ಜಿಲ್ಲಾಡಳಿತ ಮತ್ತು ಕೊಡಗು ಜಿಲ್ಲಾ ಪಂಚಾಯತ್ ವತಿಯಿಂದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತು ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಗ್ಯಾರಂಟಿ ಕಾರ್ಯಗಾರ ಮತ್ತು ಗ್ಯಾರಂಟಿ ಉತ್ಸವ ಕಾರ್ಯಕ್ರಮವನ್ನು ಸಚಿವ ಎನ್.ಎಸ್. ಬೋಸರಾಜು ಉದ್ಘಾಟಿಸಿದರು. ಡಾ. ಮಂತರ್ ಗೌಡ, ಎ.ಎಸ್. ಪೊನ್ನಣ್ಣ, ಹೆಚ್.ಎಂ. ರೇವಣ್ಣ, ಡಾ. ಪುಷ್ಪ ಅಮರನಾಥ್, ವೆಂಕಟ್ ರಾಜಾ, ಕೆ. ರಾಮರಾಜನ್ ಇದ್ದರು
ಜಿಎಸ್‌ಟಿ, ಆದಾಯ ತೆರಿಗೆ ಮತ್ತಿತರ ಕಾರಣಗಳಿಂದ ಜನಸಾಮಾನ್ಯರು ಗ್ಯಾರಂಟಿ ಯೋಜನೆಗಳಿಂದ ವಂಚಿತರಾಗಬಾರದು ಎಂದು ಕರ್ನಾಟಕ ರಾಜ್ಯಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಹೆಚ್.ಎಂ. ರೇವಣ್ಣ ಹೇಳಿದರು. ಜಿಲ್ಲಾಡಳಿತ ಮತ್ತು ಕೊಡಗು ಜಿಲ್ಲಾ ಪಂಚಾಯತ್ ವತಿಯಿಂದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತು ಶನಿವಾರ ಇಲ್ಲಿನ ಜಿ.ಪಂ. ಸಭಾಂಗಣದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಗ್ಯಾರಂಟಿ ಕಾರ್ಯಗಾರ ಮತ್ತು ಗ್ಯಾರಂಟಿ ಉತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯದ ಪ್ರತಿ ಮನೆಗೂ ತಿಂಗಳಿಗೆ 7-8. ಸಾವಿರ ರೂ. ನೇರವಾಗಿ ತಲುಪುತ್ತಿದೆ. ಯೋಜನೆಯನ್ನು ವಿರೋಧ ಮಾಡುವವರು ಮಾತ್ರ ಲೋಪಗಳನ್ನು ಹೇಳುತ್ತಾರೆ. ಫಲಾನುಭವಿಗಳು ಇದರ ಪ್ರಯೋಜನವನ್ನು ತಿಳಿಸಬೇಕು. ಮರಣ ಹೊಂದಿರುವವರ ಖಾತೆಗೆ ಗ್ಯಾರಂಟಿ ಯೋಜನೆಯ ಹಣ ಜಮಾ ಆಗಿದೆ. ಇದರ ಬಗ್ಗೆ ಮಾಹಿತಿ ಕೊಡಬೇಕು. ಇನ್ನು ಮುಂದೆ ಹೀಗೆ ಆಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಯೋಜನೆಯ ಪ್ರಯೋಜನ ಸಿಗಬೇಕು. ಫಲಾನುಭವಿಗಳ ಬಳಿಗೆ ಹೋಗಿ ಯೋಜನೆ ತಲುಪಿಸವಂತಾಗಬೇಕು. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲಾ ಜನಪರ ಕಾರ್ಯಕ್ರಮಗಳನ್ನು ಕೊಟ್ಟಿದೆ. ವಸತಿ ಗ್ಯಾರಂಟಿ ಯೋಜನೆಯ ಜಾರಿ ಬಗ್ಗೆಯೂ ಚಿಂತನೆ ನಡೆದಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವರೂ ಆದ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ಸಚಿವ ಎನ್.