ಹುಣ್ಣಿಮೆ ಅಂಗವಾಗಿ ಕಾವೇರಿ ಮಹಾ ಆರತಿ ಬಳಗದ ಆಶ್ರಯದಲ್ಲಿ ಕುಶಾಲನಗರದಲ್ಲಿ 179ನೇ ಮಹಾ ಆರತಿ ಕಾರ್ಯಕ್ರಮ ನಡೆಯಿತು. ದೀಪಕ್ ಕನ್ನಡಿಗ, ಎಂ.ಎನ್. ಚಂದ್ರಮೋಹನ್, ಸಂಧ್ಯಾ ಗಣೇಶ್, ವಸಂತ ಆಚಾರ್ಯ, ವನಿತಾ ಚಂದ್ರಮೋಹನ್, ಮಂಡೆಪAಡ ಬೋಸ್ ಮೊಣ್ಣಪ್ಪ, ಅಣ್ಣಯ್ಯ ಮತ್ತಿತರರು ಇದ್ದರು.
ಜೀವನದಿ ಕಾವೇರಿ ಸೇರಿದಂತೆ ರಾಜ್ಯದ ಬಹುತೇಕ ನದಿಗಳು ನೇರವಾಗಿ ಕಲುಷಿತಗೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಳಗದ ಜಿಲ್ಲಾಧ್ಯಕ್ಷ ದೀಪಕ್ ಕನ್ನಡಿಗ ಹೇಳಿದರು. ಹುಣ್ಣಿಮೆ ಅಂಗವಾಗಿ ಶುಕ್ರವಾರ ಕುಶಾಲನಗರದಲ್ಲಿ ಕಾವೇರಿ ಮಹಾ ಆರತಿ ಬಳಗದ ಆಶ್ರಯದಲ್ಲಿ ನಡೆದ 179ನೇ ಮಹಾ ಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಹಲವು ಕಾರಣಗಳಿಂದ ನದಿ ಕಲುಷಿತಗೊಳ್ಳುವ ಮೂಲಕ ಅದನ್ನು ನೇರವಾಗಿ ಬಳಕೆ ಮಾಡುವ ಮಾನವನಿಗೆ ಹಾನಿ ಉಂಟಾಗುವುದರ ನಡುವೆ ಪ್ರಾಣಿ ಪಕ್ಷಿಗಳ ಸಂಕುಲದ ನಾಶಕ್ಕೆ ಪರೋಕ್ಷವಾಗಿ ಕಾರಣವಾಗುತ್ತಿದೆ. ಈ ಸಂಬAಧ ಕಳೆದ 16 ವರ್ಷಗಳಿಂದ ನಿರಂತರವಾಗಿ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಜನರಿಗೆ ನದಿ ಸಂರಕ್ಷಣೆಯ ಅರಿವು ಮೂಡಿಸುತ್ತಿರುವ ಕಾವೇರಿ ನದಿ ಸ್ವಚ್ಛತಾ ಅಭಿಯಾನ ಕಾರ್ಯ ಶ್ಲಾಘನೀಯ.
ನಾಡಿನ ಎಲ್ಲಾ ಸಂಘ ಸಂಸ್ಥೆಗಳು ಇಂತಹ ಕಾರ್ಯಕ್ರಮಗಳಿಗೆ ಕೈಜೋಡಿಸಿ ಸ್ವಚ್ಛ ಕಾವೇರಿಯ ಕನಸು ನನಸಾಗಲು ಪಣ ತೊಡಬೇಕಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಾವೇರಿ ನದಿ ಸ್ವಚ್ಛತಾ ಅಭಿಯಾನದ ರಾಜ್ಯ ಸಂಚಾಲಕ ಎಂ.ಎನ್. ಚಂದ್ರಮೋಹನ್, ಸ್ವಚ್ಛ ಕಾವೇರಿಗಾಗಿ ಜನರಿಗೆ ಅರಿವು ಮೂಡಿಸುವ ಸಂಬAಧ ಅಖಿಲ ಭಾರತ ಸನ್ಯಾಸಿಗಳ ಸಂಘದ ನೇತೃತ್ವದ ತಂಡ ತಲಕಾವೇರಿಯಿಂದ ತಮಿಳುನಾಡಿನ ಪೂಂಪ್ ಹಾರ್ ತನಕ 15ನೇ ವರ್ಷದ ಕಾವೇರಿ ನದಿ ಜಾಗೃತಿ ಯಾತ್ರೆ ಅ. 24ರಿಂದ ಚಾಲನೆಗೊಂಡು ನದಿ ತಟಗಳಲ್ಲಿ ಸಾಗಿ ಜನರಲ್ಲಿ ನದಿ ಸಂರಕ್ಷಣೆಯ ಜಾಗೃತಿ ಮೂಡಿಸುತ್ತಿದೆ.
