ಸಮಾಜದಲ್ಲಿ ಸುಸಂಸ್ಕೃತರ ಸಂಖ್ಯೆ ಕ್ಷೀಣ

ಕಂಬಿಬಾಣೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳನ್ನು ಉದ್ಘಾಟಿಸಲಾಯಿತು.
ಕಂಬಿಬಾಣೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳನ್ನು ಉದ್ಘಾಟಿಸಲಾಯಿತು.
Published on
ಸುಂಟಿಕೊಪ್ಪ: ಪ್ರಸ್ತುತ ಕಾಲಘಟ್ಟದಲ್ಲಿ ಸುಶಿಕ್ಷಿತರ ಸಂಖ್ಯೆ ಹೆಚ್ಚಾಗಿದ್ದು ಸುಸಂಸ್ಕೃತರ ಸಂಖ್ಯೆ ಕ್ಷೀಣವಾಗುತ್ತಿರುವುದು ವಿಷಾದನೀಯ ಎಂದು ಕುಶಾಲನಗರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಹೇಳಿದರು.
ಕಂಬಿಬಾಣೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಎಲ್‌ಕೆಜಿ ಮತ್ತು ಯುಕೆಜಿ ಆಂಗ್ಲ ಮಾಧ್ಯಮ ತರಗತಿಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬರಿಗೂ ನನ್ನ ಶಾಲೆ, ನಮ್ಮೂರ ಶಾಲೆ ಎಂಬ ಅಭಿಮಾನವಿರಬೇಕು. ಹಳೆಯ ವಿದ್ಯಾರ್ಥಿಗಳ ಸಂಘ ಸಂಘಟಿತವಾಗಿ ಕೆಲಸ ಮಾಡಬೇಕು. ಭಾರತ ಜ್ಞಾನವಂತರ ದೇಶ. ಪ್ರಪಂಚ ನಮ್ಮಿಂದ ಜ್ಞಾನ ಪಡೆಯಲು ಮುಂದಾಗಿದೆ. ಆದರೆ, ಯುವ ಜನಾಂಗ ಮಾದಕ ವ್ಯಸನಿಗಳಾಗುತ್ತಿರುವುದು ಅಪಾಯಕಾರಿ ಬೆಳವಣಿಗೆ. ಸುಶಿಕ್ಷಿತರೆನಿಸಿಕೊಂಡರೆ ಸಾಲದು, ಸುಸಂಸ್ಕೃತರಾಗಿ ನಮ್ಮ ಯುವಜನಾಂಗವನ್ನು ತರಬೇತುಗೊಳಿಸಬೇಕಾಗಿದೆ ಎಂದರು.
ಕಂಬಿಣೆ ರಾಮ ಸೇವಾವ ಸಮಿತಿ ಅಧ್ಯಕ್ಷ ಡಾ.ಶಶಿಕಾಂತ ರೈ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಆಂಗ್ಲ ಭಾಷೆ ಶಿಕ್ಷಣ ಅನಿವಾರ್ಯವಾಗಿದೆ. ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡಿ ಸುಶಿಕ್ಷಿತ ಮತ್ತು ಸುಸಂಸ್ಕೃತರನ್ನಾಗಿ ರೂಪಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದರು.
ಸಮಾಜ ಸೇವಕ ಟಿ.ಕೆ.ಸಾಯಿಕುಮಾರ್ ಮಾತನಾಡಿ, ನಮ್ಮ ತಂಡ 3 ವರ್ಷದಿಂದ ಎಲ್‌ಕೆಜಿ, ಯುಕೆಜಿ ಆರಂಭಿಸಲು ಶ್ರಮ ಹಾಕಿತ್ತು. 10 ಮಕ್ಕಳು ಎಲ್‌ಕೆಜಿಗೆ ಪ್ರವೇಶ ಪಡೆದಿದ್ದಾರೆ. ಸರ್ಕಾರದ ಅನುದಾನ, ಇತರೆ ವ್ಯವಸ್ಥೆಗಳನ್ನು ಪಡೆಯಲು 20 ಮಕ್ಕಳು ದಾಖಲಾಗಿರಬೇಕು. ಈ ಹಿನ್ನೆಲೆಯಲ್ಲಿ ಸಮಾನಮನಸ್ಕರು ಸೇರಿ ಎಲ್ಲ ಖರ್ಚು ವೆಚ್ಚಗಳನ್ನು ನಿಭಾಯಿಸಿಕೊಂಡು ಹೋಗಬೇಕಾಗಿದೆ. ದಾನಿಗಳು, ಹಳೆಯ ವಿದ್ಯಾರ್ಥಿಗಳು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಶಾಲಾಭಿವೃದ್ಧಿ ಸಮಿತಿಯ ಕಬ್ಬಿರ್, ಚಂದ್ರಹಾಸ ರೈ, ತಾಪಂ ಮಾಜಿ ಸದಸ್ಯ ಕೆ.ಎಸ್.ಮಂಜುನಾಥ್, ಟಿ.ಆರ್.ಅನಿಲ್, ಸುಭಾಷ್ ಯುವಕ ಸಂಘದ ಅಧ್ಯಕ್ಷ ಮಣಿ, ಕಂಬಿಬಾಣೆ ಮಸೀದಿ ಅಧ್ಯಕ್ಷ ಮೋಯಿದ್ಧಿನ್, ಕಂಬಿಬಾಣೆ ಗ್ರಾ.ಪಂ.ಮಾಜಿ ಅಧ್ಯಕ್ಷ ಕೆ.ಬಿ.ಕೃಷ್ಣ, 7ನೇ ಹೊಸಕೋಟೆ ಗ್ರಾ.ಪಂ.ಮಾಜಿ ಸದಸ್ಯ ಅಬ್ಧುಲ್ ರಜಾಕ್, ಕಂಬಿಬಾಣೆ ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಶಂಕರನಾರಾಯಣ್, ಶ್ರೀರಾಮ ಚಾಮುಂಡೇಶ್ವರಿ ದೇವಾಸ್ಥಾನ ಸಮಿತಿಯ ಕಾರ್ಯದರ್ಶಿ ಗಣೇಶ್, ಶಾಲಾ ಅಭಿವೃದ್ಧಿ ಸಮಿತಿ ಸದಸ್ಯ ಜಯಂತ್, ಮುನಿರ್, ಬಿ.ಸಿ.ದಿನೇಶ್, ಮೊಯ್ದು, ಶಾಲೆ ಮುಖ್ಯ ಶಿಕ್ಷಕಿ ನಯನಾ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net