ಎಸ್. ಬೋಸರಾಜು ಮಾತನಾಡಿ ಜನಸಾಮಾನ್ಯರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಉದ್ದೇಶ ಇಟ್ಟುಕೊಂಡು ಗ್ಯಾರಂಟಿ ಯೋಜನೆ ಘೋಷಣೆ ಮಾಡಲಾಗಿತ್ತು. ಇದಕ್ಕೆ ಖಾತರಿಯಾಗಿ ಗ್ಯಾರಂಟಿ ಕಾರ್ಡ್ ಕೂಡ ವಿತರಣೆ ಮಾಡಲಾಗಿತ್ತು. ಅದರಂತೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಯಾರು ಅರ್ಜಿ ಹಾಕದಿದ್ದರೂ ಸರ್ಕಾರವೇ ನೇರವಾಗಿ ಫಲಾನುಭವಿಗಳಿಗೆ ಯೋಜನೆಗಳನ್ನು ತಲುಪಿಸಿದೆ. ಬೇರೆ ರಾಜ್ಯಗಳಲ್ಲಿ ಇಂಥ ಯೋಜನೆ ಘೋಷಿಸಿದ್ದರೂ ಯಶಸ್ವಿಯಾಗಿ ಜಾರಿಗೆ ಬಂದಿಲ್ಲ. ಆದರೆ ಕರ್ನಾಟಕದಲ್ಲಿ ಮುಂದುವರಿದಿದೆ. ಏನೇ ಸಮಸ್ಯೆ ಬಂದರೂ ನಮ್ಮ ರಾಜ್ಯದಲ್ಲಿ ಗ್ಯಾರಂಟಿ ಯೋಜನೆ ನಿಲ್ಲುವುದಿಲ್ಲ. ಜಿಲ್ಲೆಯಲ್ಲಿ ಕೆಎಸ್‌ಆರ್‌ಟಿಸಿ ಹೊಸ ಮಾರ್ಗಗಳ ಅಗತ್ಯ ಇರುವ ಕಡೆಗಳಲ್ಲಿ ಸರ್ವೆ ಮಾಡಿ ವರದಿ ಕೊಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಹೊಸ ಬಸ್‌ಗಳು, ಹೊಸ ಡಿಪೋ ಬರಲಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶಕ್ತಿ ಯೋಜನೆ ಅಡಿಯಲ್ಲಿ ಶೇ.33 ರಷ್ಟು ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಮಹಿಳೆಯರಿಗೆ ಕುಟುಂಬ ನಡೆಸಲು ಅನುಕೂಲ ಆಗುವ ನಿಟ್ಟಿನಲ್ಲಿ ಮುಂದಿನ ಜನವರಿಯಿಂದ ಇಂದಿರಾ ಕಿಟ್ ಕೊಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಕರ್ನಾಟಕ ರಾಜ್ಯಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಉಪಾಧ್ಯಕ್ಷೆ ಡಾ. ಪುಷ್ಪ ಅಮರನಾಥ್ ಮಾತನಾಡಿ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಮೂಲಕ ಸರ್ವರಿಗೆ ಸಮಪಾಲು, ಸಮಬಾಳು ಆಶಯ ಈಡೇರಿದೆ. ಈ ಮೂಲಕ ದೇಶದಲ್ಲಿ ಇರುವುದು ಕರ್ನಾಟಕ ಮಾದರಿ ಆಡಳಿತ ಮಾತ್ರ ಎನ್ನುವುದು ಸಾಬೀತಾಗಿದೆ. ಇದನ್ನು ಕೊಟ್ಟಿದ್ದು ಕರ್ನಾಟಕ ಕಾಂಗ್ರೆಸ್ ಸರ್ಕಾರ ಎನ್ನುವುದು ಹೆಮ್ಮೆಯ ವಿಷಯ ಎಂದರು.
ಮತ್ತೊಬ್ಬ ಉಪಾಧ್ಯಕ್ಷ ಮೆಹರೋಜ್ ಖಾನ್ ಮಾತನಾಡಿ ಶಕ್ತಿ ಯೋಜನೆಯಿಂದಾಗಿ ಮಹಿಳೆಯರ ವಿದ್ಯಾಭ್ಯಾಸದ ಪ್ರಮಾಣ ಹೆಚ್ಚಾಗಿರುವುದು ಅಧ್ಯಯನಗಳಿಂದ ಸಾಬೀತಾಗಿದೆ. ಯೋಜನೆ ಯಶಸ್ಸಿನ ಹಿಂದೆ ಅಧಿಕಾರಿಗಳ ಶ್ರಮವೂ ಹೆಚ್ಚು ಇದೆ. ಗ್ಯಾರಂಟಿ ಯೋಜನೆಗಳಿಂದಾಗಿ ಮಹಿಳೆಯರಿಗೆ ಶಕ್ತಿ ಸಿಕ್ಕಿದೆ ಸ್ವಾವಲಂಬಿಗಳಾಗಿದ್ದಾರೆ. ಇಲ್ಲಿಯ ತನಕ ಯೋಜನೆಯ ಲಾಭ ಸಿಗದವರಿಗೂ ಮುಂದೆ ಸಿಗುವಂತಾಗಬೇಕು ಎಂದು ಹೇಳಿದರು.
