ಕೊಡಗಿನಲ್ಲಿ ವಿಷವಾಗುತ್ತಿದೆ ಪ್ರಾಣವಾಯು

ಕೊಡಗಿನ ನೆಲ, ಜಲ, ವಾಯುವಿನಲ್ಲಿ ಆಗುತ್ತಿರುವ ಬದಲಾವಣೆಗಳು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ
ಕೊಡಗಿನ ನೆಲ, ಜಲ, ವಾಯುವಿನಲ್ಲಿ ಆಗುತ್ತಿರುವ ಬದಲಾವಣೆಗಳು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ
Published on

ಪ್ರಮುಖ ಮುಖ್ಯಾಂಶಗಳು

  • ಪರಿಸರದಲ್ಲಿ ತೀವ್ರ ಬದಲಾವಣೆ
  • ನದಿ ಮಾಲಿನ್ಯವೂ ಹೆಚ್ಚಳ
  • ವಾಯು ಮಾಲಿನ್ಯದಲ್ಲಿ ಏರಿಕೆ
ಮಡಿಕೇರಿ:
ಕೊಡಗಿನ ಪರಿಸರ ಇತ್ತೀಚಿನ ವರ್ಷಗಳಲ್ಲಿ ಮೊದಲಿನಂತೆ ಇಲ್ಲ ಎನ್ನುವ ಮಾತುಗಳು ಪರಿಸರಪ್ರಿಯರಲ್ಲಿ ಕೇಳಿಬರುತ್ತಿದೆ. ಇಲ್ಲಿನ ಮಳೆಗಾಲದ ಋತುವಿನಲ್ಲಿ ವ್ಯತ್ಯಯ ಆಗಿರುವುದೇ ಇದಕ್ಕೆ ಸಾಕ್ಷಿ. ಪಶ್ಚಿಮಘಟ್ಟದ ಸೆರಗಿನಲ್ಲಿ ಇರುವ ಮಲೆನಾಡಿನ ಜಿಲ್ಲೆ ಕೊಡಗು ಪ್ರವಾಸೋದ್ಯಮಕ್ಕೆ ವಿಸ್ತಾರವಾಗಿ ತೆರೆದುಕೊಂಡ ನಂತರ ಹೆಚ್ಚಿನ ಬದಲಾವಣೆಗಳು ಅನುಭವಕ್ಕೆ ಬರುತ್ತಿರುವ ಬಗ್ಗೆ ಆತಂಕ ವ್ಯಕ್ತವಾಗುತ್ತಿದೆ. ಅದರಲ್ಲೂ ನದಿ ಮಾಲಿನ್ಯ ಹೆಚ್ಚುತ್ತಲೇ ಇದ್ದು, ಜೀವನದಿ ಕಾವೇರಿ ಉಗಮಸ್ಥಾನದಲ್ಲೇ ಮಲೀನ ಆಗುತ್ತಿದೆ.
ಶುದ್ಧಗಾಳಿಗೆ ಹೆಸರಾಗಿರುವ ಕೊಡಗು ಈ ಪಟ್ಟವನ್ನೂ ಈಗ ನಿಧಾನಕ್ಕೆ ಕಳೆದುಕೊಳ್ಳುತ್ತಿದೆ. ಗಾಳಿಯ ಗುಣಮಟ್ಟ ಗುರುತಿಸುವ ವಾಯು ಗುಣಮಟ್ಟ (ಎಕ್ಯೂಐ) ಸೂಚ್ಯಂಕದಲ್ಲಿ ವರ್ಷದಿಂದ ವರ್ಷಕ್ಕೆ ವ್ಯತ್ಯಾಸ ಆಗುತ್ತಿರುವುದು ಕಂಡುಬರುತ್ತಿದೆ. ಕಳೆದ ವರ್ಷದ ನವೆಂಬರ್‌ನಲ್ಲಿ ಈ ವಿಷಯದಲ್ಲಿ ಮೊದಲನೇ ಸ್ಥಾನದಲ್ಲಿದ್ದ ಮಡಿಕೇರಿ ಈ ವರ್ಷ ಮೂರನೇ ಸ್ಥಾನಕ್ಕೆ ಇಳಿದಿದೆ. ಮಡಿಕೇರಿಯಲ್ಲಿ ಗಾಳಿಯಲ್ಲಿರುವ ಮಾಲಿನ್ಯ ಪ್ರಮಾಣ 2021ರ ನವೆಂಬರ್‌ನಲ್ಲಿ 3-22ರಷ್ಟು ದಾಖಲಾಗಿತ್ತು. 2022ರ ನವೆÀಂಬರ್‌ನಲ್ಲಿ ಈ ಪ್ರಮಾಣ 12-28ರ ಮಧ್ಯೆ ಇತ್ತು. 2023ರ ನವೆಂಬರ್‌ನಲ್ಲಿ ಮಡಿಕೇರಿಯಲ್ಲಿ ವಾಯು ಗುಣಮಟ್ಟ (ಎಕ್ಯೂಐ) ಸೂಚ್ಯಂಕ 30-57ರ ಮಧ್ಯೆ ದಾಖಲಾಗಿತ್ತು. ಕಳೆದ ವರ್ಷ 2-12ರ ಮಧ್ಯೆ ಇತ್ತು. ಈ ವರ್ಷ ಎಕ್ಯೂಐ 12-20ರಷ್ಟಿದ್ದು ಬದಲಾವಣೆಗಳನ್ನು ಸ್ಪಷ್ಟವಾಗಿ ಗುರುತಿಸಬಹುದಾಗಿದೆ.
ಪ್ರವಾಸೋದ್ಯಮದ ಅನಾರೋಗ್ಯಕರ ಬೆಳವಣಿಗೆಯೇ ಇದಕ್ಕೆ ಕಾರಣ ಎನ್ನುವ ಮಾತುಗಳು ಕೇಳಿಬರುತ್ತಿದೆ. ಮಿತಿಮೀರಿದ ಕಾಡು ನಾಶ, ಹೆಚ್ಚುತ್ತಿರುವ ವಾಹನ ದಟ್ಟಣೆ, ಅವೈಜ್ಞಾನಿಕ ನಿರ್ಮಾಣ ಕಾಮಗಾರಿಗಳು ಇಲ್ಲಿನ ನೆಲ, ಜಲ, ವಾಯುವಿನ ಮೇಲೆ ಪರಿಣಾಮ ಬೀರುತ್ತಿದೆ.
"

