ಕಾಫಿಯನ್ನು ಕಾಡುವ ಬೆರ್ರಿ ಬೋರರ್

ಕಾಯಿಕೊರಕದ ಹಾವಳಿಗೆ ಒಳಗಾದ ಕಾಫಿ ಹಣ್ಣು
ಕಾಯಿಕೊರಕದ ಹಾವಳಿಗೆ ಒಳಗಾದ ಕಾಫಿ ಹಣ್ಣು
Published on

ಪ್ರಮುಖ ಮುಖ್ಯಾಂಶಗಳು

  • ಪ್ರಮುಖ ವಾಣಿಜ್ಯ ಬೆಳೆ ಕಾಫಿಗೆ ಕಂಟಕ
  • ಗುಣಮಟ್ಟಕ್ಕೆ ಪೆಟ್ಟು
  • ಇಳುವರಿ ಮೇಲೂ ಪರಿಣಾಮ
 ಮಡಿಕೇರಿ:
 ಕೊಡಗು ಜಿಲ್ಲೆಯ ಬಹುಮುಖ್ಯ ವಾಣಿಜ್ಯ ಬೆಳೆೆಯಾಗಿರುವ ಕಾಫಿ ಕೃಷಿಕರಿಗೆ ಆರ್ಥಿಕ ಮತ್ತು ಸಾಮಾಜಿಕ ಸುಭದ್ರತೆ ಒದಗಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ಇದೀಗ ಕಾಫಿ ಕಟಾವು ಹಂಗಾಮು ಶುರುವಾಗಿದ್ದು ಜಿಲ್ಲೆಯಾದ್ಯಂತ ಕಾಫಿ ಕಾಯಿಕೊರಕ (ಬರ‍್ರಿ ಬೋರರ್) ಕೀಟದ ಹಾವಳಿ ತೀವ್ರವಾಗಿದೆ. ಇದರಿಂದ ಕಾಫಿ ಬೀಜದ ಗುಣಮಟ್ಟದಲ್ಲಿ ವ್ಯತ್ಯಾಸ ಕಂಡು ಬಂದಿದ್ದು, ಬೆಳೆಯ ಇಳುವರಿ ಮೇಲೂ ಪರಿಣಾಮ ಬೀರಿದೆ. ಈ ಹಿನ್ನೆಲೆಯಲ್ಲಿ ಗೋಣಿಕೊಪ್ಪಲುವಿನ ಐ.ಸಿ.ಎ.ಆರ್-ಕೃಷಿ ವಿಜ್ಞಾನ ಕೇಂದ್ರ ಈ ಕೀಟದ ಸಮಗ್ರ ಹತೋಟಿಯ ಬಗ್ಗೆ ಮಾಹಿತಿ ಕೊಟ್ಟಿದೆ. 
 ಕಾಫಿಗೆ ಬಾಧಿಸುವ ಕಾಯಿಕೊರಕದ ಹಾವಳಿಯಿಂದ ಮುಂದಿನ ಸಾಲಿನ ಫಸಲು ಮತ್ತು ಕಾಫಿಯ ಗುಣಮಟ್ಟಕ್ಕೂ ತೀವ್ರ ಹೊಡೆತ ಬೀಳಲಿದೆ. ಈ ಕೀಟದ ಭಾದೆಯನ್ನು ತಡೆಗಟ್ಟಲು ಸೂಕ್ತ ನಿಯಂತ್ರಣ ಕ್ರಮಗಳನ್ನು ಸಕಾಲದಲ್ಲಿ ಅನುಸರಿಸಿದರೆ ಕಾಫಿ ಕೃಷಿಯನ್ನು ಇನ್ನೂ ಹೆಚ್ಚು ಲಾಭದಾಯಕವನ್ನಾಗಿ ಮಾಡಬಹುದಾಗಿದೆ. 
 ಕಾಫಿ ಕಾಯಿಕೊರಕ (ಹೈಪೋತೆನಮಸ್ ಹ್ಯಾಂಪಿ) ವಿಶ್ವದೆಲ್ಲೆಡೆ ಕಾಫಿ ಬೆಳೆಯನ್ನು ಹೆಚ್ಚಾಗಿ ಭಾದಿಸುವ ಪ್ರಮುಖ ಕೀಟವಾಗಿದೆ. ಭಾರತದಲ್ಲಿ ಪ್ರಪ್ರಥಮವಾಗಿ ಈ ಕೀಟದ ಭಾದೆಯು 1990 ರಲ್ಲಿ ತಮಿಳುನಾಡಿನ ನೀಲಗಿರಿ ಪ್ರದೇಶದ ಕೆಲವು ತೋಟಗಳಲ್ಲಿ ಕಾಣಿಸಿಕೊಂಡಿತು. ನಂತರ ಕೇರಳದ ವೈನಾಡು ಮತ್ತು ಕಾನೂರುಗಳಲ್ಲಿ ಕಾಣಿಸಿಕೊಂಡು ಕರ್ನಾಟಕದ ದಕ್ಷಿಣ ಕೊಡಗಿನ ತೋಟಗಳಿಗೂ ವಿಸ್ತರಣೆ ಆಯಿತು. 
