ಸೋಮವಾರಪೇಟೆ ತಾಲೂಕಿನ ಯಡವನಾಡು ಗ್ರಾಮಕ್ಕೆ ಬೀದಿನಾಯಿಗಳನ್ನು ತಂದು ಬಿಡುತ್ತಿರುವುದನ್ನು ತಡೆಯಬೇಕೆಂದು ಶಿರಸ್ತೇದಾರ್ ಉಕ್ರಪ್ಪ ಅವರ ಮೂಲಕ ತಹಸೀಲ್ದಾರರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು. ಗಣೇಶ್, ರಮೇಶ್, ತಮ್ಮಯ್ಯ ಇದ್ದರು.
ಸೋಮವಾರಪೇಟೆ: ತಾಲೂಕಿನ ಯಡವನಾಡು ಗ್ರಾಮಕ್ಕೆ ಶ್ವಾನಗಳ ಮಾಲೀಕರು ತಮ್ಮ ಬೀದಿನಾಯಿಗಳನ್ನು ತಂದು ಬಿಡುತ್ತಿದ್ದು, ತೀವ್ರ ಸಮಸ್ಯೆಯಾಗಿದೆ ಎಂದು ಗ್ರಾಮಸ್ಥರು ಶನಿವಾರ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಸೋಮವಾರಪೇಟೆ ಪಟ್ಟಣದಿಂದ ಬೀದಿನಾಯಿಗಳನ್ನು ಹಿಡಿದು, ಅವುಗಳನ್ನು ಇಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಯ ಪಕ್ಕದ ಸ್ಮಶಾನದಲ್ಲಿ ತಂದು ಬಿಡಲಾಗುತ್ತಿದೆ. ಕೂಡಲೇ ಅದನ್ನು ನಿಲ್ಲಿಸಬೇಕು. ತಪ್ಪಿದಲ್ಲಿ ತಾಲೂಕು ಕಚೇರಿ ಎದುರು ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಸರ್ಕಾರಿ ಶಾಲೆಗೆ ಮಕ್ಕಳು ಕಾಲ್ನಡಿಗೆಯಲ್ಲೇ ಬರುತ್ತಾರೆ. ಆಶ್ರಮ ಶಾಲೆಯೂ ಇದೆ. ಸಜ್ಜಳ್ಳಿ ಮತ್ತು ಗಂಧದ ಹಾಡಿಯಲ್ಲಿ ಗಿರಿಜನರು ವಾಸವಾಗಿದ್ದಾರೆ. ಚಿಕ್ಕಮಕ್ಕಳು ಅಂಗಳದಲ್ಲೇ ಆಟವಾಡುತ್ತಿದ್ದಾರೆ. ಬೀದಿನಾಯಿಗಳಿಂದ ಅನಾಹುತವಾಗುವ ಅತಂಕ ಎದುರಾಗಿದೆ ಯಡವನಾಡು ಶ್ರೀ ಬಸವೇಶ್ವರ ದೇವಾಲಯ ಸಮಿತಿ ಗಣೇಶ್ ತಿಳಿಸಿದರು.
ಶಿರಸ್ತೇದಾರ್ ಉಕ್ರಪ್ಪ ಅವರ ಮೂಲಕ ತಹಸೀಲ್ದಾರ್ ಅವರಿಗೆ ಮನವಿ ನೀಡಲಾಯಿತು. ಗ್ರಾಮಸ್ಥರಾದ ರಮೇಶ್, ಟಿ.ಜೆ. ತಮ್ಮಯ್ಯ, ಸುಬ್ರಹ್ಮಣಿ, ಮೋಹನ್, ಉದಯ, ಆದರ್ಶ, ಸಚಿನ್, ವಿಶ್ವನಾಥ್ ಮತ್ತು ಸುನೀಲ್ ಇದ್ದರು.