ಕಂಕಣಭಾಗ್ಯ ಈಡೇರಿಸುವ ದೈವ

ವಿರಾಜಪೇಟೆ ಸುಂಕದಕಟ್ಟೆ ಮಲೆತಿರಿಕೆ ಬೆಟ್ಟದ ಶ್ರೀ ಮುತ್ತಪ್ಪನ್ ಕಾವ್ ದೇವಾಲಯ.
ವಿರಾಜಪೇಟೆ ಸುಂಕದಕಟ್ಟೆ ಮಲೆತಿರಿಕೆ ಬೆಟ್ಟದ ಶ್ರೀ ಮುತ್ತಪ್ಪನ್ ಕಾವ್ ದೇವಾಲಯ.
Published on

ಪ್ರಮುಖ ಮುಖ್ಯಾಂಶಗಳು

  • ಸುಂಕದಕಟ್ಟೆ ಮಲೆತಿರಿಕೆ ಬೆಟ್ಟದ ಶ್ರೀ ಮುತ್ತಪ್ಪನ್ ಕಾವ್ ದೇಗುಲ ಪ್ರಸಿದ್ಧಿ
  • ಶ್ರದ್ಧಾ, ಭಕ್ತಿಯಿಂದ ಪ್ರಾರ್ಥಿಸಿದರೆ ಆರೋಗ್ಯ ವೃದ್ಧಿ, ಇಷ್ಟಾರ್ಥ ಪ್ರಾಪ್ತಿ
ವಿರಾಜಪೇಟೆ: ಪ್ರಕೃತಿಯ ಮಡಿಲಿನಲ್ಲಿರುವ ಎರಡು ಶತಮಾನ ಪೂರೈಸಿರುವ ಪುರಾತನ ದೈವ ನೆಲೆ ವಿರಾಜಪೇಟೆ ತಾಲೂಕಿನ ಸುಂಕದಕಟ್ಟೆ ಮಲೆತಿರಿಕೆ ಬೆಟ್ಟದ ಶ್ರೀ ಮುತ್ತಪ್ಪನ್ ಕಾವ್ ದೇವಾಲಯ ಆರೋಗ್ಯ, ಕಂಕಣ ಭಾಗ್ಯ ಭಕ್ತರ ಇಷ್ಟಾರ್ಥ ಈಡೇರಿಸುವ ದೈವವಾಗಿದೆ.
ಕೊಡಗಿನ ಪ್ರತಿ ದೇವಾಲಯ ತನ್ನದೇ ಆದ ವೈಶಿಷ್ಟ್ಯ ಹಾಗೂ ದೇವ ನೆಲೆಗಳಿಂದ ಪ್ರಸಿದ್ಧಿಯನ್ನು ಪಡೆದಿದೆ. ಬಹಳ ಹಿಂದಿನ ಕಾಲದಲ್ಲಿ ನಮ್ಮ ಪೂರ್ವಜರು ಪ್ರಕೃತಿಯ ನಡುವೆ ಬೆಟ್ಟದ ಮೇಲೆ ಕಾಡಿನ ನಡುವೆ ಮರಗಳ ಬುಡದಲ್ಲಿ ದೈವ ನೆಲೆಗಳನ್ನು ಸ್ಥಾಪಿಸಿ ಪೂಜಿಸಿಕೊಂಡು ಬರುತ್ತಿದ್ದರು. ನಂತರದ ದಿನಗಳಲ್ಲಿ ಆಧುನಿಕತೆ ಹಾಗೂ ಅಭಿವೃದ್ಧಿಯಿಂದ ಮರಗಳ ಬುಡಗಳಲ್ಲಿ ಇದ್ದಂತಹ ದೈವ ನೆಲೆಗಳು, ದೇವರ ವಿಗ್ರಹ, ಮೂರ್ತಿ ಹಾಗೂ ರೂಪಗಳು ಗುಡಿಗಳನ್ನು ಸೇರಿ ಮುಂದೆ ದೇವಾಲಯಗಳು ನಿರ್ಮಾಣವಾಗುತ್ತಾ ಬಂತು.
ಅಂದಾಜಿನ ಪ್ರಕಾರ ಈ ದೇವಾಲಯ ಸುಮಾರು 200 ವರ್ಷಗಳ ಇತಿಹಾಸವನ್ನು ಹೊಂದಿದೆ. ಸ್ಥಳೀಯರು ನೀಡುವ ಮಾಹಿತಿ ಪ್ರಕಾರ 200 ವರ್ಷಕ್ಕೂ ಹಿಂದಿನ ಕಾಲದಿಂದ ಈ ದೇವಾಲಯವು ಇದ್ದು ಆರಂಭದಲ್ಲಿ ಮರದ ಕೆಳಗಿನ ಸಣ್ಣ ಗುಡಿಯಲ್ಲಿ ದೇವರನ್ನು ಪೂಜಿಸಲಾಗುತ್ತಿತ್ತು. ಆಗಿನ ಕಾಲಘಟ್ಟದಲ್ಲಿ ಈ ಬೆಟ್ಟವು ದಟ್ಟವಾದ ಅರಣ್ಯವಾಗಿತ್ತು ಹಾಗೂ ಜನವಸತಿ ಪ್ರದೇಶ ತೀರಾ ಕಡಿಮೆ ಇದ್ದ ಕಾರಣ ದೇವಾಲಯ ಪ್ರಚಾರ ಹಾಗೂ ಪ್ರಸಿದ್ಧಿಯನ್ನು ಪಡೆದಿರಲಿಲ್ಲ. ನಂತರದ ದಿನಗಳಲ್ಲಿ ನಿಧಾನವಾಗಿ ಜನವಸತಿ ಪ್ರದೇಶ ಹೆಚ್ಚಿದಂತೆ ದೇವಾಲಯ ಪ್ರಸಿದ್ಧಿಯನ್ನು ಪಡೆಯಲು ಆರಂಭಿಸಿತು. ಹಿಂದಿನ ಕಾಲದಲ್ಲಿ ವಾರ್ಷಿಕೋತ್ಸವದ ಬಗ್ಗೆ ಮಾಹಿತಿ ನೀಡಲು ಮುಖ್ಯ ರಸ್ತೆಯ ಸಮೀಪ ಕೆಲಸ ಇರಿಸಲಾಗುತಿತ್ತು.
