ಕಾಂಗ್ರೆಸ್ ವಿರುದ್ಧ ಸುನ್ನಿ ಸಮನ್ವಯ ಸಮಿತಿ ಅಸಮಾಧಾನ

ಸುದ್ದಿಗೋಷ್ಠಿಯಲ್ಲಿ ಸುನ್ನಿ ಸಮನ್ವಯ ಸಮಿತಿಯ ಜಿಲ್ಲಾ ಮಾಧ್ಯಮ ಪ್ರತಿನಿಧಿ ಸಿ.ಎಂ.ಅಬ್ದುಲ್ ಹಮೀದ್ ಮೌಲವಿ ಮಾತನಾಡಿದರು.
ಸುದ್ದಿಗೋಷ್ಠಿಯಲ್ಲಿ ಸುನ್ನಿ ಸಮನ್ವಯ ಸಮಿತಿಯ ಜಿಲ್ಲಾ ಮಾಧ್ಯಮ ಪ್ರತಿನಿಧಿ ಸಿ.ಎಂ.ಅಬ್ದುಲ್ ಹಮೀದ್ ಮೌಲವಿ ಮಾತನಾಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಕಾಂಗ್ರೆಸ್ ವಿರುದ್ಧ ಸುನ್ನಿ ಸಮನ್ವಯ ಸಮಿತಿ ಅಸಮಾಧಾನ
  • ಮುಸಲ್ಮಾನರನ್ನು ಕಡೆಗಣಿಸದಂತೆ ಸಿ.ಎಂ.ಅಬ್ದುಲ್ ಹಮೀದ್ ಮೌಲವಿ ಆಗ್ರಹ
ಮಡಿಕೇರಿ: ಜಾತ್ಯಾತೀತ ನೆಲೆಗಟ್ಟಿನಲ್ಲಿ ಉತ್ತಮ ಸಮಾಜ ಸ್ಥಾಪಿಸಬೇಕೆನ್ನುವ ಉದ್ದೇಶದಿಂದ ೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಸಮಸ್ತ ಮುಸಲ್ಮಾನರು ಒಗ್ಗಟ್ಟಿನಿಂದ ಕಾಂಗ್ರೆಸ್ ಪಕ್ಷವನ್ನು ಬೆಂಬಲಸಿದ ಪರಿಣಾಮ ಬಹುಮತದಿಂದ ಅಧಿಕಾರಕ್ಕೆ ಬಂತು. ಆದರೆ, ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್ ಸರ್ಕಾರ ಮುಸಲ್ಮಾನರ ದಮನಕ್ಕೆ ಮುಂದಾಗಿದೆ ಎಂದು ಸುನ್ನಿ ಸಮನ್ವಯ ಸಮಿತಿಯ ಕೊಡಗು ಜಿಲ್ಲಾ ಘಟಕ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಕಾಂಗ್ರೆಸ್ ಪಕ್ಷ ಇತ್ತೀಚಿನ ದಿನಗಳಲ್ಲಿ ಮುಸಲ್ಮಾನರನ್ನು ಕಡೆಗಣಿಸುತ್ತಿದ್ದು, ಈ ಬೆಳವಣಿಗೆ ಅತ್ಯಂತ ನೋವನ್ನುಂಟುಮಾಡಿದೆ. ಕಾಂಗ್ರೆಸ್ ಪಕ್ಷವು ಕರ್ನಾಟಕದ ಮುಸ್ಲಿಂ ಸಮುದಾಯ ಮತ್ತು ಅದರ ನಾಯಕರೊಂದಿಗೆ ನಡೆದುಕೊಳ್ಳುತ್ತಿರುವ ರೀತಿಯನ್ನು ಕೊಡಗು ಜಿಲ್ಲೆಯ ಪ್ರಮುಖ ಮುಸ್ಲಿಂ ಸಂಘಟನೆಗಳಾದ ಎಸ್‌ಕೆಎಸ್‌ಎಸ್‌ಎಫ್, ಎಸ್‌ಎಸ್‌ಎಫ್, ಮುಸ್ಲಿಂ ಸಂಘ ಸಂಸ್ಥೆಗಳು ಹಾಗೂ ಒಕ್ಕೂಟಗಳು ತೀವ್ರವಾಗಿ ಖಂಡಿಸುತ್ತವೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಸುನ್ನಿ ಸಮನ್ವಯ ಸಮಿತಿಯ ಜಿಲ್ಲಾ ಮಾಧ್ಯಮ ಪ್ರತಿನಿಧಿ ಸಿ.ಎಂ.ಅಬ್ದುಲ್ ಹಮೀದ್ ಮೌಲವಿ ಹೇಳಿದರು.
