಗಳಿನಲ್ಲಿ ಬಂದ ಹೂವುಗಳಲ್ಲಿ ಹೆಚ್ಚು ಹೆಣ್ಣು ಹೂವುಗಳಿದ್ದು ಗಂಡು ಮತ್ತು ಹೆಣ್ಣು ಹೂವುಗಳು ತುಂಬ ಕಡಿಮೆಯಾಗಿರುತ್ತವೆ. ಇದರಿಂದ ಸರಿಯಾಗಿ ಪರಾಗಸ್ವರ್ಶವಾಗದೆ ಕೊತ್ತು ಬೀಳುವುದು ಸಾಮಾನ್ಯವಾಗುತ್ತದೆ. ಅಥವಾ ದಾಟು ಮಣಿಯಿಂದ ಕೂಡಿದ ಗೊಂಚಲು ಗಮನಿಸಬಹುದು. ಇದರಿಂದಾಗಿ ಮೇ ತಿಂಗಳ ಮೊದಲನೇ ವಾರದ ತನಕ ಪ್ರತೀ ವಾರಕ್ಕೊಮ್ಮೆ ಪ್ರತೀ ಬಳ್ಳಿಗೆ 40 ರಿಂದ 50 ಲೀಟರ್‌ನಷ್ಟು ನೀರು ಬಳ್ಳಿಯ ಬುಡಕ್ಕೆ ಕೊಡುವುದು ಅತ್ಯಗತ್ಯವಾಗಿದೆ.
ಕಾಳುಮೆಣಸಿನ ಗಿಡದ ಬೆಳವಣಿಗೆ ಮತ್ತು ಇಳುವರಿ ಹೆಚ್ಚಿಸಲು ಕಲ್ಲಿಕೋಟೆಯ ಭಾರತೀಯ ಸಾಂಬಾರು ಬೆಳೆಗಳ ಸಂಶೋಧನಾ ಸಂಸ್ಥೆ ಅಭಿವೃದ್ದಿಪಡಿಸಿದ ಪೋಷಕಾಂಶಗಳ ಮಿಶ್ರಣ ಕಾಳುಮೆಣಸು ಸ್ಪೆಷಲ್ ಸಿಂಪಡಣೆ ಮಾಡುವುದರಿಂದ ಹೆಚ್ಚಿನ ಗುಣಮಟ್ಟದ ಫಸಲು ಹಾಗೂ ಶೇ.20ರಷ್ಟು ಅಧಿಕ ಇಳುವರಿ ಪಡೆಯಲು ಸಾಧ್ಯ. ಬೇಸಿಗೆಯ ಅವಧಿ ಕಾಳುಮೆಣಸು ಸ್ಪೆಷಲ್ ಸಿಂಪಡಿಸಲು ಸೂಕ್ತ ಸಮಯವಾಗಿದೆ.
ತೋಟಗಳ ಅಂಚಿನಲ್ಲಿ ಬೆಳೆದಿರುವ ಕಾಳುಮೆಣಸು ಬಳ್ಳಿಗಳ ಮೇಲೆ ಸೂರ್ಯನ ರಶ್ಮಿ ನೇರವಾಗಿ ಬಿದ್ದು ಸಂಪೂರ್ಣ ಹಳದಿಯಾಗಿರುವುದು ಜಿಲ್ಲೆಯಾದ್ಯಂತಹ ಕಂಡುಬAದಿದೆ. ಆಂತಹ ತೋಟಗಳಲ್ಲಿ ಅಂಚಿನಲ್ಲಿ ಬೆಳೆದಿರುವ ಕಾಳುಮೆಣಸು ಬಳ್ಳಿಗಳ ಮೇಲೆ 3 ಕೆ.ಜಿ. ಕೆಯೋಲಿನ್ ಒಂದು ಬ್ಯಾರಲ್ ನೀರಿಗೆ ಮಿಶ್ರಣಮಾಡಿ ಸಿಂಪಡಿಸಬೇಕು. ರೋಗ ಬಾಧೆಯಿಂದ ಬಳಲಿ ಸತ್ತು ಹೋದ ಬಳ್ಳಿಗಳನ್ನು ಬೇರು ಸಮೇತ ಕಿತ್ತು ತೋಟದಿಂದ ಹೊರಗೊಯ್ದು ನಾಶಪಡಿಸಬೇಕು. ತೋಟಗಳಲ್ಲಿ ಕನಿಷ್ಠ ಶೇ. 20 ರಿಂದ 25 ರಷ್ಟು ನೆರಳಿರುವ ಹಾಗೆ ನೋಡಿಕೊಳ್ಳಬೇಕು. ಬಳ್ಳಿಯ ಸುತ್ತಲು ಹಸಿರು ಎಲೆ, ಒಣ ಎಲೆ ಅಥವಾ ಸಾವಯವ ಪದಾರ್ಥಗಳ ಹೊದಿಕೆ ಮಾಡಬೇಕು. ಇದರಿಂದ ಬಳ್ಳಿಯ ಬುಡ ಬೇಗ ಒಣಗದಂತೆ ತಡೆಗಟ್ಟಬಹುದು.