ಮುಖ್ಯಮಂತ್ರಿ ಕಾನೂನು ಸಲಹೆಗಾರರೂ ಆಗಿರುವ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಮಾತನಾಡಿ ಸಾಮಾಜಿಕ ನ್ಯಾಯದ ಕಲ್ಪನೆ ಅಡಿಯಲ್ಲಿ ಕೆಲಸ ಮಾಡುತ್ತಿರುವ ಯಾವುದೇ ರಾಜ್ಯದಲ್ಲಿ ಇಂಥ ಯೋಜನೆ ಇಲ್ಲ. ಈ ಯೋಜನೆ ಜಾರಿಗೆ ಬರುತ್ತದೆ ಎನ್ನುವ ನಂಬಿಕೆ ಯಾರಿಗೂ ಇರಲಿಲ್ಲ ಆದರೂ ಕೊಟ್ಟ ಮಾತಿನಂತೆ ಭರವಸೆ ಈಡೇರಿಸಲಾಗಿದೆ. ಯೋಜನೆ ಲಾಭ ಪಡೆದುಕೊಂಡವರು ಮೌನವಾಗಿ ಇರಬಾರದು. ಸರ್ಕಾರದ ಪರ ಧ್ವನಿಯಾಗಿ ಫಲಾನುಭವಿಗಳು ನಿಲ್ಲಬೇಕು ಎಂದು ಹೇಳಿದರು.
ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಮಾತನಾಡಿ ಗ್ಯಾರಂಟಿ ಯೋಜನೆಯಿಂದ ಎಲ್ಲಾ ಮನೆಗಳಿಗೂ ಒಂದಲ್ಲ ಒಂದು ರೀತಿಯಲ್ಲಿ ಪ್ರಯೋಜನ ಆಗಿದೆ. ಈ ಯೋಜನೆ ಮೂಲಕ ಮಹಿಳೆಯರ ಸಬಲೀಕರಣ ಕಾಣಬಹುದು. ಯೋಜನೆ ಮೂಲಕ ಸಿಗುವ ಹಣ ಸದುಪಯೋಗ ಆಗಬೇಕು. ಕೊಡಗಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆದಿವಾಸಿ ಮಹಿಳೆಯರು ಇದ್ದು ಅವರಿಗೂ ಯೋಜನೆ ಪ್ರಯೋಜನ ಆಗಬೇಕು. ವಸತಿ ಯೋಜನೆಯ ಖಾತರಿಗೂ ಒಂದು ಗ್ಯಾರಂಟಿ ಯೋಜನೆ ರೂಪಿಸುವಂತಾಗಬೇಕು ಎಂದರು.
ಕರ್ನಾಟಕ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ ಆರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ
ಜನರ ಜೀವನ ಉತ್ತಮವಾಗಬೇಕು ಎನ್ನುವ ಕಾರಣಕ್ಕೆ ರಾಜ್ಯ ಸರ್ಕಾರದ ಮೂಲಕ 5 ಗ್ಯಾರಂಟಿ ಯೋಜನೆ ಜಾರಿಗೆ ತರಲಾಗಿದೆ. ಗ್ಯಾರಂಟಿ ಯೋಜನೆ ಕೊಡಗಿನಲ್ಲಿ ಶೇ. 99ರಷ್ಟು ಜಾರಿಗೆ ಬಂದಿದೆ ಎಂದು ಹೇಳಿದರು.