ಕೊಡಗು ಪ್ರವಾಸಿಗರ ಪಾಲಿಗೆ ಇತ್ತೀಚಿನ ವರ್ಷಗಳಲ್ಲಿ ಕಸದ ತೊಟ್ಟಿಯಂತಾಗಿದೆ. ಅಗತ್ಯಕ್ಕಿಂತ ಹೆಚ್ಚು ಪ್ರವಾಸಿಗರ ಆಗಮನದಿಂದ ಕೊಡಗಿನ ಶುದ್ದ ಪರಿಸರ, ನೆಲ, ಜಲ, ಗಾಳಿಯ ಮೇಲೆ ವ್ಯತಿರಿಕ್ತ ಪರಿಣಾಮವಾಗುತ್ತಿದೆ. ಜತೆಗೆ ಹೋಂ ಸ್ಟೇ, ರೆಸಾರ್ಟ್ಗಳ ನಿರ್ಮಾಣ ಹಾಗೂ ಸ್ಥಳೀಯರು ಹಾಗೂ ಪ್ರವಾಸಿಗರ ವಾಹನಗಳ ಸಂದಣಿ ಜಾಸ್ತಿ ಆಗುತ್ತಿರುವ ಪರಿಣಾಮ ಪರಿಸರ ಕಲುಷಿತಗೊಳ್ಳುತ್ತಿದೆ.

"

ಅರಣ್ಯ ನಾಶ ನಿಲ್ಲದಿದ್ದರೆ ಕೊಡಗಿನ ಶುದ್ಧ ಗಾಳಿ ಮುಂದಿನ ಪೀಳಿಗೆಗೆ ಕಥೆಯಾಗಿ ಉಳಿಯಬಹುದು. ಕೊಡಗು ಪ್ರವಾಸಿತಾಣವಾಗಿರುವುದರಿಂದ ಪ್ರತಿದಿನವೂ ಹಲವು ವಾಹನಗಳು, ಕಟ್ಟಡ ನಿರ್ಮಾಣ, ಅನಿಯಂತ್ರಿತ ವಾಣಿಜ್ಯ ಚಟುವಟಿಕೆಗಳು ವೇಗವಾಗಿ ಹೆಚ್ಚಾಗುತ್ತಿವೆ. ಇದಕ್ಕೆ ಹೆಚ್ಚುವರಿಯಾಗಿ ಕಾಡು ನಾಶ, ಹಸಿರು ಪ್ರದೇಶಗಳ ಕುಗ್ಗುವಿಕೆ, ಕಸ ನಿರ್ವಹಣೆಯ ಕೊರತೆ... ಇವೆಲ್ಲಾ ಒಂದಲ್ಲಾ ಒಂದು ರೀತಿಯಲ್ಲಿ ಇಲ್ಲಿನ ಗಾಳಿಯ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತಿದೆ.

