ಕೊಡಗನ್ನು ಕಾಡುತ್ತಿರುವ ಸಂಚಾರಿ ಸಿಕ್ಕಿನ ಕಿರಿಕಿರಿ

 ವಿರಾಜಪೇಟೆ ಪಟ್ಟಣದಲ್ಲಿ ಸಾಮಾನ್ಯವಾಗಿರುವ ವಾಹನ ದಟ್ಟಣೆ
ವಿರಾಜಪೇಟೆ ಪಟ್ಟಣದಲ್ಲಿ ಸಾಮಾನ್ಯವಾಗಿರುವ ವಾಹನ ದಟ್ಟಣೆ
Published on
ಮಡಿಕೇರಿ:
ಕೊಡಗು ಜಿಲ್ಲೆ ಇತ್ತೀಚಿನ ದಿನಗಳಲ್ಲಿ ಮತ್ತೊಂದು ವಿಭಿನ್ನ ಕಾರಣಕ್ಕಾಗಿ ಸುದ್ದಿಯಾಗುತ್ತಿದೆ. ಅನಿಯಂತ್ರಿತ ವಾಹನಗಳ ಸಂಖ್ಯೆ ಮತ್ತು ಟ್ರಾಫಿಕ್ ಸಮಸ್ಯೆ ಸ್ಥಳೀಯರ ಪಾಲಿನ ದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿದೆ. ಜಿಲ್ಲೆಯ ಪ್ರಮುಖ ಪಟ್ಟಣಗಳಾದ ಮಡಿಕೇರಿ, ಕುಶಾಲನಗರ, ವಿರಾಜಪೇಟೆ ಹಾಗೂ ಸೋಮವಾರಪೇಟೆ ವಾಹನ ದಟ್ಟಣೆಯಿಂದ ಉಸಿರುಗಟ್ಟುತ್ತಿವೆ.
ವರ್ಷದಿಂದ ವರ್ಷಕ್ಕೆ ಕೊಡಗಿಗೆ ಬರುವ ಪ್ರವಾಸಿಗರ ಸಂಖ್ಯೆ ದುಪ್ಪಟ್ಟಾಗುತ್ತಿದೆ. ಇದರೊಂದಿಗೆ ಸ್ಥಳೀಯ ವಾಹನಗಳ ಸಂಖ್ಯೆಯೂ ಗಣನೀಯವಾಗಿ ಹೆಚ್ಚಾಗಿದೆ. ವಾರಾಂತ್ಯ ಬಂತೆAದರೆ ಸಾಕು, ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳ ವಾಹನಗಳು ಕೊಡಗಿನ ರಸ್ತೆಗಳನ್ನು ಆಕ್ರಮಿಸಿಕೊಳ್ಳುತ್ತವೆ. ಆದರೆ, ಅದಕ್ಕೆ ತಕ್ಕಂತೆ ರಸ್ತೆಗಳ ವಿಸ್ತರಣೆಯಾಗಲಿ ಅಥವಾ ಮೂಲಸೌಕರ್ಯಗಳ ಅಭಿವೃದ್ಧಿಯಾಗಲಿ ನಡೆದಿಲ್ಲ.
ಜಿಲ್ಲೆಯ ಪ್ರಮುಖ ಪಟ್ಟಣಗಳಲ್ಲಿ ಸಾರ್ವಜನಿಕರಿಗೆ ಕಾಡುತ್ತಿರುವ ಅತಿ ದೊಡ್ಡ ತಲೆನೋವೆಂದರೆ ಪಾರ್ಕಿಂಗ್ ಸಮಸ್ಯೆ. ಮಡಿಕೇರಿಯಂಥ ಗುಡ್ಡಗಾಡು ಪ್ರದೇಶದ ಕಿರಿದಾದ ರಸ್ತೆಗಳ ಇಕ್ಕೆಲಗಳಲ್ಲಿಯೇ ವಾಹನಗಳನ್ನು ನಿಲ್ಲಿಸುವುದರಿಂದ ಸಂಚಾರ ದಟ್ಟಣೆ ಮತ್ತಷ್ಟು ಜಟಿಲವಾಗುತ್ತಿದೆ. ಸುಸಜ್ಜಿತ ಮಲ್ಟಿಲೆವೆಲ್ ಪಾರ್ಕಿಂಗ್ ವ್ಯವಸ್ಥೆ ಇಲ್ಲದಿರುವುದರಿಂದ, ಚಾಲಕರು ತಮ್ಮ ವಾಹನಗಳನ್ನು ಎಲ್ಲೆಂದರಲ್ಲಿ ಪಾರ್ಕ್ ಮಾಡುವಂತಾಗಿದೆ. ಇದು ವ್ಯಾಪಾರಸ್ಥರಿಗೂ ಮತ್ತು ಗ್ರಾಹಕರಿಗೂ ನಿತ್ಯದ ಕಿರಿಕಿರಿಯಾಗಿ ಪರಿಣಮಿಸಿದೆ.
ವಾಹನಗಳ ಅಬ್ಬರದ ನಡುವೆ ರಸ್ತೆಯಲ್ಲಿ ನಡೆದಾಡುವ ಪಾದಚಾರಿಗಳ ಸ್ಥಿತಿ ಅತ್ಯಂತ ಶೋಚನೀಯವಾಗಿದೆ. ಬಹುತೇಕ ರಸ್ತೆಗಳಲ್ಲಿ ಪಾದಚಾರಿ ಮಾರ್ಗಗಳೇ ಇಲ್ಲ. ಇದ್ದರೂ ಅವುಗಳನ್ನು ಅಂಗಡಿ ಮುಂಗಟ್ಟುಗಳು ಅಥವಾ ವಾಹನಗಳ ಪಾರ್ಕಿಂಗ್ ಆಕ್ರಮಿಸಿಕೊಂಡಿರುತ್ತವೆ. ಹಿರಿಯ ನಾಗರಿಕರು, ಶಾಲಾ ಮಕ್ಕಳು ಮತ್ತು ಪ್ರವಾಸಿಗರು ಜೀವ ಕೈಯಲ್ಲಿ ಹಿಡಿದುಕೊಂಡು ಮುಖ್ಯ ರಸ್ತೆಯಲ್ಲೇ ಸಂಚರಿಸಬೇಕಾದ ಅನಿವಾರ್ಯತೆ ಇದೆ.
"