 ಬಲಿಯುವ ಹಾಗೂ ಬಲಿತ ಕಾಯಿಗಳು ಈ ಕೀಟದ ಭಾದೆಯಿಂದ ಹಾನಿಗೆ ತುತ್ತಾಗುತ್ತವೆ. ಪ್ರಾರಂಭದಲ್ಲಿ ಕೀಟವು ಬಲಿಯುವ ಹಾಗೂ ಬಲಿತ ಕಾಯಿಗಳ ಮೂಲಕ ಒಳಸೇರುತ್ತದೆ. ಇದರಿಂದ ಭಾದೆಗೂಳಗಾದ ಕಾಫಿ ಕಾಯಿಗಳ ಮುಂಭಾಗದಲ್ಲಿ ಕೊರೆದಿರುವ ರಂಧ್ರ ಕಾಣಿಸುತ್ತದೆ. ನಂತರ ಕಾಯಿಯ ಒಳಭಾಗಕ್ಕೆ ಹೋಗಿ ಒಳಗಿನ ಸಾರವನ್ನೆಲ್ಲಾ ತಿಂದು ಹಾಳುಮಾಡುತ್ತದೆ. 
 ಕೀಟಗಳು ಎಳೆಯ ಕಾಯಿಯೊಳಗೆ ಸಂತಾನಾಭಿವೃದ್ಧಿ ಮಾಡಲಾಗದಿದ್ದರೂ ಇದರ ಭಾದೆಗೆ ತುತ್ತಾದ ಕಾಯಿಗಳು ಗಾಯದ ಪರಿಣಾಮವಾಗಿ ಅಕಾಲದಲ್ಲಿ ಉದುರುತ್ತವೆ. ಬಲಿತ ಕಾಯಿಯೊಳಗಿನ ಗಟ್ಟಿಗೊಂಡ ಬೀಜದಳದಲ್ಲಿ ಮಾತ್ರ ಇದರ ಸಂತಾನೋತ್ಪತ್ತಿ ಕಾರ್ಯ ನಡೆಯುತ್ತದೆ. ಇದು ಗಿಡದಲ್ಲಿ ಅತಿಯಾಗಿ ಹಣ್ಣಾಗಿರುವ ಮತ್ತು ನೆಲಕ್ಕೆ ಉದುರಿದ ಹಣ್ಣುಗಳಲ್ಲಿಯೂ ಸಹ ವಂಶಾಭಿವೃದ್ದಿ ಮುಂದುವರಿಸುತ್ತದೆ. ಈ ಕೀಟದ ಭಾದೆ ತೀವ್ರವಾಗಿದ್ದರೆ ಶೇ. 30 ರಿಂದ ಶೇ.80 ರಷ್ಟು ಕಾಯಿಗಳು ಹಾನಿಗೆ ತುತ್ತಾಗುತ್ತವೆ. ಒಮ್ಮೆ ಕಾಫಿ ತೋಟಗಳಲ್ಲಿ ಇದು ಕಾಣಿಸಿಕೊಂಡರೆ ನಂತರ ಆ ತೋಟವನ್ನು ಸದಾ ಪೀಡಿಸುತ್ತಲೆ ಇರುತ್ತದೆ. ಈ ಕೀಟದ ಭಾದೆಗೆ ತುತ್ತಾದ ಕಾಫಿ ತನ್ನ ಗುಣಮಟ್ಟ ಕಳೆದುಕೂಂಡು ಬೆಳೆಗಾರರಿಗೆ ಗಣನೀಯ ಪ್ರಮಾಣದಲ್ಲಿ ನಷ್ಟವನ್ನುಂಟು ಮಾಡುತ್ತದೆ. 
 ಕಾಫಿ ಕಾಯಿ ಕೊರಕ ಕೀಟ ಕಪುö್ಪ ಬಣ್ಣದ ಚಿಕ್ಕ ದುಂಬಿಯಾಗಿದ್ದು ಸುಮಾರು 1.5 ಮೀ.ಮೀ. ಉದ್ದವಿರುತ್ತದೆ. ಹೆಣ್ಣು ಕೀಟ ಹಸಿರು ಕಾಯಿ ಮತ್ತು ಚೆನ್ನಾಗಿ ಬಲಿತ ಹಣ್ಣುಗಳ ನಾಭಿಯ (ಮುಂಭಾಗ) ಭಾಗದಿಂದ ರಂಧ್ರವನ್ನು ಕೊರೆಯುತ್ತದೆ. ನಂತರ ಕಾಫಿûಯ ಬೀಜದೊಳಗೆ ಸುರಂಗವನ್ನು ಕೊರೆದು ಸರಾಸರಿ 40 ರಿಂದ 50 ಮೊಟ್ಟೆಗಳನ್ನಿಡುತ್ತದೆ. 5 ರಿಂದ 9 ದಿನಗಳಲ್ಲಿ ಮೊಟ್ಟೆಯೊಡೆದು ಮರಿ ಹುಳುಗಳು ಹೊರಬರುತ್ತವೆ. ಹೊರಬಂದ ಮರಿಗಳು ಬೀಜವನ್ನು ತಿನ್ನುತ್ತಾ ಸುರಂಗವನ್ನು ಕೊರೆಯುತ್ತಿರುತ್ತವೆ.  