"

ಕರ್ನಾಟಕದ ಕಾಶ್ಮೀರ ಎಂಬ ಹೆಗ್ಗಳಿಕೆಗೆ ಕೊಡಗು ಪಾತ್ರವಾಗಿರುವುದೇ ತನ್ನ ನಿಸರ್ಗದತ್ತ ಪ್ರಕೃತಿ ಸೌಂದರ್ಯದಿAದಾಗಿ. ಇಂದು ಜಾಗತಿಕ ವಿದ್ಯಮಾನಗಳಿಂದ ಪರಿಸರದ ಮೇಲಾಗುತ್ತಿರುವ ದುಷ್ಪರಿಣಾಮಗಳಿಗೆ ಸಿಲುಕದೆ ಶುದ್ಧಗಾಳಿ ಇರುವ ಸ್ಥಳಗಳಲ್ಲಿ ನಮ್ಮ ಕೊಡಗಿನ ಮಡಿಕೇರಿ ಮುಂಚೂಣಿಯಲ್ಲಿದ್ದುದ್ದು ಸಮಾಧಾನಕರ ಸಂಗತಿಯಾಗಿತ್ತು. ಆದರೆ ಒಂದೇ ವರ್ಷದಲ್ಲಿ ಮೂರನೇ ಸ್ಥಾನಕ್ಕೆ ಇಳಿದಿರುವುದು ಬಹುಶಃ ಅಪಾಯದ ಸುಳಿಯಿಂದ ತಪ್ಪಿಸಿಕೊಳ್ಳಲು ಕಷ್ಟ ಸಾಧ್ಯ ಎಂಬುದರ ಮುನ್ಸೂಚನೆ ಆಗಿದೆ. ಸ್ವಚ್ಛ ಕೊಡಗು ಅಭಿಯಾನ ನಡೆದಂತೆಯೇ ಪರಿಸರ ಶುದ್ಧವಾಗಿರಿಸಿಕೊಳ್ಳುವ ಬಗ್ಗೆ ಕೊಡಗಿನ ನಾಗರಿಕರು, ಜಿಲ್ಲಾಡಳಿತದ ಸಹಕಾರದೊಂದಿಗೆ ಸಂಘ ಸಂಸ್ಥೆಗಳ ಜತೆಗೆ ಕೈ ಜೋಡಿಸಿ ಗಂಭೀರವಾಗಿ ಶ್ರಮ ವಹಿಸಬೇಕಾಗಿದೆ.

"

ದೇಶದಲ್ಲಿ ಶುದ್ಧ ಗಾಳಿ ಇರುವ ಸ್ಥಳಗಳಲ್ಲಿ ಮೊದಲನೇ ಸ್ಥಾನದಲ್ಲಿದ್ದ ನಮ್ಮ ಮಡಿಕೇರಿ ಈ ವರ್ಷ 3ನೇ ಸ್ಥಾನಕ್ಕೆ ಕುಸಿದಿರುವುದು ಬಹಳ ಬೇಸರದ ವಿಷಯ. ಬೆಟ್ಟ ಗುಡ್ಡದಲ್ಲಿದ್ದ ಮರಗಿಡ ಕಡಿದು ರೆಸಾರ್ಟ್ಗಳನ್ನು ನಿರ್ಮಿಸುವುದು, ಕಟ್ಟಡ ಕಟ್ಟುವುದು, ನಮ್ಮ ಮಡಿಕೇರಿಯಲ್ಲಿ ಹೆಚ್ಚುತ್ತಿರುವ ವಾಹನಗಳ ಸಂಖ್ಯೆಯೇ ಇದಕ್ಕೆ ಕಾರಣ. ಮರ ಕಡಿಯದಂತೆ ಮತ್ತು ಹಳೆಯ ವಾಹನಗಳನ್ನು ಬಳಸದಂತೆ ಕಡಿವಾಣ ಹಾಕುವುದು ಅವಶ್ಯಕವಾಗಿದೆ. ಇಲ್ಲದಿದ್ದರೆ ಮುಂದಿನ ಸಾಲಿಗೆ ಇನ್ನೂ ಕೆಳ ಸ್ಥಾನಕ್ಕೆ ಕುಸಿಯುವ ಸಾಧ್ಯತೆ ಹೆಚ್ಚು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net