ಕೃತಕ ಬುದ್ಧಿಮತ್ತೆಯ ಅವಕಾಶಗಳನ್ನು ಸಕರಾತ್ಮಕವಾಗಿ ಬಳಸಿಕೊಳ್ಳಬೇಕು

ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕೊಡಗು ಸಹಯೋಗದಲ್ಲಿ ನಡೆದ ಸಂವಿಧಾನ ಮತ್ತು ಪತ್ರಿಕೋದ್ಯಮ ಬಗ್ಗೆ ವಿಚಾರ ಸಂಕಿರಣ, ಫ್ಯಾಕ್ಟ್ ಚೆಕ್ ಮತ್ತು ನ್ಯೂಸ್ ರೂಂನಲ್ಲಿ ಎಐ ಹಾಗೂ ಬದಲಾಗುತ್ತಿರುವ ಪತ್ರಿಕೋದ್ಯಮದಲ್ಲಿ ಭಾಷೆ ಕುರಿತು ತರಬೇತಿ ಕಾರ್ಯಕ್ರಮವನ್ನು ಶಾಸಕ ಡಾ. ಮಂತರ್ ಗೌಡ ಉದ್ಘಾಟಿಸಿದರು. ಎಂ.ಎ. ಪೊನ್ನಪ್ಪ, ರಾಜೇಶ್ ಯಲ್ಲಪ್ಪ, ಎನ್.ಎಸ್. ಮಹೇಶ್, ಹೆಚ್.ಟಿ. ಅನಿಲ್, ಬಿ.ಆರ್. ಸವಿತಾ ರೈ ಮತ್ತಿತರರು ಇದ್ದರು.
ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕೊಡಗು ಸಹಯೋಗದಲ್ಲಿ ನಡೆದ ಸಂವಿಧಾನ ಮತ್ತು ಪತ್ರಿಕೋದ್ಯಮ ಬಗ್ಗೆ ವಿಚಾರ ಸಂಕಿರಣ, ಫ್ಯಾಕ್ಟ್ ಚೆಕ್ ಮತ್ತು ನ್ಯೂಸ್ ರೂಂನಲ್ಲಿ ಎಐ ಹಾಗೂ ಬದಲಾಗುತ್ತಿರುವ ಪತ್ರಿಕೋದ್ಯಮದಲ್ಲಿ ಭಾಷೆ ಕುರಿತು ತರಬೇತಿ ಕಾರ್ಯಕ್ರಮವನ್ನು ಶಾಸಕ ಡಾ. ಮಂತರ್ ಗೌಡ ಉದ್ಘಾಟಿಸಿದರು. ಎಂ.ಎ. ಪೊನ್ನಪ್ಪ, ರಾಜೇಶ್ ಯಲ್ಲಪ್ಪ, ಎನ್.ಎಸ್. ಮಹೇಶ್, ಹೆಚ್.ಟಿ. ಅನಿಲ್, ಬಿ.ಆರ್. ಸವಿತಾ ರೈ ಮತ್ತಿತರರು ಇದ್ದರು.
Published on
ಮಡಿಕೇರಿ:
ವೃತ್ತಿಗೆ ಸಮಸ್ಯೆ ಆಗದ ರೀತಿಯಲ್ಲಿ ಕೃತಕ ಬುದ್ಧಿಮತ್ತೆಯ ಅವಕಾಶಗಳನ್ನು ಮಾಧ್ಯಮ ಕ್ಷೇತ್ರದಲ್ಲಿ ಸಕರಾತ್ಮಕವಾಗಿ ಬಳಸಿಕೊಳ್ಳುವಂತಾಗಬೇಕು ಎಂದು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಹೇಳಿದರು. ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕೊಡಗು ಸಹಯೋಗದಲ್ಲಿ ಇಲ್ಲಿನ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶನಿವಾರ ನಡೆದ ಸಂವಿಧಾನ ಮತ್ತು ಪತ್ರಿಕೋದ್ಯಮ ಬಗ್ಗೆ ವಿಚಾರ ಸಂಕಿರಣ, ಫ್ಯಾಕ್ಟ್ ಚೆಕ್ ಮತ್ತು ನ್ಯೂಸ್ ರೂಂನಲ್ಲಿ ಎಐ ಹಾಗೂ ಬದಲಾಗುತ್ತಿರುವ ಪತ್ರಿಕೋದ್ಯಮದಲ್ಲಿ ಭಾಷೆ ಕುರಿತು ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದು ಎಐ ಎಲ್ಲಾ ಕ್ಷೇತ್ರಗಳಲ್ಲೂ ವ್ಯಾಪಕವಾಗಿ ಬಳಕೆ ಆಗುತ್ತಿದೆ. ಈ ತಂತ್ರಜ್ಞಾನ ಪ್ರತಿದಿನವೂ ಅಭಿವೃದ್ಧಿ ಹೊಂದುತ್ತಿದೆ. ಕೃತಕ ಬುದ್ಧಿಮತ್ತೆಯ ಪ್ರಯೋಜನ ಒಳ್ಳೆಯ ಕಾರ್ಯಗಳಿಗಷ್ಟೇ ಆದರೆ ಉತ್ತಮ. ಪತ್ರಿಕೋದ್ಯಮಕ್ಕೆ ಇರುವ ವಿಶೇಷ ವಾಕ್ ಸ್ವಾತಂತ್ರ‍್ಯದ ಅನುಕೂಲ ದುರುಪಯೋಗ ಆಗಬಾರದು. ಈ ಅವಕಾಶ ಬಳಸಿಕೊಂಡು ಉತ್ತಮ ಸಮಾಜ ನಿರ್ಮಾಣ ಮಾಡಬೇಕು. ಮಾಧ್ಯಮವು ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗದಷ್ಟೇ ಮಹತ್ವ ಹೊಂದಿದೆ. ಹಾಗಾಗಿ ಮಾಧ್ಯಮಗಳು ಪಾರದರ್ಶಕವಾಗಿ, ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸಬೇಕು. ಪತ್ರಿಕೆಗಳ ಟೀಕೆಗಳು ಸಕರಾತ್ಮಕವಾಗಿ ಇರಬೇಕು. ತಪ್ಪು ಮಾಡಿದವರು ಎಚ್ಚೆತ್ತುಕೊಂಡು ತಿದ್ದಿಕೊಳ್ಳುವಂತೆ ಬರಹಗಳು ಇರಬೇಕು. ಪತ್ರಿಕೆಗಳ ಹೊಗಳಿಕೆ, ತೆಗಳಿಕೆಯನ್ನು ರಾಜಕಾರಣಿಗಳು ಕ್ರೀಡಾಸ್ಫೂರ್ತಿಯಿಂದ ತೆಗೆದುಕೊಳ್ಳಬೇಕು ಎಂದರು.
ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಷಾ ಖಾನಂ ಮಾತನಾಡಿ ಸುಳ್ಳು ಸುದ್ದಿ ಇಂದು ಸಮಾಜಕ್ಕೆ ಮಾರಕವಾಗಿ ಪರಿಣಮಿಸಿದೆ. ಸುಳ್ಳುಸುದ್ದಿಗಳ ವಿರುದ್ಧ ಸಮರ ಸಾರಬೇಕು ಎನ್ನುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಶಯವಾಗಿದೆ. ಇದಕ್ಕೆ ಪೂರಕವಾಗಿ ಮಾಧ್ಯಮ ಅಕಾಡೆಮಿಯಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಮಾಧ್ಯಮ ಸಂಸ್ಥೆಗಳಲ್ಲಿ ಸಂವಿಧಾನ ಪುಸ್ತಕ ಮಾರ್ಗದರ್ಶನ ನೀಡುವಂತಿರಬೇಕು. ಹಾಗಾಗಿ ಸಂವಿಧಾನ ಬಗ್ಗೆ ಪತ್ರಕರ್ತರನ್ನು ಹೆಚ್ಚು ಜಾಗೃತರನ್ನಾಗಿ ಮಾಡಬೇಕಿದೆ. ಪ್ರಜಾಪ್ರಭುತ್ವದಲ್ಲಿ ಸಂವಿಧಾನ ಮತ್ತು ಮಾಧ್ಯಮದ ಮಹತ್ವದ ಬಗ್ಗೆ ಪತ್ರಕರ್ತರು ತಿಳಿದುಕೊಂಡಿರಬೇಕು. ಪತ್ರಕರ್ತರು ಯಾವಾಗಲೂ ಸೋಷಿತರ ಪರ ನಿಲ್ಲಬೇಕು. ಮುದ್ರಣ ಮಾಧ್ಯಮ ಭಾಷಾ ಶುದ್ಧತೆಯನ್ನು ಕಾಪಾಡಿಕೊಂಡಿದ್ದರೂ ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಮಾಧ್ಯಮ ಮತ್ತು ಟಿವಿ ಮಾಧ್ಯಮಗಳಲ್ಲಿ ಭಾಷೆ ಹಾಳಾಗಿದೆ. ಈ ಬಗ್ಗೆ ಗಂಭೀರ ಚಿಂತನೆ ಅಗತ್ಯ. ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಹರಡದಂತೆ ಎಚ್ಚರಿಕೆ ವಹಿಸಬೇಕು. ಸುಳ್ಳು ಸುದ್ದಿ ವಿರುದ್ಧ ಸಮರ ಸಾರಬೇಕು. ಈ ಹಿನ್ನೆಲೆಯಲ್ಲಿ ಸುದ್ದಿಯ ಫ್ಯಾಕ್ಟ್ ಚೆಕ್ ಮಹತ್ವ ಪಡೆದುಕೊಂಡಿದೆ. ಕರ್ನಾಟಕದಲ್ಲಿ ಮಾಧ್ಯಮಗಳಿಗೆ ಇರುವಷ್ಟು ಸ್ವಾತಂತ್ರ‍್ಯ ಬೇರೆ ರಾಜ್ಯಗಳಲ್ಲಿ ಇಲ್ಲ. ಈ ಅನುಕೂಲದ ಸದುಪಯೋಗ ಆಗಬೇಕು ಎಂದು ಹೇಳಿದರು.
ಮಾಧ್ಯಮ ಅಕಾಡೆಮಿ ಮಾಜಿ ಅಧ್ಯಕ್ಷ ಎಂ.ಎ. ಪೊನ್ನಪ್ಪ ಮಾತನಾಡಿ, ಕರ್ನಾಟಕ ಮಾಧ್ಯಮ ಅಕಾಡೆಮಿಯ ಇಂಥ ಕಾರ್ಯಕ್ರಮಗಳು ಶಾಲಾ ಕಾಲೇಜುಗಳಲ್ಲೂ ನಡೆಯಬೇಕು. ದೇಶದ ಸ್ವಾತಂತ್ರ‍್ಯ ಹೋರಾಟ, ಸಂವಿಧಾನ ರಚನೆಯಲ್ಲಿ ದುಡಿದವರು ಪತ್ರಕರ್ತರೇ ಆಗಿದ್ದಾರೆ. ಆಗ ಪತ್ರಿಕೆ ಉದ್ಯಮ ಆಗಿರಲಿಲ್ಲ. ಸೇವೆ ಆಗಿತ್ತು. ಸಂವಿಧಾನದಲ್ಲಿ ಪತ್ರಕರ್ತರಿಗೆ ರಕ್ಷಣೆ ಇದೆ. ಸ್ವಾತಂತ್ರ‍್ಯದ ಜತೆ ಉತ್ತರದಾಯಿತ್ವವೂ ಇದೆ. ಹಾಗಾಗಿ ಪತ್ರಕರ್ತರ ಹೊಣೆಗಾರಿಕೆ ಸ್ವರೂಪ ಚರ್ಚೆಗೆ ಈಗ ಸಮಯ ಬಂದಿದೆ ಎಂದರು.
ಮುಡಾ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ಮಾಧ್ಯಮ ಅಕಾಡೆಮಿ ಕಾರ್ಯದರ್ಶಿ ಎನ್.ಎಸ್. ಮಹೇಶ್, ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಹೆಚ್.ಟಿ. ಅನಿಲ್, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕಿ ಬಿ.ಆರ್. ಸವಿತಾ ರೈ, ಹಿರಿಯ ಪತ್ರಕರ್ತ ಶಾಸ್ತ್ರಿ ರಾಮಚಂದ್ರ, ಸಮೀವುಲ್ಲಾ, ಮಾಧ್ಯಮ ಅಕಾಡೆಮಿ ಸದಸ್ಯರಾದ ರಶ್ಮಿ, ಬೋಪಯ್ಯ, ಸಂಪನ್ಮೂಲ ವ್ಯಕ್ತಿ ರಾಹುಲ್ ಗುಂಡಾಲ ಇದ್ದರು. ಮೈಸೂರು ವಿಭಾಗದ 5 ಜಿಲ್ಲೆಗಳ ಪತ್ರಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net