ಅಡುಗೆಯೊಳಗೆ ಅವಿತ ಕಾವ್ಯಗಳು ವಿನೂತನ ಕಾರ್ಯಕ್ರಮ ಒಲೆ ಹಚ್ಚುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಶನಿವಾರಸಂತೆ ಮಹಿಳಾ ಸಮಾಜದ ಅಧ್ಯಕ್ಷೆ ಬಿ.ಎನ್.ಭುವನೇಶ್ವರಿ, ಮಿಲನ ಭರತ್, ಕೊಡಗು ಅಭಿನಯ ಕಲಾ ಮಿಲನ ಚಾರಿಟಬಲ್ ಟ್ರಸ್ಟ್ ನ ಪದಾಧಿಕಾರಿ ಕುದುಕುಳಿ ಇಂದಿರಾವತಿ, ಮಾನಸ, ಮುಂತಾದವರು , 2ಕಾರ್ಯಕ್ರಮದಲ್ಲಿ ಪಾಲ್ಗೊಂಡವರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಕುದುಕುಳಿ ಇಂದಿರಾವತಿ ಭರತ್ ಅಭಿಪ್ರಾಯ
ಶನಿವಾರಸಂತೆ:
ಬಹುತೇಕ ಮಹಿಳೆಯರ ಬದುಕು ಅಡುಗೆ ಮನೆಯಲ್ಲಿ ಅರಳುತ್ತದೆ. ಜತೆಗೆ ಅಡುಗೆಯಲ್ಲಿ ಅಭಿರುಚಿಯ ವೈವಿಧ್ಯತೆಯನ್ನು ಕಾಣಬಹುದು ಎಂದು ಕೊಡಗು ಅಭಿನಯ ಕಲಾ ಮಿಲನ ಚಾರಿಟಬಲ್ ಟ್ರಸ್ಟ್ ಪದಾಧಿಕಾರಿ ಕುದುಕುಳಿ ಇಂದಿರಾವತಿ ಭರತ್ ಅಭಿಪ್ರಾಯ ವ್ಯಕ್ತಪಡಿಸಿದರು.
ಶನಿವಾರಸಂತೆಯ ನಾಟ್ಯ ಸದನದ ಸಭಾಂಗಣದಲ್ಲಿ ಕೊಡಗು ಅಭಿನಯ ಕಲಾ ಮಿಲನ ಚಾರಿಟಬಲ್ ಟ್ರಸ್ಟ್ ವತಿಯಿಂದ ಭಾನುವಾರ ನಾಟ್ಯ ಸದನ ಸಭಾಂಗಣದಲ್ಲಿ ಆಯೋಜಿಸಿದ್ದ ತಿಂಗಳ ಕಾರ್ಯಕ್ರಮದ ಸಂಭ್ರಮದಲ್ಲಿ ಅಡುಗೆಯೊಳಗೆ ಅವಿತ ಕಾವ್ಯಗಳು ಎಂಬ ವಿನೂತನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಒಲೆ ಹಚ್ಚುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಶನಿವಾರಸಂತೆ ಮಹಿಳಾ ಸಮಾಜದ ಅಧ್ಯಕ್ಷೆ ಬಿ.ಎನ್.ಭುವನೇಶ್ವರಿ ಮಾತನಾಡಿ, ಹೆಣ್ಣುಮಕ್ಕಳು ಅಡುಗೆ ಮನೆಯಲ್ಲಿ ಉಪ್ಪು, ಹುಳಿ, ಖಾರ ಬೆರೆತ ಅಡುಗೆಯನ್ನು ಮಾಡಿ ಬಡಿಸುವಂತೆ ಕವಿಯತ್ರಿಯರು ರಚಿಸುವ ಸಾಹಿತ್ಯದ ಅಡುಗೆಯ ರುಚಿ ಸವಿದವರಿಗಷ್ಟೇ ಗೊತ್ತು ಎಂದರು.