ಕೊಡಗು ಪುಟ್ಟ ಜಿಲ್ಲೆಯಾದರೂ ಪ್ರವಾಸಿ ತಾಣವಾಗಿರುವುದರಿಂದ ಜಿಲ್ಲೆಯ ಜನರಿಗಿಂತ ಪ್ರವಾಸಿಗರ ದಂಡು ನಗರವನ್ನು ತುಂಬುತ್ತಿದೆ. ಅದರಲ್ಲೂ ಮಳೆಗಾಲದಲ್ಲಿ ಪಟ್ಟಣಗಳಲ್ಲಿ ಪಾದಚಾರಿಗಳಿಗೆ ನಡೆದಾಡುವುದೇ ಸಂಕಷ್ಟದ ವಿಚಾರ. ಪ್ರಮುಖ ಪಟ್ಟಣಗಳಲ್ಲಿ ರಸ್ತೆಯ ಅಂಚಿನವರೆಗೂ ಅಂಗಡಿ ಮುಂಗಟ್ಟು ತೆರೆಯುತ್ತಿದ್ದು ರಸ್ತೆ ಬದಿಯಲ್ಲಿ ವಾಹನ ಸವಾರರು ವಾಹನಗಳನ್ನು ಬೇಕಾದಂತೆ ನಿಲ್ಲಿಸುತ್ತಾರೆ. ಇದರಿಂದ ಪಾದಚಾರಿಗಳಿಗೆ ನಡೆದಾಡಲು ದಾರಿ ಇರುವುದಿಲ್ಲ. ಮುಖ್ಯವಾಗಿ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಸರಿಯಾಗಬೇಕು. ರಸ್ತೆ ಬದಿಯ ಅಂಗಡಿಗಳನ್ನು ತೆರವುಗೊಳಿಸಿದಲ್ಲಿ ಪಾದಚಾರಿಗಳು ನಿರಾಳವಾಗಿ ಪಟ್ಟಣದ ಬೀದಿಗಳಲ್ಲಿ ಓಡಾಡಬಹುದು.

— ಸಿರಕಜೆ ತೀರ್ಥಕುಮಾರ್, ಬೆಟ್ಟಗೇರಿ

"

ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ. ಮಡಿಕೇರಿ, ವಿರಾಜಪೇಟೆ, ಗೋಣಿಕೊಪ್ಪಲು, ಕುಶಾಲನಗರದಂತಹ ಪ್ರಮುಖ ಪಟ್ಟಣಗಳಲ್ಲಿ ಸರಿಯಾದ ಪಾರ್ಕಿಂಗ್ ಸ್ಥಳವಿಲ್ಲದೆ ಜನರು ಪರದಾಡುವಂತಾಗಿದೆ. ರಸ್ತೆಯ ಎರಡೂ ಬದಿ ವಾಹನ ನಿಲ್ಲಿಸುವುದರಿಂದ ಟ್ರಾಫಿಕ್ ಜಾಮ್ ಆಗುತ್ತಿದೆ. ಪಾದಚಾರಿಗಳು ನಡೆದಾಡಲು ಫುಟ್‌ಪಾತ್ ಇಲ್ಲದೆ ರಸ್ತೆಯಲ್ಲೇ ಇಳಿದು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಲಾ ಮಕ್ಕಳು, ವೃದ್ಧರು, ಮಹಿಳೆಯರು ರಸ್ತೆ ದಾಟುವುದೇ ಕಷ್ಟವಾಗಿದೆ. ಅದರಲ್ಲೂ ಕೆಲವು ಕಡೆ ಪುಟ್‌ಪಾತ್‌ಗಳಲ್ಲಿ ಗುಜರಿ ಅಂಗಡಿಗಳು ತಲೆಯೆತ್ತಿರುವುದರಿಂದ ಪಾದಚಾರಿಗಳಿಗೆ ಇನ್ನಷ್ಟು ಸಂಕಷ್ಟವಾಗಿದೆ.