ಕೆಲವು ತೋಟಗಳಲ್ಲಿ ಬಳ್ಳಿಗಳು ಸಂಪೂರ್ಣ ಹಳದಿಬಣ್ಣಕ್ಕೆ ತಿರುಗಿ ಒಣಗುತ್ತಿರುವ ಸಮಸ್ಯೆ ಕಾಣಿಸುತ್ತಿದ್ದು, ಅಂತಹ ಬಳ್ಳಿಗಳ ಎಲೆಗಳನ್ನು ಸೂಕ್ಷ÷್ಮವಾಗಿ ಪರಿಶೀಲಿಸಿದರೆ, ಸಣ್ಣ ಸಣ್ಣ ರಸ ಹೀರುವ ಕೀಟಗಳು ಕಾಣಿಸುತ್ತವೆ. ಇವುಗಳ ಹತೋಟಿಗೆ ಪ್ರತೀ ಲೀ. ನೀರಿಗೆ 2.0 ಮೀ.ಲೀ ಡೈಮಿಥೋಯೇಟ್ (ರೋಗರ್) ಅಥವಾ ಇಮೀಡಕ್ಲೋಪ್ರೀಡ್ 0.3 ಮಿ.ಲಿ. ಕೀಟನಾಶಕವನ್ನು ಪ್ರತೀ ಲೀ. ನೀರಿಗೆ ಮಿಶ್ರಣ ಮಾಡಿ ಸಿಂಪಡಿಸಬೇಕು. ನರ್ಸರಿಯಲ್ಲಿ ಪ್ರತೀ ಲೀ. ನೀರಿಗೆ 3.0 ಮೀ.ಲಿ ಬೇವಿನ ಎಣ್ಣೆಯನ್ನು ಮಿಶ್ರಣ ಮಾಡಿ ಸಿಂಪರಣೆ ಮಾಡುವುದರಿಂದ ಈ ಕೀಟಗಳÀನ್ನು ನಿಯಂತ್ರಿಸಬಹುದು.
ಕೆಲವು ತೋಟಗಳಲ್ಲಿ ಅದರಲ್ಲೂ ಮುಖ್ಯವಾಗಿ ಸಿಲ್ವರ್ ಮರಗಳ ಮೇಲೆ ಹಬ್ಬಿಸಿದ ಬಳ್ಳಿಗಳಲ್ಲಿ ಗೆದ್ದಲಿನ ಭಾದೆ ಹೆಚ್ಚಾಗಿ ಕಾಣಿಸಿಕೊಂಡಿದ್ದು, ಬಳ್ಳಿಗಳು ಹಳದಿ ಬಣ್ಣಕ್ಕೆ ತಿರುಗುತ್ತಿರುವುದು ಕಂಡುಬರುತ್ತಿದೆ. ಇದರ ಹತೋಟಿಗೆ ಪ್ರತೀ ಲೀ. ನೀರಿಗೆ 2.0 ಮಿ.ಲಿ ಕ್ಲೋರೋಪೈರಿಫಾಸ್ ಎಂಬ ಕೀಟನಾಶಕವನ್ನು ಬೆರಸಿ ಈ ದ್ರಾವಣವನ್ನು ಸಿಲ್ವರ್ ಮರದ ಕಾಂಡಕ್ಕೆ ತಗಲುವಂತೆ ಸಿಂಪಡಿಸಬೇಕು ಮತ್ತು ಬುಡಕ್ಕೆ ಸುರಿಯಬೇಕು. ತೋಟದಲ್ಲಿ ಗೆದ್ದಲಿನ ಹುತ್ತವನ್ನು ಹುಡುಕಿ ಈ ಕೀಟನಾಶಕವನ್ನು ಹುತ್ತಕ್ಕೆ ಸುರಿದರೆ ಗೆದ್ದಲನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದು ಎನ್ನುತ್ತಾರೆ ತಜ್ಞರು.