ಮುಸ್ಲಿಮರು ನೀಡಿರುವ ಒಗ್ಗಟ್ಟಿನ ಬೆಂಬಲದಿಂದ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವಾಗಿದೆ. ಆದರೆ, ಕಾಂಗ್ರೆಸ್ ಸರ್ಕಾರ ಮುಸ್ಲಿಮರನ್ನು ಘನತೆಯಿಂದ ನಡೆಸಿಕೊಳ್ಳುತ್ತಿಲ್ಲ. ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿರುವ ಮುಸ್ಲಿಂ ಸಮುದಾಯಕ್ಕೆ ರಾಜಕೀಯ ನೇಮಕಾತಿಗಳಲ್ಲಿ ಹಾಗೂ ಅಧಿಕಾರಶಾಹಿಯ ಪ್ರಮುಖ ಹುದ್ದೆಗಳಲ್ಲೂ ಸೂಕ್ತ ಪ್ರಾತಿನಿಧ್ಯ ನೀಡುತ್ತಿಲ್ಲ. ಕಾಂಗ್ರೆಸ್ ಪಕ್ಷ ಮತ್ತೆ ಮತ್ತೆ ಮುಸ್ಲಿಂ ಸಮುದಾಯವನ್ನು ಅವಮಾನಿಸುತ್ತಿದೆ ಎಂಬ ನೋವಿನ ಭಾವನೆ ಸಮುದಾಯದಲ್ಲಿ ತೀವ್ರವಾಗುತ್ತಿದೆ. ಕಾಂಗ್ರೆಸ್‌ನ ಪಕ್ಷಪಾತಿ ಧೋರಣೆಯನ್ನು ಕೊಡಗು ಜಿಲ್ಲೆಯ ಮುಸ್ಲಿಂ ಸಮುದಾಯ ಇನ್ನು ಮುಂದೆ ಸಹಿಸುವುದಿಲ್ಲ. ಮುಸ್ಲಿಂ ಸಮುದಾಯದ ಕೆಲ ನಾಯಕರನ್ನು ಪಕ್ಷ ವಿರೋಧಿ ಚಟುವಟಿಕೆಯ ಕಟಕಟೆಯಲ್ಲಿ ನಿಲ್ಲಿಸಿ, ಶಿಸ್ತಿನ ಪಾಠ ಹೇಳುತ್ತಿರುವ ಕಾಂಗ್ರೆಸ್ ಪಕ್ಷ, ಈ ಹಿಂದೆ ಇದೇ ರೀತಿಯ ಸಂದರ್ಭಗಳಲ್ಲಿ ಪಕ್ಷದಿಂದ ತಗೆದುಕೊಳ್ಳಲಾದ ಶಿಸ್ತು ಕ್ರಮಗಳೇನು ಎಂಬುವುದನ್ನು ಸ್ಪಷ್ಟಪಡಿಸಬೇಕು. ಇಲ್ಲದಿದ್ದಲ್ಲಿ, ಪಕ್ಷದ ಶಿಸ್ತು ನಿಯಮಗಳು ಕೇವಲ ಒಂದು ಸಮುದಾಯಕ್ಕೆ ಮಾತ್ರ ಅನ್ವಯವಾಗುತ್ತಿದೆಯೇ ಎಂಬ ಗಂಭೀರ ಪ್ರಶ್ನೆ ಉದ್ಭವಿಸುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೊಡಗಿನಲ್ಲೂ ಪ್ರಾತನಿಧ್ಯ ನೀಡಿ: ಕೊಡಗು ಜಿಲ್ಲೆಯ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಲು ಮುಸಲ್ಮಾನರು ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಶೇ.೯೫ರಷ್ಟು ಮುಸ್ಲಿಂ ಮತಗಳು ಕಾಂಗ್ರೆಸ್ ಪಾಲಾಗಿದೆ. ಜಿಲ್ಲೆಯ ಇಬ್ಬರು ಶಾಸಕರು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಆದರೆ, ಪಕ್ಷದ ಗೆಲುವಿಗಾಗಿ ಶ್ರಮಿಸಿದ ಮುಸ್ಲಿಂ ಮುಖಂಡರಿಗೆ ಯಾವುದೇ ಅಧಿಕಾರ ನೀಡದೆ ಕಡೆಗಣಿಸಲಾಗಿದೆ. ನಮ್ಮ ಬೇಡಿಕೆಗಳ ಬಗ್ಗೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಗಮನ ಸೆಳೆಯಲಾಗಿದೆ. ಮಂದಿನ ದಿನಗಳಲ್ಲಿ ಮುಸ್ಲಿಮರಿಗೆ ಅಧಿಕಾರ ನೀಡುತ್ತಾರೆ ಎನ್ನುವ ವಿಶ್ವಾಸವಿದೆ ಎಂದರು.
ಸುನ್ನಿ ಸಮನ್ವಯ ಸಮಿತಿಯ ಜಿಲ್ಲಾ ಕಾರ್ಯದರ್ಶಿ ಎಂ.ವೈ.ಅಬ್ದುಲ್ ಹಫೀಳ್ ಸಹದಿ ಮಾತನಾಡಿ, ಕಾಂಗ್ರೆಸ್ ನಡೆಯನ್ನು ರಾಜ್ಯವ್ಯಾಪಿ ಉಲಾಮಗಳು ಒಗ್ಗಟ್ಟನಿಂದ ವಿರೋಧಿಸಿದ್ದೇವೆ. ನಮ್ಮ ಸಂಘಟನೆಗಳು ಯಾವುದೇ ರಾಜಕೀಯ ಪಕ್ಷಗಳ ಪರವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ತನ್ನ ತಪ್ಪನ್ನು ತಿದ್ದಿಕೊಳ್ಳದಿದ್ದಲ್ಲಿ ಮುಸಲ್ಮಾನರು ಪರ್ಯಾಯ ವ್ಯವಸ್ಥೆಯನ್ನು ಕಂಡುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಕಾರ್ಯದರ್ಶಿ ವೈ.ಎಂ.ಉಮ್ಮರ್ ಫೈಜಿ, ಸದಸ್ಯರುಗಳಾದ ಎನ್.ಎನ್.ಇಕ್ಬಾಲ್ ಮೌಲವಿ, ಅಬ್ದುಲ್ ಹಮೀದ್ ಮದನಿ ಹಾಗೂ ಮಡಿಕೇರಿಯ ಮಕ್ಕಾ ಮಸೀದಿಯ ಮೌಲಾನಾ ಅಬ್ದುಲ್ ಹಕೀಂ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net