ಒಗ್ಗರಣೆ ಹಾಕುವ ಮೂಲಕ ಕವಿತೆಯನ್ನು ವಾಚಿಸಿದ ನಿಡ್ತ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಾನಸಾ, ಉದ್ಯೋಗಸ್ಥ ಮಹಿಳೆಯರು ಕರ್ತವ್ಯ ಮುಗಿಸಿ ಮನೆಗೆ ಬಂದು ಅಡುಗೆ ಮನೆಯೊಳಗೆ ಹೋದಾಗ ಮನಸ್ಸಿನಲ್ಲಿ ತುಂಬಿರುವ ಕೆಲಸದ ಒತ್ತಡದಿಂದ ಅಡುಗೆಯ ಬಗ್ಗೆ ಆಸಕ್ತಿಯನ್ನು ಕಳೆದುಕೊಳ್ಳುತ್ತಾರೆ. ಅಂತಹ ಹೆಣ್ಣು ಮಕ್ಕಳಿಗೆ ಅಡುಗೆಯೊಳಗೆ ಅವಿತ ಕಾವ್ಯಗಳು ಕವಿಗೋಷ್ಠಿ ಸ್ಫೂರ್ತಿ ನೀಡುತ್ತದೆ ಎಂದರು.
ನಾಟ್ಯ ಮಿಲನ ನೃತ್ಯ ಶಾಲೆಯ ಅಧ್ಯಕ್ಷೆ ಮಿಲನಾ ಭರತ್ ಮಾತನಾಡಿ, ನಾಟ್ಯ ಶಾಲೆಯಲ್ಲಿ ತಿಂಗಳಲ್ಲಿ ಒಂದು ದಿನವನ್ನಾದರೂ ಸಾಹಿತ್ಯಕ್ಕೆ ಮೀಸಲಿಡಬೇಕೆಂಬ ಬಹು ದಿನಗಳ ಕನಸು ನನಸಾಗಿದೆ. ಮಹಿಳಾ ಸಾಹಿತಿಗಳ ಪುಸ್ತಕ ಪರಿಚಯದೊಂದಿಗೆ ಆರಂಭವಾದ ಕಾರ್ಯಕ್ರಮ ಅಡುಗೆ ಮನೆಯೊಳಗೆ ಅವಿತ ಕಾವ್ಯಗಳು ಎಂಬ ವಿನೂತನ ಕಾರ್ಯಕ್ರಮದೊಂದಿಗೆ ಮಹಿಳಾ ಕವಿಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಭಾರತಿ ವಿದ್ಯಾಸಂಸ್ಥೆ ಉಪನ್ಯಾಸಕ ಎ.ಎಚ್.ಚಂದ್ರಕಾಂತ್ ಮಾತನಾಡಿ, ಅಡುಗೆಯೊಳಗೆ ಅವಿತ್ತಿದ್ದ ಮಹಿಳೆಯರ ಕಾವ್ಯಗಳು ಕಾರ್ಯಕ್ರಮದಲ್ಲಿ ಅದ್ಭುತ ಸಾಹಿತ್ಯ ಉಣಬಡಿಸಿದವು. ಬದುಕನ್ನು, ಸಮಾಜವನ್ನು ಸಾಂಸ್ಕೃತಿಕವಾಗಿ ಚಾರಿತ್ರಿಕವಾಗಿ ಮಾಡುವವರು ಗೃಹಿಣಿಯರು ಎಂದರು.
ಕಾರ್ಯಕ್ರಮದಲ್ಲಿ ಅಭಿನಯ ಕಲಾ ಮಿಲನ ಚಾರಿಟಬಲ್ ಟ್ರಸ್ಟ್ ಹಿರಿಯ ತರಬೇತುದಾರ, ರಾಷ್ಟ್ರ ಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕ ತೆಕ್ಕಡೆ ಕುಮಾರ ಸ್ವಾಮಿ-ನೇತ್ರಾವತಿ ದಂಪತಿಯರನ್ನು ಸನ್ಮಾನಿಸಿ ಗೌರವ ಸಮರ್ಪಣೆ ಮಾಡಲಾಯಿತು.
ನೃತ್ಯ ಶಾಲಾ ವಿದ್ಯಾರ್ಥಿನಿ ಡಿ.ವೈ.ಇಶಾನಿ, ಅಭಿನಯ ಕಲಾ ಮಿಲನ ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷ ಕುದುಕುಳಿ ಭರತ್, ಪದಾಧಿಕಾರಿಗಳಾದ ಜಿತೇಂದ್ರ, ತಂಗ್ಯಮ್ಮ, ವ್ಯವಸ್ಥಾಪಕ ಹೇಮಂತ್, ದೈಹಿಕ ಶಿಕ್ಷಣ ಶಿಕ್ಷಕಿ ಕವಿತಾ, ವಿದ್ಯಾರ್ಥಿ ಪವನ್, ಇತರರು ಹಾಜರಿದ್ದರು.