ವನ್ಯಜೀವಿ ಪ್ರವಾಸೋದ್ಯಮ ಕರಾಳಮುಖ ಅನಾವರಣ

 ದುಬಾರೆ ಸಾಕಾನೆ ಶಿಬಿರದಲ್ಲಿರುವ ಆನೆಗಳು
ದುಬಾರೆ ಸಾಕಾನೆ ಶಿಬಿರದಲ್ಲಿರುವ ಆನೆಗಳು
Published on
ಮಡಿಕೇರಿ:
ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ದುಬಾರೆ ಸಾಕಾನೆ ಶಿಬಿರದಲ್ಲಿ ಕಳೆದ ವಾರ ಸಂಭವಿಸಿದ ದುರಂತದಲ್ಲಿ ಪ್ರವಾಸಿ ಮಹಿಳೆ ಮತ್ತು ಆನೆಯೊಂದರ ದುರ್ಮರಣ ಇಡೀ ರಾಜ್ಯವನ್ನೇ ನಡುಗಿಸಿದೆ. ಈ ದುರಂತ ವನ್ಯಜೀವಿ ಪ್ರವಾಸೋದ್ಯಮದ ಕರಾಳ ಮುಖವನ್ನು ಅನಾವರಣಗೊಳಿಸುವುದರ ಜತೆಗೆ, ಕೊಡಗಿನ ಸುಸ್ಥಿರ ಪ್ರವಾಸೋದ್ಯಮ ಮತ್ತು ಪ್ರವಾಸಿಗರ ಸುರಕ್ಷತೆಯ ಬಗ್ಗೆ ತೀವ್ರ ಚರ್ಚೆ ಹಾಗೂ ಚಿಂತನೆಗೆ ದಾರಿ ಮಾಡಿಕೊಟ್ಟಿದೆ.
ಈ ದುರಂತದ ಬೆನ್ನಲ್ಲೇ ಎಚ್ಚೆತ್ತ ಕರ್ನಾಟಕ ಸರ್ಕಾರ ಮತ್ತು ಅರಣ್ಯ ಇಲಾಖೆ ತಕ್ಷಣವೇ ಕಠಿಣ ನಿರ್ಧಾರಗಳನ್ನು ಕೈಗೊಂಡಿವೆ. ತನಿಖೆ ಮತ್ತು ಸುರಕ್ಷತೆಯ ದೃಷ್ಟಿಯಿಂದ ದುಬಾರೆ ಆನೆ ಶಿಬಿರವನ್ನು ಅನಿರ್ದಿಷ್ಟಾವಧಿಗೆ ಬಂದ್ ಮಾಡಲಾಗಿದೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಉಪಲೋಕಾಯುಕ್ತರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ವರದಿ ಕೇಳಿದ್ದಾರೆ. ಇನ್ನು ಮುಂದೆ ಪ್ರವಾಸಿಗರು ಆನೆಗಳಿಗೆ ಅತ್ಯಂತ ಹತ್ತಿರ ಹೋಗಿ ಸ್ನಾನ ಮಾಡಿಸುವುದು, ಮುಟ್ಟುವುದು, ಸೆಲ್ಫಿ ತಗೆದುಕೊಳ್ಳುವುದು, ಬಾಳೆಹಣ್ಣು, ಬೆಲ್ಲ ತಿನ್ನಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಇಲ್ಲಿ ಪ್ರವಾಸೋದ್ಯಮದ ದಟ್ಟಣೆ ಪರಿಸರ ಸಮತೋಲನವನ್ನು ಕೆಡಿಸುತ್ತಿರುವ ಆರೋಪವಿದೆ. ಸುಸ್ಥಿರ ಪ್ರವಾಸೋದ್ಯಮವನ್ನು ಜಾರಿಗೆ ತರಲು ಒತ್ತಾಯಗಳು ಕೇಳಿಬರುತ್ತಿದೆ. ದುಬಾರೆ ಅಥವಾ ಇತರ ಸೂಕ್ಷ್ಮ ಪರಿಸರ ವಲಯಗಳಿಗೆ ದಿನಕ್ಕೆ ಇಷ್ಟೇ ಪ್ರವಾಸಿಗರು ಬರಬೇಕು ಎಂಬ ಕಟ್ಟುನಿಟ್ಟಿನ ಮಿತಿಯನ್ನು ಹೇರಬೇಕು. ಹೋಂ ಸ್ಟೇಗಳು ಮತ್ತು ರೆಸಾರ್ಟ್ಗಳ ಅನಿಯಂತ್ರಿತ ಬೆಳವಣಿಗೆಯನ್ನು ತಡೆದು, ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕೆ ಮಾತ್ರ ಆದ್ಯತೆ ನೀಡಬೇಕು. ಆನೆಗಳು ಸೇರಿದಂತೆ ಕಾಡು ಪ್ರಾಣಿಗಳನ್ನು ಮನರಂಜನೆಯ ವಸ್ತುಗಳಂತೆ ಬಳಸುವುದನ್ನು ನಿಲ್ಲಿಸಿ, ಅವುಗಳ ನೈಸರ್ಗಿಕ ನಡವಳಿಕೆಗೆ ತೊಂದರೆಯಾಗದAತೆ ನೋಡಿಕೊಳ್ಳಬೇಕು ಎನ್ನುವ ಮಾತುಗಳು ಕೇಳಿಬರುತ್ತಿದೆ.
ದುಬಾರೆ ಶಿಬಿರದ ದುರಂತ ದೊಡ್ಡದೊಂದು ಪಾಠ ಕಲಿಸಿದೆ. ಪ್ರಕೃತಿ ಮತ್ತು ವನ್ಯಜೀವಿಗಳನ್ನು ನಾವು ನಿಯಂತ್ರಿಸಬಹುದು ಎಂಬ ಭ್ರಮೆಯಿಂದ ಹೊರಬರಬೇಕು ಎನ್ನುವ ಸತ್ಯದರ್ಶನ ಮಾಡಿಸಿದೆ. ಕೊಡಗಿನ ಸೌಂದರ್ಯ ಉಳಿಯಬೇಕು ಮತ್ತು ಪ್ರವಾಸಿಗರ ಜೀವವೂ ಸುರಕ್ಷಿತವಾಗಿರಬೇಕು ಎಂದರೆ ಕಟ್ಟುನಿಟ್ಟಿನ ನಿಯಮಗಳು ಕೇವಲ ಕಾಗದದ ಮೇಲಿರದೆ, ಕಟ್ಟುನಿಟ್ಟಾಗಿ ಜಾರಿಯಾಗಬೇಕಿದೆ.
"