— ಕಾಯಪಂಡ ವಿಷ್ಣು ನಾಚಪ್ಪ, ಸಾಮಾಜಿಕ ಕಾರ್ಯಕರ್ತ

"

ತಿದಿನವೂ ನೂರಾರು ವಾಹನಗಳು ಜಾಸ್ತಿ ಆಗುತ್ತಿವೆ. ಆದರೆ ಒಂದು ಪಾರ್ಕಿಂಗ್ ಜಾಗವೂ ಇಲ್ಲ. ವಾಹನಗಳ ಟ್ರಾಫಿಕ್ ಮಧ್ಯೆ ಆಂಬುಲೆನ್ಸ್ ಸಿಲುಕಿದರೆ ಯಾರು ಹೊಣೆ ? ಪಾದಚಾರಿ ರಸ್ತೆಗೆ ಇಳಿದರೆ ಆಗುವ ಅಪಘಾತದ ಹೊಣೆ ಹೊರುವುದು ಯಾರು ? ಇದು ಪ್ರಶ್ನೆ ಮಾಡುವ ಸಮಯ. ಇದು ಪರಿಹಾರ ಕೇಳುವ ಸಮಯ.

— ಬಿಂದು, ಗೃಹಿಣಿ, ಅಪ್ಪಂಗಳ

"

ಜಿಲ್ಲೆಯ ಬೈಪಾಸ್ ರಸ್ತೆಗಳೆಲ್ಲ ಗುಂಡಿಗಳಿAದ ತುಂಬಿವೆ. ವಾಹನ ರಿಪೇರಿಗೆ ಹಣ ವ್ಯರ್ಥ, ಸಮಯ ವ್ಯರ್ಥ. ರಸ್ತೆ ವಿಸ್ತರಣೆಗೆಂದು ರಸ್ತೆ ಬದಿಯ ಕಾಡು ಕಡಿದಿಲ್ಲ. ಕೆಲವು ಕಡೆ ಇರುವ ಜಾಗವೆಲ್ಲ ಅತಿಕ್ರಮಣವಾಗಿ ಪಾರ್ಕಿಂಗ್‌ಗೂ ಉಪಯೋಗವಾಗುತ್ತಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಜನರು ಫೋಟೋ ಹಾಕಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೋಟ್ಯಂತರ ರೂ. ಅನುದಾನ ಬಂದಿದೆ ಎಂದು ಹೇಳುತ್ತಿದ್ದರೂ ಗುಣಮಟ್ಟದ ಕಾಮಗಾರಿ ಮಾತ್ರ ಕಾಣುತ್ತಿಲ್ಲ. ಇದು ಆಡಳಿತದ ನಿರ್ಲಕ್ಷ್ಯಕ್ಕೆ ಸ್ಪಷ್ಟ ಸಾಕ್ಷಿ. ಜನರ ಜೀವಕ್ಕೆ ಬೆಲೆ ಇದೆಯಾ? ಉತ್ತರ ಬೇಕು.

— ಶಾಲಿನಿ ನಿತ್ಯ ಅಯ್ಯೇಟಿ, ಶಿಕ್ಷಕಿ, ಮರಂದೊಡ ಗ್ರಾಮ

"

ಕೊಡಗಿನಲ್ಲಿ ದಿನದಿಂದ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕೊಡಗು ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುತ್ತದೆ. ಈ ಕಾರಣದಿಂದಲೂ ವಾಹನಗಳ ದಟ್ಟಣೆ ಅಧಿಕ ಆಗುತ್ತಿದೆ. ಪಾರ್ಕಿಂಗ್ ಮತ್ತು ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ಎಲ್ಲರೂ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕಿದೆ. ಪೊಲೀಸ್ ಇಲಾಖೆ ಕಡೆಯಿಂದ ಮಾಡಬೇಕಿರುವುದನ್ನು ಅವರು ಮಾಡುತ್ತಿದ್ದಾರೆ. ಜನಸಾಮಾನ್ಯರಿಗೆ ಸಮಸ್ಯೆ ಆಗದಂತೆ ಕ್ರಮ ತೆಗೆದುಕೊಳ್ಳಲು ಸೂಚಿಸಲಾಗಿದೆ.

— ಡಾ. ಮಂತರ್ ಗೌಡ, ಮಡಿಕೇರಿ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net