ಎಸ್.ಕೆ.ಎಸ್.ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರಂಭ ಸಮಾರಂಭ
ಶನಿವಾರಸಂತೆ: ಕೊಡ್ಲಿಪೇಟೆ ಕಲ್ಲುಮಠ ಎಸ್.ಕೆ.ಎಸ್.ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎಲ್.ಕೆ.ಜಿ.ತರಗತಿಯ ನೂತನ ವಿದ್ಯಾರ್ಥಿಗಳಿಗೆ ವಿದ್ಯಾರಂಭ (ಅಕ್ಷರಾಭ್ಯಾಸ) ಸಮಾರಂಭವನ್ನು ಆಯೋಜಿಸಲಾಗಿತ್ತು.
ಶಾಲಾ ಅಧ್ಯಕ್ಷರೂ ಆದ ಕಲ್ಲುಮಠದ ಮಠಾಧೀಶ ಶ್ರೀಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಮಕ್ಕಳು ಶಿಕ್ಷಣ ಪಡೆಯಲು ಅನೇಕ ಅವಕಾಶಗಳು ಇದೆ. ಉತ್ತಮ ಶಿಕ್ಷಣ ಪಡೆದು ಸಮಾಜಕ್ಕೆ ಮಾದರಿಯಾಗಬೇಕು. ಉತ್ತಮ ಸಂಸ್ಕಾರ, ಗುರು ಹಿರಿಯರನ್ನು ಗೌರವದಿಂದ ಕಾಣಬೇಕು. ಮಕ್ಕಳು ದುಶ್ಚಟಗಳಿಗೆ ಬಲಿಯಾಗಬಾರದು. ಪಾಲಕರು ಮಕ್ಕಳನ್ನು ಶಾಲೆಗೆ ಬಿಟ್ಟ ನಂತರ ನಮ್ಮ ಜವಾಬ್ದಾರಿ ಮುಗಿಯಿತು ಎಂದು ಕೂರದೆ ಪ್ರತಿನಿತ್ಯ ಮಕ್ಕಳು ಮನೆಗೆ ಬಂದ ನಂತರ ಅವರ ಓದಿನ ಕಡೆಗೆ ಗಮನಹರಿಸಬೇಕು ಎಂದು ತಿಳಿಸಿದರು.
ಮುಖ್ಯ ಶಿಕ್ಷಕ ಅಭಿಲಾಷ್ ಮಾತನಾಡಿ, ಮಕ್ಕಳ ಕಲಿಕೆಗೆ ಶಾಲೆಗಳಲ್ಲಿ ಉತ್ತಮ ವಾತಾವರಣ ಸೃಷ್ಟಿ ಆಗಬೇಕು. ಆ ವಾತಾವರಣ ಈ ಕಲ್ಲುಮಠ ಶಾಲೆಯಲ್ಲಿ ಸೃಷ್ಟಿ ಮಾಡಲಾಗಿದೆ. ಇದರಿಂದ ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದರು.
ವಿದ್ಯಾರ್ಥಿಗಳಿಗೆ ಅಕ್ಷರಾಭ್ಯಾಸ ಮಾಡಿಸಿ ಶುಭ ಹಾರೈಸಿದರು. ಸರಸ್ವತಿ ಪೂಜೆ ನೆರವೇರಿಸಿದ ನಂತರ ವಿದ್ಯಾರ್ಥಿಗಳು ಅಕ್ಕಿಯ ಮೇಲೆ ಓಂ ಹಾಗೂ ಶ್ರೀ ಅಕ್ಷರಗಳನ್ನು ಬರೆದು ತಮ್ಮ ಶೈಕ್ಷಣಿಕ ಜೀವನದ ಮೊದಲ ಹೆಜ್ಜೆಯನ್ನು ಇಟ್ಟರು. ವಿದ್ಯಾರ್ಥಿಗಳಿಗೆ ಹೂಗಳನ್ನು ಅರ್ಪಿಸುವ ಮೂಲಕ ಅಕ್ಷರಾಭ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಶಿಕ್ಷಕಿಯರಾದ ಕೆ.ಜೆ.ಶೀಲಾ, ಕೆ.ಎಸ್.ಸೌಭಾಗ್ಯ, ಉಮ್ಮೆ ಸಲ್ಮಾ ಇದ್ದರು.