ದುಬಾರೆ ಸಾಕಾನೆ ಶಿಬಿರದಲ್ಲಿ ನಡೆದ ದುರಂತ ದುಃಖಕರವಾಗಿದೆ. ಈ ಘಟನೆ ಪ್ರವಾಸೋದ್ಯಮದಲ್ಲಿ ಪ್ರವಾಸಿಗರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂಬ ಅಗತ್ಯವನ್ನು ತೋರಿಸಿದೆ. ಪ್ರವಾಸಿ ತಾಣಗಳಲ್ಲಿ ಜನಸಂದಣಿ ನಿಯಂತ್ರಣ, ತರಬೇತಿ ಪಡೆದ ಮಾರ್ಗದರ್ಶಕರ ನೇಮಕ, ಎಚ್ಚರಿಕಾ ಫಲಕಗಳ ಅಳವಡಿಕೆ ಹಾಗೂ ಅಪಾಯಕಾರಿ ಪ್ರದೇಶಗಳಿಗೆ ನಿರ್ಬಂಧ ಹೇರಿಕೆ ಅಗತ್ಯವಾಗಿದೆ. ಕಾಡುಪ್ರಾಣಿಗಳ ಸಹಜ ವಾಸಸ್ಥಳಕ್ಕೆ ಅತಿಕ್ರಮಣವಾಗದಂತೆ ನೋಡಿಕೊಳ್ಳಬೇಕು.

— ಚಂದನ ಸುಬ್ರಮಣಿ, ಮಾಜಿ ಅಧ್ಯಕ್ಷ, ಜೇಸಿಐ, ಸೋಮವಾರಪೇಟೆ

"

ದುಬಾರೆ ದುರಂತ ಪ್ರವಾಸಿಗಳಿಂದ ಹಿಡಿದು ಜನ ಸಾಮಾನ್ಯರೂ ಭಯಭೀತರಾಗುವಂಥ ನಿದರ್ಶನ. ಮನುಷ್ಯ ಮತ್ತು ಸಾಕುಪ್ರಾಣಿ ಅಥವಾ ವನ್ಯ ಪ್ರಾಣಿಗಳೇ ಇರಲಿ, ನಡುವೆ ಅಂತರ ಇರಲೇಬೇಕು. ಸರಿ ಇರುವ ಮನುಷ್ಯರೇ ಅತಿರೇಕದಿಂದ ಜಗಳ ಆಡುವ ಹಲವಾರು ಉದಾಹರಣೆಗಳು ಇರುವಾಗ ಅದರಲ್ಲೂ ವಿಶೇಷವಾಗಿ ಆನೆ, ಹುಲಿ, ಕರಡಿಗಳಂಥ ಜೀವಿಗಳು ಹಾಗೂ ಮನುಷ್ಯ ಸಂಕುಲಗಳ ನಡುವೆ ಅಗತ್ಯ ಕ್ರಮದ ಅಂತರ ಕಾಪಾಡ ಬೇಕು. ಪ್ರವಾಸೋದ್ಯಮದ ಹೆಸರಿನಲ್ಲಿ ಹಣ ಸಂಪಾದಿಸುವ ಅರಣ್ಯ ಇಲಾಖೆ ಮುಂಜಾಗ್ರತೆ ವಹಿಸಿ ಮುಂದೆ ಜೀವ ಹಾನಿಯನ್ನು ತಡೆಗಟ್ಟಬೇಕು.

