ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ ಗೋಣಿಕೊಪ್ಪಲು ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್‌ಡಿಎಂಸಿ) ವತಿಯಿಂದ ಶಾಲಾ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಜಗದೀಶ್ ಜೋಡುಬೀಟಿ, ಹೆಚ್.ಕೆ. ಕುಮಾರ್, ಜೋಸ್ಲಿಯ, ಇಂದಿರಾ, ದಮಯಂತಿ, ಅನಿತಾ ಕುಮಾರಿ ಮತ್ತಿತರರು ಇದ್ದರು.
Published on:
Copied
Follow Us
ಗೋಣಿಕೊಪ್ಪಲು:
ಒಬ್ಬ ಉತ್ತಮ ಶಿಕ್ಷಕನ ಪಾಠ ಮುಗಿದರೂ, ಅವರ ಮಾತು ವಿದ್ಯಾರ್ಥಿಯ ಬದುಕಿನಲ್ಲಿ ಎಂದಿಗೂ ಮುಗಿಯುವುದಿಲ್ಲ ಎಂದು ಗೋಣಿಕೊಪ್ಪಲು ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಎಸ್‌ಡಿಎಂಸಿ ಅಧ್ಯಕ್ಷ ಜಗದೀಶ್ ಜೋಡುಬೀಟಿ ಹೇಳಿದರು. ಗೋಣಿಕೊಪ್ಪಲು ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್‌ಡಿಎಂಸಿ) ವತಿಯಿಂದ ಗುರುವಾರ ಆಯೋಜಿಸಲಾಗಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವರ್ಷಗಳು ಕಳೆದರೂ ಯಾವುದೋ ಒಂದು ಸಂದರ್ಭದಲ್ಲಿ ಶಿಕ್ಷಕರು ಹೇಳಿದ ಮಾತು ನೆನಪಾಗುತ್ತದೆ. ಕಷ್ಟ ಬಂದಾಗ ಅವರ ಧೈರ್ಯದ ಮಾತು ದಾರಿ ತೋರಿಸುತ್ತದೆ. ಸೋಲಿನ ಸಂದರ್ಭದಲ್ಲಿ ಅವರ ನಂಬಿಕೆ ಮತ್ತೆ ಎದ್ದು ನಿಲ್ಲುವ ಶಕ್ತಿ ನೀಡುತ್ತದೆ. ಅದಕ್ಕಾಗಿಯೇ ಶಿಕ್ಷಕರು ಮನುಷ್ಯರನ್ನು ರೂಪಿಸುವ ಮೌನ ಶಿಲ್ಪಿಗಳು. ಅವರು ಕಟ್ಟುವುದು ಕಟ್ಟಡವಲ್ಲ, ಭವಿಷ್ಯ. ಬೆಳೆಸುವುದು ಬೆಳೆಯಲ್ಲ, ಪೀಳಿಗೆ. ಬಿತ್ತುವುದು ಕೇವಲ ಅಕ್ಷರವಲ್ಲ, ಆಲೋಚನೆ ಎಂದು ಹೇಳಿದರು.
ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ ಶಿಕ್ಷಕರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಶಾಲೆಯ ದ್ವಾರದಿಂದಲೇ ಭವ್ಯ ಸ್ವಾಗತ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ಎಸ್‌ಡಿಎಂಸಿ ಸದಸ್ಯರು ಆರತಿ ತಟ್ಟೆ ಹಿಡಿದು ಮೆರವಣಿಗೆಯ ಮುಂಭಾಗದಲ್ಲಿ ಸಾಗಿದರೆ, ಶಾಲೆಯ ಲೀಡರ್ಸ್ ವಿದ್ಯಾರ್ಥಿಗಳು ಶಿಕ್ಷಕರಿಗೆ ಪುಷ್ಪವೃಷ್ಟಿ ಸುರಿಸುತ್ತಾ ವೇದಿಕೆಯತ್ತ ಕರೆತಂದರು. ವೇದಿಕೆಯ ಮುಂಭಾಗದಲ್ಲಿ ಆರತಿ ಬೆಳಗಿ, ತಿಲಕ ಹಚ್ಚುವ ಮೂಲಕ ಸಾಂಪ್ರದಾಯಿಕವಾಗಿ ಸ್ವಾಗತಿಸಿ, ಆಸನಗಳಲ್ಲಿ ಆಸೀನರನ್ನಾಗಿಸಲಾಯಿತು. ಬಳಿಕ ಡಮರುಗ ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಶಾಲೆಯ ಮುಖ್ಯ ಶಿಕ್ಷಕ ಹೆಚ್.ಕೆ. ಕುಮಾರ್ ಸೇರಿದಂತೆ ಶಿಕ್ಷಕರಾದ ಜೋಸ್ಲಿಯ, ಇಂದಿರಾ, ದಮಯಂತಿ, ಅನಿತಾ ಕುಮಾರಿ, ಯಸ್ವಿನಿ, ಅರ್ಷಿಯ, ಕ್ಲೆಮೆಂಟಿನ್, ಸಹನಾ, ಶಾರದಾ, ನಾಗರಾಜು, ಸ್ನೇಹ ಕಾವೇರಮ್ಮ, ಮಂಜುಳಾ, ಸಿದ್ದರಾಜು, ಪೂಜಾ, ಅರ್ಷಿಯ ಹಾಗೂ ಪಾರ್ವತಿ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಸಭಾ ಕಾರ್ಯಕ್ರಮದ ನಂತರ ಶಿಕ್ಷಕರಿಗಾಗಿ ನೀರು ತುಂಬಿಸುವುದು, ಸೇಬು ಕಚ್ಚುವುದು, ಮಡಕೆ ಒಡೆಯುವುದು, ಪಾಸಿಂಗ್ ದಿ ಬಾಲ್ ಹಾಗೂ ಮ್ಯೂಸಿಕಲ್ ಚೇರ್ ಸೇರಿದಂತೆ ವಿವಿಧ ಮನರಂಜನಾ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಶಿಕ್ಷಕರು ಅತ್ಯಂತ ಉತ್ಸಾಹದಿಂದ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಬಳಿಕ ವಿಶೇಷ ಭೋಜನಕೂಟ ಏರ್ಪಡಿಸಲಾಗಿತ್ತು.
ಎಸ್‌ಡಿಎಂಸಿ ಉಪಾಧ್ಯಕ್ಷೆ ದಿವ್ಯ, ಸದಸ್ಯೆ ಗೌರಿ, ಕೆ.ಜಿ. ಚಂದ್ರಕಲಾ, ಅನಿತಾ, ಕೌಶರ್, ಮಂಜುಳ, ಮೀನ, ರಾಕೇಶ್ ಹಾಗೂ ಶಾಲೆಯ ವಿದ್ಯಾರ್ಥಿಗಳು ಇದ್ದರು.