ನ.16 ರಂದು ಕಾವೇರಿ ಬಂಗಾಳ ಕೊಲ್ಲಿ ಸಮುದ್ರ ಸಂಗಮದಲ್ಲಿ ಪವಿತ್ರ ಕಾವೇರಿ ತೀರ್ಥ ವಿಸರ್ಜಿಸುವುದರೊಂದಿಗೆ ಸಮಾರೋಪ ಸಮಾರಂಭ ನಡೆಯಲಿದೆ, ಸ್ವಚ್ಛ ಕಾವೇರಿ ಕನಸು ನನಸಾಗಿಸಲು ನಿರಂತರ ಕಾರ್ಯಕ್ರಮ ಹೋರಾಟ ಮುಂದುವರೆಯಲಿದೆ ಎಂದರು.
ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಸಂಧ್ಯಾ ಗಣೇಶ್, ಯುವ ಘಟಕದ ಜಿಲ್ಲಾಧ್ಯಕ್ಷ ವಸಂತ ಆಚಾರ್ಯ, ಪ್ರಧಾನ ಕಾರ್ಯದರ್ಶಿ ಶೃತಿ, ಯುವ ಘಟಕದ ಜಿಲ್ಲಾ ಪ್ರಮುಖರಾದ ಪರಮೇಶ್, ನಗರಾಧ್ಯಕ್ಷ ರೇಣುಕಾ, ಯುವ ಘಟಕದ ಉಪಾಧ್ಯಕ್ಷ ಪುನೀತ್, ತುಳಸಿ, ದೀಪು,
ಕಾವೇರಿ ಮಹಾ ಆರತಿ ಬಳಗದ ಸಂಚಾಲಕಿ ವನಿತಾ ಚಂದ್ರಮೋಹನ್, ಪ್ರಮುಖರಾದ ಮಂಡೆಪAಡ ಬೋಸ್ ಮೊಣ್ಣಪ್ಪ, ಅಣ್ಣಯ್ಯ, ಧರಣಿ, ಫಯಾಜ್, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಸುಬೇದಾರ್ ಮೇಜರ್ ಎಸ್.ಆರ್. ಮಾದಪ್ಪ, ಉಪಾಧ್ಯಕ್ಷ ಸುಬೇದಾರ್ ಎಳ್ತಂಡ ರಂಜಿತ್, ಕರುಂಬಯ್ಯ, ಮತ್ತು ಬಳಗದ ಸದಸ್ಯರು ಇದ್ದರು.
ಕುಶಾಲನಗರ ಅಯ್ಯಪ್ಪ ಸ್ವಾಮಿ ದೇವಾಲಯ ಬಳಿ ಕಾವೇರಿ ಆರತಿ ಕ್ಷೇತ್ರದಲ್ಲಿ ನಡೆದ ಆರತಿ ಕಾರ್ಯಕ್ರಮ ಅಂಗವಾಗಿ ಅರ್ಚಕ ಕೃಷ್ಣಮೂರ್ತಿ ಭಟ್ ನೇತೃತ್ವದಲ್ಲಿ ಅಷ್ಟೋತ್ತರ ಮತ್ತು ನದಿಗೆ ಮಹಾ ಆರತಿ ಕಾರ್ಯಕ್ರಮಗಳು ನಡೆದವು. ಇದೇ ಸಂದರ್ಭ ಭಾಗಮಂಡಲದಿAದ ರಾಮನಾಥಪುರ ತನಕ ವಿವಿಧೆಡೆ ನದಿ ತಟಗಳಲ್ಲಿ ನಮಾಮಿ ಕಾವೇರಿ ಬಳಗದಿಂದ ಏಕಕಾಲದಲ್ಲಿ ಜೀವನದಿಗೆ ಮಹಾ ಆರತಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.
ಕುಶಾಲನಗರ ಕೊಪ್ಪ ಗಡಿಭಾಗದ ಕಾವೇರಿ ಪ್ರತಿಮೆಗೆ ವಿಶೇಷ ಪೂಜೆ ಸಲ್ಲಿಸಿ ಅಭಿಷೇಕ ಮಾಡಲಾಯಿತು.