=====
ಬಾಕ್ಸ್:
ಕೊಡಗಿನಲ್ಲಿ ಕಾಳುಮೆಣಸು ಉತ್ತಮವಾಗಿ ಬೆಳೆಯಲು ಇಲ್ಲಿನ ಹವಾಮಾನವೂ ಕಾರಣವಾಗಿದೆ. ಕಾಫಿ ತೋಟಗಳಲ್ಲಿರುವ ಸಿಲ್ವರ್ ಮರ ಅಥವಾ ಇತರೆ ಕಾಡಿನ ಮರಗಳ ಮೇಲೆ ಕಾಳುಮೆಣಸಿನ ಬಳ್ಳಿಗಳನ್ನು ಹಬ್ಬಿಸಲಾಗುತ್ತದೆ. ಅಡಿಕೆ ಮರಗಳಿಗೂ ಬಳ್ಳಿಗಳನ್ನು ಹಬ್ಬಿಸಲಾಗುತ್ತದೆ. ಇಲ್ಲಿ ಬೆಳೆಯುವ ಕಾಳುಮೆಣಸು ಗಾತ್ರದಲ್ಲಿ ದೊಡ್ಡದಾಗಿದ್ದು ಉತ್ತಮ ರುಚಿ ಮತ್ತು ಅಧಿಕ ಸಾಂದ್ರತೆಯ ಎಣ್ಣೆ ಅಂಶ ಹೊಂದಿರುವುದರಿAದ ಸಹಜವಾಗಿ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಹೊಂದಿದೆ. ಪನ್ನಿಯೂರು-1, ಕರಿಮುಂಡ, ಉದಿರುಕೋಟೆ ಮತ್ತು ಇತ್ತೀಚೆಗೆ ಜನಪ್ರಿಯವಾಗಿರುವ ಸೈಲೆಂಟ್ ವ್ಯಾಲಿ ತಳಿಯ ಕಾಳುಮೆಣಸು ಕೊಡಗಿನಲ್ಲಿ ಹೆಚ್ಚಾಗಿ ಬೆಳೆಸಲಾಗುತ್ತದೆ.
"

ಒಂದು ಕೆ.ಜಿ. ಕಾಳುಮೆಣಸು ಸ್ಪೆಷಲ್ ಪೋಷಕಾಂಶದ ಮಿಶ್ರಣ ಮತ್ತು 12:60:0 (ಎಂಎಪಿ) ಒಂದು ಕೆ.ಜಿ.ಯನ್ನು 200 ಲೀಟರ್ ನೀರಿನಲ್ಲಿ ಚೆನ್ನಾಗಿ ಕರಗಿಸಿಕೊಳ್ಳಬೇಕು. ಈ ರೀತಿ ತಯಾರಿಸಿದ ದ್ರಾವಣವನ್ನು ಕಾಳುಮೆಣಸು ಗಿಡದ ಎಲೆಗಳು ಮತ್ತು ಕಾಂಡ ಚೆನ್ನಾಗಿ ನೆನೆಯುವಂತೆ ಒಟ್ಟು ಎರಡು ಹಂತಗಳಲ್ಲಿ ಸಿಂಪರಣೆ ಮಾಡಬೇಕಾಗುತ್ತದೆ. ಮೊದಲ ಸಿಂಪಡಣೆಯನ್ನು ಏಪ್ರೀಲ್-ಮೇ ತಿಂಗಳಿನಲ್ಲಿ ಹಾಗೂ ಎರಡನೇ ಸಿಂಪಡಣೆಯನ್ನು ಆಗಸ್ಟ್ - ಸೆಪ್ಟಂಬರ್ ತಿಂಗಳಿನಲ್ಲಿ ಮಾಡಬೇಕಾಗುತ್ತದೆ. ಕಾಳುಮೆಣಸು ಸ್ಪೆಷಲ್ ಅನ್ನು ಯಾವುದೇ ಪೀಡೆನಾಶಕದ ಜತೆ ಮಿಶ್ರಣ ಮಾಡದೆ ಪ್ರತ್ಯೇಕವಾಗಿ ಸಿಂಪಡಿಸಬೇಕು.

— ಡಾ. ಕೆ.ವಿ. ವೀರೇಂದ್ರಕುಮಾರ್, ಸಸ್ಯ ಸಂರಕ್ಷಣಾ ತಜ್ಞ, ಐ.ಸಿ.ಎ.ಆರ್-ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪಲು


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net