ಮಡಿಕೇರಿ ನಗರಸಭೆ ಅಧ್ಯಕ್ಷೆ ಪಿ.ಕಲಾವತಿ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಎಸ್‌ಪಿ ಕೆ. ರಾಮರಾಜನ್, ಜಿ.ಪಂ. ಸಿಇಒ ಆನಂದ್ ಪ್ರಕಾಶ್ ಮೀನಾ ವೇದಿಯಲ್ಲಿ ಇದ್ದರು. ಕರ್ನಾಟಕ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಐದೂ ತಾಲೂಕುಗಳ ಅಧ್ಯಕ್ಷರು, ಸದಸ್ಯರು ಹಾಗೂ ಫಲಾನುಭವಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಸರ್ಕಾರದ ಗ್ಯಾರಂಟಿ ಯೋಜನೆಯ ಯಶಸ್ಸಿನ ಬಗ್ಗೆ ಜಾಗೃತ ಕರ್ನಾಟಕದ ಮುತ್ತುರಾಜ್ ಸಭೆಯಲ್ಲಿ ಮಾಹಿತಿ ನೀಡಿದರು. ಸರ್ಕಾರÀಗಳು ಹಲವಾರು ಯೋಜನೆಗಳನ್ನು ರೂಪಿಸುತ್ತದೆ. ಆದರೆ ಎಲ್ಲಾ ಯೋಜನೆಗಳಿಗೆ ಯಶಸ್ಸು ಸಿಗುವುದಿಲ್ಲ. ಆದರೆ ಗ್ಯಾರಂಟಿ ಯೋಜನೆಗೆ ಯಶಸ್ಸು ಸಿಕ್ಕಿದ ಕಾರಣಕ್ಕೆ ಗ್ಯಾರಂಟಿ ಉತ್ಸವ ಆಯೋಜನೆ ಮಾಡಲಾಗಿದೆ. 2023ರ ಮೇ 1ಕ್ಕೆ ಪ್ರಣಾಳಿಕೆ ಬಿಡುಗಡೆ ಸಂದರ್ಭ ಗ್ಯಾರಂಟಿ ಯೋಜನೆಗಳ ಬಗ್ಗೆ ಘೋಷಣೆ ಮಾಡಲಾಗಿತ್ತು. ಅಧಿಕಾರಕ್ಕೆ ಬಂದ ಕೂಡಲೇ ಜಾರಿಗೆ ತರಲಾಯಿತು. ಯೋಜನೆಯ ಯಶಸ್ಸಿಗೆ ಜನಬೆಂಬಲ ಅಗತ್ಯ. ಗ್ಯಾರಂಟಿ ಯೋಜನೆಯಿಂದ ರಾಜ್ಯದ ಅಭಿವೃದ್ಧಿ ಸಾಧ್ಯ. ದೇಶ ವಿದೇಶದ ಪ್ರಮುಖ ಸಂಸ್ಥೆಗಳು ಗ್ಯಾರಂಟಿ ಯೋಜನೆಯ ಅಧ್ಯಯನ ಮಾಡಿ ಇದರ ಯಶಸ್ಸನ್ನು ಹೇಳಿವೆ
ಗೃಹಲಕ್ಷ್ಮೀ ಯೋಜನೆಯಿಂದ ಕೌಟುಂಬಿಕ ಕಲಹಗಳು ನಿಂತಿವೆ. ಶಕ್ತಿ ಯೋಜನೆ ಮೂಲಕ ಮಹಿಳೆಯರ ಸಬಲೀಕರಣ ಸಾಧ್ಯವಾಗಿದೆ. ಗ್ಯಾರಂಟಿ ಮತ್ತು ಅಭಿವೃದ್ಧಿ ಪರಸ್ಪರ ವಿರೋಧ ಪದಗಳಲ್ಲ. ಪರಸ್ಪರ ಪೂರಕವಾಗಿದೆ. ಗ್ಯಾರಂಟಿ ಯೋಜನೆಗಳ ಮಧ್ಯೆಯೂ ದೇಶದಲ್ಲೇ ಅತೀ ಹೆಚ್ಚು ಜಿಎಸ್‌ಟಿ ಕರ್ನಾಟಕದಲ್ಲಿ ಸಂಗ್ರಹ ಆಗ್ತಿದೆ. ಇದು ಬಿಟ್ಟಿ ಭಾಗ್ಯ, ಪುಕ್ಸಟ್ಟೆ ಅಲ್ಲ. ಇದು ರಾಜ್ಯದ ಹಕ್ಕು. ಮಹಿಳೆಯರ ದುಡಿಮೆಗೆ ಸರಿಯಾದ ಗೌರವ ಸಿಗುತ್ತಿಲ್ಲ. ಹಾಗಾಗಿ ಮಹಿಳೆಯರಿಗೆ ಗೌರವ ಕೊಡುವ ನಿಟ್ಟಿನಲ್ಲಿ ಗ್ಯಾರಂಟಿ ಯೋಜನೆಯಲ್ಲಿ ಮಹಿಳೆಯರಿಗೆ ಆದ್ಯತೆ ನೀಡಲಾಗಿದೆ. ಮಹಿಳೆಯರು ಸ್ವಾಭಿಮಾನದಿಂದ ತಲೆ ಎತ್ತಿ ಬದುಕಬೇಕು. ಜನರ ಹಣ ಜನರಿಗೆ ಕೊಡಬೇಕು ಎನ್ನುವುದು ಗ್ಯಾರಂಟಿ ಯೋಜನೆಯ ತಿರುಳಾಗಿದೆ ಎಂದರು. ಫಲಾನುಭವಿಗಳಾದ ಎಂ.ಎ. ರುಬೀನಾ ಮತ್ತು ಆಶಾಲತಾ ಇದೇ ವೇಳೆ ತಮ್ಮ ಅಭಿಪ್ರಾಯ ಹಂಚಿಕೊAಡರು.