ಶ್ರೀ ಮುತ್ತಪ್ಪನ್ ಕಾವ್ ದೇವಾಲಯದಲ್ಲಿ ಪ್ರಮುಖ ದೈವವಾಗಿ ಶ್ರೀ ಮುತ್ತಪ್ಪನ್, ವಿಷ್ಣುಮೂರ್ತಿ, ಪೊಟ್ಟನ್ ದೇವಾ, ಗುಳಿಗನ್ ದೈವ , ವಸೂರಿಮಾಲ ಹಾಗೂ ನಾಗದೇವರ ನೆಲೆ ಇದೆ.
ಮಾರ್ಚ್‌ನಲ್ಲಿ ದೈವಗಳ ವಾರ್ಷಿಕೋತ್ಸವ
ಪ್ರತಿ ವರ್ಷ ಮಾರ್ಚ್ ತಿಂಗಳ ಮೊದಲ ಶನಿವಾರ ಹಾಗೂ ಭಾನುವಾರದಂದು ದೈವಗಳ ವಾರ್ಷಿಕೋತ್ಸವವು ನಡೆಸಿಕೊಂಡು ಬರಲಾಗುತ್ತಿದ್ದು ಈ ದಿನ ದೇವಾಲಯದಲ್ಲಿ ಮೂರರಿಂದ ನಾಲ್ಕು ಸಾವಿರ ಭಕ್ತಾದಿಗಳು ಆಗಮಿಸುತ್ತಾರೆ. ಮುತ್ತಪ್ಪ ದೇವರ ವೆಳ್ಳಾಟಂ, ವಿಷ್ಣುಮೂರ್ತಿ, ಪೊಟ್ಟ ದೇವಾ, ಗುಳಿಗನ್ ದೈವ , ವಸೂರಿಮಾಲ ದೈವಗಳ ದರ್ಶನ ಸೇವೆ ನಡೆಯುತ್ತದೆ. ಶನಿವಾರ ಸಂಜೆಯಿಂದ ಆರಂಭವಾಗುವ ವಾರ್ಷಿಕೋತ್ಸವವು ಭಾನುವಾರ ಮುಂಜಾನೆ ಪೊಟ್ಟದೈವದ ಕೆಂಡ ಪ್ರವೇಶ ತೆರೆಯೊಂದಿಗೆ ಕೊನೆಗೊಳ್ಳುತ್ತದೆ. ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ದೈನಂದಿನ ಪೂಜೆ ನಡೆಸಿಕೊಂಡು ಬರಲಾಗುತಿದ್ದು ಪ್ರತಿ ತಿಂಗಳ ಸಂಕ್ರಮಣ ಪೂಜೆ ಹಾಗೂ ಪೈಂಗುತ್ತಿ ಸೇವೆ ವಿಶೇಷವಾಗಿ ನೆರವೇರಿಸಲಾಗುತ್ತದೆ.
ಆರೋಗ್ಯ, ಮದುವೆ ಕರುಣಿವ ದೈವ
ಶ್ರೀ ಮುತ್ತಪ್ಪನ್ ಕಾವ್ ದೇವಾಲಯದ ದೈವಗಳು ಭಕ್ತರ ಇಷ್ಟಾರ್ಥವನ್ನು ಈಡೇರಿಸುವ ದೈವಗಳಾಗಿದ್ದು. ಬಾಲಗ್ರಹ ಇತರ ಕಾಯಿಲೆ ಹಾಗೂ ಚರ್ಮ ಸಮಸ್ಯೆಗಳಿಂದ ಮುಕ್ತಿ ನೀಡಿ ಆರೋಗ್ಯ ಭಾಗ್ಯ ಕರುಣಿವ ದೈವವಾಗಿ, ಮದುವೆ ಸಮಸ್ಯೆ ಹೊತ್ತ ಬರುವವರಿಗೆ ಕಂಕಣ ಭಾಗ್ಯ ಕರುಣಿವ ದೈವಗಳಾಗಿ, ಕೌಟುಂಬಿಕ ಸಮಸ್ಯೆ , ಕೆಲಸ ಕಾರ್ಯ ದೊರಕಿಸುವುದು, ಮನೆ ನಿರ್ಮಾಣ ಮುಂತಾದ ಸಮಸ್ಯೆಗಳನ್ನು ನಿವಾರಿಸಿ ನಂಬಿಬಂದ ಭಕ್ತರಿಗೆ ಅಭಯ ನೀಡುವ ಶಕ್ತಿಯಾಗಿ ದೈವಗಳು ನೆಲೆಕಂಡಿದೆ. ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಯಾದ ನಂತರ ಕೆಂಪು ವಸ್ತ್ರ, ಕಪ್ಪು ವಸ್ತ್ರ ನೀಡಿ ತೆಂಗಿನ ಕಾಯಿ ಒಡೆದು ತಮ್ಮ ಹರಕೆ ತೀರಿಸುತ್ತಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net