— ಪಟ್ಟಡ ಸುಗುಣಕುಮಾರ್, ಸಮಾಜ ಸೇವಕರು, ಅವಂದೂರು ಗ್ರಾಮ

"

ಕೊಡಗಿನಲ್ಲಿ ಸುಸ್ಥಿರ ಪ್ರವಾಸೋದ್ಯಮಕ್ಕೆ ಆದ್ಯತೆ ಸಿಗುವಂತಾಗಬೇಕು. ಪ್ರವಾಸೋದ್ಯಮದ ಹೆಸರಿನಲ್ಲಿ ಪ್ರಾಣಿ ಹಿಂಸೆ ಸರಿಯಲ್ಲ. ಪ್ರವಾಸಿತಾಣಗಳಲ್ಲಿ ಪ್ರವಾಸಿಗರ ಸುರಕ್ಷತೆಗೆ ಆದ್ಯತೆ ಕೊಡಬೇಕು. ಪ್ರವಾಸಿಗರಿಂದ ಪ್ರವೇಶದರ ವಸೂಲಿ ಮಾಡುವ ಇಲಾಖೆಗಳಿಗೆ ಪ್ರವಾಸಿಗರಿಗೆ ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸಿಕೊಡುವ ಬದ್ಧತೆ ಇರಬೇಕು. ಪ್ರವಾಸಿಗರು ಕೂಡ ಪ್ರವಾಸಿತಾಣಗಳಲ್ಲಿ ಜವಾಬ್ದಾರಿಯಿಂದ ವರ್ತಿಸಬೇಕು.

— ಗುಡ್ಡೇರ ತೇಜ ಸತೀಶ್, ಗೃಹಿಣಿ, ಮುಕ್ಕೋಡ್ಲು ಗ್ರಾಮ

"

ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಆನೆ ಶಿಬಿರಗಳಲ್ಲಿ ಕಟ್ಟುನಿಟ್ಟಾಗಿ ಪ್ರವಾಸಿಗರ ನಿರ್ವಹಣೆಗೆ ಮಾರ್ಗಸೂಚಿ ಜಾರಿಗೆ ತರಬೇಕು. ಅಧಿಕಾರಿಗಳು ಮತ್ತು ಸಿಬ್ಬಂದಿ ಈ ಮಾರ್ಗಸೂಚಿಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸುವಂತೆ ನಿಗಾವಹಿಸಬೇಕು. ಜಿಲ್ಲಾಡಳಿತ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಪ್ರವಾಸಿಗರು ಪ್ರಾಣಿಗಳನ್ನು ವೀಕ್ಷಿಸುವಾಗ ಅಂತರ ಕಾಯ್ದುಕೊಳ್ಳುವ ಜತೆಗೆ ತಮ್ಮ ಸುರಕ್ಷತೆಯ ಬಗ್ಗೆ ತೀವ್ರ ಎಚ್ಚರಿಕೆ ವಹಿಸಬೇಕು.

— ಎನ್.ಎಸ್. ಬೋಸರಾಜು, ಕೊಡಗು ಜಿಲ್ಲ ಉಸ್ತುವಾರಿ ಸಚಿವ

"

ರಾಜ್ಯದಲ್ಲಿರುವ ಎಲ್ಲಾ ಸಾಕಾನೆ ಶಿಬಿರಗಳಲ್ಲಿ ಪ್ರವಾಸಿಗರು ಆನೆಯ ಬಳಿ ಹೋಗದಂತೆ, ಕನಿಷ್ಠ 100 ಅಡಿ ದೂರದಲ್ಲಿ ನಿಂತು ಆನೆ ಮೈ ತೊಳೆಯುವುದನ್ನು ವೀಕ್ಷಿಸುವಂತೆ ಮತ್ತು ಯಾವುದೇ ಕಾರಣಕ್ಕೂ ಆನೆಗಳ ಬಳಿ ಹೋಗಿ ಸೆಲ್ಫಿ, ಫೋಟೋ ತೆಗೆಸಿಕೊಳ್ಳಲು, ಮೈತೊಳೆಯಲು ಅವಕಾಶ ನೀಡದಂತೆ, ಬಾಳೆಹಣ್ಣು, ಬೆಲ್ಲ, ಕಬ್ಬು ಇತ್ಯಾದಿ ಯಾವುದೇ ಆಹಾರವನ್ನು ಪ್ರವಾಸಿಗರ ಕೈಯಿಂದ ತಿನ್ನಿಸದಂತೆ ಆದೇಶ ಹೊರಡಿಸಲು ಅಧಿಕಾರಿಗಳಿಗೆ ಈಗಾಗಲೇ ಸೂಚಿಸಲಾಗಿದೆ. ಸಾಕಾನೆ ಶಿಬಿರಗಳಿಗೆ ಬರುವ ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಎಸ್.ಓ.ಪಿ. ರೂಪಿಸಲು ನಿರ್ದೇಶನ ನೀಡಲಾಗಿದೆ.

— ಈಶ್ವರ ಬಿ. ಖಂಡ್ರೆ, ಅರಣ್ಯ ಸಚಿವ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net