 ಮೊಟ್ಟೆಯಿಂದ ಪ್ರೌಢ ಕೀಟಾವಸ್ಥೆ ತಲುಪಲು ಸುಮಾರು 25 ರಿಂದ 35 ದಿನಗಳು ಬೇಕಾಗುತ್ತದೆ. ಹೆಣ್ಣು ಮತ್ತು ಗಂಡು ಕೀಟಗಳ ಸಮಾಗಮ ಬೀಜದ ಒಳಗೆ ನಡೆಯುತ್ತದೆ. ಗರ್ಭಧರಿಸಿದ ಹೆಣ್ಣು ಕೀಟ ತನ್ನ ಮೂಲ ಸುರಂಗವನ್ನು ತೊರೆದು ಹೊಸ ಕಾಫಿ ಹಣ್ಣಿನೊಳಗೆ ಸೇರಿ ಮೊಟ್ಟೆಗಳನ್ನಿಡುತ್ತದೆ. ಗಂಡು ಕೀಟಕ್ಕೆ ಹಾರುವ ಶಕ್ತಿ ಇಲ್ಲದ ಕಾರಣ ತಾನು ವಾಸಿಸುತ್ತೀರುವ ಸುರಂಗವನ್ನು ಬದಲಿಸುವುದಿಲ್ಲ. ಹೆಣ್ಣು ಕೀಟದ ಸರಾಸರಿ ಆಯಸ್ಸು 156 ದಿನಗಳು ಇರುವುದರಿಂದ ನಮ್ಮ ದೇಶದ ಹವಾಮಾನ ಗುಣಗಳನ್ನಾದರಿಸಿ ಒಂದು ಸಾಲಿನ ಫಸಲಿನಿಂದ ಮುಂದಿನ ಫಸಲನ್ನು ತಲುಪಲು ಸಾಧ್ಯವಾಗುತ್ತದೆ.
"

ಕಾಫಿ ಕಾಯಿಕೊರಕ ಹತೋಟಿಗೆ ಕೊಯ್ದ ಕಾಫಿಯನ್ನು ಒಣಗಿಸುವಾಗ ಸೂಕ್ತ ತೇವಾಂಶವಿರುವ ಹಾಗೆ ನೋಡಿಕೊಳ್ಳಬೇಕು. ಕಾಫಿ ಕೊಯ್ಲಿನ ಸಮಯದಲ್ಲಿ ಮತ್ತು ನಂತರದ ದಿನಗಳಲ್ಲಿ ಕಾಯಿಕೊರಕವನ್ನು ಆಕರ್ಷಿಸಲು ಎಕರೆಗೆ 20 ಬ್ರೋಕ ಎಂಬ ಲಿಂಗಾಕರ್ಷಕ ಬಲೆಗಳನ್ನು ಅಳವಡಿಸಬೇಕು. ಬೆವೇರಿಯಾ ಬಾಸ್ಸಿಯಾನ ಎಂಬ ರೋಗಕಾರಕ ಶಿಲೀಂಧ್ರವನ್ನು ಜುಲೈ - ಅಕ್ಟೋಬರ್ ತಿಂಗಳ ಅವಧಿಯಲ್ಲಿ ಕಾಯಿಕೊರಕದ ಹತೋಟಿಗೆ 1.5 ಕೆ.ಜಿಯನ್ನು 200 ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಕಾಯಿಗಳ ಮೇಲೆ ಸಿಂಪಡಿಸಬೇಕು. ಹಾನಿಗೊಳಗಾದ ತೋಟದಿಂದ ಬೇರೆಡೆಗೆ ಕಾಫಿಯನ್ನು ಸಾಗಿಸಬೇಕಾದ ಸಂಧರ್ಭದಲ್ಲಿ ಕೀಟದಿಂದ ಸಂಪೂರ್ಣ ಮುಕ್ತಗೊಳಿಸಿದ ನಂತರ ಮಾತ್ರ ಸಾಗಿಸಬೇಕು. ಕಾಫಿಯನ್ನು ಶೇಖರಣೆ ಮಾಡಲು ಸಾಧ್ಯವಾದಷ್ಟು ಮಟ್ಟಿಗೆ ಹೊಸ ಗೋಣಿಚೀಲಗಳನ್ನು ಉಪಯೋಗಿಸುವುದು ಸೂಕ್ತ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net